ಬದಲಾಗಬೇಕು ಚಿಂತನೆ, ಆಲೋಚನೆ...

7

ಬದಲಾಗಬೇಕು ಚಿಂತನೆ, ಆಲೋಚನೆ...

Published:
Updated:

ಫಿ ಲ್ಮ್ ಸೊಸೈಟಿಯ ಪರಿಕಲ್ಪನೆಯನ್ನು ಭಾರತದಲ್ಲಿ ಮೊದಲ ಬಾರಿಗೆ ಹುಟ್ಟುಹಾಕಿದವರು ಭಾರತೀಯ ಚಿತ್ರರಂಗದ ಇತಿಹಾಸದ ಶ್ರೇಷ್ಠ ನಿರ್ದೇಶಕರಲ್ಲೊಬ್ಬರಾದ ಸತ್ಯಜಿತ್ ರೇ. ಐರೋಪ್ಯ ರಾಷ್ಟ್ರಗಳಲ್ಲಿ ಫಿಲ್ಮ್ ಸೊಸೈಟಿಗಳು ಜನ್ಮವೆತ್ತಿ ಆಗಲೇ ಬೆಳೆದುನಿಂತಿದ್ದವು.

ಐವತ್ತರ ದಶಕದ ಅಂತ್ಯ ಹಾಗೂ ಅರವತ್ತರ ದಶಕದ ಆರಂಭದಲ್ಲಿ ಸತ್ಯಜಿತ್ ರೇ ಅವರ ಒತ್ತಾಯಕ್ಕೆ ನೆಹರೂ ಮಣಿದು, ವಿಶೇಷವಾಗಿ ಇಂದಿರಾಗಾಂಧಿ ಫಿಲ್ಮ್ ಸೊಸೈಟಿಯ ಪ್ರಸ್ತಾಪದ ಬಗ್ಗೆ ಪ್ರೀತಿ ಹುಟ್ಟಿದ ಕಾರಣದಿಂದ ಫಿಲ್ಮ್ ಸೊಸೈಟಿ ದೇಶದಾದ್ಯಂತ ಚಳವಳಿ ರೂಪದಲ್ಲಿ ಚಾಲ್ತಿಗೆ ಬಂತು.ಫಿಲ್ಮ್ ಸೊಸೈಟಿಯ ಮುಖ್ಯ ಉದ್ದೇಶ ಜಗತ್ತಿನ ಶ್ರೇಷ್ಠ ಸಿನಿಮಾಗಳನ್ನು ಭಾರತಕ್ಕೆ ತರುವುದು. ಆ ಸಮಯದಲ್ಲಿಯೂ ಹಾಲಿವುಡ್ ಸಿನಿಮಾಗಳು ಭಾರತದಲ್ಲಿ ಬಿಡುಗಡೆಯಾಗುತ್ತಿದ್ದವು. ಆದರೆ ಜಗತ್ತಿನ ಶ್ರೇಷ್ಠ ಸಿನಿಮಾಗಳನ್ನು ತಯಾರಿಸುವ ಯುರೋಪಿಯನ್ ದೇಶಗಳ ಬಹುತೇಕ ಸಿನಿಮಾಗಳು ನಮ್ಮವರಿಗೆ ನೋಡುವುದಕ್ಕೆ ದಕ್ಕುತ್ತಿರಲಿಲ್ಲ. ಅದು ಇಂಗ್ಮರ್ ಬರ್ಗ್‌ಮನ್, ಅಕಿರಾ ಕುರೊಸಾವ, ಗೊಡಾರ್ಡ್ ಮುಂತಾದ ಮಹಾನ್ ನಿರ್ದೇಶಕರ ಸಿನಿಮಾಗಳು ಇರಬಹುದು.

ಈ ಸಿನಿಮಾಗಳ ಹುಟ್ಟಿನ ಹಿನ್ನೆಲೆಗೆ ಕಾರಣವಾದ ಚಳವಳಿಗಳ ಬಗ್ಗೆ ನಮಗೆ ಅರ್ಥವಾಗಿದ್ದೇ ಫಿಲ್ಮ್ ಸೊಸೈಟಿಗಳಿಗೆ ಮನ್ನಣೆ ಸಿಗಲಾರಂಭಿಸಿದ ಬಳಿಕ. ಸಬ್‌ಟೈಟಲ್ ಎಂಬ ಮಾರ್ಗವನ್ನು ಬಳಿಸಿಕೊಂಡು ಅದರ ಮೂಲಕ ಯುರೋಪಿಯನ್ ಸಿನಿಮಾಗಳನ್ನು ಅರ್ಥಮಾಡಿಕೊಳ್ಳುವ ಪ್ರಕ್ರಿಯೆ ಪ್ರಾರಂಭವಾಯಿತು.

ಇದರ ಮೂಲಕ ಜಗತ್ತಿನಾದ್ಯಂತ ಈ ಫಿಲ್ಮ್ ಕ್ಲಬ್‌ಗಳನ್ನು ಪ್ರಾರಂಭಿಸುವ ಅಭ್ಯಾಸ ಚಾಲ್ತಿಗೆ ಬಂದಿತು. ಲಂಡನ್ ನಗರದಲ್ಲಿ ಆರಂಭವಾಗಿ, ಕ್ರಮೇಣ ಅದರ ಪ್ರಭಾವ ಎಲ್ಲೆಡೆ ಹರಡುತ್ತಾ, ಕೊನೆಗೆ ಕರ್ನಾಟಕದಾದ್ಯಂತ ಕರ್ನಾಟಕದಲ್ಲಿಯೂ ನಗರಕ್ಕೆ ಒಂದರಂತೆ ಫಿಲ್ಮ್ ಸೊಸೈಟಿಗಳು ಪ್ರಾರಂಭವಾದವು. ಧಾರವಾಡ, ಹುಬ್ಬಳ್ಳಿ, ಬೆಂಗಳೂರು ಹೀಗೆ ಹಲವೆಡೆ ಫಿಲ್ಮ್ ಕ್ಲಬ್‌ಗಳು ಹುಟ್ಟಿಕೊಂಡವು. ಅದಕ್ಕೆ ಪೂರಕವಾದ ಪ್ರೇಕ್ಷಕ ವರ್ಗವೂ ಸಾಕಷ್ಟಿತ್ತು.ಆದರೆ ಕಾಲಾನಂತರ, ವಿಶೇಷವಾಗಿ 90ರ ದಶಕದಲ್ಲಿ ಉಪಗ್ರಹ ಟೆಲಿವಿಷನ್ ಕಾಲಿಟ್ಟ ನಂತರ ಸಬ್‌ಟೈಟಲ್ ಇರುವ ಸಿನಿಮಾ ನೋಡಲು ಬರುವವರ ಸಂಖ್ಯೆಯಲ್ಲಿ ದೊಡ್ಡ ಪ್ರಮಾಣದ ಇಳಿಕೆಯಾಯಿತು. ಈಗಂತೂ ಎಲ್ಲಾ ಸಿನಿಮಾಗಳೂ ಇಂಟರ್‌ನೆಟ್‌ನಲ್ಲಿಯೇ ಸಿಗುತ್ತವೆ. ಡಿಜಿಟಲ್ ಫಾರ್ಮ್ಯಾಟ್‌ನಲ್ಲಿ ಒಂದು ಶ್ರೇಷ್ಠ ಸಿನಿಮಾ ನೋಡಬೇಕೆಂದರೆ ಅದು ಇಂಟರ್‌ನೆಟ್‌ನಲ್ಲಿಯೇ ಸಿಗುತ್ತದೆ.

ಹೀಗಾಗಿ ಫಿಲ್ಮ್ ಸೊಸೈಟಿಯೊಳಗೆ ಪ್ರದರ್ಶಿಸುವ ಸಿನಿಮಾಗಳನ್ನು ನೋಡುವಂಥ ಅಗತ್ಯವಿಲ್ಲ ಎಂಬ ಪರಿಸ್ಥಿತಿ ಬಂದಿದೆ. ಇನ್ನು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳು ಮೊದಲು ದೆಹಲಿಯಲ್ಲಿ, ನಂತರ ಕೇಂದ್ರ ಸರ್ಕಾರ ಎಲ್ಲಿ ಎಂದು ನಿರ್ಧರಿಸುತ್ತದೋ ಆ ನಗರದಲ್ಲಿ ನಡೆಯುತ್ತಿತ್ತು. ಈಗ ಚಲನಚಿತ್ರೋತ್ಸವ ಸಂಪೂರ್ಣವಾಗಿ ಗೋವಾದಲ್ಲಿ ಬೇರೂರಿದೆ. ರಾಜ್ಯಗಳಲ್ಲೂ ಪ್ರತ್ಯೇಕ ಅಂತರರಾಷ್ಟ್ರೀಯ ಚಿತ್ರೋತ್ಸವಗಳು ನಡೆಯುತ್ತಿವೆ.

ಹೀಗೆ ಕೇಂದ್ರೀಕರಣಗೊಂಡಿದ್ದ ಸೊಸೈಟಿಗಳು ವಿಕೇಂದ್ರೀಕರಣಗೊಳ್ಳತೊಡಗಿದೆ. ಈ ಎಲ್ಲಾ ಬದಲಾವಣೆಗಳ ಪರಿಣಾಮ ಎಷ್ಟರ ಮಟ್ಟಿಗೆ ಆಗಿದೆ ಎಂದರೆ ಈಗ ಫಿಲ್ಮ್ ಸೊಸೈಟಿಗೆ ಹೋಗುವ ಜನರಲ್ಲಿ ಭಾರಿ ಪ್ರಮಾಣದ ಇಳಿಕೆಯಾಗಿದೆ. ಚಿತ್ರೋತ್ಸವಗಳಲ್ಲಿ ಅಂದಾಜು ಎರಡೂವರೆ ಸಾವಿರ ಜನ ಪ್ರತಿನಿಧಿ ಪಾಸ್ ತೆಗೆದುಕೊಂಡರೆ, ಅದರಲ್ಲಿ ಸಿನಿಮಾ ನೋಡಲು ಬರುವವರು ಸುಮಾರು ಒಂದೂವರೆ ಸಾವಿರ ಜನ ಮಾತ್ರ. ಹೀಗಾಗಿ ನೋಡುಗರ ಸಂಖ್ಯೆ ಫಿಲ್ಮ್ ಸೊಸೈಟಿಗಳಲ್ಲೂ ಕಡಿಮೆಯಾಗಿದೆ, ಚಿತ್ರೋತ್ಸವಗಳಲ್ಲೂ ಕಡಿಮೆಯಾಗಿದೆ.ಈ ಎರಡು ಅಂಶಗಳನಿಟ್ಟುಕೊಂಡು ನಾವು ನಾಳೆಗಳ ಬಗ್ಗೆ ಚಿಂತನೆ ನಡೆಸಬೇಕಿದೆ. ಇಷ್ಟು ಕಾಲ ಫಿಲ್ಮ್ ಸೊಸೈಟಿಗಳು ಏನು ಕೆಲಸ ಮಾಡುತ್ತಿದ್ದವು? ಅವು ಜಾಗತಿಕವಾದ ಶ್ರೇಷ್ಠ ಸಿನಿಮಾಗಳನ್ನು ಪ್ರದರ್ಶಿಸುವ ಮೂಲಕ ಜನರಿಗೆ ಅವುಗಳನ್ನು ಪರಿಚಯಿಸುವ ಹಾಗೂ ಅವರಲ್ಲಿ ಸಿನಿಮಾ ಕುರಿತು ತಿಳಿವಳಿಕೆ ಮೂಡಿಸುವ ಕೆಲಸ ಮಾಡುತ್ತಿದ್ದವು. ಅದೊಂದು ರೀತಿಯ ರೀತಿಯ ಸಿನಿಮಾ ವಿದ್ಯಾಭ್ಯಾಸ.

ಎಷ್ಟೋ ಜನರಿಗೆ ಒಂದು ಸಿನಿಮಾ ವೀಕ್ಷಿಸುವುದರಿಂದ ಇನ್ನೊಂದು ಸಿನಿಮಾ ಮಾಡುವ ಸ್ಫೂರ್ತಿ ಸಿಕ್ಕಿರುವುದನ್ನು ನಾವು ನೋಡಿದ್ದೇವೆ. ಆದರೆ ಕಾಲ ಎಷ್ಟು ಬದಲಾಗಿದೆ ಎಂದರೆ ಇಂಟರ್‌ನೆಟ್ ಹಾಗೂ ಡಿಜಿಟಲ್ ತಂತ್ರಜ್ಞಾನದ ಕಾರಣಕ್ಕಾಗಿ ಈ ಫಿಲ್ಮ್ ಸೊಸೈಟಿಗಳು ಬೇರೆ ರೀತಿ ಆಲೋಚನೆ ಮಾಡುವ ಅನಿವಾರ್ಯತೆಗೆ ಸಿಲುಕಿವೆ. ಇಷ್ಟು ಕಾಲ ಫಿಲ್ಮ್ ಸೊಸೈಟಿಗಳು ತಮ್ಮ ಅಸ್ತಿತ್ವಕ್ಕಾಗಿ ಆತುಕೊಂಡಿದ್ದ ಜಾಗತಿಕ ಸಿನಿಮಾಗಳನ್ನು ಬಿಟ್ಟು ಮೊದಲು ಹೊರಬರಬೇಕು.

ಸ್ಥಳೀಯವಾಗಿ ಉತ್ತಮವಾದ ಪ್ರಯತ್ನ ಮಾಡುತ್ತಿರುವ, ಅಂದರೆ, ಗಿರೀಶ್ ಕಾಸರವಳ್ಳಿ, ಪಿ. ಶೇಷಾದ್ರಿ ಮುಂತಾದ ನಿರ್ದೇಶಕರ ಸಮಾನಾಂತರ ಸಿನಿಮಾಗಳನ್ನು ಪೋಷಿಸುವ ಕೆಲಸವನ್ನು ಕೈಗೆತ್ತಿಕೊಳ್ಳಬೇಕು. ಇಲ್ಲದಿದ್ದರೆ ಅಸ್ತಿತ್ವದಲ್ಲಿರುವ ಫಿಲ್ಮ್ ಸೊಸೈಟಿಗಳೂ ಯಾವ ಕೆಲಸಕ್ಕೂ ಬಾರದ ಬಿಳಿಯಾನೆಗಳಾಗಿ ಬಿಡುವ ಅಪಾಯಗಳಿವೆ. ಉದಾಹರಣೆಗೆ; ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ.

ರಾಜ್ಯ ಸರ್ಕಾರವೇ ಚಿತ್ರೋತ್ಸವಕ್ಕೆ ಈ ವರ್ಷ ಸುಮಾರು ಎರಡೂವರೆ ಕೋಟಿ ರೂಪಾಯಿ ನೀಡಿದೆ. ಕಳೆದ ವರ್ಷ ನಾಲ್ಕು ಕೋಟಿ ರೂಪಾಯಿ ನೀಡಿತ್ತು. ಈ ಕೋಟಿಗಟ್ಟಲೆ ಹಣ ಯಾರಿಗಾಗಿ? ಚಿತ್ರೋತ್ಸವದ ಪಾಸ್‌ಗಳನ್ನು ತೆಗೆದುಕೊಳ್ಳುವ ಎರಡೂವರೆ ಸಾವಿರ ಜನರಿಗಾಗಿಯೇ? ಇಷ್ಟು ಜನರಿಗಾಗಿ ಸರ್ಕಾರ ತನ್ನ ಬೊಕ್ಕಸದಿಂದ ಕೋಟಿಗಟ್ಟಲೆ ಹಣ ಖರ್ಚು ಮಾಡಬೇಕಾ? ಎಂಬ ಪ್ರಶ್ನೆಗಳು ಉದ್ಭವಿಸುತ್ತದೆ. ಕೇವಲ 10 ವರ್ಷದ ಹಿಂದೆ ಚಿತ್ರೋತ್ಸವ ಮಹತ್ವದ ಚಟುವಟಿಕೆಯಾಗಿತ್ತು. ಆದರೆ ಒಂದು ದಶಕದಲ್ಲಿ ಡಿಜಿಟಲ್ ಕ್ರಾಂತಿಯ ಬಳಿಕ ನಾಲ್ಕು ಕೋಟಿ ರೂಪಾಯಿ ವ್ಯಯಿಸುವುದು ಅನಗತ್ಯ ಕೆಲಸದ ಮೇಲಿನ ವ್ಯರ್ಥ ಹೂಡಿಕೆ ಎಂಬ ಭಾವ ಹುಟ್ಟುತ್ತಿದೆ.ಇದು ಭಾರತೀಯ ಸಿನಿಮಾ ಸನ್ನಿವೇಶಕ್ಕೆ ಮಾತ್ರ ಸಂಬಂಧಿಸಿದ್ದಲ್ಲ, ಜಾಗತಿಕ ಸಮಸ್ಯೆಯೂ ಹೌದು. ಸಿನಿಮಾ ನೋಡುವ ಉತ್ಸಾಹಿಗಳ ಸಂಖ್ಯೆಯಲ್ಲಿ ಇಳಿಕೆಯಾದ ಕಾರಣಕ್ಕಾಗಿಯೇ ಜಗತ್ತಿನ ಅತಿ ದೊಡ್ಡ ಚಿತ್ರೋತ್ಸವ ಎನ್ನಲಾಗುವ ಕಾನ್ಸ್‌ನಂಥ ಚಿತ್ರೋತ್ಸವಗಳಲ್ಲಿಯೂ ಕೂಡ ಹಾಲಿವುಡ್‌ನ ಸಿನಿಮಾಗಳನ್ನು ತೋರಿಸುವ ಪರಿಪಾಠ ಬೆಳೆದಿದೆ. ಹಾಗೇ ನಮ್ಮ ಭಾರತೀಯ ಚಿತ್ರೋತ್ಸವಗಳಲ್ಲಿ ಬಾಲಿವುಡ್‌ನ ಸಿನಿಮಾಗಳಿಗೆ ಪ್ರಾಧಾನ್ಯ ಸಿಗುತ್ತಿದೆ.

ಇಲ್ಲಿನ ಪ್ರಾದೇಶಿಕ ಶ್ರೇಷ್ಠ ಸಿನಿಮಾಗಳಿಗೆ ದಕ್ಕಬೇಕಾದ ಮರ್ಯಾದೆ, ಯಾವ ಕೋನದಿಂದಲೂ ಅವುಗಳಿಗಿಂತ ಅತ್ಯುತ್ತಮ ಎನಿಸಿಕೊಳ್ಳದ ಸಿನಿಮಾಗಳಿಗೆ ಸಿಗುವ ವ್ಯವಸ್ಥೆ ಉಂಟಾಗಿದೆ. ಯಾವುದು ಸಿನಿಮಾ ಚರಿತ್ರೆಯಲ್ಲಿ ಮುಖ್ಯವಾಗಬಾರದೋ ಅದಕ್ಕೆ `ಗ್ಲಾಮರ್' ಹೆಸರಿನಲ್ಲಿ ಮಹತ್ವ ಸಿಗುವುದಿದೆಯಲ್ಲ, ಅದು ಚರಿತ್ರೆಗೆ ನಾವು ಮಾಡುವ ಅಪಚಾರ. ಗ್ಲಾಮರ್ ಹೊದಿಕೆಗೆ ಮರ್ಯಾದೆ ಸಿಕ್ಕಬಾರದು ಎಂದು ಹೇಳುತ್ತಿಲ್ಲ.

ಆದರೆ ಅದಕ್ಕೆಂದೇ ರೂಪುಗೊಂಡಿರುವ ಅನೇಕ ವೇದಿಕೆಗಳಿವೆ. ಅದಕ್ಕೆ ಸಂಬಂಧಿಸಿದ ಕೆಲಸ ಮಾಡುವ ಮತ್ತೊಂದು ಜಗತ್ತೇ ಇದೆ. `ಫಿಲ್ಮ್ ಫೇರ್' ಪ್ರಶಸ್ತಿಗಳಿರಬಹುದು, ಶುಕ್ರವಾರದ ಪುರವಣಿಗಳಿರಬಹುದು, ಮುಂತಾದ ವೇದಿಕೆಗಳು ಗ್ಲಾಮರ್ ಬದುಕನ್ನು ಪೋಷಿಸುತ್ತವೆ. ಆದರೆ ನಿಜವಾದ ಶ್ರೇಷ್ಠವಾದುದ್ದನ್ನು ಪೋಷಿಸಬೇಕಾದ ಅಕಾಡೆಮಿಗಳು, ನಿಜವಾದ ಅಕಾಡೆಮಿಕ್ ಪ್ರಯೋಗಗಳನ್ನು ಪೋಷಿಸುವ ಸಾಮರ್ಥ್ಯವನ್ನು ಕಳೆದ ಕೆಲವು ವರ್ಷಗಳಲ್ಲಿ ಕಳೆದುಕೊಂಡಿವೆ.

ಫಿಲ್ಮ್ ಸೊಸೈಟಿಗಳು ಕೂಡಲೇ ಸ್ಥಳೀಯ ಸಮಾನಾಂತರ ಚಿತ್ರ ಚಟುವಟಿಕೆಯನ್ನು ಪೋಷಿಸುವ ನಿಟ್ಟಿನಲ್ಲಿ ಗಮನ ಹರಿಸಿದರೆ ಮಾತ್ರ, ಸಮಾನಾಂತರ ಚಳವಳಿಗೂ ಒಂದು ಹೊಸ ಶಕ್ತಿ ಬರುತ್ತದೆ. ಅಲ್ಲದೆ ಅದನ್ನು ನೋಡುವ ಒಂದು ಜಗತ್ತು ಹುಟ್ಟಿಕೊಳ್ಳುತ್ತದೆ.

ವಿದೇಶಿ ಶ್ರೇಷ್ಠ ಸಿನಿಮಾಗಳನ್ನು ಅಂತರ್ಜಾಲದಲ್ಲಿ ನೋಡುವವರು ಸಹ ಇದರಲ್ಲಿ ಪಾಲ್ಗೊಂದು ಎರಡನ್ನೂ ತುಲನೀಕರಿಸಿ ವಿಶ್ಲೇಷಿಸುತ್ತಾರೆ. ಇದು ಹೊಸ ಸ್ಥಳೀಯ ಚಿತ್ರ ನಿರ್ಮಾಣಕ್ಕೆ ಸ್ಫೂರ್ತಿಯಾಗುತ್ತದೆ. ಹೀಗಾಗಿ ನಮ್ಮಲ್ಲಿರುವ ಫಿಲ್ಮ್ ಸೊಸೈಟಿಗಳು ಈ ನೆಲೆಯಲ್ಲಿ ಆಲೋಚನೆ ಮಾಡುವಂತಾದರೆ ಮಾತ್ರ ಅವುಗಳಿಗೆ ಶಾಶ್ವತವಾದ ಅಸ್ತಿತ್ವ ಸಿಗುತ್ತದೆ ಹಾಗೂ ಈಗ ಉಸಿರಾಡುತ್ತಿರುವುದಕ್ಕೆ ಅರ್ಥ ಸಿಗುತ್ತದೆ.ಫಿಲ್ಮ್ ಸೊಸೈಟಿಗಳು ಕೆಲವು ಗಣ್ಯರ ಅಥವಾ ಬುದ್ಧಿಜೀವಿಗಳ ಗುಂಪಾಗಬಾರದು. ಅದು ಒಟ್ಟು ಸಮಾಜವನ್ನು ಒಳಗೊಳ್ಳುವ ಮತ್ತು ಈ ಸಮಾಜದೆಡೆಗೆ ಪ್ರಯೋಗಗಳನ್ನು ಮಾಡುವವರಿಗೆ ವೇದಿಕೆಯಾಗುವ ಸನ್ನಿವೇಶ ಸೃಷ್ಟಿಯಾಗಬೇಕು.ಚಿತ್ರ ಸಮಾಜ ವೈಫಲ್ಯಕ್ಕೆ ಕಾರಣವೇನು?

ಫಿಲಂಸೊಸೈಟಿಗಳನ್ನು ರಚಿಸಿಕೊಳ್ಳುವವರು ವಿದೇಶಿ ಚಿತ್ರಗಳ ಅಧ್ಯಯನವೇ ನಮ್ಮ ಉದ್ದೇಶ ಎನ್ನುವಂತೆ ವರ್ತಿಸಲಾರಂಭಿಸಿದ್ದು ಮೊದಲನೆಯ ಕಾರಣ. ಪ್ರಾದೇಶಿಕ ಚಿತ್ರಗಳ ಅಧ್ಯಯನಕ್ಕೆ ಒತ್ತು ಸಿಗಲಿಲ್ಲವಾದ ಕಾರಣ ಸದಸ್ಯರಿಗೂ ಸಿನಿಮಾಕ್ಕೂ ಅಂತರ ಹೆಚ್ಚಾಗಲಾರಂಭಿಸಿತು.

ಭಾರತೀಯ ಭಾಷೆಗಳಲ್ಲಿ ನಡೆಯುತ್ತಿರುವ ಪ್ರಯೋಗಗಳ ಬಗ್ಗೆ ಚಿತ್ರ ಸಮಾಜಗಳು ಹೆಚ್ಚು ಸಂವಾದ ಮಾಡಲೇ ಇಲ್ಲ. ಬರ್ಗ್‌ಮನ್, ಐಸೆನ್‌ಸ್ಟೈನ್, ಕುರಸೋವಾ, ಗೋಡಾರ್ಡ್ ಮುಂತಾದವರ  ಚಿತ್ರಗಳನ್ನು ನೋಡುವುದೇ ಮುಖ್ಯವಾಯಿತೇ ಹೊರತು ಭಾರತೀಯ ಭಾಷೆಯ ಚಿತ್ರಗಳೂ ಮುಖ್ಯ ಎಂಬುದನ್ನು ಮರೆತರು.

ಸಿನಿಮಾ ಎಂದರೆ ಯೂರೋಪಿನದೇ ಎನ್ನುವ ಭಾವನೆ ಬಂತು. ಭಾರತೀಯ ಚಿತ್ರಗಳು ಗೇಲಿಯ ವಸ್ತುಗಳಾದವು. ನಮ್ಮ ದೇಶದ ಚಿತ್ರಗಳ ಬಗ್ಗೆ ಸಂವಾದ ನಡೆಸುವ ಬದಲು ಇತರ ಚಿತ್ರಗಳ ಬೆಳವಣಿಗೆಗೆಗಳನ್ನೇ ಚರ್ಚಿಸಲಾರಂಭಿಸಿದ್ದರಿಂದ ಬೌದ್ಧಿಕವಾಗಿ ಸದಸ್ಯರು ಚಿತ್ರ ಸಮಾಜದಿಂದ ದೂರವಾದರು. ಒಟ್ಟಾರೆ ಫಿಲಂ ಸೊಸೈಟಿಗಳು ಸಾಂಸ್ಕೃತಿಕ ಸಂವಾದ ಮೂಡಿಸಲು ವಿಫಲವಾದದ್ದು ಹೀಗೆ.ಸಿನಿಮಾದವರು ದೂರ

ಚಿತ್ರ ಸಮಾಜದ ಚಟುವಟಿಕೆಗಳಲ್ಲಿ ಸಿನಿಮಾದವರು ಭಾಗವಹಿಸಲೇ ಇಲ್ಲ. ಫಿಲಂ ಸೊಸೈಟಿಗಳು ಚಿತ್ರರಂಗದ ಅವಿಭಾಜ್ಯ ಅಂಗ ಎನ್ನುವುದನ್ನು ಸಿನಿಮಾರಂಗದವರು ಒಪ್ಪಿಕೊಳ್ಳಲೇ ಇಲ್ಲ. ಚಿತ್ರಸಮಾಜದವರೂ ಕೂಡ, ಮುಖ್ಯವಾಹಿನಿಯಲ್ಲಿರುವ ಚಿತ್ರ ನಿರ್ಮಾಪಕ, ನಿರ್ದೇಶಕರುಗಳನ್ನು ಗೌಣವಾಗಿ ಪರಿಗಣಿಸಿದರು. ಹೀಗಾಗಿ ಸಿನಿಮಾಕ್ಕೂ ಫಿಲಂ ಸೊಸೈಟಿಗೂ ಸಂಪರ್ಕ ಏರ್ಪಡಲೇ ಇಲ್ಲ.ಆರಂಭ

ಫಿಲಂ ಸೊಸೈಟಿಯ ಉಗಮವೇ ಬಂಡಾಯದಿಂದ. 1925ರಲ್ಲಿ `ಬ್ಯಾಟಲ್‌ಷಿಪ್ ಪೊಟೆಮ್‌ಕಿನ್' ಚಿತ್ರಕ್ಕೆ ಪ್ರದರ್ಶನಾವಕಾಶವೇ ಸಿಗಲಿಲ್ಲ. ಚಿತ್ರದಲ್ಲಿ ಪರಂಪರಾಗತ ಶೈಲಿ ಬಿಟ್ಟು  ಹೊಸ ಪ್ರಯೋಗವಾಗಿದೆ ಎನ್ನುವ ಅರಿವಾಗುತ್ತಲೇ ಸಮಾನಮನಸ್ಕಯುವಕರ  ಗುಂಪೊಂದು ಅದರ ಪ್ರದರ್ಶನದ ವ್ಯವಸ್ಥೆ ಮಾಡಿದರು. ಚರ್ಚೆ ನಡೆಯಿತು.

ಮುಂದೆ ಇದೇ ಒಂದು ಸಂಪ್ರದಾಯವಾಯಿತು. ಯುದ್ಧದ ಸಮಯದಲ್ಲಿ ಇಂತಹ ಸೆನ್ಸಾರ್ ಇದ್ದುದರಿಂದ ಖಾಸಗಿ ಪ್ರದರ್ಶನದ ಮೂಲಕ ಚಿತ್ರ ನೋಡುವ ವ್ಯವಸ್ಥೆ ಜನಪ್ರಿಯವಾಯಿತು. ಯುರೋಪಿನಾದ್ಯಂತ ಒಂದು ಸಾಂಸ್ಕೃತಿಕ ಚಳವಳಿಯ ರೀತಿಯಲ್ಲಿ ಚಿತ್ರಸಮಾಜಗಳು ಹುಟ್ಟಿಕೊಂಡವು. ಫ್ರಾನ್ಸ್, ಜರ್ಮನಿ, ಸ್ವೀಡನ್, ಇಟಲಿ ದೇಶಗಳ ಚಲನಚಿತ್ರಗಳನ್ನು ಜನಪ್ರಿಯಗೊಳಿಸಿದ್ದೇ ಚಿತ್ರ ಸಮಾಜಗಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry