ಬದಲಾಗುತ್ತಿರುವ ಭಾರತೀಯ ಸಿನಿಮಾ: ಜಹ್ನು ಬರೂವ

7
ಚಿತ್ರೋತ್ಸವದಲ್ಲಿ ಇಬ್ಬರು ಪ್ರಮುಖ ನಿರ್ದೇಶಕರ ಸಮಾಗಮ

ಬದಲಾಗುತ್ತಿರುವ ಭಾರತೀಯ ಸಿನಿಮಾ: ಜಹ್ನು ಬರೂವ

Published:
Updated:

ಬೆಂಗಳೂರು: ಐದನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿ ಹಿರಿಯ ಹಾಗೂ ತರುಣ ಪ್ರತಿಭೆಗಳಿಬ್ಬರ ಮಿಲನಕ್ಕೆ ಸಾಕ್ಷಿಯಾಯಿತು. ಒಬ್ಬರು ಒಂಬತ್ತು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದ ಅಸ್ಸಾಮಿ ನಿರ್ದೇಶಕ ಜಹ್ನು ಬರೂವ. ಮತ್ತೊಬ್ಬರು ತಮ್ಮ ಮೊಟ್ಟ ಮೊದಲನೇ ಚಿತ್ರದಿಂದಾಗಿ ಸುದ್ದಿ ಮಾಡುತ್ತಿರುವ ನಿರ್ದೇಶಕ ಅಜಯ್ ಬೆಹ್ಲ್.ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರಂತೆ ಬರೂವ ಕೂಡ ಪುಣೆಯ ಭಾರತೀಯ ಚಲನಚಿತ್ರ ಮತ್ತು ಟಿವಿ ಸಂಸ್ಥೆಯಿಂದ ಪದವಿ ಪಡೆದವರು. ಕಾಸರವಳ್ಳಿ ಅವರಿಗಿಂತ ವಯಸ್ಸಿನಲ್ಲಿ ಒಂದು ವರ್ಷ ಹಿರಿಯರು. ಈ ಬಾರಿಯ ಉತ್ಸವದಲ್ಲಿ ಅವರ `ಬಾಂದೊನ್' ಚಿತ್ರ ಪ್ರದರ್ಶನ ಕಂಡಿತು. ಅದು 2008ರಲ್ಲಿ ನಡೆದ ಮುಂಬೈ ದಾಳಿಯ ಸುತ್ತ ಹೆಣೆದ ಕತೆ. ಎಪ್ಪತ್ತು ವರ್ಷ ದಾಟಿದ ವೃದ್ಧ ದಂಪತಿ ದೂರದ ಅಸ್ಸಾಂನಿಂದ ಮುಂಬೈಗೆ ಬರುತ್ತಾರೆ. ಬಾಂಬ್ ದಾಳಿ ವೇಳೆ ಕಾಣೆಯಾದ ತಮ್ಮ ಮಗನ ಹುಡುಕಾಟದಲ್ಲಿರುತ್ತಾರೆ.ಚಿತ್ರದ ಅಂತ್ಯದ ಕುರಿತು ಬರೂವ ಹೇಳಿದ್ದು, `ಒಂದು ದಾಳಿ ಕುರಿತಂತೆ ಸಾಮಾನ್ಯ ಮನುಷ್ಯನ ಪ್ರತಿಕ್ರಿಯೆಯನ್ನು ಚಿತ್ರ ಬಿಂಬಿಸುತ್ತದೆ. ಕೊನೆಯಲ್ಲಿ ವೃದ್ಧೆ ಕೇಳುವ ಪ್ರಶ್ನೆಗಳು ದೇಶದ ಯಾವುದೇ ಸಾಮಾನ್ಯ ಕೇಳಬಹುದಾದ ಪ್ರಶ್ನೆಗಳು. ಯಾವುದೇ ಹೇಳಿಕೆಗಳನ್ನು ನೀಡದೆ ಚಿತ್ರ ಅಂತ್ಯಗೊಳ್ಳುತ್ತದೆ. ಮಾನವೀಯತೆ ನನ್ನ ಚಿತ್ರಗಳ ಪ್ರಮುಖ ದನಿ. ಅದಾರಚೆಗೆ ನಾನು ಏನನ್ನೂ ನೋಡಲಾರೆ. ಮನುಷ್ಯರೇ ಸೃಷ್ಟಿಕರ್ತರು. ಅವರಿಂದಲೇ ವಿನಾಶ ಕೂಡ' ಎಂದು.ದಶಕದಿಂದೀಚೆಗೆ ಭಾರತೀಯ ಸಿನಿಮಾಗಳ ಅಂತಃಸತ್ವ ಬದಲಾಗುತ್ತಿರುವುದನ್ನು ಸಾಕಷ್ಟು ಅವರು ಗುರುತಿಸಿರುವ ಅವರು `ದೇಶಕ್ಕೆ ಭವ್ಯ ಇತಿಹಾಸವಿದ್ದರೂ, ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದರೂ ಹೊಸ ಚಿತ್ರ ತಯಾರಕರ ಕೊರತೆಯಿಂದಾಗಿ ಕೆಲವು ದಶಕಗಳ ಕಾಲ ಹಿನ್ನಡೆ ಉಂಟಾಗಿತ್ತು. ಯುವಕರು ಹೊಸ ಬಗೆಯ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಹೊಸ ಹೊಸ ಕತೆಗಳನ್ನು ಹೇಳುತ್ತಿದ್ದಾರೆ. ಆದರೆ ಅನನ್ಯತೆಯನ್ನು ಸೃಷ್ಟಿಸುವಲ್ಲಿ ಅವರು ಶ್ರಮವಹಿಸಬೇಕಿದೆ' ಎಂದರು.ಅವರ ಮುಂದಿನ ಚಿತ್ರ `ಆಶೀರ್ಬದೋ ರಂಗ್'. ಅರುಣ್ ಶರ್ಮ ಅವರ ಕಾದಂಬರಿ ಆಧರಿಸಿದ ಆ ಚಿತ್ರ ಸ್ವಾತಂತ್ರ್ಯಪೂರ್ವ ಹಾಗೂ ಹೊಸ ಸಹಸ್ರಮಾನದ ಕತೆಯನ್ನು ಒಳಗೊಂಡಿದೆಯಂತೆ. ಸಂಕೀರ್ಣ ಕತೆಯಿದ್ದರೂ ಸರಳವಾಗಿ ನಿರೂಪಿಸುತ್ತಾರೆ ಎಂಬುದು ಅವರ ಬಗೆಗಿನ ಮೆಚ್ಚುಗೆಯ ಮಾತು. ಈ ಬಗ್ಗೆ ಬರೂವಾ, `ಪ್ರೇಕ್ಷಕರಿಗೆ ನಾನು ಉತ್ತರಿಸಬೇಕಾಗುತ್ತದೆ. ಸರಳವಾಗಿ ಹೇಳುವುದರಿಂದಲೇ ಹೆಚ್ಚು ಜನರನ್ನು ತಲುಪುವುದು ಸಾಧ್ಯ' ಎಂದು ಪ್ರತಿಕ್ರಿಯಿಸಿದರು.`ಬದಲಾಗುತ್ತಿರುವ ಆರ್ಥಿಕ ಸ್ಥಿತಿಗತಿ ಕಾರ್ಪೋರೇಟ್ ಸಂಸ್ಕೃತಿಯನ್ನು ರೂಪಿಸುತ್ತದೆ. ಮೌಲ್ಯಗಳನ್ನು ಹಣ ಆಳುತ್ತಿದೆ. ಜೈಲಿನಿಂದ ಹೋಗುವಾಗಲೂ ಅಲ್ಲಿಂದ ಬರುವಾಗಲು ನಗುವ ವ್ಯಕ್ತಿಗಳು ರೂಪುಗೊಳ್ಳುತ್ತಿದ್ದಾರೆ' ಎಂದು ಭ್ರಷ್ಟರ ಕುರಿತು ಪರೋಕ್ಷವಾಗಿ ವ್ಯಂಗ್ಯವಾಡಿದರು.`ಗಾಂಧೀಜಿಯವರ ಮೌಲ್ಯಗಳು ಇಂದಿಗೂ ಆದರ್ಶ. ಆದರೆ ಅದನ್ನು ಪ್ರಸ್ತುತ ಸಂದರ್ಭಕ್ಕೆ ಹೊಂದಿಸಿಕೊಳ್ಳಬೇಕಿದೆ. ಯುದ್ಧವಿರಲಿ, ಭಯೋತ್ಪಾದನೆಯಿರಲಿ ಯಾವುದೇ ಬಗೆಯ ಹಿಂಸೆಯಿಂದ ಶಾಂತಿ ಸ್ಥಾಪನೆ ಸಾಧ್ಯವಿಲ್ಲ. ಹಿಂಸೆಯ ಧ್ಯೊತಕವಾಗಿ ನಿರ್ಮಾಣವಾದ ಬರ್ಲಿನ್ ಗೋಡೆ ಮನುಷ್ಯ ಪ್ರೀತಿಯ ಫಲವಾಗಿ ಉರುಳಿ ಬಿತ್ತು' ಎಂದರು.`ಬಿಎ ಪಾಸ್' ಚಿತ್ರದ ನಿರ್ದೇಶಕ ಅಜಯ್ ಬೆಹ್ಲ್ ದೆಹಲಿಯ ಸುತ್ತ ನಡೆಯುವ ಹಿಂಸೆಯನ್ನು ತಮ್ಮ ಸಿನಿಮಾದಲ್ಲಿ ಬಿಂಬಿಸಿದ್ದಾರೆ. ಇದು ಮಾರ್ಚ್ ವೇಳೆಗೆ ತೆರೆಗೆ ಬರಲಿದೆ. `ಚಿತ್ರ ನಿರ್ಮಿಸುವುದು ನನ್ನ ಬಹುದಿನದ ಬಯಕೆಯಾಗಿತ್ತು. ನಾನು ಚಿತ್ರ ನಿರ್ಮಾಣ ಕುರಿತು ಹೆಚ್ಚಿನ ತರಬೇತಿ ಪಡೆದಿಲ್ಲ. ಓದಿಕೊಂಡ ಪುಸ್ತಕಗಳು ನನ್ನನ್ನು ಇಲ್ಲಿಯವರೆಗೂ ಕರೆತಂದಿವೆ. ವಿದೇಶದಲ್ಲಿ ನಡೆಯುವ ಅಂತರರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಹೆಚ್ಚಾಗಿ ದೇಶದ ಬಡತನ, ಸಾಮಾಜಿಕ ಅಸಮಾನತೆ ಮತ್ತಿತರ ಅಂಶಗಳನ್ನು ಬಿಂಬಿಸಲಾಗಿದೆ. ಇದು ಒಂದು ರೀತಿಯಲ್ಲಿ ಒಳ್ಳೆಯದೇ. ಆದರೆ ಅದಕ್ಕಿಂತ ಹೆಚ್ಚಾಗಿ ದೇಶದ ಅಂತಃಸತ್ವವನ್ನು ಬಿಂಬಿಸುವ ಕೆಲಸ ನಡೆಯಬೇಕಿದೆ' ಎಂದು ಅವರು ಹೇಳಿದರು.ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ ಅನೂರಾಧ, ಉತ್ಸವದ ಕಲಾತ್ಮಕ ನಿರ್ದೇಶಕ ಎನ್.ಆರ್.ವಿಜಯಶಂಕರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry