ಬತ್ತ ನಾಟಿ ಮಾಡಿ ದಿಕ್ಕೆಟ್ಟ ರೈತರು

7

ಬತ್ತ ನಾಟಿ ಮಾಡಿ ದಿಕ್ಕೆಟ್ಟ ರೈತರು

Published:
Updated:
ಬತ್ತ ನಾಟಿ ಮಾಡಿ ದಿಕ್ಕೆಟ್ಟ ರೈತರು

ಚಾಮರಾಜನಗರ: ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಯುತ್ತಿರುವ ಪರಿಣಾಮ ಜಿಲ್ಲೆಯ ಕಬಿನಿ ಬಲದಂಡೆ ನಾಲೆಯ ಅಚ್ಚುಕಟ್ಟು ಪ್ರದೇಶದಲ್ಲಿ ಬತ್ತ ನಾಟಿ ಮಾಡಿರುವ ರೈತರು ದಿಕ್ಕೆಟ್ಟಿದ್ದಾರೆ.ಜಲಾಶಯ ಭರ್ತಿಯಾಗಿದ್ದ ಹಿನ್ನೆಲೆಯಲ್ಲಿ ಬತ್ತ ನಾಟಿ ಮಾಡಿ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ರೈತರು ಈಗ ಅಡಕತ್ತರಿಗೆ ಸಿಲುಕಿದ್ದಾರೆ. ಬಲದಂಡೆ ವ್ಯಾಪ್ತಿಗೆ ಬರುವ ಚಾಮರಾಜನಗರ, ಯಳಂದೂರು ಹಾಗೂ ಕೊಳ್ಳೇಗಾಲ ತಾಲ್ಲೂಕು ವ್ಯಾಪ್ತಿಯಲ್ಲಿ ಬಹುತೇಕ ನಾಟಿ ಕಾರ್ಯ ಮುಗಿದಿದೆ. ಈ ನಡುವೆಯೇ ತಮಿಳುನಾಡಿಗೆ ನೀರು ಹರಿಯುತ್ತಿರುವುದರಿಂದ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿ ನಾಲೆಯಲ್ಲಿ ನೀರು ಹರಿಯುವುದಿಲ್ಲ. ಹೀಗಾಗಿ, ನಾಟಿ ಮಾಡಿರುವ ಫಸಲು ಒಣಗಿ ಹೋಗುತ್ತದೆ ಎಂಬ ಆತಂಕ ಮನೆ ಮಾಡಿದೆ.ಕಳೆದ ವರ್ಷವೂ ಬರದಿಂದ ರೈತರು ತತ್ತರಿಸಿದ್ದರು. ಈ ಬಾರಿಯೂ ಜಿಲ್ಲೆಯಲ್ಲಿ ನಿಗದಿತ ವೇಳೆಗೆ ಉತ್ತಮ ಮಳೆ ಸುರಿದಿಲ್ಲ. ಈ ವರ್ಷವೂ ಬರಗಾಲಕ್ಕೆ ಸಿಲುಕಿ ಕಬಿನಿ ಜಲಾಶಯ ನಂಬಿಕೊಂಡಿದ್ದ ಅಚ್ಚುಕಟ್ಟು ರೈತರಿಗೆ ಈಗ ಗಾಯದ ಮೇಲೆ ಬರೆ ಎಳೆದಂತಾಗಿದೆ.ಕಬಿನಿ ಬಲದಂಡೆ ನಾಲೆಯ ವಿತರಣಾ ನಾಲೆ 1ರಿಂದ 62 ಹಾಗೂ ಅಂತ್ಯಭಾಗದ 1ರಿಂದ 11ರವರೆಗಿನ ನೇರ ತೂಬುಗಳ ವ್ಯಾಪ್ತಿ ಒಟ್ಟು 97,800 ಎಕರೆ ಹಾಗೂ ತೆಳ್ಳನೂರು ಶಾಖಾ ನಾಲೆ ವ್ಯಾಪ್ತಿ 7,408 ಎಕರೆ ಅಚ್ಚುಕಟ್ಟು ಪ್ರದೇಶವಿದೆ.ಸಂತೇಮರಹಳ್ಳಿಯ 42ನೇ ವಿತರಣಾ ನಾಲೆ ಮೂಲಕ ಜಿಲ್ಲೆಯಲ್ಲಿ ಬಲದಂಡೆ ನಾಲೆಯ ಅಚ್ಚುಕಚ್ಚು ಪ್ರದೇಶ ಆರಂಭವಾಗುತ್ತದೆ. ಒಟ್ಟಾರೆ ಜಿಲ್ಲೆಯಲ್ಲಿ ಬಲದಂಡೆ ನಾಲೆ ವ್ಯಾಪ್ತಿಯ ಕೊಳ್ಳೇಗಾಲ ವಿಭಾಗದಲ್ಲಿ 35,234 ಎಕರೆ ಹಾಗೂ ತೆಳ್ಳನೂರು ಶಾಖೆ ವ್ಯಾಪ್ತಿ 7,408 ಎಕರೆ ಪ್ರದೇಶ ನೀರಾವರಿಗೆ ಒಳಪಟ್ಟಿದೆ.ಕಾವೇರಿ ನೀರಾವರಿ ನಿಗಮದ ಸೂಚನೆ ಅನ್ವಯ ರೈತರು ಅರೆ ನೀರಾವರಿ ಬೆಳೆ ಬೆಳೆಯಬೇಕಿದೆ. ಆದರೆ, ಅಚ್ಚುಕಟ್ಟು ಪ್ರದೇಶದ ರೈತರು ಬತ್ತ ಬೆಳೆಯುವುದು ವಾಡಿಕೆ.ಕಬಿನಿ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಕಳೆದ ಸೆ. 1ರಿಂದ ಡಿ. 4ರವರೆಗೆ ನಾಲೆಗೆ ನೀರು ಹರಿಸುವುದಾಗಿ ನಿಗಮ ಆದೇಶ ಹೊರಡಿಸಿತ್ತು. ಪ್ರತಿವರ್ಷದಂತೆಯೇ ರೈತರು ಬತ್ತದ ಪೈರು ಬೆಳೆದು ಈಗ ನಾಟಿ ಪೂರ್ಣಗೊಳಿಸಿದ್ದಾರೆ.ಪ್ರಸ್ತುತ ನಾಟಿ ಮಾಡಿರುವ ಬತ್ತ ಕಟಾವಿಗೆ ಬರಲು ಕನಿಷ್ಠ ಬರುವ ಜನವರಿ ಅಂತ್ಯದವರೆಗೆ ನಾಲೆಯಲ್ಲಿ ನೀರು ಹರಿಯಬೇಕಿದೆ. ಆದರೆ, ತಮಿಳುನಾಡಿಗೆ ಹರಿಯುತ್ತಿರುವ ನೀರಿನ ಪ್ರಮಾಣ ಹಾಗೂ ನಂತರ ಜಲಾಶಯದಲ್ಲಿ ಉಳಿಯುವ ನೀರಿನ ಪ್ರಮಾಣದ ಬಗ್ಗೆ ಲೆಕ್ಕಹಾಕಿದರೆ ಮುಂದಿನ ಕನಿಷ್ಠ ಎರಡು ವಾರದವರೆಗೆ ಮಾತ್ರವೇ ನಾಲೆಯಲ್ಲಿ ನೀರು ಹರಿಯುವ ಸಾಧ್ಯತೆಯಿದೆ. ಹೀಗಾಗಿ, ರೈತರು ತೊಂದರೆಗೆ ಸಿಲುಕಲಿದ್ದಾರೆ ಎನ್ನುತ್ತಾರೆ ನಿಗಮದ ಅಧಿಕಾರಿಗಳು.`ಕಾವೇರಿ ನದಿ ಪ್ರಾಧಿಕಾರದ ಆದೇಶ ಪಾಲಿಸುವಂತೆ ಸುಪ್ರೀಂ ಕೋರ್ಟ್ ಹೇಳಿದೆ. ನ್ಯಾಯಾಲಯ ಸೂಚಿಸಿರುವ ದಿನದವರೆಗೆ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿದರೆ ಸಹಜವಾಗಿ ಜಲಾಶಯದ ನೀರಿನಮಟ್ಟವೂ ಕಡಿಮೆಯಾಗಲಿದೆ. ಬೆಂಗಳೂರು ಸೇರಿದಂತೆ ಜಲಾಶಯದ ವ್ಯಾಪ್ತಿಗೆ ಬರುವ ನಗರ, ಪಟ್ಟಣ ಪ್ರದೇಶಕ್ಕೆ ಕುಡಿಯುವ ನೀರು ಕೂಡ ಪೂರೈಸಬೇಕಿದೆ. ಚಾಮರಾಜನಗರ ಜಿಲ್ಲೆಯ ಪಟ್ಟಣ ಪ್ರದೇಶಗಳೂ ಇದರಲ್ಲಿ ಸೇರಿವೆ.ಹೀಗಾಗಿ, ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಜತೆಗೆ, ನಮ್ಮದು ಜಲಾಶಯದ ಕೊನೆಯ ಅಚ್ಚುಕಟ್ಟು ಪ್ರದೇಶ. ಇದರ ಪರಿಣಾಮ ನಾಲೆಯಲ್ಲಿ ನೀರು ರಭಸವಾಗಿ ಹರಿಯುವುದಿಲ್ಲ. ಹೀಗಾಗಿ, ನಾಲೆಯಲ್ಲಿ ನೀರು ಹರಿಯುವುದನ್ನು ನಿರೀಕ್ಷಿಸುವುದು ಕಷ್ಟ~ ಎನ್ನುತ್ತಾರೆ ಅಧಿಕಾರಿಗಳು.`ಪ್ರಸ್ತುತ ಕೇಂದ್ರ ಮತ್ತು ರಾಜ್ಯ ಸರ್ಕಾರದ ಧೋರಣೆ ಗಮನಿಸಿದರೆ ಕಬಿನಿ ಜಲಾಶಯ ನಿರ್ಮಿಸಿರುವುದು ಪ್ರತಿವರ್ಷವೂ ನೀರು ಸಂಗ್ರಹಿಸಿ ತಮಿಳುನಾಡಿಗೆ ಬಿಡುವುದಕ್ಕಾಗಿಯೇ ಎನ್ನುವ ಸನ್ನಿವೇಶ ಸೃಷ್ಟಿಯಾಗಿದೆ.ಬಲದಂಡೆ ನಾಲೆ ವ್ಯಾಪ್ತಿ ಬತ್ತ ನಾಟಿ ಮಾಡಿರುವ ರೈತರು ಕಂಗಾಲಾಗಿದ್ದಾರೆ. ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ರೈತರ ಜಮೀನಿಗೆ ನೀರು ತಲುಪುವುದಿಲ್ಲ. ಇಂತಹ ಸಂಕಷ್ಟದ ನಡುವೆ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಸರಿಯಲ್ಲ. ಕೂಡಲೇ, ಸ್ಥಗಿತಗೊಳಿಸಬೇಕು~ ಎಂಬುದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಂ. ಮಹೇಶ್‌ಪ್ರಭು ಅವರ ಒತ್ತಾಯ.`ಬಲದಂಡೆ ನಾಲೆಯ ರೈತರು ಸಾಂಪ್ರದಾಯಿಕವಾಗಿ ಈ ಬಾರಿಯೂ ಬತ್ತ ನಾಟಿ ಮಾಡಿದ್ದಾರೆ. ಮತ್ತೊಂದೆಡೆ ಜಲಾಶಯದಲ್ಲಿ ನೀರು ಖಾಲಿಯಾಗುತ್ತಿದೆ. ಕನಿಷ್ಠ ಮುಂದಿನ ಎರಡು ವಾರದವರೆಗೆ ನಾಲೆಯಲ್ಲಿ ನೀರು ಹರಿಯಬಹುದು. ಹೀಗಾಗಿ, ರೈತರು ತೊಂದರೆಗೆ ಸಿಲುಕುವ ಸಾಧ್ಯತೆ ಹೆಚ್ಚಿದೆ~ ಎಂದು ಕೊಳ್ಳೇಗಾಲದ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಎಲ್. ವೆಂಕಟಾಚಲಯ್ಯ `ಪ್ರಜಾವಾಣಿ~ಗೆ ತಿಳಿಸಿದರು.

 

17 ಕೆರೆ ಭರ್ತಿಯಾಗಿಲ್ಲ!

ಚಾಮರಾಜನಗರ: ಬಲದಂಡೆ ನಾಲಾ ವ್ಯಾಪ್ತಿಗೆ ಬರುವ ಚಾಮರಾಜನಗರ, ಯಳಂದೂರು ಹಾಗೂ ಕೊಳ್ಳೇಗಾಲ ತಾಲ್ಲೂಕಿನ 17 ಕೆರೆಗಳಿಗೂ ಕಬಿನಿ ನಾಲೆಯಿಂದಲೇ ನೀರು ತುಂಬಿಸಬೇಕಿದೆ. ಆದರೆ, ಈ ಬಾರಿ ಯಾವುದೇ ಕೆರೆಗಳನ್ನು ತುಂಬಿಸಲು ಸಾಧ್ಯವಾಗಿಲ್ಲ. `ಕೆಲವು ಕೆರೆಗಳಿಗೆ ನೀರು ಬಿಡಲಾಗಿದೆ. ಆದರೆ, ಬಿಸಿಲಿನ ತಾಪಮಾನ ಹೆಚ್ಚಿರುವುದು ಹಾಗೂ ಮಳೆ ಕೊರತೆಯಿಂದ ಭರ್ತಿಯಾಗಿದ್ದ ಕೆರೆಗಳಲ್ಲಿ ನೀರು ಇಂಗಿಹೋಗಿದೆ. ಅಗರ, ಮದ್ದೂರು, ಧನಗೆರೆ, ಪಾಪನಕೆರೆಗೆ ನಾಲೆಯಿಂದ ನೀರು ಹರಿಸಿಲ್ಲ~ ಎನ್ನುವುದು ನಿಗಮದ ವಿವರಣೆ.ಜಿಲ್ಲೆಯಲ್ಲಿಯೇ ಅತಿದೊಡ್ಡದಾದ ಹೊಂಗನೂರು ಹಿರೇಕೆರೆಗೂ ಕಬಿನಿ ನಾಲೆಯಿಂದ ನೀರು ಭರ್ತಿ ಮಾಡಬೇಕಿದೆ. ಆದರೆ, ಕೆರೆಗೆ ನೀರು ಪೂರೈಸುವ ಏತ ನೀರಾವರಿ ಕಾಮಗಾರಿಯ ಉದ್ಘಾಟನೆಯೇ ನಡೆದಿಲ್ಲ. ಈ ಬಾರಿಯೂ ಕೆರೆ ಭರ್ತಿಯಾಗುವ ಭರವಸೆ ರೈತರಿಗೆ ಇಲ್ಲದಂತಾಗಿದೆ.ನಾಲೆಯ ವ್ಯಾಪ್ತಿಗೆ ಒಳಪಟ್ಟಿರುವ 17 ಕೆರೆಗಳಲ್ಲಿ ಈಗ ನೀರು ಇಲ್ಲ. ಹೀಗಾಗಿ, ಜಾನುವಾರುಗಳಿಗೂ ಕುಡಿಯಲು ನೀರು ಇಲ್ಲದಂತಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry