ಬದಲಾಗಲಿ ಮನೋಭಾವ

7

ಬದಲಾಗಲಿ ಮನೋಭಾವ

Published:
Updated:

 


`ನಾನೇನು ಅಪರಾಧ ಮಾಡಿದ್ದೇನೆ? ನನಗೆ ಹುಶಾರಿಲ್ಲ, ಅದೇ ನನ್ನ ಅಪರಾಧವೇ. ಹಾಗಿದ್ದರೆ ಮಾನಸಿಕ ರೋಗ ಹೊಂದಿರುವುದೇ ನಾನು ಮಾಡಿದ ದೊಡ್ಡ ಅಪರಾಧವಾಯಿತೇ?- ಇದು ದೀರ್ಘಕಾಲದಿಂದ ಮಾನಸಿಕ ರೋಗದಿಂದ ಬಳಲುತ್ತಿರುವ ಒಬ್ಬ ರೋಗಿಯ ಆರ್ತನಾದ. 

 

ತನ್ನ ಮಾನಸಿಕ ರೋಗದ ಕಾರಣಕ್ಕಾಗಿ ಸಮಾಜದಿಂದ, ಜನರಿಂದ, ಸ್ನೇಹಿತರಿಂದ, ಕೆಲಸದ ಸ್ಥಳದಲ್ಲಿ... ಹೀಗೆ ಎಲ್ಲ ಕಡೆಯೂ ಎಲ್ಲರೂ ಅವನನ್ನು ಕಳಂಕ ಹೊತ್ತವರಂತೆ ನೋಡುತ್ತಿದ್ದಾರೆ. ಇದು ಈ ಒಬ್ಬ ವ್ಯಕ್ತಿಯ ಅಳಲಲ್ಲ. ಮಾನಸಿಕ ರೋಗದಿಂದ ಬಳಲುತ್ತಿರುವ ಸಾವಿರಾರು, ಅಲ್ಲ, ಲಕ್ಷಾಂತರ ಜನರ ಕೂಗೂ ಹೌದು. ಹಾಗಾದರೆ ಇದಕ್ಕೆ ಯಾರು ಹೊಣೆ? ಹೀಗೆಂದು ನಾವೆಲ್ಲರೂ ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಾಗಿದೆ.

 

ಕಳೆದ 20 ವರ್ಷಗಳ ಹಿಂದೆ ಮನೋರೋಗಕ್ಕೆ ಸಂಬಂಧಿಸಿದಂತೆ ಇದ್ದ ಪರಿಸ್ಥಿತಿಯೇನೋ ಈಗ ಬದಲಾಗಿದೆ. ಮೊದಲು ಯರವಾಡಿ ಜೈಲಿನಂತಹ  ಸ್ಥಳಗಳಲ್ಲಿ ಕಾಲಿಗೆ ಸರಪಳಿ ಹಾಕಿ ಮನೋರೋಗಿಗಳನ್ನು ಕೂಡಿ ಹಾಕುತ್ತಿದ್ದರು. ಒಳ್ಳೆಯ ಚಿಕಿತ್ಸೆ ಲಭ್ಯವಿರಲಿಲ್ಲ.ಹೌದು, ಇಂತಹ ಭಯಾನಕ ಪರಿಸ್ಥಿತಿ ಈಗಿಲ್ಲ  ನಿಜ. ರೋಗಿಗಳು ಯರವಾಡಿಯಂಥ ಜೈಲಿಗೆ ಹೋಗಬೇಕಾಗಿಲ್ಲ, ಮನೋರೋಗಕ್ಕೆ ಒಳ್ಳೆಯ ಚಿಕಿತ್ಸೆ ಸಹ ಲಭ್ಯವಿದೆ. ಆದರೆ ಮಾನಸಿಕ ರೋಗ ಮತ್ತು ರೋಗಿಗಳೆಡೆಗೆ ನಡೆಸುವ ನಮ್ಮ ತಾರತಮ್ಯ ಮನೋಭಾವ ಬದಲಾಗಿದೆಯೇ? ಖಂಡಿತಾ ಇಲ್ಲ. ನೆರೆಹೊರೆಯವರು, ಸಂಬಂಧಿಕರು, ಸ್ನೇಹಿತರು, ಮನೆಯವರು, ಸಮಾಜ, ಅಷ್ಟೇ ಏಕೆ ಮಾಧ್ಯಮಗಳಲ್ಲೂ ಕಾಣಿಸಿಕೊಳ್ಳುವ ಈ ತಾರತಮ್ಯದಲ್ಲಿ ಮಾತ್ರ ಯಾವುದೇ ಬದಲಾವಣೆ ಆಗಿಲ್ಲ. ನನ್ನಲ್ಲಿ ಬರುವ ಕೆಲವು ರೋಗಿಗಳು ತಮಗೆ ಅಂತಹ ರೋಗ ಇರುವ ಬಗ್ಗೆ ತಮ್ಮ ಸಂಬಂಧಿಕರಿಗೆ ಗುಟ್ಟು ಬಿಟ್ಟುಕೊಡದೆ, ವೇಷ ಮರೆಸಿಕೊಂಡು ಬರುವುದೂ ಉಂಟು.ಉದ್ಯೋಗದ ಸ್ಥಳ

`ಅದೃಷ್ಟವಶಾತ್ ನನಗೆ ಯಾವಾಗಲೂ ಅಂತಹ ಕ್ರೂರ ಅನುಭವ ಆಗಿಲ್ಲ. ಯಾಕೆಂದರೆ, ಯಾವುದೇ ಉದ್ಯೋಗದ ಸಂದರ್ಶನದಲ್ಲಿ ನಾನು ನನಗೆ ಖಿನ್ನತೆ ಆಗಿತ್ತು ಎಂಬ ವಿಷಯವನ್ನೇ ತಿಳಿಸಲಿಲ್ಲ. ತಿಳಿಸಿದ್ದರೆ, ನನಗೆ ಉದ್ಯೋಗವೇ ದೊರಕುತ್ತಿರಲಿಲ್ಲವೇನೋ. ನಾವೂ ಚೆನ್ನಾಗಿ ಕೆಲಸ ಮಾಡಬಲ್ಲೆವು ಎಂಬುದನ್ನು ಈ ಜನ ಖಂಡಿತವಾಗಿಯೂ ಅರ್ಥ ಮಾಡಿಕೊಳ್ಳಲಾರರು'.

 

ಇದು ಖಿನ್ನತೆಯಿಂದ ಬಳಲಿ, ಈಗ ಚೆನ್ನಾಗಿರುವ ಮತ್ತೊಬ್ಬ ವ್ಯಕ್ತಿಯ ಅಳಲು. ಸಂಶೋಧನೆಯ ಪ್ರಕಾರ, ಮಾನಸಿಕ ರೋಗಿಗಳನ್ನು ಕಳಂಕದಿಂದ ಕೂಡಿದಂತೆ ನೋಡಿ, ಭೇದಭಾವ ಮಾಡುವುದರಿಂದ ಉಂಟಾಗುವ ಪ್ರಮುಖ ತೊಂದರೆ ನಿರುದ್ಯೋಗ. ಉದ್ಯೋಗ ಯಾವುದೇ ವ್ಯಕ್ತಿಯ ಸಕಾರಾತ್ಮಕ ಮಾನಸಿಕ ಆರೋಗ್ಯಕ್ಕೆ ಸಹಕಾರಿ. ಅದರಲ್ಲೂ ಮಾನಸಿಕ ರೋಗದಿಂದ ಬಳಲಿ, ಚೇತರಿಸಿಕೊಂಡಿರುವ ವ್ಯಕ್ತಿ ಮತ್ತೆ ಕೆಲಸಕ್ಕೆ ಮರಳುವುದು ಅತಿ ಮುಖ್ಯ.

 

ಮಾಧ್ಯಮಗಳ ಕೊಡುಗೆ

ಮಾಧ್ಯಮಗಳು ಜನರ ಮೇಲೆ ಬೀರುವ ಪರಿಣಾಮ ಹೆಚ್ಚಿನದು. ಕೆಲವು ಬಾರಿ ಅವು ಮಾನಸಿಕ ರೋಗ ಅಥವಾ ರೋಗಿಯ ಬಗೆಗಿನ ವಿಷಯವನ್ನು ತಿರುಚಿ/ ಸತ್ಯಕ್ಕೆ ದೂರವಾದುದನ್ನು ಪ್ರಕಟಿಸುವುದು/ ವೈಭವೀಕರಿಸುವುದು ಸಾಮಾನ್ಯ. ಸಂಶೋಧನೆಯ ಪ್ರಕಾರ, ಟಿ.ವಿ ವಾಹಿನಿಗಳು, ಚಲನಚಿತ್ರಗಳಲ್ಲಿ ತೋರಿಸುವ ಮಾನಸಿಕ ರೋಗಿಗಳ ಪಾತ್ರಧಾರಿಗಳು ನಿಜ ಜೀವನದಲ್ಲಿರುವ ಮಾನಸಿಕ ರೋಗಿಗಳಿಗಿಂತ ಹತ್ತು ಪಟ್ಟು ಹೆಚ್ಚು ಆಕ್ರಮಣಕಾರಿ ಆಗಿರುತ್ತಾರೆ. ಇದರಿಂದ ಮಾನಸಿಕ ರೋಗಿಗಳೆಲ್ಲರೂ ಆಕ್ರಮಣಕಾರಿ ಆಗಿರುತ್ತಾರೆ ಎಂಬ ತಪ್ಪು ಕಲ್ಪನೆ ಜನರಲ್ಲಿ ಮೂಡುತ್ತದೆ. ಹಾಗೆ ನೋಡಿದರೆ ಕೆಲವು ಸಂದರ್ಭಗಳಲ್ಲಿ, ಮನೋರೋಗಿಗಳಿಂದ ಇತರರಿಗೆ ತೊಂದರೆ ಆಗುವುದಕ್ಕಿಂತ ರೋಗಿಗಳಿಗೆ ಬೇರೆಯವರಿಂದ ಆಗುವ ತೊಂದರೆಯೇ ಹೆಚ್ಚು.

 

ಇನ್ನು ಹಲವು ಬಾರಿ ಪತ್ರಿಕೆಗಳಲ್ಲಿ, ಟಿ.ವಿ.ಗಳಲ್ಲಿ ಮನೋರೋಗಿಗಳನ್ನು ಮೇನಿಯಾಕ್, ಸೈಕೋ, ಸ್ಕೀಜೋಫ್ರೆನಿಕ್ ಎಂದೆಲ್ಲ ಕರೆಯುವುದನ್ನು ನೋಡುತ್ತೇವೆ. ಹಾಗಾದರೆ ಆ ವ್ಯಕ್ತಿಗಳಿಗೆ ಬೇರೆ ರೀತಿಯಲ್ಲಿ ತಮ್ಮದೇ ಆದ, ಗುರುತಿಸುವ ವ್ಯಕ್ತಿತ್ವ ಇರುವುದೇ ಇಲ್ಲವೇ? ಅವರಿಗೆ ಹೆಸರು ಇಲ್ಲವೇ? ದೈಹಿಕ ಕಾಯಿಲೆಗಳು ಬಂದಾಗಲೂ ಜನರನ್ನು ನಾವು ಹಾಗೇ ಕರೆಯುತ್ತೇವೆಯೇ? ಇದು ಕೂಡ ಮನೋರೋಗಿಗಳ ವಿರುದ್ಧ ಸಮಾಜ ಎಸಗುವ ತಾರತಮ್ಯದ ಒಂದು ಆಯಾಮ.

 

ಕಡಿಮೆ ಮಾಡುವ ಬಗೆ

ಕಳಂಕ/ ತಾರತಮ್ಯ ಆಗುವುದು ಮೌಢ್ಯ ಮತ್ತು ಪೂರ್ವಗ್ರಹಪೀಡಿತ ಯೋಚನೆಗಳಿಂದ. ಎಷ್ಟು ಜನಕ್ಕೆ ಮನೋರೋಗದ ಬಗ್ಗೆ, ಮನೋರೋಗಿಗಳ ಬಗ್ಗೆ ಸರಿಯಾದ ಮಾಹಿತಿ ಇದೆ? ಚಿಕಿತ್ಸೆಯ ವಿವಿಧ ರೀತಿಗಳು ತಿಳಿದಿವೆ? ಇಂತಹ ಮಾಹಿತಿಗಳನ್ನು ಜನಸಾಮಾನ್ಯರಲ್ಲಿ ಪ್ರಚಾರಗೊಳಿಸಬೇಕು, ತಪ್ಪು ಕಲ್ಪನೆಗಳನ್ನು ಹೊಡೆದೋಡಿಸಬೇಕು. ರೋಗಿಗೆ, ಅವರ ಕುಟುಂಬದವರಿಗೆ ಕಾಯಿಲೆಯ ಬಗ್ಗೆ ವೈದ್ಯರು ಸರಿಯಾಗಿ ತಿಳಿಸಬೇಕು. 

 

ಲಂಡನ್‌ನ ರಾಯಲ್ ಕಾಲೇಜ್ ಆಫ್ ಸೈಕಿಯಾಟ್ರಿಸ್ಟ್ ಸಂಸ್ಥೆ ಮನೋರೋಗದ ಬಗೆಗಿನ ಕಳಂಕವನ್ನು ಕಡಿಮೆ ಮಾಡಲು,1989ರಲ್ಲಿ `ಬದಲಾಗುತ್ತಿರುವ ಮನಸ್ಸು'  (Changing minds)  ಎಂಬ ಅಭಿಯಾನ ಪ್ರಾರಂಭಿಸಿತು. ಇದರ ಧ್ಯೇಯ ವಾಕ್ಯ  `Stop and think’'. ಅಂದರೆ ಎಲ್ಲರೂ ಒಂದು ಕ್ಷಣ ನಿಂತು ನಮ್ಮ ನಡುವಳಿಕೆ/ ಮಾನಸಿಕ ರೋಗಿಗಳ ಎಡೆಗಿನ ನಮ್ಮ ವರ್ತನೆ ಸರಿಯೇ ಎಂಬುದನ್ನು ಯೋಚಿಸಿ, ಅದನ್ನು ಸರಿಪಡಿಸಿಕೊಳ್ಳಬೇಕು. ಇದನ್ನು ನಾವೆಲ್ಲರೂ ಮಾಡಿದರೆ, ಮನೋರೋಗದಿಂದ ಬಳಲುತ್ತಿರುವವರಿಗೆ/ ಅವರ ಕುಟುಂಬದವರಿಗೆ ಖಂಡಿತಾ ಜೀವನ ಸಹನೀಯವಾಗಿ ನೆಮ್ಮದಿಯಿಂದ ಕೂಡಿರುತ್ತದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry