ಸೋಮವಾರ, ಮಾರ್ಚ್ 1, 2021
31 °C

ಬದಲಾದ ಗ್ರಾಮೀಣ ಭಾರತ: ಸಮೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬದಲಾದ ಗ್ರಾಮೀಣ ಭಾರತ: ಸಮೀಕ್ಷೆ

ನವದೆಹಲಿ (ಪಿಟಿಐ): ಹದಗೆಟ್ಟ ರಸ್ತೆ, ಶಿಥಿಲ ಮನೆಗಳು, ಮಳೆಯನ್ನೇ ನಂಬಿರುವ ರೈತ, ಮುಂಗಾರು ಬಿಟ್ಟರೆ ವರ್ಷದ ಉಳಿದೆಲ್ಲ ದಿನ  ಪಾಳು ಬಿದ್ದಿರುವ ಕೃಷಿ ಭೂಮಿ!   ಇದು ದಶಕದ ಹಿಂದಿನ ಗ್ರಾಮೀಣ ಭಾರತದ ಚಿತ್ರಣ.ಆದರೆ, ಈಗ ಈ ಪರಿಸ್ಥಿತಿ ಬದಲಾಗಿದೆ. ಹಳ್ಳಿಗಳು ನಗರಗಳತ್ತ ಮುಖ ಮಾಡಿವೆ. ಕೃಷಿ ಚಟುವಟಿಕೆ ಕುಂಠಿತಗೊಂಡು ಕೈಗಾರಿಕೆಗಳು ತಲೆ ಎತ್ತಿವೆ. ಗ್ರಾಮೀಣ ಜನರ ತಲಾ ಆದಾಯ ಹೆಚ್ಚಿದೆ. ಜೀವನಶೈಲಿ ಬದಲಾಗಿದೆ. ಸಂವಹನ ಕಾಂತ್ರಿಯ ಸಂಕೇತವಾಗಿ ಎಲ್ಲರ ಕೈಯಲ್ಲಿ ಮೊಬೈಲ್ ಹರಿದಾಡುತ್ತಿವೆ. ದ್ವಿಚಕ್ರ ವಾಹನ ಬಂದಿವೆ. ಹೀಗೆ ಗ್ರಾಮೀಣ ಆರ್ಥಿಕತೆ ಬೆಳೆಯುತ್ತಿದೆ  ಎನ್ನುತ್ತದೆ `ಕ್ರೆಡಿಟ್ ಸ್ಯೂಸೆ~ ಎನ್ನುವ ಸಂಸ್ಥೆ ನಡೆಸಿದ ಸಮೀಕ್ಷೆ.ಈಗ ಗ್ರಾಮೀಣ ಭಾರತ ಮುಂಗಾರನ್ನು ನೆಚ್ಚಿಕೊಂಡಿಲ್ಲ. ಮುಂಗಾರನ್ನು ಆಧರಿಸಿ, ದೇಶದ ಆರ್ಥಿಕ ಪ್ರಗತಿಯನ್ನೂ (ಜಿಡಿಪಿ) ಅಳೆಯಲೂ ಸಾಧ್ಯವಿಲ್ಲ. 1999-2000ರ ಅವಧಿಯಲ್ಲಿ ಗ್ರಾಮೀಣ ಜನರ ತಲಾ `ಜಿಡಿಪಿ~ ಪ್ರಮಾಣ 150 ಮೂಲಾಂಶಗಳಷ್ಟು ಏರಿಕೆ ಕಂಡಿದೆ. ಈ ಬೆಳವಣಿಗೆಯ ವೇಗ ನಗರ ಭಾಗಕ್ಕಿಂತಲೂ ಹೆಚ್ಚಾಗಿದೆ ಎನ್ನುತ್ತದೆ ಈ ವರದಿ.ದೇಶದ ಶೇ 60ರಷ್ಟು ಜನ ಸಂಖ್ಯೆ ಗ್ರಾಮೀಣ ಭಾಗದಲ್ಲೇ ಇದ್ದರೂ, ಅಲ್ಲಿನ ಆರ್ಥಿಕ ಚಿತ್ರಣ ಕಳೆದೊಂದು ದಶಕದಲ್ಲಿ ಸಂಪೂರ್ಣ ಬದಲಾಗಿದೆ. ಈಗ ಮೊದಲಿನ ಪರಿಸ್ಥಿತಿ ಇಲ್ಲ. ಗ್ರಾಮೀಣ ಆರ್ಥಿಕ ವೃದ್ಧಿ ದರಕ್ಕೆ (ಜಿಡಿಪಿ) ಅರ್ಧದಷ್ಟಿದ್ದ ಕೃಷಿಯ ಕೊಡುಗೆ ಕಳೆದೊಂದು ದಶಕದಲ್ಲಿ ನಾಲ್ಕನೇ ಒಂದು ಭಾಗಕ್ಕೆ ಇಳಿದಿದೆ.  ಕೃಷಿಯಲ್ಲಿ ಗ್ರಾಮೀಣ ಜನತೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಕೈಗಾರಿಕೆಗಳು ಬೆಳೆದಂತೆ ಗ್ರಾಮೀಣ ತಯಾರಿಕಾ ವಲಯದಲ್ಲಿ ಶೇ 70ರಷ್ಟು ಹೊಸ ಉದ್ಯೋಗಾವಕಾಶ ಸೃಷ್ಟಿಯಾಗಿವೆ ಎಂದು `ಕ್ರೆಡಿಟ್ ಸ್ಯೂಸೆ~ಯ ಸಂಶೋಧನಾ ವಿಶ್ಲೇಷಕ ನೀಲ್‌ಕಾಂತ್  ಮಿಶ್ರಾ ಮತ್ತು ರವಿ ಶಂಕರ್ ಹೇಳಿದ್ದಾರೆ. 2-3 ದಶಕಗಳ ಹಿಂದೆ ಗ್ರಾಮೀಣ ಭಾರತದ ಶೇ 81ರಷ್ಟು ಪುರುಷರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಈಗ ಈ ಪ್ರಮಾಣ ಶೇ 55ಕ್ಕೆ ಇಳಿಕೆಯಾಗಿದೆ. ಗ್ರಾಮೀಣ ಮಹಿಳೆಯರಿಗೂ ಕೃಷಿಯೇತರ ಉದ್ಯೋಗಾವಕಾಶಗಳು ಸುಲಭವಾಗಿ ಲಭಿಸುತ್ತಿರುವುದರಿಂದ  ಕೃಷಿಯಲ್ಲಿ ಆಸಕ್ತಿ ಕಡಿಮೆಯಾಗಿದೆ ಎಂದು ವರದಿ ಹೇಳಿದೆ.ಗ್ರಾಮೀಣ ಯುವ ಜನತೆಗೆ  ಕೃಷಿ ಕ್ಷೇತ್ರದಲ್ಲಿ  ಆಸಕ್ತಿ ಕಡಿಮೆಯಾಗಿದ್ದು, ನಗರಗಳಿಗೆ ವಲಸೆ ಹೋಗುವ ಪ್ರಮಾಣ ಹೆಚ್ಚುತ್ತಿದೆ. ನಗರದಲ್ಲಿ ವಲಸಿಗರ ಸಂಖ್ಯೆ ಹೆಚ್ಚುತ್ತಿರುವುದರಿಂದ ಮೂಲ ಸೌಕರ್ಯ ಸಮಸ್ಯೆ ಹೆಚ್ಚುತ್ತಿವೆ ಎಂದು ವರದಿ ಹೇಳಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.