ಬದಲಾಗದ ನಾಡು; ವೈರುಧ್ಯಗಳ ಬೀಡು

7

ಬದಲಾಗದ ನಾಡು; ವೈರುಧ್ಯಗಳ ಬೀಡು

Published:
Updated:

ಭಾರತ ಅಪಾರ ವೈರುಧ್ಯಗಳನ್ನು ಹೊಂದಿರುವ ದೇಶ. ಒಂದೆಡೆ ಅಪರಿಮಿತ ಅಭ್ಯುದಯ ಮತ್ತು ಸಂಪತ್ತು ನಮಗೆ ಕಂಡರೆ, ಇನ್ನೊಂದೆಡೆ ಮೂರನೇ ಒಂದು ಭಾಗದಷ್ಟು ಮಂದಿ ದಿನಕ್ಕೆ ಒಂದೇ ಹೊತ್ತಿನ ಕೂಳು ಉಂಡು ಬದುಕುತ್ತಿದ್ದಾರೆ. ದೂರ ಸಂಪರ್ಕ, ಮಾಹಿತಿ ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿನ ಭಾರತದ ವೈಜ್ಞಾನಿಕ ಸಾಧನೆ ಅಸೂಯೆ ಹುಟ್ಟಿಸುವಂತಿದ್ದರೆ, ದೇಶದ ಗ್ರಾಮೀಣ ಭಾಗದಲ್ಲಿ ಶೇ 20ರಷ್ಟು ಮಂದಿ ಮಾತ್ರ ನೈರ್ಮಲ್ಯ ಸೌಲಭ್ಯ ಹೊಂದಿದ್ದಾರೆ ಮತ್ತು ಶೇ 40ರಷ್ಟು ಜನರಿಗಷ್ಟೇ ಸೂಕ್ತ ಕುಡಿಯುವ ನೀರಿನ ಸೌಲಭ್ಯ ಇದೆ ಎಂಬ ವಿಷಯ ಕೇಳಿದವರ ಹೃದಯ ಕರಗಿಸುತ್ತದೆ.ಇಂದಿಗೂ ಹಳ್ಳಿಗಳ ಶೇ 42ರಷ್ಟು ಮಕ್ಕಳಿಗೆ ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಹಲವು ಮಕ್ಕಳು ಕುಟುಂಬದವರ ತುತ್ತಿನ ಚೀಲ ತುಂಬಿಸಲು ಹೊಲ ಗದ್ದೆಗಳಲ್ಲಿ, ಕಾರ್ಖಾನೆಗಳಲ್ಲಿ ದುಡಿಯುತ್ತಿದ್ದಾರೆ. ವಿಶ್ವದಾದ್ಯಂತ ಎಲ್ಲ ಬಗೆಯ ತಂತ್ರಜ್ಞಾನ ಮತ್ತು ಸಾಫ್ಟ್‌ವೇರ್ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನಾವು ಸಮರ್ಥರಾಗಿರುವುದರ ನಡುವೆಯೇ, ಜಗತ್ತಿನ ಶೇ 25ರಷ್ಟು ಬಡವರು ನಮ್ಮ ದೇಶವೊಂದರಲ್ಲೇ ಇದ್ದಾರೆ.ಕ್ರೀಡೆ, ಸಂಗೀತ, ಕಲೆ, ತಂತ್ರಜ್ಞಾನ ಮತ್ತು ಸಂಪತ್ತು ಸೃಷ್ಟಿಯಲ್ಲಿ ಸಾಕಷ್ಟು ಯುವ ಸಾಧಕರು ನಮಗೆ ಕಾಣುತ್ತಾರೆ. ಆದರೆ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಕೆಲವು ಯುವಜನರಷ್ಟೇ ಮುಂಚೂಣಿಯಲ್ಲಿ ಇದ್ದಾರೆ. ಸಂಕೀರ್ಣವಾದ ಸಾಮಾಜಿಕ, ಆರ್ಥಿಕ, ಮೂಲಸೌಲಭ್ಯ, ರಾಜಕೀಯ ಮತ್ತು ಬಡತನಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ನಿಜಕ್ಕೂ ಸವಾಲಿನ ಸಂಗತಿಯೇ ಸರಿ. ಇಂತಹ ಸವಾಲುಗಳನ್ನು ಎದುರಿಸಲು ಅಗಾಧವಾದ ಸಾಮರ್ಥ್ಯ, ನವೀನ ದೃಷ್ಟಿಕೋನ, ಘನವಾದ ಪರಿಕಲ್ಪನೆ  ಮತ್ತು ಅತಿಮಾನುಷ ಪ್ರಯತ್ನಗಳು ಬೇಕಾಗುತ್ತವೆ. ಇಂತಹ ಅಸಂಖ್ಯಾತ ಸಮಸ್ಯೆಗಳಿಗೆ ನಾವು ಉತ್ತರ ಕಂಡುಕೊಳ್ಳುವುದು ಹೇಗೆ? ಯಾವ ಬಗೆಯ ಸುಧಾರಣೆಗಳಿಂದ ಅತ್ಯಗತ್ಯವಾದ ಬದಲಾವಣೆಗಳನ್ನು ತರಲು ಸಾಧ್ಯ?ಇಂತಹ ವಿಷಯಗಳಲ್ಲಿ ಸ್ವಾಮಿ ವಿವೇಕಾನಂದರ ಕಾಲದ ಸಾಮಾಜಿಕ ಸ್ಥಿತಿಗೂ ಈಗಿನ ಸ್ಥಿತಿಗೂ ಹೆಚ್ಚಿನ ಬದಲಾವಣೆಯೇನೂ ಇದ್ದಂತೆ ಕಾಣುವುದಿಲ್ಲ. ಆಗ, ಯಾವ ಬಗೆಯ ಸುಧಾರಣೆಗಳಿಂದ ದೇಶದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಕೇಳಿದ ಪ್ರಶ್ನೆಗೆ ವಿವೇಕಾನಂದರು ಹೀಗೆ ಪ್ರತಿಕ್ರಿಯಿಸಿದ್ದರು- `ಸುಧಾರಣೆಯಲ್ಲಿ ನನಗೆ ನಂಬಿಕೆ ಇಲ್ಲ. ಪ್ರಗತಿಯನ್ನು ನಾನು ನಂಬುತ್ತೇನೆ. ದೇವರ ಸ್ಥಾನದಲ್ಲಿ ನಿಂತು ಸಮಾಜಕ್ಕೆ ಮಾರ್ಗದರ್ಶನ ಮಾಡಲು ನಾನು ಹಿಂಜರಿಯುವುದಿಲ್ಲ. ಪ್ರಗತಿ, ವಿಸ್ತರಣೆ, ಅಭಿವೃದ್ಧಿ ನನ್ನ ಆದರ್ಶ ಧ್ಯೇಯ. ಪ್ರತಿ ವ್ಯಕ್ತಿಯೂ ತನ್ನ ಆತ್ಮೋದ್ಧಾರಕ್ಕೆ ತಾನೇ ಮುಂದಾಗಬೇಕು. ಬೇರೆ ಇನ್ನಾವುದೇ ಮಾರ್ಗವೂ ಇಲ್ಲ. ಈ ಮಾತು ರಾಷ್ಟ್ರಗಳಿಗೂ ಅನ್ವಯಿಸುತ್ತದೆ. ಉನ್ನತ ಸಂಸ್ಥೆಗಳನ್ನು ಅಸ್ತಿತ್ವಕ್ಕೆ ತರುವ ಮೊದಲೇ ಹಳೆಯ ಮಾದರಿಯನ್ನು ಮುರಿಯುವ ಪ್ರಯತ್ನ ವಿಪತ್ಕಾರಿ ಆಗಬಲ್ಲದು. ಪ್ರಗತಿ ಎಂಬುದು ಕ್ರಮೇಣ ಘಟಿಸುವ ಕ್ರಿಯೆ. ವ್ಯಕ್ತಿ ಯಾವ ಸ್ಥಾನದಲ್ಲಿ ಇರುತ್ತಾನೋ ಅಲ್ಲಿಂದಲೇ ಅವನನ್ನು ಮೇಲಕ್ಕೆತ್ತಲು ಪ್ರಯತ್ನಿಸಬೇಕು'.ಜನಶಕ್ತಿಯ ಬಗ್ಗೆ ಮತ್ತು ಜನರ ಆಶೋತ್ತರಗಳನ್ನು ಪ್ರತಿಬಿಂಬಿಸುವ ಸಮರ್ಥ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ತೆರೆಯುವ ಬಗ್ಗೆ ಸ್ವಾಮೀಜಿಗೆ ಪ್ರಬಲವಾದ ನಂಬಿಕೆ ಇತ್ತು. ಒಂದೆಡೆ ಅವರು ಹೀಗೆ ಬರೆದಿದ್ದಾರೆ- `ರಾಜರ ಕಾಲ ಮುಗಿದಿದೆ. ಈಗೇನಿದ್ದರೂ ಅಧಿಕಾರ ಜನರ ಕೈಯಲ್ಲಿದೆ. ಜನ ಸುಶಿಕ್ಷಿತರಾಗುವ ತನಕ, ತಮ್ಮ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳುವ ತನಕ ಮತ್ತು ತಮ್ಮ ಸಮಸ್ಯೆಗಳನ್ನು ಅರಿಯಲು ಸಿದ್ಧರಾಗುವ ತನಕ ನಾವು ಕಾಯಬೇಕಾಗುತ್ತದೆ. ಅಲ್ಪಸಂಖ್ಯಾತರ ಮೇಲಿನ ಹಿಂಸೆಯು ಜಗತ್ತಿನ ಅತ್ಯಂತ ಕೆಟ್ಟದಾದ ನಿರಂಕುಶ ಅಧಿಕಾರ.ಆದ್ದರಿಂದ ಎಂದಿಗೂ ಕಾರ್ಯರೂಪಕ್ಕೆ ತರಲಾಗದ ಆದರ್ಶಪ್ರಾಯ ಸುಧಾರಣೆಗಳಿಗಾಗಿ ನಮ್ಮ ಶಕ್ತಿಯನ್ನು ವ್ಯಯ ಮಾಡುವ ಬದಲು, ಜನ ತಮ್ಮ ಸಮಸ್ಯೆಗಳಿಗೆ ತಾವೇ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುವಂತೆ ಶಿಕ್ಷಣವನ್ನು ಶಾಸನಬದ್ಧಗೊಳಿಸುವಂತಹ ಕ್ರಮಕ್ಕೆ ನಾವು ಮುಂದಾಗಬೇಕು. ಈ ಕಾರ್ಯ ಸಾಧನೆ ಆಗುವವರೆಗೂ ಆದರ್ಶಪ್ರಾಯ ಸುಧಾರಣೆಗಳು ಕೇವಲ ಆದರ್ಶವಾಗಿಯೇ ಉಳಿದಿರುತ್ತವೆ. ಪ್ರಜೆಗಳಿಂದ ಪ್ರಜೆಗಳಿಗಾಗಿ ಪರಿಹಾರ ಕಂಡುಕೊಳ್ಳುವುದೇ ಹೊಸ ವ್ಯವಸ್ಥೆ. ಇದು ಕಾರ್ಯರೂಪಕ್ಕೆ ಬರಲು, ಅದರಲ್ಲೂ ರಾಜರ ಆಳ್ವಿಕೆಯ ಇತಿಹಾಸ ಇರುವ ಭಾರತದಂತಹ ದೇಶದಲ್ಲಿ ತನ್ನದೇ ಆದ ಸಮಯ ತೆಗೆದುಕೊಳ್ಳುತ್ತದೆ'.ಅತ್ಯಂತ ವಾಸ್ತವವಾದಿಯಾಗಿದ್ದ ಸ್ವಾಮೀಜಿ, ಆಡಳಿತ ಮತ್ತು ನೀತಿ ನಿರೂಪಣೆಯಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆಯು ರಾತ್ರೋರಾತ್ರಿ ಆಗಿಬಿಡುವ ಕಾರ್ಯ ಅಲ್ಲ ಎಂಬುದನ್ನು ಅರಿತಿದ್ದರು. ಕೇವಲ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಸ್ಥಾಪಿಸಿದ ಮಾತ್ರಕ್ಕೆ ಸ್ವಯಂ ಅಭಿವೃದ್ಧಿಯಲ್ಲಿ ಜನರ ಪಾಲ್ಗೊಳ್ಳುವಿಕೆ ಸಾಧ್ಯವಾಗದು; ಕ್ರಮೇಣ ಇದು ಸಾಧ್ಯವಾಗುತ್ತದೆ ಮತ್ತು ಅವರ ಸಾಮರ್ಥ್ಯ ಹಾಗೂ ಅರ್ಹತೆ ಗಳಿಕೆಯೂ ಜೊತೆಜೊತೆಗೇ ಸಾಗಬೇಕು ಎಂಬ ಅಭಿಮತ ಹೊಂದಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry