ಭಾನುವಾರ, ಡಿಸೆಂಬರ್ 8, 2019
23 °C

ಬದಲಾದ ಗೆಟಪ್‌ನಲ್ಲಿ ಉಪ್ಪಿ

Published:
Updated:
ಬದಲಾದ ಗೆಟಪ್‌ನಲ್ಲಿ ಉಪ್ಪಿ

`ಎಷ್ಟೇ ಬುದ್ಧಿವಂತರಾದರೂ ಈ ಸಿನಿಮಾ ಅರ್ಥ ಆಗಲ್ಲ~

`ಅಂದ್ರೆ ಇದು ಉಪೇಂದ್ರ ಅವರ ಸ್ಟೈಲಿನ ಸಿನಿಮಾ ಅಂತಾಯ್ತು?~

`ಅಲ್ಲವೇ ಅಲ್ಲ. ಇದು ಪಿ.ವಾಸು ಅವರ ಸ್ಟೈಲಿನ ಸಿನಿಮಾ~ ಎನ್ನುತ್ತಾ ಜೋರಾಗಿ ನಕ್ಕರು ಉಪೇಂದ್ರ. `ಆರಕ್ಷಕ~ ಜ.26 ಅಂದರೆ ಗಣರಾಜ್ಯ ದಿನದಂದು ಬಿಡುಗಡೆಯಾಗುತ್ತಿದೆ. ಚಿತ್ರದ ಪ್ರಚಾರಕ್ಕಾಗಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತಿಗೆ ಸಿಕ್ಕರು ಉಪೇಂದ್ರ.

ತಮ್ಮನ್ನು ತಾವೇ ಗೇಲಿ ಮಾಡಿಕೊಳ್ಳುತ್ತಾ.. ಜೋಕ್ ಸಿಡಿಸುತ್ತಾ.. ಮೊದಲಿಗೆ ಬದಲಾದ ತಮ್ಮ ಕೇಶವಿನ್ಯಾಸದ ಕತೆ ಹೇಳಿಕೊಂಡರು.  ಉಪೇಂದ್ರ ತಮ್ಮದೇ ವಿಭಿನ್ನ ವಿನ್ಯಾಸ ಎನಿಸಿಕೊಂಡಿದ್ದ ಉದ್ದ ತಲೆ ಕೂದಲಿಗೆ ಕತ್ತರಿ ಹಾಕ್ದ್ದಿದು ವಿರಳ. `ಎ~ ಸಿನಿಮಾಗಾಗಿ ಕೂದಲು ಬಿಟ್ಟ ಉಪೇಂದ್ರ ನಂತರದ ದಿನಗಳಲ್ಲಿ ಅದನ್ನೇ ಮುಂದುವರಿಸಿದ್ದರು. `ಐಶ್ವರ್ಯ~ ಚಿತ್ರದಲ್ಲಿ ಅವರ ಕೂದಲಿಗೆ ಕತ್ತರಿ ಬಿದ್ದಿತ್ತು. ಆಮೇಲೆ `ಶ್ರೀಮತಿ~ ಚಿತ್ರದಲ್ಲಿ ಮೀಸೆ ಬೋಳಿಸಿಕೊಂಡಿದ್ದರು. `ಎ~ ಸಿನಿಮಾ ಬಿಡುಗಡೆಯಾಗಿ ಈಗ 13 ವರ್ಷ ಸರಿದಿದೆ. ಈ ಸಂದರ್ಭದಲ್ಲಿ ತಮ್ಮ ಬದಲಾದ ಕೇಶ ವಿನ್ಯಾಸದ ಬಗ್ಗೆ ಅವರು ಹೇಳುವುದೇನೆಂದರೆ..

“ಮೀಸೆ ಚಿಗುರದ ವಯಸ್ಸಿನಲ್ಲಿ `ಶ್!~ ಸಿನಿಮಾಕ್ಕಾಗಿ ಪೊಲೀಸ್ ಅಧಿಕಾರಿಯ ಸಮವಸ್ತ್ರ ತೊಟ್ಟುಕೊಂಡಿದ್ದೆ. ಅದಾದ ನಂತರ `ಆರಕ್ಷಕ~ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಪೂರ್ಣಪ್ರಮಾಣದಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸಿರುವೆ. `ಎ~ ಸಿನಿಮಾಗೆ ನಾನೇ ನಾಯಕ ಎಂದು ನಿರ್ಧಾರವಾದಾಗ ತೆರೆ ಮೇಲೆ ನನ್ನ ರೂಪ ಬಯಲಾಗುತ್ತದೆ ಎಂಬ ಭಯದಿಂದ ಗಡ್ಡ ಮೀಸೆ, ಉದ್ದುದ್ದ ಕೂದಲು ಬಿಟ್ಟುಕೊಂಡು ನಟಿಸಿದೆ. ಅಂದು ನಾನು ಗಡ್ಡ ಮೀಸೆ ತೆಗೆಯದಿದ್ದರೆ ಥೇಟ್ ಪೆಂಗನಂತೆ ಕಾಣುತ್ತಿದ್ದೆ.

`ಎ~ ಚಿತ್ರದಲ್ಲಿ ಜನ ನನ್ನ ಗಡ್ಡ ಮೀಸೆ ಗೆಟಪ್ಪನ್ನು ಇಷ್ಟಪಟ್ಟರು. ಅದು ಹಾಗೆಯೇ ಮುಂದುವರಿಯಿತು. ಪೊಲೀಸ್ ಅಧಿಕಾರಿಯ ಪಾತ್ರ ಒಪ್ಪಿಕೊಂಡ ಮೇಲೆ ಅಂಥ ಗೆಟಪ್‌ನಲ್ಲಿ ಕಾಣಿಸಿಕೊಳ್ಳುವುದು ಸರಿಯಲ್ಲ ಎನಿಸಿ, ಗಡ್ಡ ತೆಗೆದು, ತಲೆಗೂದಲು ಕತ್ತರಿಸುವ ನಿರ್ಧಾರಕ್ಕೆ ಬಂದೆ.

ಸಾಮಾಜಿಕ ಜಾಲತಾಣವೊಂದು ನನ್ನನ್ನು ಇಷ್ಟಪಟ್ಟಿದೆ. ಕೆಲವು ಅಭಿಮಾನಿಗಳು ನಾನೇ ನಂಬರ್ ಒನ್ ಅಂತಾರೆ. ಬೇರೊಬ್ಬರನ್ನು ಇಷ್ಟಪಡುವವರು ಅವರನ್ನೇ ನಂಬರ್ ಒನ್ ಅಂತಾರೆ. ನಂಬರ್ ಒನ್ ಅನ್ನೋದು ಯಾರಿಗೂ ಶಾಶ್ವತವಲ್ಲ. ಆಯಾ ಸಂದರ್ಭಕ್ಕೆ ತಕ್ಕಂತೆ ಆ ಪಟ್ಟ ಬದಲಾಗುತ್ತಿರುತ್ತದೆ. ಅದರಲ್ಲಿ ನನಗೆ ಆಸಕ್ತಿ ಇಲ್ಲ.”

ಉಪ್ಪಿ ಮಾತಿನ ಜೊತೆಗೆ ನಗು ಬೆರೆಸುತ್ತಲೇ ಇದ್ದರು. ಅವರ ಆ ನಗೆಗೆ ಜೊತೆಯಾದವರು ಸಂಗೀತ ನಿರ್ದೇಶಕ ಗುರುಕಿರಣ್. `1998ರ ಜ.23ರಂದು `ಎ~ ಸಿನಿಮಾ ಬಿಡುಗಡೆಯಾಗಿತ್ತು. ಇಂದು (ಜ.23) ಉಪೇಂದ್ರ ನಾಯಕರಾಗಿರುವ ತಾವು ಸಂಗೀತ ನಿರ್ದೇಶಕರಾಗಿರುವ `ಆರಕ್ಷಕ~ ಚಿತ್ರದ ಪತ್ರಿಕಾಗೋಷ್ಠಿ ನಡೆಯುತ್ತಿದೆ~ ಎಂದು ತಮ್ಮ ಖುಷಿಗೆ ಕಾರಣ ಹೇಳಿದರು ಗುರು. ತಮ್ಮನ್ನು ಪರಿಚಯಿಸಿದ ಗೆಳೆಯ ಉಪೇಂದ್ರ ಅವರಿಗೆ ಧನ್ಯವಾದ ಸಲ್ಲಿಸಲು ಮರೆಯಲಿಲ್ಲ.

ಉಪೇಂದ್ರ ಅವರಿಗೆ `ಎ~ ಚಿತ್ರದ ಹೆಸರು ಕೇಳುತ್ತಲೇ ಥ್ರಿಲ್ ಆದಂಥ ಅನುಭವವಾಯಿತು. ತಮಗೆ `ಎ~ ಸಿನಿಮಾ ನೀಡಿದಷ್ಟೇ ಯಶಸ್ಸು `ಆರಕ್ಷಕ~ ತಂಡಕ್ಕೆ ಸಿಗಲಿ ಎನ್ನುತ್ತಾ ಕಣ್ಣು ಅರಳಿಸಿದ ಉಪೇಂದ್ರ, `ಹದಿಮೂರು ವರ್ಷಗಳಿಂದ ಪ್ರೇಕ್ಷಕರು ಮತ್ತು ಚಿತ್ರತಂಡ ನನ್ನ ಮತ್ತು ಗುರು ಅವರನ್ನು ಸಹಿಸಿಕೊಂಡಿರುವುದಕ್ಕೆ ಕೃತಜ್ಞತೆಗಳು~ ಎನ್ನುತ್ತಾ ಕೈಜೋಡಿಸಿದರು.

2012 ವರ್ಷವಿಡೀ ಒಪ್ಪಿಕೊಂಡಿರುವ ಸಿನಿಮಾಗಳಲ್ಲಿ ನಟಿಸುವುದಕ್ಕೇ ಮೀಸಲು ಎನ್ನುತ್ತಾ ತಮಗಿರುವ ಕನಸುಗಳು ನಂತರದ ದಿನಗಳಲ್ಲಿ ಕಣ್ತೆರೆಯಲಿವೆ ಎಂದು ದೂರಕ್ಕೆ ದೃಷ್ಟಿ ನೆಟ್ಟರು. ತಮಗೆ ಬರುವ ಪ್ರಶಂಸೆ ಮತ್ತು ಆರೋಪಗಳನ್ನು ನಗುವಿನಿಂದಲೇ ಎದುರಿಸಿದ ಉಪೇಂದ್ರ ಮಾತಿನಲ್ಲಿ ತಾವೆಂದೂ ಕನಸು ಹೆಣೆಯುವ ಸಾಹಸದಿಂದ ಹಿಂದೆ ಸರಿಯಲಾರೆ ಎಂಬ ವಿಶ್ವಾಸ ಇತ್ತು. ಉಪೇಂದ್ರ ಗೆಟಪ್ ಬದಲಾದಾಗಲೆಲ್ಲಾ ಅವರ ಅಭಿಮಾನಿಗಳು ನಿರಾಕರಿಸಿರುವುದೇ ಹೆಚ್ಚು. ಈ ಸಲ ಅದೃಷ್ಟ ಹೇಗಿರುತ್ತದೋ ನೋಡಬೇಕು.

ಪ್ರತಿಕ್ರಿಯಿಸಿ (+)