ಬದಲಾಗಿದೆ ಈಗ ವಾಜಂತ್ರಿವಾಡ

7

ಬದಲಾಗಿದೆ ಈಗ ವಾಜಂತ್ರಿವಾಡ

Published:
Updated:
ಬದಲಾಗಿದೆ ಈಗ ವಾಜಂತ್ರಿವಾಡ

ಕಾರವಾರ: ‘ವಾಜಂತ್ರಿವಾಡಾ’ ನಗರದ ಹೃದಯಭಾಗದಿಂದ ಕೂಗಳತೆಯಲ್ಲಿರುವ ವಾಡಾ. ಹೆಸರೇ ಹೇಳುವಂತೆ ವಾದ್ಯ ಬಾರಿಸುವ ಸಮುದಾಯದವರೇ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಇವರ ಬದುಕು ‘ವಾಜಂತ್ರಿ’ ವಾದ್ಯದಿಂದ ಬರುವ ನಾದದಷ್ಟು ಇಂಪಾಗಿರಲಿಲ್ಲ. ಕೇಳುಗರನ್ನು ಮೂಕವಿಸ್ಮಿತರನ್ನಾಗಿ ಮಾಡುವವರ ಹಿಂದಿನ ಬದುಕು ಮಾತ್ರ ಶೋಚನೀಯವಾಗಿತ್ತು.ನಗರಸಭೆ ನಿರ್ಲಕ್ಷ್ಯದಿಂದಾಗಿ ಈ ವಾಡಾ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿತ್ತು. ಅವ್ಯವಸ್ಥೆ, ವ್ಯಸನಿಗಳ ತವರೂರಿನಂತಿದ್ದ ವಾಜಂತ್ರಿವಾಡಾದಲ್ಲೆಗ ಬದಲಾವಣೆ ಗಾಳಿ ಬೀಸಿದೆ. ಇಲ್ಲಿಯ ನಿವಾಸಿಗಳು ದುಶ್ಚಟಗಳನ್ನು ಬಿಟ್ಟು ಸನ್ನಡೆತೆಯತ್ತ ಹೆಜ್ಜೆಯಿಟ್ಟಿದ್ದಾರೆ. ಪರಿಸರದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳುತ್ತಿದ್ದಾರೆ. ಆಧ್ಯಾತ್ಮದ ಚಿಂತನೆಯಲ್ಲಿ ತೊಡಗಿದ್ದಾರೆ. ಕಾಲುದಾರಿಯಿಲ್ಲದ ವಾಡಾದಲ್ಲಿ ನಗರಸಭೆ ಕಾಂಕ್ರೀಟ್ ರಸ್ತೆ ನಿರ್ಮಿಸಿದೆ.ನಗರದ ಬಾಡನಲ್ಲಿರುವ ಶಿವಾಜಿ ಕಲಾ, ವಾಣಿಜ್ಯ ಮತ್ತು ಬಿಸಿಎ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಐದು ವರ್ಷದ ಹಿಂದೆ ಇಲ್ಲಿ ವಾರ್ಷಿಕ ಎನ್‌ಎಸ್‌ಎಸ್ ಶಿಬಿರ ಹಮ್ಮಿಕೊಂಡು ಒಟ್ಟು 15 ಶೌಚಾಲಯಗಳನ್ನು ಇಲ್ಲಿ ನಿರ್ಮಿಸಿ ಸ್ವಚ್ಛತೆಗೆ ನಾಂದಿ ಹಾಡಿದ ದಿನದಿಂದ ಇಲ್ಲಿ ಬದಲಾವಣೆಯ ಪರ್ವ ಆರಂಭವಾಗಿದೆ. ವಿದ್ಯಾರ್ಥಿಗಳಿಂದ ಸ್ವಚ್ಛತೆಯ ಪಾಠ ಕಲಿತ ವಾಡಾದ ನಿವಾಸಿಗಳು ಆಧ್ಯಾತ್ಮದತ್ತ ಒಲವು ಬೆಳೆಸಿಕೊಂಡು ‘ಸತ್ಯಸಾಯಿ ಭಜನಾ ಮಂಡಳಿ’ ಸ್ಥಾಪಿಸಿದರು. ಸತ್ಯಸಾಯಿಬಾಬಾರ ಭಜನೆ, ಸಂಕೀರ್ತನೆ ಮಾಡುತ್ತ ಹೊಸ ಬದುಕಿನತ್ತ ಹೆಜ್ಜೆಯಿಟ್ಟರು.ಹೀಗೆ ಒಂದೆಡೆ ಕುಳಿತು ಭಜನೆ ಮಾಡುವ ಸಾಯಿಬಾಬಾರ ಭಕ್ತರ ಮನದಲ್ಲಿ ಸಾಯಿಬಾಬನ ಮಂದಿರ ಕಟ್ಟುವ ಯೋಚನೆ ಹೊಳೆಯಿತು. ಭಕ್ತರ ಅಭಿಲಾಷೆ ಕೆಲವೇ ದಿನಗಳಲ್ಲಿ ಈಡೇರಿತು. ರತ್ನಾಕರ ಸೈಲ ಎಂಬುವರು ಮಂದಿರ ನಿರ್ಮಿಸಲು ಭೂಮಿ ದಾನ ಮಾಡಿದರು. ಭಕ್ತರೆಲ್ಲರೂ ಸೇರಿ ಶ್ರಮದಾನ ಮಾಡುವ ಮೂಲಕ ಮಂದಿರ ನಿರ್ಮಿಸಿದರು.

ಈ ರೀತಿಯಾಗಿ ವಾಜಂತ್ರಿವಾಡದ ಜನ ತಮ್ಮೊಳಗೆ ಶಿಸ್ತನ್ನು ತಂದುಕೊಂಡು, ಆಧ್ಯಾತ್ಮದತ್ತ ಒಲವು ಬೆಳೆಸಿಕೊಂಡು ಇಡೀ ವಾಡಾದಲ್ಲಿ ಸಂಚಲನ ಮೂಡಿಸಿದ್ದಾರೆ.ಸತ್ಯಸಾಯಿಬಾಬಾ ಮಂದಿರ ವಾಡಾ ಜನರ ಪರಿವರ್ತನೆಯ ಕೇಂದ್ರವಾಗಿದೆ. ಈ ಮಂದಿರ ಕೇವಲ ಆಧ್ಯಾತ್ಮದ ಕೇಂದ್ರವಾಗಿರದೆ ಸಾಂಸ್ಕೃತಿಕ ಚಟುವಟಿಕೆಗೆ ಅಭಯ ನೀಡಿದೆ.ಉಚಿತ ವಿವಾಹ ಸಮಾರಂಭ ಇಲ್ಲಿ ನಡೆಯುತ್ತದೆ. ಸತ್ಯಸಾಯಿ ಮಂದಿರದಲ್ಲಿ ಬಾಲವಿಕಾಸ ಕೇಂದ್ರ ಪ್ರಾರಂಭವಾಗಿದೆ. ಆಧ್ಯಾತ್ಮಿಕ ಹಾಗೂ ಸಂಸ್ಕೃತಿ ಪರಿಚಯವನ್ನು ವಿದ್ಯಾರ್ಥಿಗಳು ಪಡೆಯುತ್ತಿದ್ದಾರೆ. ಬಾಲವಿಕಾಸ ತರಗತಿಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚುತ್ತಲೇ ಇದೆ. ಯುವಕ ಸಂಘ, ಮಹಿಳಾ ಮಂಡಳ, ಸ್ವಹಾಯ ಸಂಘಗಳು ಇಲ್ಲಿ ರೂಪುಗೊಂಡು ಸ್ವಾವಲಂಬಿ ಜೀವನದತ್ತ ವಾಡಾದ ನಿವಾಸಿಗಳು ಹೆಜ್ಜೆ ಇಟ್ಟಿದ್ದಾರೆ.ವಾಡಾ ಜನರು ವರ್ಷಂಪ್ರತಿ ಅದ್ದೂರಿಯಾಗಿ ಸಾಯಿಬಾಬಾರ ಜನ್ಮದಿನವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಒಗ್ಗಟ್ಟಿನಲ್ಲಿ ಬಲವಿದೆ. ಸಹಕಾರದಿಂದ ಶ್ರೇಯಸ್ಸು ಸಾಧ್ಯ ಎನ್ನುವುದನ್ನು ವಾಜಂತ್ರಿವಾಡದ ಜನ ಇತರರಿಗೆ ತೋರಿಸಿಕೊಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry