ಬತ್ತಿದ ಕೊಳವೆ ಬಾವಿಗಳು; ವಾರವಾದರೂ ನೀರಿಲ್ಲ..

7

ಬತ್ತಿದ ಕೊಳವೆ ಬಾವಿಗಳು; ವಾರವಾದರೂ ನೀರಿಲ್ಲ..

Published:
Updated:
ಬತ್ತಿದ ಕೊಳವೆ ಬಾವಿಗಳು; ವಾರವಾದರೂ ನೀರಿಲ್ಲ..

 ಆನೇಕಲ್ : ಬೇಸಿಗೆ ಬಂತೆಂದರೆ ಎಲ್ಲೆಡೆ ನೀರಿನ ಸಮಸ್ಯೆ ಕಾಡುತ್ತದೆ. ಹಲವು ವರ್ಷಗಳಿಂದ ಆನೇಕಲ್ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಇಲ್ಲದೆ ನಾಗರಿಕರು

ಪರದಾಡುವಂತಾಗಿದೆ.ಅಂದಾಜು 50 ಸಾವಿರ ಜನಸಂಖ್ಯೆಯ ಆನೇಕಲ್ ಪಟ್ಟಣದಲ್ಲಿ 23 ಪುರಸಭಾ ವಾರ್ಡ್‌ಗಳಿವೆ. ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳನ್ನೇ ನೆಚ್ಚಿಕೊಳ್ಳಲಾಗಿದ್ದು, ಸುತ್ತಲಿನ ಕೆರೆಗಳಲ್ಲಿ ನೀರಿಲ್ಲದ ಕಾರಣ ಸಹಜವಾಗಿ ಕೊಳವೆ ಬಾವಿಗಳೂ ಬತ್ತಿವೆ. ನೀರಿನ ಪೂರೈಕೆಗಾಗಿ ಪುರಸಭಾ ವತಿಯಿಂದ 91 ಕೊಳವೆ ಬಾವಿಗಳನ್ನು ಕೊರೆಯಿಸಲಾಗಿದ್ದು, 41 ಕೊಳವೆ ಬಾವಿಗಳು ನೀರಿಲ್ಲದೇ ನಿಂತಿವೆ.ಇದರಿಂದ ನಾಗರಿಕರು ನೀರಿಗಾಗಿ ಪರಿತಪ್ಪಿಸುವಂತಾಗಿದೆ. ಜನಸಂಖ್ಯೆಗನುಗುಣವಾಗಿ 10 ಲಕ್ಷ ಗ್ಯಾಲನ್ ನೀರಿನ ಅವಶ್ಯಕತೆ ಇದ್ದರೂ ಲಭ್ಯವಾಗುತ್ತಿರುವ ನೀರು ಕೇವಲ 3 ಲಕ್ಷಗ್ಯಾಲನ್. ಮಳೆಗಾಲದ ಅವಧಿಯಲ್ಲಿ ನೀರಿನ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ನಿಭಾಯಿಸುವ ಪುರಸಭೆ ಬೇಸಿಗೆ ಬರುತ್ತಿದ್ದಂತೆಯೇ ಕೈಚೆಲ್ಲಿ ಕೂರಬೇಕಾದ ಪರಿಸ್ಥಿತಿ ಇದೆ. ಹಾಗಾಗಿ ಕೆಲವು ವಾರ್ಡ್‌ಗಳಿಗೆ 7 ದಿನಕ್ಕೊಮ್ಮೆ ನೀರು ಕೊಟ್ಟರೆ, ಕೆಲವು ವಾರ್ಡ್‌ಗಳಿಗೆ ಅರ್ಧ ತಿಂಗಳಿಗೇ ನೀರು.ವಾರ್ಡ್ ನಂ 3ರಿಂದ 11 ಹಾಗೂ 21, 23ರಲ್ಲಿ ಹೆಚ್ಚಿನ ನೀರಿನ ಅಭಾವವಿದೆ. ಕೆ.ಎಸ್.ಆರ್.ಟಿ.ಸಿ. ಕಾಲೋನಿ, ವಿಧಾತ ಶಾಲೆ ಸುತ್ತಲಿನ ಪ್ರದೇಶ, ಆಶ್ರಯ ಬಡಾವಣೆ ಮತ್ತಿತರ ಕಡೆಗಳಲ್ಲಿ ನೀರಿಗಾಗಿ ಪರದಾಡುವ ಪರಿಸ್ಥಿತಿ ಸಾಮಾನ್ಯವಾಗಿದೆ.ನೀರಿನ ಸಮಸ್ಯೆ ನಿವಾರಣೆಗಾಗಿ 3 ಟ್ಯಾಂಕರ್‌ಗಳಿಂದ ಪ್ರತಿದಿನ ಅವಶ್ಯಕವಿರುವ ಬಡಾವಣೆಗಳಿಗೆ ಸರಬರಾಜು ಮಾಡುತ್ತಿವೆ.  ಹಲವರು ನೀರಿಗಾಗಿ ಖಾಸಗಿ ಟ್ಯಾಂಕರ್‌ಗಳ ಮೊರೆ ಹೋಗುತ್ತಿದ್ದಾರೆ.ಪ್ರತಿ ಟ್ಯಾಂಕ್‌ಗೆ 300 ರಿಂದ 400 ರೂಪಾಯಿ ನೀಡಿ ಖರೀದಿಸಬೇಕಾದ ಪರಿಸ್ಥಿತಿ ಇದೆ.    ಕುಡಿಯುವ ನೀರಿನ ಯೋಜನೆ: ಸಮೀಪದ ಕಮ್ಮಸಂದ್ರ ಅಗ್ರಹಾರ ಹಾಗೂ ಸುಬ್ಬರಾಯನ ಕೆರೆಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಯಿಸಿ ಅಲ್ಲಿಂದ ಪಟ್ಟಣಕ್ಕೆ ನೀರು ತರುವ ಶಾಶ್ವತ ಕುಡಿಯುವ ನೀರಿನ ಯೋಜನೆ 1998ರಲ್ಲಿ 3.33 ಕೋಟಿ ರೂ. ವೆಚ್ಚದ ಕಾಮಗಾರಿ ಉದ್ಘಾಟನೆಯಾಗಿತ್ತು. ಆದರೆ ಈ ಯೋಜನೆ ಜನರ ಬಹುದಿನಗಳ ಆಸೆಯನ್ನು ನಿರಾಸೆ ಮಾಡಿ ಸಂಪೂರ್ಣವಿಫಲವಾಯಿತು.  

 

ಶಾಶ್ವತ ಕುಡಿಯುವ ನೀರಿನ ಯೋಜನೆಗಾಗಿ 5 ಕೋಟಿ ರೂಪಾಯಿಯ ಯೋಜನೆ ಸಿದ್ಧವಾಗಿದ್ದು, ಮೈಸೂರಮ್ಮನ ದೊಡ್ಡಿಯಲ್ಲಿ ಕಾಮಗಾರಿ ಪ್ರಾರಂಭವಾಗಿದೆ. ಮೇಕೆದಾಟು ಯೋಜನೆಯನ್ನು ಜಾರಿಗೊಳಿಸಿ ಆನೇಕಲ್ ಮೂಲಕ ಕೋಲಾರ ಹಾಗೂ ಚಿಕ್ಕಬಳ್ಳಾಪುರಕ್ಕೆ ನೀರು ಪೂರೈಕೆ ಮಾಡುವ ಯೋಜನೆಯ ಪ್ರಸ್ತಾವನೆ ಸರ್ಕಾರದ ಮುಂದಿದೆ. ಈ ಯೋಜನೆ ಅನುಷ್ಠಾನವಾದರೆ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ನಿವಾರಣೆಯಾಗಲಿದೆ ಎಂದು ಪುರಸಭಾ ಉಪಾಧ್ಯಕ್ಷ ಎಂ.ನಾರಾಯಣಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು. 

ಹೊಸೂರು ರಸ್ತೆಯ ಸೀಮೆ ಎಣ್ಣೆ ಬಂಕ್ ಬಳಿ ಪುರಸಭೆ ವತಿಯಿಂದ 26 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿರುವ ಓವರ್ ಹೆಡ್ ಟ್ಯಾಂಕ್ ಬಳಕೆಯಾಗದೆ ಹಾಳಾಗುತ್ತಿದೆ. ಮಳೆಗಾಲದಲ್ಲಾದರೂ ನೀರು ತುಂಬುವ ಬಗ್ಗೆ ಪುರಸಭೆ ಚಿಂತನೆ ಮಾಡಬೇಕಿದೆ.ತಾ.ಪಂ.ಮಾಹಿತಿಯಂತೆ 1 ವಾರಕ್ಕೆ ಪಂಚಾಯಿತಿಗಳು 5.5 ಲಕ್ಷ ರೂಗಳನ್ನು ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜಿಗೆ ವೆಚ್ಚ ಮಾಡಿವೆ. ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ಉಂಟಾದರೆ ತಕ್ಷಣ ಕ್ರಮ ಕೈಗೊಳ್ಳುವಂತೆ ಪಂಚಾಯಿತಿಗಳಿಗೆ ಸೂಚಿಸಲಾಗಿದೆ. ಯಾವುದೇ ಮಂಜೂರಾತಿಗೂ ಕಾಯದೆ ವರ್ಗ 1ರಲ್ಲಿ ಹಣ ಪಡೆದು ವೆಚ್ಚ ಮಾಡುವಂತೆ ತಿಳಿಸಲಾಗಿದೆ. ಸಮಸ್ಯೆ ಇದ್ದಲ್ಲಿ ಕೂಡಲೇ ತಮ್ಮನ್ನು ಸಂಪರ್ಕಿಸುವಂತೆ ತಾ.ಪಂ. ಇಒ (ಮೊ. 9448843024) ಮನವಿ ಮಾಡಿದ್ದಾರೆ.

 

ಮೈಸೂರಮ್ಮನ ದೊಡ್ಡಿಯೋಜನೆ

ಆನೇಕಲ್ ಕನಕಪುರ ರಸ್ತೆಯ ಮೈಸೂರಮ್ಮನದೊಡ್ಡಿ ಹಾಗೂ ತಿಮ್ಮಯ್ಯನದೊಡ್ಡಿ ಬೆಟ್ಟಗಳ ನಡುವಿನ ವಿಶಾಲ ಸ್ಥಳದಲ್ಲಿರುವ ಕೆರೆಯನ್ನು ಅಭಿವೃದ್ಧಿಪಡಿಸಿ ಈ ಕೆರೆಯಲ್ಲಿ ಸುತ್ತಲಿನ ಎಲ್ಲ ಮೂಲಗಳ ನೀರನ್ನು ಮಳೆಗಾಲದಲ್ಲಿ ಸಂಗ್ರಹಿಸಿ ಇಲ್ಲಿಂದ ಆನೇಕಲ್‌ಗೆ ಪೈಪ್‌ಲೈನ್ ಮೂಲಕ ಸರಬರಾಜು ಮಾಡುವ ಯೋಜನೆಯನ್ನು ರೂಪಿಸಲಾಗಿದೆ.

5 ಕೋಟಿ ರೂಗಳ ಯೋಜನೆಗೆ ಈಗಾಗಲೇ 2.75 ಕೋಟಿ ಬಿಡುಗಡೆಯಾಗಿದ್ದು ಕಾಮಗಾರಿ ಪ್ರಾರಂಭವಾಗಿದೆ. ಮಳೆಯನೀರು ಪೋಲಾಗದೆ ಉಪಯೋಗವಾಗುವ ರೀತಿಯಲ್ಲಿ ಬೆಟ್ಟಗಳ ನಡುವಿನ ಅಚ್ಚುಕಟ್ಟಿನಲ್ಲಿ ಕೆರೆ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಸಚಿವ ಎ.ನಾರಾಯಣಸ್ವಾಮಿ ತಿಳಿಸಿದ್ದಾರೆ. ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಪಟ್ಟಣದ ಜನತೆಗೆ ಅರ್ಪಿಸಲಾಗುವುದು ಎಂದಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry