ಬುಧವಾರ, ನವೆಂಬರ್ 13, 2019
21 °C

ಬತ್ತ ನಾಟಿಯಿಂದ ಕೃಷಿ ವ್ಯವಸ್ಥೆ ಉಲ್ಟಾಪಲ್ಟಾ...!

Published:
Updated:

ಶಹಾಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ವ್ಯಾಪಕವಾಗಿ ರೈತರು ವಾಣಿಜ್ಯ ಬೆಳೆಗಳತ್ತ ಮುಖ ಮಾಡಿದ್ದರಿಂದ ಜಾನುವಾರುಗಳಿಗೆ ಮೇವು ಇಲ್ಲದಂತೆ ಆಗಿದೆ. ಆಧುನಿಕತೆಯ ಕೃಷಿಯ ಭಾಗವಾಗಿ ಟ್ರ್ಯಾಕ್ಟರ್ ಯಂತ್ರದ ಮೇಲೆ ಅವಲಂಬಿನೆಯಾಗಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಗೋ ಸಂಪತ್ತು ಕಡಿಮೆಯಾಗುತ್ತಲಿದೆ.ನೀರಾವರಿ ಪ್ರದೇಶದಲ್ಲಿ ಹೆಚ್ಚಾಗಿ ರೈತರು ಭತ್ತ, ಹತ್ತಿ ಬೆಳೆಯ ಕಡೆ ವಾಲಿದ್ದಾರೆ. ತ್ವರಿತವಾಗಿ ಕೃಷಿ ಕಾಮಗಾರಿಗಳನ್ನು ನಿರ್ವಹಿಸಲು ಟ್ರ್ಯಾಕ್ಟರ್ ಸಹಾಯದಿಂದ ನೇಗಿಲು, ರಂಟೆ ಹೊಡೆಯುವುದು  ಅವಲಂಬಿಸಿದ್ದಾರೆ. ನಿಧಾನವಾಗಿ ಕೃಷಿಗೆ ಅಗತ್ಯವಾದ ಜಾನುವಾರುಗಳನ್ನು ಸಾಕಲು ಹಿಂದೇಟು ಹಾಕುತ್ತಿದ್ದಾರೆ. ಅದರಲ್ಲಿ ಬತ್ತ ನಾಟಿಯಿಂದ ಕೃಷಿ ವ್ಯವಸ್ಥೆ ಉಲ್ಟಾಪಲ್ಟಾ ಆಗಿ ಬಿಟ್ಟಿದೆ. ಆಂಧ್ರವಲಸಿಗರು ಲೀಜ್ ರೂಪದಲ್ಲಿ ಪಡೆದ ಜಮೀನುಗಳಲ್ಲಿ ರಾಶಿಯಂತ್ರದ ಮೂಲಕ ಬತ್ತ ಕಟಾವ್  ಮಾಡುತ್ತಾರೆ.

ಸಮರ್ಪಕವಾಗಿ ಹುಲ್ಲು ದೊರೆಯುದಿಲ್ಲ. ಅಲ್ಲದೆ ರಾಶಿಯಾದ ತಕ್ಷಣ ಗದ್ದೆಗೆ ಬೆಂಕಿ ಹಚ್ಚಿ ಬಿಡುತ್ತಾರೆ ಇದರಿಂದ ಅಲ್ಪಸ್ವಲ್ಪ ಮೇವು ಕೂಡಾ ನಾಶವಾಗುತ್ತದೆ. ಹಿಡಿ ಹುಲ್ಲು ಜಾನುವಾರುಗಳಿಗೆ ಸಿಗದ ದುಸ್ಥಿತಿಯನ್ನು ನಾವು ಎದುರಿಸುವಂತಾಗಿದೆ ಎನ್ನುತ್ತಾರೆ ರೈತ ಮಲ್ಲಪ್ಪ. ಒಂದಿಷ್ಟು ಸಮಧಾನ ತರುವ ಸಂಗತಿಯೆಂದರೆ ಒಣ ಬೇಸಾಯವಿದ್ದ ಕಡೆ ರೈತರು ಲಘು ಬೆಳೆಗಳನ್ನು ಬೆಳೆದು ಜಾನುವಾರುಗಳ ರಕ್ಷಣೆಗೆ ಜೋಳದ ಕಟಕಿ (ಸೊಪ್ಪಿ), ಶೇಂಗಾದ ವಟ್ಟು, ತೊಗರಿ ವಟ್ಟು, ಸಜ್ಜೆ ಸೊಪ್ಪಿ ಮತ್ತು ಎತ್ತುಗಳಿಗಾಗಿ ಸಜ್ಜೆಯನ್ನು ಸಂಗ್ರಹಿಸಿ ಇಡುತ್ತೇವೆ ಎನ್ನುತ್ತಾರೆ ಗೊಂದೆನೂರ ಗ್ರಾಮದ ರೈತ ಸಾಯಿಬಣ್ಣ.ಪರಿಸರದಲ್ಲಿ ತುಂಬಾ ವ್ಯತ್ಯಾಸವಾಗುತ್ತಿದ್ದರಿಂದ ಜಾನುವಾರುಗಳ ಸಂಕುಲ ತೊಂದರೆಗೆ ಸಿಲುಕುವ ಭೀತಿ ಉಂಟಾಗಿದೆ. ಗ್ರಾಮೀಣ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಲಿದೆ. ಹಳ್ಳದಲ್ಲಿ ನೀರು ಮಾಯವಾಗಿದೆ. ಬರುವ ದಿನಗಳಲ್ಲಿ ಇನ್ನಷ್ಟ ಸಮಸ್ಯೆ ಎದುರಾಗಲಿದೆ. ಅಲ್ಪಸ್ವಲ್ಪ ನೀರು ಸಂಗ್ರಹವಾದ ಕಡೆ ಜಾನುವಾರುಗಳು ಬಿಸಿಲಿನಿಂದ ಸುಡುವ ನೀರು ಕುಡಿದರೆ ರೋಗದ ಬರುವ ಅಪಾಯವಿದೆ. ಮುಂದೇನು ಎಂಬ ಚಿಂತೆ ಆವರಿಸಿದೆ ಎನ್ನುತ್ತಾರೆ ರೈತ ಸಿದ್ದಪ್ಪ.ಹಳ್ಳಿಗಳಲ್ಲಿ ಸಾಮಾನ್ಯ ಜನತೆ ಕುಡಿಯುವ ನೀರಿಗೆ  ಪರದಾಡುವ ದುಸ್ಥಿತಿಯಲ್ಲಿ ಜಾನುವಾರುಗಳಿಗೆ ಹೇಗೆ ನೀರು ಒದಗಿಸಬೇಕೆಂಬ ಚಿಂತೆ ಜಾನುವಾರುಗಳನ್ನು ಸಾಕಿದ ರೈತರಿಗೆ ಕಾಡುತ್ತಲಿದೆ.

ಪ್ರತಿಕ್ರಿಯಿಸಿ (+)