ಗುರುವಾರ , ಆಗಸ್ಟ್ 22, 2019
27 °C

ಬತ್ತ ನಾಟಿಗೆ ಪಶ್ಚಿಮ ಬಂಗಾಳದ ಕಾರ್ಮಿಕರು

Published:
Updated:

ಶಹಾಪುರ: ಕೃಷ್ಣಾಅಚ್ಚುಕಟ್ಟು ಪ್ರದೇಶದಲ್ಲಿ ನಿಷೇಧಿತ ಬೆಳೆ ಬತ್ತ ನಾಟಿಯ ಕಾರ್ಯ ಜೋರಾಗಿ ಸಾಗಿದೆ. ನಾಟಿ ಮಾಡುವ ಕಾರ್ಯಕ್ಕೆ ಕೂಲಿಕಾರ್ಮಿಕರ ಸಮಸ್ಯೆ ಎದುರಾಗಿದೆ. ತಾಲ್ಲೂಕಿನ ಹತ್ತಿಗುಡೂರ ಗ್ರಾಮದ ಬಳಿ ಪಶ್ಚಿಮಬಂಗಾಳದ 20 ಕೂಲಿ ಕಾರ್ಮಿಕರ ತಂಡವು ಬಂದಿಳಿದಿದೆ.ಪಶ್ಚಿಮಬಂಗಾಳದ ನದಿಯ ಜಿಲ್ಲೆಯ ಭೀಮಪುರ ತಾಲ್ಲೂಕಿನ ಕಾರ್ಮಿಕರು ಬತ್ತ ನಾಟಿ ಮಾಡಲು ಆಗಮಿಸಿದ್ದಾರೆ. 20 ಪುರುಷ ಕಾರ್ಮಿಕರು ಗುತ್ತಿಗೆ ರೂಪದಲ್ಲಿ  ದಲ್ಲಾಳಿಯೊಬ್ಬರು ಕರೆದುಕೊಂಡು ಬಂದಿದ್ದಾರೆ. ಇನ್ನೂ ಹೆಚ್ಚು ಕಾರ್ಮಿಕರು ಬರುತ್ತಿದ್ದರು ಗ್ರಾಮ ಪಂಚಾಯಿತಿ ಚುನಾವಣೆ ಇದ್ದ ಕಾರಣ ಆಗಮಿಸಿಲ್ಲ ಎನ್ನುತ್ತಾರೆ ಬಾಬು ಸರ್ಕರ್.ನಮಗೆ ಪ್ರತಿ ಎಕರೆಗೆ 2,000ರೂ ಯಂತೆ ನಾಟಿಗೆ ನೀಡುತ್ತಾರೆ. 15-20 ಜನರು ಸೇರಿಕೊಂಡು ದಿನಾಲು 4-5ಎಕರೆ ನಾಟಿ ಮಾಡುತ್ತೇವೆ. ನಮಗೆ ಕರೆದುಕೊಂಡು ಬಂದ ದಲ್ಲಾಳಿಗೆ ಎಕರೆಗೆ 200ರೂ. ನೀಡಬೇಕೆಂಬ ಷರತ್ತು ಹಾಕಿಕೊಂಡು ಕರೆದುಕೊಂಡು ಬಂದಿದ್ದಾರೆ.ಕೇವಲ ಜಮೀನಿನಲ್ಲಿ ನಾಟಿ ಮಾಡುವುದು. ವ್ಯವಹಾರವೆಲ್ಲ ದಲ್ಲಾಳಿ ಮಾಡುತ್ತಾರೆ. ಅಗತ್ಯವಾದ ಆಹಾರ ಹಾಗೂ ವಸತಿಯನ್ನು ಆಂಧ್ರ ಜಮೀನು ಗುಡಿಸಲು ಬಳಿ ಮಾಡಿಕೊಂಡಿದ್ದೇವೆ. ನಾಟಿ ಮಾಡುವ ಕಾರ್ಯ 30-40 ದಿನಗಳು ಮಾತ್ರ ನಡೆಯುತ್ತದೆ. ಅಷ್ಟರಲ್ಲಿ ನಾವು ದುಡಿದು ಸಂಪಾದನೆಯ ಹಣವು 12ರಿಂದ15 ಸಾವಿರ ಆಗುತ್ತದೆ.ನಂತರ ಮರಳಿ ತವರು ರಾಜ್ಯಕ್ಕೆ ಹೋಗುತ್ತೇವೆ. ದುಡಿಯುವ ಕೈಗಳಿಗೆ ಸೀಮೆ ಹಾಗೂ ಗಡಿ ಗುರುತು ಬೇಕಾಗಿಲ್ಲ ಎನ್ನುತ್ತಾರೆ ರಾಮಜೀ.ನಮಗೆ ಭಾಷೆ ಸಮಸ್ಯೆ ಆಗುವುದಿಲ್ಲ. ಇಲ್ಲಿನ ಪ್ರದೇಶದ ಹೆಚ್ಚು ಜನರಿಗೆ ಹಿಂದಿ ಬರುತ್ತದೆ. ಅನಾಯಸವಾಗಿ ಮಾತುಕತೆಗೆ ತೊಂದರೆ ಬರುವುದಿಲ್ಲ ಎನ್ನುತ್ತಾರೆ ಬಾಬು.ಸಮಸ್ಯೆ: ತಾಲ್ಲೂಕಿನಲ್ಲಿ ಹೆಚ್ಚು ಕೃಷಿ ಕೂಲಿಕಾರ್ಮಿಕರು ಹೊಟ್ಟೆಪಾಡಿಗೆ ದೂರದ ಬೆಂಗಳೂರು, ಪೂನಾ, ಮಹಾರಾಷ್ಟ್ರ ಮುಂತಾದ ಕಡೆ ಗುಳೆ ಹೋಗಿದ್ದಾರೆ. ಸ್ಥಳೀಯವಾಗಿ ಸಾಕಷ್ಟು ಕೆಲಸ ದೊರೆಯುತ್ತಿದ್ದರೂ ಗುಳೆ ಹೋಗುತ್ತಿರುವುದು ಬೇಸರ ಮೂಡಿಸಿದೆ.  ನೀರಾವರಿ ಪ್ರದೇಶವಾಗಿದ್ದರಿಂದ ಕೈತುಂಬ ಕೆಲಸ ದೊರೆಯುತ್ತದೆ. ಗ್ರಾಮ ತೊರೆದು ಹೋಗುವುದರಿಂದ ಮಕ್ಕಳ ಶಿಕ್ಷಣ ಹಾಗೂ ಇನ್ನಿತರ ಸಮಸ್ಯೆ ಬರುತ್ತದೆ ಎಂದು ರೈತ ಮುಖಂಡ ಮಲ್ಲಿಕಾರ್ಜುನ ಅಂಗಡಿ ಹೇಳುತ್ತಾರೆ.  ತಾಲ್ಲೂಕಿನಲ್ಲಿ ಕೂಲಿ ಕಾರ್ಮಿಕರ ಸಮಸ್ಯೆ ಹೆಚ್ಚಾಗಿದೆ.

Post Comments (+)