ಗುರುವಾರ , ನವೆಂಬರ್ 21, 2019
22 °C
1512 ಮನೆ, ಉದ್ಯಾನ, ವಾಣಿಜ್ಯ ಕೇಂದ್ರ, ಪಾಲಿಕೆ ಬಹುಮಹಡಿ ಕಟ್ಟಡ ನಿರ್ಮಾಣ

ಬದಲಾಗಲಿದೆ ವಸತಿ ಸಮುಚ್ಚಯದ ಚಿತ್ರಣ

Published:
Updated:

ಈಜಿಪುರದ ಗೋಜಲು-4

ಬೆಂಗಳೂರು: ಇನ್ನೂ ಎರಡೂವರೆ ವರ್ಷಗಳಲ್ಲಿ ಈಜಿಪುರದ ಇಡಬ್ಲ್ಯೂಎಸ್ ವಸತಿ ಸಮುಚ್ಚಯದಲ್ಲಿ 1512 ಮನೆಗಳು, ಉದ್ಯಾನವನ, ವಾಣಿಜ್ಯ ಕೇಂದ್ರ ಹಾಗೂ ಬಿಬಿಎಂಪಿ ಬಹುಮಹಡಿ ಕಟ್ಟಡ ನಿರ್ಮಾಣವಾಗಲಿದ್ದು ಇಲ್ಲಿನ ಚಿತ್ರಣವೇ ಬದಲಾಗಲಿದೆ.`ಒಟ್ಟು 15.64 ವಿಸ್ತೀರ್ಣವಿರುವ ಈ ಪ್ರದೇಶದಲ್ಲಿ ಸುಮಾರು ಏಳೂವರೆ ಎಕರೆ ಜಾಗದಲ್ಲಿ ಒಂಬತ್ತು ಅಂತಸ್ತಿನ ಕಟ್ಟಡ ನಿರ್ಮಾಣವಾಗಲಿದೆ. 1512 ಮನೆಗಳಿರುವ ಈ ಕಟ್ಟಡದಲ್ಲಿ ಒಟ್ಟು 26 ಬ್ಲಾಕ್‌ಗಳಿರುತ್ತವೆ. ಪ್ರತಿ ಬ್ಲಾಕ್‌ಗೂ ಎರಡು ಲಿಫ್ಟ್‌ಗಳನ್ನು ಅಳವಡಿಸಲಾಗುವುದು. ಮನೆಗಳ ನಡುವೆ ರೂಪುಗೊಳ್ಳಲಿರುವ ಉದ್ಯಾನವನ ವಸತಿ ಸಮುಚ್ಚಯದ ಸೌಂದರ್ಯವನ್ನು ಹೆಚ್ಚಿಸಲಿದೆ' ಎಂದು ಮೇವರಿಕ್ ಹೋರ್ಡಿಂಗ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಉದಯ ಗರುಡಾಚಾರ್ ಭರವಸೆ ನೀಡಿದ್ದಾರೆ.ಈ ಸಂಬಂಧ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಅವರು, `ವಸತಿ ಸಮುಚ್ಚಯ ನಿರ್ಮಾಣಕ್ಕೆ ಬೆಸ್ಕಾಂ ಸೇರಿದಂತೆ ಈಗಾಗಲೇ ಸಂಬಂಧಪಟ್ಟ ಇಲಾಖೆಗಳಿಂದ ನಿರಾಕ್ಷೇಪಣಾ ಪ್ರಮಾಣ ಪತ್ರ (ಎನ್‌ಒಸಿ) ಪಡೆಯಲಾಗಿದೆ. ಸಮುಚ್ಚಯದ ವಿನ್ಯಾಸ, ನಕ್ಷೆ ಸೇರಿದಂತೆ ರೂಪುರೇಷೆಗಳನ್ನು ಸಿದ್ಧಪಡಿಸಿಕೊಂಡಿದ್ದೇವೆ. ಶೀಘ್ರವೇ ಗುದ್ದಲಿ ಪೂಜೆ ನಡೆಯಲಿದ್ದು, ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಕಾಮಗಾರಿ ಆರಂಭಿಸಲಾಗುವುದು' ಎಂದು ಹೇಳಿದರು.`ಪ್ರತಿ ಮನೆಯನ್ನು 360 ಚದರ ಅಡಿ ವಿಸ್ತೀರ್ಣದಲ್ಲಿ ಕಟ್ಟಲಾಗುವುದು. ನಡುಮನೆ, ಅಡುಗೆ ಕೋಣೆ, ನಿದ್ರಾ ಕೊಠಡಿ ಹಾಗೂ ಶೌಚಾಲಯ ಹೀಗೆ ಮನೆಯಲ್ಲಿ ನಾಲ್ಕು ಕೋಣೆಗಳಿರುತ್ತವೆ. ಪ್ರತಿ ಕೋಣೆಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ಜಲಮಂಡಳಿ ಜತೆ ಮಾತನಾಡಿ ನೀರಿನ ಸೌಲಭ್ಯ ಒದಗಿಸಲಾಗುವುದು. ಅಲ್ಲದೇ, ಈ ಎಲ್ಲಾ ಮನೆಗಳ ನಿರ್ವಹಣೆಯನ್ನು ಜವಬ್ದಾರಿಯನ್ನು ಮೂವತ್ತು ವರ್ಷಗಳ ಕಾಲ ನಮ್ಮ ಸಂಸ್ಥೆಯ ನೋಡಿಕೊಳ್ಳಲಿದೆ' ಎಂದರು.`ಇನ್ನುಳಿದ ಸುಮಾರು ಏಳೂವರೆ ಎಕರೆ ಜಾಗದಲ್ಲಿ ವಾಣಿಜ್ಯ ಕೇಂದ್ರ, ಬಿಬಿಎಂಪಿಗೆ ಬಹುಮಹಡಿ ಕಟ್ಟಡ ನಿರ್ಮಿಸಿಕೊಡಲಾಗುವುದು. ಸ್ವಲ್ಪ ಜಾಗವನ್ನು ವಾಹನ ನಿಲುಗಡೆಗೆ ಮೀಸಲಿಡಲಾಗುವುದು. ಇಲ್ಲಿನ ಕೊಳೆಗೇರಿ ನಿವಾಸಿಗಳನ್ನೇ ವಾಣಿಜ್ಯ ಕೇಂದ್ರದಲ್ಲಿ ಕೆಲಸಕ್ಕೆ ತೆಗೆದುಕೊಳ್ಳಲಾಗುವುದು' ಎಂದು ಉದಯ ಗರುಡಾಚಾರ್ ಭರವಸೆ ಕೊಟ್ಟರು.ಸಭಾಂಗಣ ನಿರ್ಮಾಣ: ಕೊಳೆಗೇರಿ ನಿವಾಸಿಗಳಿಗೆ ಹಾಗೂ ಅವರ ಮಕ್ಕಳಿಗೆ ಅನುಕೂಲವಾಗುವಂತೆ ವಸತಿ ಸಮುಚ್ಚಯದ ಒಂದೂವರೆ ಎಕರೆ ಜಾಗದಲ್ಲಿ ಉದ್ಯಾನ ನಿರ್ಮಿಸಲಾಗುವುದು. ಉಳಿದಂತೆ ಅಂಗನವಾಡಿ, ವ್ಯಾಯಾಮ ಕೇಂದ್ರ ಹಾಗೂ ಮದುವೆ ಇನ್ನಿತರ ಆಚರಣೆಗಳನ್ನು ಮಾಡಲು ಸಭಾಂಗಣ ನಿರ್ಮಿಸಲಾಗುವುದು.ವಸತಿ ಸಮುಚ್ಚಯದ ಹಿನ್ನೋಟ: 1991ರಲ್ಲಿ ಟೆಂಡರ್ ಕರೆದ ಬಿಬಿಎಂಪಿ, ಇಡಬ್ಲ್ಯೂಎಸ್ ವಸತಿ ಸಮುಚ್ಚಯದಲ್ಲಿ 1,340 ಮನೆಗಳ ನಿರ್ಮಾಣ ಕಾರ್ಯ ಆರಂಭಿಸಲು ನಿರ್ಧರಿಸಿತು. 1997ರಲ್ಲಿ ಕಾಮಗಾರಿ ಪೂರ್ಣಗೊಂಡು ಅದೇ ವರ್ಷದಲ್ಲಿ ಫಲಾನುಭವಿಗಳಿಗೆ ಮನೆಗಳನ್ನು ಹಂಚಲಾಗಿತ್ತು. ಆದರೆ, ಮಳೆ ಆರ್ಭಟ, ನಿರ್ವಹಣೆ ಸಮಸ್ಯೆಯಿಂದ ಎರಡೇ ವರ್ಷಗಳಲ್ಲಿ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿತು.ಕಟ್ಟಡದ ಸ್ಥಿತಿಗತಿಯನ್ನು ತಪಾಸಣೆ ಮಾಡಲು ಸರ್ಕಾರ, `ಟಾರ್‌ಸ್ಟೀಲ್' ಎಂಬ ಸಂಸ್ಥೆಯನ್ನು ನಿಯೋಜಿಸಿತ್ತು. ಆ ಸಂಸ್ಥೆಯ ಸದಸ್ಯರು ಕಟ್ಟಡವನ್ನು ಪರಿಶೀಲಿಸಿ ಇದು ವಾಸಕ್ಕೆ ಯೋಗ್ಯವಲ್ಲ ಎಂದು ವರದಿ ಸಲ್ಲಿಸಿದ್ದರು. ಇದೇ ಸಂದರ್ಭದಲ್ಲಿ ಕಟ್ಟಡದ 13ನೇ ಬ್ಲಾಕ್ ಕುಸಿದು ಮೂವರು ಸಾವನ್ನಪ್ಪಿದ್ದರು. ಘಟನೆಯಿಂದ ಎಚ್ಚೆತ್ತುಕೊಂಡ ಬಿಬಿಎಂಪಿ ಫಲಾನುಭವಿಗಳಿಗೆ ತಲಾ ರೂ. 5,000 ಕೊಟ್ಟು ಅವರನ್ನು ಬೇರೆಡೆ ಸ್ಥಳಾಂತರ ಮಾಡಿತು. ನಂತರ ಆ ಕಟ್ಟಡವನ್ನು ನೆಲಸಮ ಮಾಡಲಾಯಿತು.2004ರಲ್ಲಿ ಟೆಂಡರ್ ಕರೆದು ಜಂಟಿ ಸಹಭಾಗಿತ್ವದಲ್ಲಿ ಮನೆಗಳ ನಿರ್ಮಾಣ ಮಾಡಬೇಕು ಎಂಬ ನಿರ್ಧಾರ ತೆಗೆದುಕೊಳ್ಳಲಾಯಿತು. ಅಲ್ಲದೇ, ಒಟ್ಟು 15.64 ಎಕರೆ ಜಾಗದ ಅರ್ಧ ಭಾಗದಲ್ಲಿ ಕೊಳೆಗೇರಿ ನಿವಾಸಿಗಳಿಗೆ ಮನೆಗಳನ್ನು ಕಟ್ಟಿಸಿಕೊಡಬೇಕು. ಬಾಕಿ ಜಾಗದಲ್ಲಿ ವಾಣಿಜ್ಯ ಸಮುಚ್ಚಯ ಕಟ್ಟಬಹುದು. ಆದರೆ, ಆ ಕಟ್ಟಡದಲ್ಲಿ ಅರ್ಧ ಭಾಗವನ್ನು ಬಿಬಿಎಂಪಿಗೆ ಉಚಿತವಾಗಿ ಕೊಡಬೇಕು ಎಂಬ ಆದೇಶ ಮಾಡಲಾಯಿತು.ಅದು ರೂ.380 ಕೋಟಿಯ ಯೋಜನೆಯಾಗಿದ್ದು, ಟೆಂಡರ್‌ನಲ್ಲಿ ಆಕೃತಿ ನಿರ್ಮಾಣ್, ಮೇವರಿಕ್ ಹಾಗೂ ಐಡಿಇಬಿ ಸಂಸ್ಥೆಗಳು ಭಾಗವಹಿಸಿದ್ದವು. ತೀವ್ರ ಪೈಪೋಟಿಯ ನಡುವೆ ಮೇವರಿಕ್ ಸಂಸ್ಥೆಗೆ ಆ ಟೆಂಡರ್ ಲಭಿಸಿತು. ಇದನ್ನು ಪ್ರಶ್ನಿಸಿ ಆಕೃತಿ ನಿರ್ಮಾಣ್ ಸಂಸ್ಥೆಯವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದರು. 2008ರಲ್ಲಿ ಶೆಡ್‌ನಲ್ಲಿ ವಾಸವಿದ್ದ ಮೂವರು ಮಕ್ಕಳು ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಸಾವನ್ನಪ್ಪಿದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ, ಶೀಘ್ರವೇ ಮನೆಗಳನ್ನು ಕಟ್ಟಿಸಿಕೊಡಬೇಕು ಎಂದು ಆದೇಶ ಹೊರಡಿಸಿತು.ಆಕೃತಿ ನಿರ್ಮಾಣ ಸಂಸ್ಥೆಯ ತಡೆಯಾಜ್ಞೆಯನ್ನು 2010ರಲ್ಲಿ ರದ್ದುಗೊಳಿಸಿದ ನ್ಯಾಯಾಲಯ, ಆ ಸಂಸ್ಥೆಗೆ ರೂ.50 ಸಾವಿರ ದಂಡ ವಿದಿಸಿತ್ತು. ಮೇವರಿಕ್ ಸಂಸ್ಥೆಗೆ ದೊರೆತಿದ್ದ ಟೆಂಡರ್‌ಗೆ ಒಪ್ಪಿಗೆ ನೀಡಿದ ಸರ್ಕಾರ 2012ರ ಫೆಬ್ರುವರಿ 1ರಂದು ಅನುಮತಿ ಪತ್ರಕ್ಕೆ ಸಹಿ ಮಾಡಿತು. ಆ ನಂತರ ಮೇವರಿಕ್ ಸಂಸ್ಥೆ ಬಿಬಿಎಂಪಿ ಜತೆಗೂಡಿ ಶೆಡ್‌ಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಯಿತು.`ಶೆಡ್‌ಗಳನ್ನು ತೆರವುಗೊಳಿಸುವಂತೆ ಇಡಬ್ಲ್ಯೂಎಸ್ ವಸತಿ ಸಮುಚ್ಚಯದ ಕೊಳೆಗೇರಿ ನಿವಾಸಿಗಳಿಗೆ ಹಲವು ಬಾರಿ ಸೂಚನೆ ನೀಡಿದ್ದೆವು. ಆದರೆ, ಶೆಡ್ ತೆರವುಗೊಳಿಸದ ಅವರು ಪ್ರತಿಭಟನೆಗೆ ಮುಂದಾದರು. ಹೀಗಾಗಿ ಪೊಲೀಸ್ ರಕ್ಷಣೆ ಬಳಸಿಕೊಂಡು 2012ರ ಅಕ್ಟೋಬರ್ 8 ರೊಳಗೆ ಶೆಡ್‌ಗಳನ್ನು ತೆರವುಗೊಳಿಸಿ ಎಂದು ಹೈಕೋರ್ಟ್ ಆದೇಶ ನೀಡಿತು. ಹೈಕೋರ್ಟ್ ಸೂಚನೆಯಂತೆ 300 ಕುಟುಂಬಗಳಿಗೆ ರೂ.30,000 ಕೊಟ್ಟು ಪರ್ಯಾಯ ವ್ಯವಸ್ಥೆ ಮಾಡಲಾಯಿತು. ಆನೇಕಲ್ ಸಮೀಪದ ಇಗ್ಗಲೂರಿನಲ್ಲಿ 5 ಎಕರೆ ಜಾಗ ಪಡೆದು ಕೊಡಲಾಗಿತ್ತು. ಆ ಜಾಗದಲ್ಲಿ ತಾತ್ಕಾಲಿಕ ಶೆಡ್‌ಗಳನ್ನು ಹಾಕಿಕೊಂಡು ವಾಸಿಸುವಂತೆ ಸಲಹೆ ನೀಡಿದ್ದೆವು. ಆದರೆ, ಅಲ್ಲಿಗೆ ಯಾರೂ ಹೋಗಲಿಲ್ಲ.' ಎಂದು ಗರುಡಾಚಾರ್ ಹೇಳಿದರು.

ಪ್ರತಿಕ್ರಿಯಿಸಿ (+)