ಬದಲಾಗುತ್ತಿದೆ ಶೈಲಿ

7

ಬದಲಾಗುತ್ತಿದೆ ಶೈಲಿ

Published:
Updated:
ಬದಲಾಗುತ್ತಿದೆ ಶೈಲಿ

ಮೈತುಂಬಾ ಸೆರಗು ಹೊದ್ದು ಬರುತ್ತಿದ್ದ ಶಕುಂತಲಾ ಮೇಡಂ ಬೇರೆ ಶಿಕ್ಷಕಿಯರಿಗಿಂತ ವಿಭಿನ್ನ ಎನಿಸುತ್ತಿದ್ದರು. ಜಡೆಯನ್ನು ಮುಂದೆ ಇಳಿಬಿಟ್ಟುಕೊಂಡು ಅವರು ಪಾಠ ಮಾಡುತ್ತಿದ್ದ ರೀತಿ ಇಂದಿಗೂ ಮನಸ್ಸಿನಲ್ಲಿ ಅಚ್ಚೊತ್ತಿದೆ. ಸೆರಗು ಹೊದ್ದ ಯಾವುದೇ ಮಹಿಳೆಯನ್ನು ನೋಡಿದರೂ ಒಮ್ಮೆ ಸ್ಮೃತಿ ಪಟಲದಲ್ಲಿ ಶಕುಂತಲಾ ಮೇಡಂ ಹಾದು ಹೋಗುತ್ತಾರೆ. ಪ್ರತಿಯೊಬ್ಬ ಮಹಿಳೆಗೂ ಅವರದೇ ಆದ ವಿಭಿನ್ನ ಶೈಲಿ ಇರುತ್ತದೆ. ಆ ವಿಭಿನ್ನ ಶೈಲಿಯಿಂದಲೇ ಅವರು ನಮಗೆ ನೆನಪಾಗುತ್ತಿರುತ್ತಾರೆ.ಆದರೆ.....

‘ಜೀನ್ಸ್ ತೊಟ್ಟಾಗ ಹಣೆ ಮೇಲೆ ಕುಂಕುಮ ಇಡಬಾರದು; ಜಡೆ ಹೆಣೆಯಬಾರದು; ಬಳೆ ತೊಡಬಾರದು; ಹೂ ಮುಡಿಯಬಾರದು; ಹೀಗೆಯೇ ನಡೆಯಬೇಕು; ಹೀಗೆಯೇ ಕುಳಿತುಕೊಳ್ಳಬೇಕು..’ ಇತ್ತೀಚೆಗೆ ಬಿಎಂಟಿಸಿ ಬಸ್‌ನಲ್ಲಿ ಬರುತ್ತಿದ್ದಾಗ ಕಿವಿಗೆ ಬಿದ್ದ 20ರ ಆಸುಪಾಸಿನ ಹುಡುಗಿಯರ ಸಂಭಾಷಣೆ ಇದು. ಅದನ್ನು ಕೇಳಿದಾಗ ಶಕುಂತಲಾ ಮೇಡಂ ನೆನಪಾದರು ಮತ್ತು ಜನಗಳ ವಿಭಿನ್ನ ಶೈಲಿಗಳ ಚಿಂತನೆಯತ್ತ ಮನಸು ಹರಿಯಿತು.ವ್ಯಕ್ತಿತ್ವ ವರ್ಸಸ್ ಶೈಲಿ...

ನಮ್ಮ ವ್ಯಕ್ತಿತ್ವದ ಪ್ರತಿಬಿಂಬದಂತೆ ಇರುವ ನಮ್ಮದೇ ಆದ ಶೈಲಿಯನ್ನು ಬೆಂಗಳೂರಿನ ಯುವಜನ ತಿರುಚಿಕೊಳ್ಳುತ್ತಿದ್ದಾರೆ. ಹಾಗೆ ಮಾಡುತ್ತಾ ಅವರು ತಮ್ಮ ವ್ಯಕ್ತಿತ್ವವನ್ನೇ ಮರೆಯುವತ್ತ ಹೆಜ್ಜೆ ಇಡುತ್ತಿದ್ದಾರೇನೋ? ಉಡುಪಿನ ವಿಚಾರದಲ್ಲಿ ಅವರಾಡುವ ಎಲ್ಲಾ ಮಾತುಗಳು ಹುಡುಗಿಯರ ನಡುವೆ ಆಗಿರುವ ಅಲಿಖಿತ ನಿಯಮಗಳು. ಅವು ಹುಡುಗರಲ್ಲಿ ಇಲ್ಲ ಎಂದೇನಲ್ಲ. ‘ಇಂಥಾ ಉಡುಪು ತೊಟ್ಟಾಗ ಇಂಥದ್ದೇ ವರ್ತನೆ ಇರಬೇಕು’ ಎಂಬ ನಿಯಮಗಳು ಕೆಲವರಿಗೆ ಉಸಿರುಗಟ್ಟಿಸಿದರೆ ಮತ್ತೆ ಕೆಲವರು ಕಷ್ಟಪಟ್ಟು ಆ ನಿಯಮಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಾರೆ.ಪಾಶ್ಚಾತ್ಯರ ಶೈಲಿಗಳಿಗೆ ಮನಸೋತಿರುವ ಸಿನಿಮಾ ನಟರು ನಮ್ಮ ಯುವಜನರ ಅನುಕರಣೆಗೆ ಮೂಲ ಕಾರಣೀಭೂತರು. ವಿದೇಶಿ ನಟರನ್ನು ಪಕ್ಕಾ ಅನುಕರಣೆ ಮಾಡುವ ಹೃತಿಕ್ ರೋಶನ್, ರಣಬೀರ್ ಕಪೂರ್ ಶೈಲಿ ಇಂದಿನ ಯುವಕರಿಗೆ ಪ್ರಿಯವಾಗಿದ್ದರೆ; ವಿದೇಶಿಯರಂತೆ ತುಟಿ ಮುಂದು ಮಾಡಿಕೊಂಡು ಮಾತನಾಡುವ ಐಶ್ವರ್ಯಾ ರೈ ಬಚ್ಚನ್, ಪ್ರಿಯಾಂಕಾ ಚೋಪ್ರಾ, ಕತ್ರಿನಾ ಕೈಫ್ ಹುಡುಗಿಯರಿಗೆ ಅಚ್ಚುಮೆಚ್ಚು.ಹೀಗೆ ಸಿನಿಮಾ ನಟಿಯರನ್ನು- ನಟರನ್ನು ಅನುಸರಿಸುವುದು ಹೊಸದೇನಲ್ಲ. ಹಿಂದೆ ಸಿನಿಮಾಗಳಲ್ಲಿ ಬೆಲ್‌ಬಾಟಮ್ ಪ್ಯಾಂಟ್, ಉದ್ದ ಕಾಲರ್ ಶರ್ಟ್,  ತೋಳಿಲ್ಲದ ರವಿಕೆ, ದೊಡ್ಡ ದೊಡ್ಡ ಹೂಗಳ ಸೀರೆಗಳು ಜನಪ್ರಿಯವಾಗಿದ್ದಾಗ ಜನಸಾಮಾನ್ಯರೂ ಅದನ್ನು ತೊಟ್ಟು ಖುಷಿಪಟ್ಟಿದ್ದರು; ಆದರೆ ತಮ್ಮದೇ ಶೈಲಿಯಲ್ಲಿ.ಇಂದು ತೊಡುವ ಉಡುಪಿಗೆ ತಕ್ಕಂತೆ ನಡೆದುಕೊಳ್ಳುವ ಭರದಲ್ಲಿ ತಮ್ಮ ವ್ಯಕ್ತಿತ್ವವನ್ನೇ ತಿರುಚಿಕೊಳ್ಳುತ್ತಿದ್ದಾರೆ. ಇಂದಿನ ಟ್ರೆಂಡ್ ಹೀಗೆ ಆದ್ದರಿಂದ ಅಂಥಹದೇ ಬಟ್ಟೆ ತೊಡಬೇಕು ಎಂದು ಆಸೆ ಪಡುವುದು ತಪ್ಪೇನಲ್ಲ. ಹಾಗೆ ಉಡುಪು ತೊಟ್ಟಾಗ ನಮ್ಮ ಸ್ವಂತದ ಶೈಲಿ ಬಿಡಬೇಕು ಎಂದುಕೊಳ್ಳುವುದು ಎಷ್ಟು ಸರಿ? ಈ ಬದಲಾವಣೆಗಳಿಂದ ನಮ್ಮದೇ ಶೈಲಿಯಲ್ಲಿ ಇಷ್ಟವಾದ ಉಡುಪು ತೊಟ್ಟಾಗ ಆಗುವ ಖುಷಿಯಿಂದ ಯುವಜನ ದೂರವಾಗುತ್ತಿದೆ.

ಇನ್ನೊಂದು ಕಡೆ ಜನರ ವ್ಯಕ್ತಿತ್ವದಲ್ಲೂ ಬದಲಾವಣೆ ತರುವ ತಾಕತ್ತು ತನಗಿದೆ ಎನ್ನುತ್ತಾ ಜೀನ್ಸ್ ಗಹಗಹಿಸಿ ನಗುತ್ತಿದೆ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry