ಮಂಗಳವಾರ, ಮೇ 18, 2021
22 °C

ಬದರಿನಾಥ: ನೂರು ಕನ್ನಡಿಗರ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬದರಿನಾಥ: ನೂರು ಕನ್ನಡಿಗರ ರಕ್ಷಣೆ

ಬೆಂಗಳೂರು: ಬದರಿನಾಥದಲ್ಲಿರುವ ನೂರು ಮಂದಿ ಕನ್ನಡಿಗರನ್ನು ಸುರಕ್ಷಿತವಾಗಿ ಹೃಷಿಕೇಶಕ್ಕೆ ಕರೆತಂದಿದ್ದು, ಅಲ್ಲಿಂದ ಅವರನ್ನು ದೆಹಲಿಗೆ ಕಳುಹಿಸಲಾಗಿದೆ. ಸೇನಾಪಡೆಯ ಹೆಲಿಕಾಪ್ಟರ್‌ನಲ್ಲಿ ಬಂದ ಕನ್ನಡಿಗರಿಗೆ ರಾಜ್ಯ ಸರ್ಕಾರದ ಶಿಬಿರದಲ್ಲಿ ಪ್ರಾಥಮಿಕ ಚಿಕಿತ್ಸೆ ಜತೆಗೆ ಊಟ- ತಿಂಡಿಯ ವ್ಯವಸ್ಥೆ ಮಾಡಲಾಗಿತ್ತು ಎಂದು ರಾಜ್ಯ ತಂಡದ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳಕರ್ `ಪ್ರಜಾವಾಣಿ'ಗೆ ತಿಳಿಸಿದರು.ಬದರಿನಾಥದಲ್ಲಿ ಇನ್ನೂ 15 ಸಾವಿರ ಯಾತ್ರಾರ್ಥಿಗಳು ಇರುವ ಬಗ್ಗೆ ಮಾಹಿತಿ ಇದೆ. ರಸ್ತೆ ಮಾರ್ಗ ಇಲ್ಲ. ನಡೆದುಬರುವುದೂ ಅಸಾಧ್ಯ. ಈ ಕಾರಣಕ್ಕೂ ಅಲ್ಲಿರುವ ಜನರನ್ನು ಹೃಷಿಕೇಶಕ್ಕೆ ಸ್ಥಳಾಂತರ ಮಾಡುವುದು ಇನ್ನೂ ಏಳೆಂಟು ದಿನ ಹಿಡಿಯುತ್ತದೆ ಎಂದು ಅವರು ವಿವರಿಸಿದರು.ಬದರಿನಾಥದಲ್ಲಿ ಇನ್ನೂ ಎಷ್ಟು ಮಂದಿ ಕನ್ನಡಿಗರು ಇದ್ದಾರೆ ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಕೆಲವರು ನಮ್ಮ ಸಂಪರ್ಕದಲ್ಲಿದ್ದಾರೆ. ಅವರಿಗೆ ಊಟದ ವ್ಯವಸ್ಥೆಯನ್ನು ಅಲ್ಲಿನ ಸರ್ಕಾರವೇ ಮಾಡುತ್ತಿದೆ. ಹೃಷಿಕೇಶದಲ್ಲಿ ಮಾತ್ರ ನಮ್ಮ ಶಿಬಿರ ಇದೆ ಎಂದು ಅವರು ಹೇಳಿದರು.ಪರಿಸ್ಥಿತಿ ಹತೋಟಿಯಲ್ಲಿದ್ದರೂ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆತರುವುದು ವಿಳಂಬ ಆಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.ಐದು ಕೋಟಿ ನೆರವು:  ಪರಿಹಾರ ಕಾರ್ಯದ ಉಸ್ತುವಾರಿಗಾಗಿ ವಾರ್ತಾ ಸಚಿವ ಸಂತೋಷ್ ಲಾಡ್ ಅವರು ಶುಕ್ರವಾರ ಉತ್ತರಾಖಂಡಕ್ಕೆ ತೆರಳಿದರು. ರಾಜ್ಯ ಸರ್ಕಾರದ ರೂ.ಐದು ಕೋಟಿ ಚೆಕ್ ಅನ್ನು ಲಾಡ್ ಅವರು ಉತ್ತರಾಖಂಡ ಮುಖ್ಯಮಂತ್ರಿ ವಿಜಯ ಬಹುಗುಣ ಅವರಿಗೆ ಹಸ್ತಾಂತರ ಮಾಡಿದರು.ಮೂರು ವೈದ್ಯರ ತಂಡ: ಪ್ರವಾಹ ಪೀಡಿತ ಉತ್ತರಾಖಂಡಕ್ಕೆ ರಾಜ್ಯದಿಂದ ಮೂರು ವೈದ್ಯರ ತಂಡಗಳನ್ನು ಕಳುಹಿಸಲಾಗಿದೆ ಎಂದು ಆರೋಗ್ಯ ಖಾತೆ ರಾಜ್ಯ ಸಚಿವ ಯು.ಟಿ.ಖಾದರ್ ಶುಕ್ರವಾರ ಇಲ್ಲಿ ತಿಳಿಸಿದರು.ಪ್ರತಿ ತಂಡದಲ್ಲಿ ಇಬ್ಬರು ವೈದ್ಯರು ಮತ್ತು ಇಬ್ಬರು ಪುರುಷ ನರ್ಸ್‌ಗಳು ಇರುತ್ತಾರೆ. ಒಂದು ತಂಡ ದೆಹಲಿಗೆ ಬರುವ ಸಂತ್ರಸ್ತರ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಯ ಉಸ್ತುವಾರಿ ನೋಡಲಿದೆ. ಮತ್ತೆರಡು ತಂಡಗಳು ಹೃಷಿಕೇಶ ಮತ್ತು ರುದ್ರಪ್ರಯಾಗಕ್ಕೆ ತೆರಳಿವೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.ಕಾರ್ಯಚರಣೆ ಮೂಲಕ ರಕ್ಷಣೆ ಮಾಡಿದ ಯಾತ್ರಾರ್ಥಿಗಳಿಗೆ ಚಿಕಿತ್ಸೆ ಅಗತ್ಯ ಇರುತ್ತದೆ. ಈ ಕಾರಣಕ್ಕೆ ವೈದ್ಯರ ತಂಡಗಳು ಶುಕ್ರವಾರ ರಾತ್ರಿಯೇ ತೆರಳಿವೆ. ಶನಿವಾರದಿಂದ ಕಾರ್ಯಪ್ರವೃತ್ತವಾಗಲಿವೆ ಎಂದು ಅವರು ಹೇಳಿದರು.`ಒಂದು ವಾರ ಕಾಲ ಈ ವೈದ್ಯರ ತಂಡಗಳು ಕಾರ್ಯನಿರ್ವಹಿಸಲಿವೆ. ಅದರ ನಂತರವೂ ವೈದ್ಯರ ಅಗತ್ಯ ಇದೆ ಎಂಬುದು ಗೊತ್ತಾದರೆ, ಮತ್ತೊಂದು ಸುತ್ತಿಗೆ ಬೇರೆ ತಂಡಗಳನ್ನು ನಿಯೋಜಿಸಲಾಗುವುದು' ಎಂದು ಅವರು ವಿವರಿಸಿದರು.ವೈದ್ಯರ ದೂರವಾಣಿ ಸಂಖ್ಯೆ

ಡಾ.ಎಸ್.ವಾಗೀಶ್ (99866 18116), ಡಾ.ಟಿ.ರವೀಂದ್ರ (94813 20424), ಡಾ.ಬಿ.ಶಶಿಧರ (96323 13382)ಬಂಗಾರಪೇಟೆ ಮಹಿಳೆ ಪಾರು

ಬಂಗಾರಪೇಟೆ:  `ಉತ್ತರ ಕಾಶಿಯ ಎಲ್ಲ ರಸ್ತೆ ಹಾಗೂ ಸೇತುವೆಗಳು ಸಂಪೂರ್ಣ ನಾಶವಾಗಿವೆ. ಮಿಲಿಟರಿ ಸಿಬ್ಬಂದಿ ಹರಸಾಹಸ ಮಾಡುತ್ತಿದ್ದರೂ ಪ್ರವಾಸಿಗರ ರಕ್ಷಣೆ ಮತ್ತು ಸ್ಥಳಾಂತರ ಸಾಧ್ಯವಾಗುತ್ತಿಲ್ಲ' ಎಂದು ಚಾರ್‌ಧಾಮ್ ಯಾತ್ರೆ ಕೈಗೊಂಡಿದ್ದ ಪಟ್ಟಣದ ಅಮರಾವತಿ ಬಡಾವಣೆ ನಿವಾಸಿ ಸಂಧ್ಯಾ ಜಗದೀಶ್ ಪ್ರತಿಕ್ರಿಯಿಸಿದ್ದಾರೆ.`ಮಿಲಿಟರಿ ತಂಗುದಾಣಗಳಲ್ಲಿ ಪ್ರವಾಸಿಗರಿಗೆ ಅಗತ್ಯ ಸೌಕರ್ಯ ಕಲ್ಪಿಸಲಾಗಿದೆ. ನಾನು ಹಾಗೂ ನನ್ನೊಂದಿಗೆ ಇದ್ದವರು ಸುರಕ್ಷಿತವಾಗಿದ್ದೇವೆ. ಹಿಂದಿರುಗುವುದು ತಡವಾಗಬಹುದು. ಆತಂಕ ಪಡಬೇಕಿಲ್ಲ' ಎಂದು ತಮ್ಮ ಪತಿ ಜಗದೀಶ್ ಅವರಿಗೆ ದೂರವಾಣಿಯಲ್ಲಿ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.