ಮಂಗಳವಾರ, ಜನವರಿ 28, 2020
17 °C

ಬತ್ತ, ಅಕ್ಕಿ ದಾಸ್ತಾನಿಗೆ ಗೋದಾಮು ಕೊರತೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಬೆಂಬಲ ಬೆಲೆ ಅಡಿ ಖರೀದಿಸಿದ ಬತ್ತ, ರೈಸ್‌ಮಿಲ್ ಮಾಲೀಕರಿಂದ ಪಡೆದ ಲೆವಿ ಸಂಗ್ರಹಿಸಲು ಜಿಲ್ಲೆಯಲ್ಲಿ ಗೋದಾಮುಗಳು ಸಾಲುತ್ತಿಲ್ಲ. ಇದರಿಂದ ಬತ್ತ, ಅಕ್ಕಿ ಸಂಗ್ರಹಣೆ ಕಷ್ಟವಾಗಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಮೂಲ ಸೌಕರ್ಯ ಕೊರತೆಯಿಂದ ಖರೀದಿ ಸುಗಮವಾಗಿ ನಡೆಯುತ್ತಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಡಾ.ಕೆ. ರಾಮೇಶ್ವರಪ್ಪ ಸಮಸ್ಯೆ ತೆರೆದಿಟ್ಟರು.ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಟಾಸ್ಕ್‌ಫೋರ್ಸ್ ಸಭೆಯಲ್ಲಿ ಅವರು ಮಾತನಾಡಿದರು.ಹರಿಹರ, ಹೊನ್ನಾಳಿ, ಸಾಗರಪೇಟೆ, ಮಲೇಬೆನ್ನೂರುಗಳಲ್ಲಿ ಉಗ್ರಾಣದ ಕೊರತೆ ಇದೆ. ಎಪಿಎಂಸಿಯಲ್ಲಿ ಖರೀದಿಗೆ ಅಗತ್ಯವಾದ ಮೂಲಸೌಕರ್ಯ ಅಭಿವೃದ್ಧಿಯಾಗಿಲ್ಲ. ಗೋದಾಮು ಒಂದು ಭಾಗದಲ್ಲಿ, ವೇಬ್ರಿಡ್ಜ್ ಒಂದು ಭಾಗದಲ್ಲಿ ಇವೆ. ಅಗತ್ಯ ಸಿಬ್ಬಂದಿ ಕೊರತೆ ಇದೆ. ಈ ಬಗ್ಗೆ ಎಪಿಎಂಸಿ ಕಾರ್ಯದರ್ಶಿ ಸೂಕ್ತ ಕ್ರಮ ಕೈಗೊಳ್ಳಬೇಕು. ಖರೀದಿ ಸುಗಮವಾಗಿ ನೆರವೇರಲು ಸಹಕರಿಸಬೇಕು ಎಂದರು.ಸಮಸ್ಯೆಗೆ ಪರಿಹಾರ ಸೂಚಿಸಿದ ಜಿಲ್ಲಾಧಿಕಾರಿ ಸುಭಾಷ್ ಎಸ್. ಪಟ್ಟಣಶೆಟ್ಟಿ, ಸಹಕಾರ ಸಂಘಗಳ ಹಾಗೂ ಖಾಸಗಿ ಗೋದಾಮುಗಳನ್ನು ಬಾಡಿಗೆ ಪಡೆಯಿರಿ. ಹೆಚ್ಚುವರಿ ದಾಸ್ತಾನು ಸಾಗಣೆ ಮಾಡಲು ಅವಕಾಶ ಕೊಡಿ, ಭದ್ರಾ ಸಕ್ಕರೆ ಕಾರ್ಖಾನೆ ಗೋದಾಮು ಬಾಡಿಗೆ ಪಡೆದು ಅಲ್ಲಿ ದಾಸ್ತಾನು ಮಾಡಿ ಎಂದು ಸಲಹೆ ನೀಡಿದರು.ಎಪಿಎಂಸಿ ಪ್ರಾಂಗಣದಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಿ, ರೈತರಿಗೆ ನೀಡಿದ ಟೋಕನ್‌ಗೆ ಆಧಾರದಲ್ಲಿ ಅಂದಿನ ಮಾಲನ್ನು ಅಂದೇ ಖರೀದಿಸಿ ಎಂದು ಸೂಚಿಸಿದರು.ಜಂಟಿ ಕೃಷಿ ನಿರ್ದೇಶಕ ಡಾ.ಆರ್.ಜಿ. ಗೊಲ್ಲರ್ ಮಾತನಾಡಿ, ಬೆಂಬಲಬೆಲೆಯ ಪ್ರಯೋಜನ ನಿಜವಾದ ರೈತರಿಗೆ ದೊರೆಯುತ್ತಿಲ್ಲ. ರೈತರ ಪಹಣಿ ದಾಖಲೆ ಬಳಸಿಕೊಂಡು ಶೇ. 90ರಷ್ಟು ಮಧ್ಯವರ್ತಿಗಳು ಲಾಭ ಮಾಡಿಕೊಳ್ಳುತ್ತಿದ್ದಾರೆ. ಖರೀದಿಯಲ್ಲಿನ ಹಲವು ನಿಬಂಧನೆಗಳಿಂದಾಗಿ ರೈತರು ಖರೀದಿ ಕೇಂದ್ರಕ್ಕೆ ಬರುತ್ತಿಲ್ಲ ಎಂದು ಮಾಹಿತಿ ನೀಡಿದರು.ಜ. 4ರಿಂದ ಬೆಂಬಲಬೆಲೆ ಅಡಿ ಖರೀದಿಸಿದ ಹಣ ರೈತರಿಗೆ ನೀಡುವುದು ಬಾಕಿ ಇದೆ. ಕೇಂದ್ರ ಸರ್ಕಾರದಿಂದ ಅಗತ್ಯ ಅನುದಾನ ಬಾರದ ಕಾರಣ ವಿಳಂಬವಾಗಿದೆ. ಈ ಖರೀದಿಸಿದ 3-4 ದಿನದಲ್ಲಿ ರೈತರಿಗೆ ಹಣ ನೀಡಲು ಹಿಂದೆ ನಡೆದ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಅದರಂತೆ ಪಾವತಿಸಲು ಸಾಧ್ಯವಾಗಿಲ್ಲ ಎಂದು ಆಹಾರ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕ ಕೋದಂಡ ರಾಮಯ್ಯ ವಿವರ ನೀಡಿದರು.ಸಂಬಂಧಿಸಿದ ಅಧಿಕಾರಿಗಳಿಗೆ ಕೂಡಲೇ, ಪತ್ರ ಬರೆದು ಹಣ ಬಿಡುಗಡೆ ಮಾಡುವಂತೆ ಕೋರಲು ಜಿಲ್ಲಾಧಿಕಾರಿ ಸೂಚಿಸಿದರು.ಬತ್ತದಲ್ಲಿನ ತೇವಾಂಶ ಪರೀಕ್ಷೆಗೆ ನಿಯಮದಂತೆ ಸುರಿದು ರಾಶಿಯಿಂದ ಸ್ಯಾಂಪಲ್ ಪಡೆದು ಪರೀಕ್ಷೆ ನಡೆಸ ಬೇಕು. ಆದರೆ, ಅದು ವಿಳಂಬ ಆಗುತ್ತಿದ್ದ ಕಾರಣ ಸುರಿಯದೇ ಲೋಡ್‌ನಿಂದಲೇ ಸ್ಯಾಂಪಲ್ ಪಡೆದು ತೇವಾಂಶ ಪರೀಕ್ಷೆ ನಡೆಸಲಾಗುತ್ತಿದೆ. ಈಚೆಗೆ ಗುಣಮಟ್ಟದ ಬತ್ತ ಬರುತ್ತಿದ್ದು, ಖರೀದಿಸಿದ ನಂತರ ಸರಾಸರಿ ಶೇ. 4ರಿಂದ 5ರಷ್ಟು ಕೊರತೆ ಕಾಣಿಸುತ್ತಿದೆ ಎಂದು ಉಪ ವಿಭಾಗಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.ಜಗಳೂರು ಎಪಿಎಂಸಿಯಲ್ಲಿ ಈರುಳ್ಳಿ ಖರೀದಿ ಅವಧಿ ವಿಸ್ತರಿಸುವಂತೆ ಅಲ್ಲಿನ ಕಾರ್ಯದರ್ಶಿ ಜಿಲ್ಲಾಧಿಕಾರಿಯನ್ನು ಕೋರಿದರು.ಇಂದು `ನಾನು ಮೆಚ್ಚಿದ ಪುಸ್ತಕ~

ನಗರದಲ್ಲಿ ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ಜ .18ರಂದು ಸಂಜೆ 6ಕ್ಕೆ `ನಾನು ಮೆಚ್ಚಿದ ಪುಸ್ತಕ~ ಕಾರ್ಯಕ್ರಮ ಏರ್ಪಡಿಸಲಾಗಿದೆ.ಸಾಹಿತಿ ನಾಗರಾಜ್ ಸಿರಿಗೆರೆ ಮಾತನಾಡಲಿದ್ದಾರೆ.  ಎಂ. ಗುಣಸಾಗರ್ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.ಮಹಾಗಣಪತಿ ಮೆರವಣಿಗೆ: ವಿನೋಬ ನಗರದ ಮಹಾಗಣಪತಿ ಮೂರ್ತಿಯನ್ನು ಬುಧವಾರ ಬೆಳಿಗ್ಗೆ 9ಕ್ಕೆ ಕುಂಭ, ಡೊಳ್ಳುಕುಣಿತ, ಸಮೇಳ ವಾದ್ಯಗಳ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)