ಬದಲಾದ ಯುವಿ ಮನದೊಳಗೆ

7

ಬದಲಾದ ಯುವಿ ಮನದೊಳಗೆ

Published:
Updated:

ಕೆಲವರ ಜೀವನ ಅದೆಂಥಾ ತಿರುವು ಪಡೆಯುತ್ತದೆ ಅಲ್ಲವೇ? 28 ವರ್ಷಗಳ ಬಳಿಕ ಭಾರತ ತಂಡ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಕಾರಣರಾಗಿ ಕ್ರಿಕೆಟ್ ಪ್ರೇಮಿಗಳಲ್ಲಿ ಖುಷಿ ಮೂಡಿಸಿದ್ದ ಯುವರಾಜ್ ಸಿಂಗ್ ಆ ಬಳಿಕ ಅನುಭವಿಸಿದ ವ್ಯಥೆ ಎಲ್ಲರಿಗೂ ಗೊತ್ತೇ ಇದೆ. ಆದರೆ ಕ್ಯಾನ್ಸರ್ ಆಘಾತದಿಂದ ಚೇತರಿಸಿಕೊಂಡ ಬಳಿಕ ಯುವಿ ಅವರ ಜೀವನ ಶೈಲಿಯಲ್ಲಿ ಆಗಿರುವ ಬದಲಾವಣೆ ಅಚ್ಚರಿ ಮೂಡಿಸುವಂಥದ್ದು.ತಮ್ಮ ಕ್ರಿಕೆಟ್ ಜೀವನದ ಆರಂಭದ ಕೆಲ ವರ್ಷಗಳಲ್ಲಿ ‘ಆ್ಯಂಗ್ರಿ ಯಂಗ್‌ ಮ್ಯಾನ್‌’ ಯುವರಾಜ್ ಹಲವು ಆರೋಪಗಳಿಗೆ ಗುರಿಯಾಗಿದ್ದರು. ಮಾರನೇ ದಿನ ಪಂದ್ಯವಿದ್ದರೂ ತಡ ರಾತ್ರಿವರೆಗೆ ಪಾರ್ಟಿ ಮಾಡುತ್ತಾರೆ, ಗೆಳತಿಯರೊಂದಿಗೆ ಸುತ್ತುತ್ತಾರೆ, ಹೇಳದೆ ಕೇಳದೆ ತಂಡವಿರುವ ಹೋಟೆಲ್‌ನಿಂದ ಹೊರ ಹೋಗುತ್ತಾರೆ ಎಂಬಿತ್ಯಾದಿ ದೂರುಗಳು ಕೇಳಿಬಂದಿದ್ದವು.ಆದರೆ ಈಗ ನೋಡಿ. ಜೀವನದೆಡೆಗೆ ಯುವಿ ಅವರ ದೃಷ್ಟಿಕೋನವೇ ಬದಲಾಗಿದೆ. ಮಾದರಿ ವ್ಯಕ್ತಿ ಎನಿಸಿಕೊಳ್ಳುವ ಹಂತಕ್ಕೆ ಬೆಳೆಯುತ್ತಿದ್ದಾರೆ. ‘ಯುವರಾಜ್ ಸಿಂಗ್ ಸೆಂಟರ್ ಆಫ್ ಎಕ್ಸಲೆನ್ಸ್’ ಎಂಬ ತರಬೇತಿ ಕೇಂದ್ರ ಸ್ಥಾಪಿಸಿದ್ದಾರೆ. ಯುವ ಕ್ರಿಕೆಟಿಗರಿಗೆ ತರಬೇತಿ ನೀಡಿ ಅವರ ಕೌಶಲ ವೃದ್ಧಿಸುವುದು ಈ ಕೇಂದ್ರದ ಉದ್ದೇಶ. ‘ನಮ್ಮ ಎಲ್ಲಾ ಕನಸುಗಳು ಸಾಕಾರಗೊಳ್ಳುತ್ತವೆ. ಆದರೆ ಆ ಕನಸುಗಳೆಡೆಗೆ ಧೈರ್ಯದಿಂದ ಮುನ್ನುಗ್ಗಬೇಕು’ ಎಂಬುದು ಯುವಿಯ ಹೇಳಿಕೆ.‘ಯು ವಿ ಕ್ಯಾನ್’ ಎಂಬ ಪ್ರತಿಷ್ಠಾನದ ಮೂಲಕ ಕ್ಯಾನ್ಸರ್ ರೋಗಿಗಳಿಗೆ ನೆರವು ನೀಡುತ್ತಿದ್ದಾರೆ. ಕ್ಯಾನ್ಸರ್‌ನಿಂದ ಚೇತರಿಸಿಕೊಂಡ ಬಳಿಕ ಅವರು ಮಾಡಿದ ಮೊದಲ ಕೆಲಸವೇ ಈ ಪ್ರತಿಷ್ಠಾನದ ಸ್ಥಾಪನೆ. ಈ ಮೂಲಕ ಕ್ಯಾನ್ಸರ್‌ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ‘ಯುವರಾಜ್ ಸಿಂಗ್ ಫೌಂಡೇಷನ್’ ಮೂಲಕ ಬಡ ಮಕ್ಕಳಿಗೆ ಸಹಾಯ ಮಾಡುತ್ತಿದ್ದಾರೆ. ‘ದಿ ಟೆಸ್ಟ್ ಆಫ್ ಮೈ ಲೈಫ್' ಎಂಬ ಪುಸ್ತಕ ಬರೆದು ಅದೆಷ್ಟೊ ಮಂದಿಗೆ ಸ್ಫೂರ್ತಿಯಾಗಿದ್ದಾರೆ.ಅಮೆರಿಕದ ಬಾಸ್ಟನ್‌ನ ಕ್ಯಾನ್ಸರ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ಯುವರಾಜ್ ಚಿಕಿತ್ಸೆಗೆ ಒಳಗಾಗಿದ್ದಾಗ ಅವರ ಬಳಿ ಇದ್ದದ್ದು ತಾಯಿ ಶಬ್ನಮ್‌ ಸಿಂಗ್ ಹಾಗೂ ಲ್ಯಾನ್ಸ್ ಆರ್ಮಸ್ಟ್ರಾಂಗ್ ಅವರ ಜೀವನ ಚರಿತ್ರೆ ಪುಸ್ತಕ ‘ಇಟ್ಸ್ ನಾಟ್ ಎಬೌಟ್ ದ ಬೈಕ್: ಮೈ ಜರ್ನಿ ಬ್ಯಾಕ್ ಟು ಲೈಫ್’. ಅದರಿಂದ ಸ್ಫೂರ್ತಿಗೊಂಡ ಯುವಿ ಈ ಪುಸ್ತಕ ಬರೆದಿದ್ದಾರೆ.ಹೌದು, ಯುವಿ ಬದಲಾಗಿದ್ದಾರೆ. ಅವರ ಜೀವನ ಶೈಲಿಯಲ್ಲೂ ಮಾರ್ಪಾಡಾಗಿದೆ. ಯುವಿ ಅವರ ಕ್ರಿಕೆಟ್‌ ಬದುಕಿನ ಖುಷಿಯ ಹಿಂದೆಯೇ ಆಘಾತವೂ ಅಡಗಿತ್ತು. 2011ರ ಏಪ್ರಿಲ್ 2ರಂದು ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದವರು ಸಂಭ್ರಮದ ಹೊನಲಿನಲ್ಲಿ ತೇಲಾಡುತ್ತಿದ್ದರು. ಕ್ರಿಕೆಟ್ ಪ್ರೇಮಿಗಳ ಉಲ್ಲಾಸ, ಆ ಖುಷಿ ಹೇಳತೀರದು. ಸ್ವಲ್ಪ ಹೊತ್ತು ಆ ಸಂಭ್ರಮದಲ್ಲಿ ಭಾಗಿಯಾಗಿದ್ದ ‘ಟೂರ್ನಿ ಶ್ರೇಷ್ಠ’ ಯುವರಾಜ್ ಡ್ರೆಸ್ಸಿಂಗ್ ಕೊಠಡಿಯ ಒಂದು ಮೂಲೆಗೆ ತೆರಳಿ ಬಿಕ್ಕಳಿಸುತ್ತಿದ್ದರು. ಅಷ್ಟರಲ್ಲಾಗಲೇ ಅವರಿಗೆ ತಮ್ಮ ದೇಹದೊಳಗೆ ಕ್ಯಾನ್ಸರ್ ಎಂಬ ಮಹಾಮಾರಿ ಹೊಕ್ಕಿರುವ ಸುಳಿವು ಲಭಿಸಿತ್ತು.ಆದರೆ ಯಾರೊಬ್ಬರ ಬಳಿಯೂ ಅದನ್ನು ಹೇಳಿಕೊಂಡಿರಲಿಲ್ಲ. ಆ ಕಾಯಿಲೆ ಇರುವುದು ಗೊತ್ತಾದ ಮೇಲೂ ಯುವಿ ಕ್ರಿಕೆಟ್ ಮುಂದುವರಿಸಿದ್ದರು. ಪ್ರವಾಸಗಳ ವೇಳೆ ಕದ್ದುಮುಚ್ಚಿ ಮಾತ್ರೆ ಸೇವಿಸುತ್ತಿದ್ದರು. ಪಂದ್ಯ ಮುಗಿದ ಮೇಲೆ ರಕ್ತ ವಾಂತಿ  ಮಾಡಿಕೊಂಡಿದ್ದರು. ಈ ಸಮಸ್ಯೆ ವಿರಾಟ್‌ ಕೊಹ್ಲಿ ಸೇರಿದಂತೆ ಪ್ರಮುಖ ಆಟಗಾರರ ಗಮನಕ್ಕೆ ಬಂದಿತ್ತು. ಇನ್ನು ಸಾಧ್ಯವಿಲ್ಲ ಎಂಬುದು ಗೊತ್ತಾದಾಗ ಅದನ್ನು ಬಹಿರಂಗಪಡಿಸಿ ಅಮೆರಿಕದಲ್ಲಿ ಚಿಕಿತ್ಸೆ ಪಡೆಯಲು ಹೊರಟರು.ಆಗ ಇಡೀ ಕ್ರೀಡಾ ರಂಗ ಬೆಚ್ಚಿಬಿದ್ದಿತ್ತು. ಯುವಿಯ ಚೇತರಿಕೆಗಾಗಿ ಅಭಿಮಾನಿಗಳು ಪ್ರಾರ್ಥಿಸಿದರು. ‘ನಮ್ಮ ಖುಷಿಗೆ ಕಾರಣವಾದ ನೀವು ಈಗ ಕಷ್ಟಕ್ಕೆ ಸಿಲುಕಿದ್ದೀರಿ. ನೀವು ಅದ್ಭುತ ಹೋರಾಟಗಾರ. ನಿಮಗೆ ಈ ರೀತಿ ಆಗಬಾರದಿತ್ತು. ಖಂಡಿತ ಈ ಸಮಸ್ಯೆಯನ್ನು ನೀವು ಗೆದ್ದು ಬರುತ್ತೀರಿ. ನಮ್ಮೆಲ್ಲರ ಪ್ರಾರ್ಥನೆ ನಿಮ್ಮೊಂದಿಗಿರಲಿದೆ’ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಅಭಿಮಾನಿಗಳು ಸಂದೇಶ ಹರಿಬಿಟ್ಟಿದ್ದರು.ಅದಾಗಿ ವರ್ಷ ಕಳೆಯುವಷ್ಟರಲ್ಲಿ ಮತ್ತೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. ಶ್ರೀಲಂಕಾದಲ್ಲಿ ನಡೆದ 2012ರ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಆಡಿದ್ದರು. ಆದರೆ ಹೇಳಿಕೊಳ್ಳುವಂಥ ಯಶಸ್ಸು ಸಿಗಲಿಲ್ಲ. ಕೆಲ ಪಂದ್ಯಗಳ ಬಳಿಕ ಸ್ಥಾನ ಕಳೆದುಕೊಂಡರು. ಅವರೀಗ ಮತ್ತೆ ಭಾರತ ತಂಡಕ್ಕೆ ಮರಳಲು ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ನಡೆದ ವೆಸ್ಟ್‌ಇಂಡೀಸ್ ‘ಎ’ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಅಮೋಘ ಪ್ರದರ್ಶನದ ಮೂಲಕ ಆಯ್ಕೆಗಾರರ ಗಮನ ಸೆಳೆದಿದ್ದಾರೆ. ಅದರಲ್ಲೂ ಮೊದಲ ಪಂದ್ಯದಲ್ಲಿ ಸಿಡಿಸಿದ ಶತಕ ಅಮೋಘವಾಗಿತ್ತು. 89 ಎಸೆತಗಳಲ್ಲಿ 123 ರನ್ ಗಳಿಸಿದ್ದರು. ನಾಲ್ಕು ತಿಂಗಳ ಬಳಿಕ ಆಡಿದ ದೊಡ್ಡ ಸರಣಿ ಇದು.ನಿಜ, 31 ವರ್ಷ ವಯಸ್ಸಿನ ಯುವರಾಜ್ ಈಗ ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ. ಕ್ಯಾನ್ಸರ್   ಆಘಾತದಿಂದ ಸುಧಾರಿಸಿಕೊಂಡಿರುವ ಅವರ ಮನಸ್ಸು ಹೊಸ ಸಾಧನೆಗಾಗಿ ಹಂಬಲಿಸುತ್ತಿದೆ. ಕೆಲ ದಿನಗಳ ಹಿಂದೆ ಫ್ರಾನ್ಸ್‌ಗೆ ತೆರಳಿ ಅಲ್ಲಿ ಖ್ಯಾತ ಫಿಟ್‌ನೆಸ್ ಪರಿಣತ ಟಿಮ್ ಎಕ್ಸಿಟರ್ ಅವರಿಂದ ಆರು ವಾರ ತರಬೇತಿ ಪಡೆದಿದ್ದಾರೆ. ಉತ್ತಮ ಫಿಟ್‌ನೆಸ್ ಕಂಡುಕೊಳ್ಳಲು ಯುವಿ ಹೆಚ್ಚಿನ ಗಮನ ಹರಿಸುತ್ತಿದ್ದಾರೆ.ಈಗ ದೇಹದ ತೂಕ ಕೂಡ ಇಳಿಸಿಕೊಂಡು ಯುವರಾಜ್ ಸಪೂರವಾಗಿದ್ದಾರೆ. ಹಾಗಾಗಿಯೇ 10 ವರ್ಷ ಚಿಕ್ಕವರಂತೆ ಕಾಣುತ್ತಿದ್ದಾರೆ.

‘ಕ್ಯಾನ್ಸರ್ ಇರುವುದು ಖಚಿತವಾದಾಗ ನಾನು ಮಗುವಿನಂತೆ ಅತ್ತಿದ್ದೆ. ಕ್ಯಾನ್ಸರ್‌ನಿಂದ ಮುಂದಾಗುವ ಅಪಾಯದ ಬಗ್ಗೆ ನನಗೆ ಭಯವಿರಲಿಲ್ಲ.

ಆದರೆ ನನ್ನ ಕ್ರಿಕೆಟ್ ಜೀವನ ಅಂತ್ಯಗೊಳ್ಳಬಹುದೆಂಬ ಭಯ ನನ್ನನ್ನು ತುಂಬಾ ಕಾಡಿತು’ ಎಂದು ‘ದಿ ಟೆಸ್ಟ್ ಆಫ್ ಮೈ ಲೈಫ್’ ಪುಸ್ತಕದಲ್ಲಿ ಯುವಿ ಬರೆದುಕೊಂಡಿದ್ದಾರೆ. ಕ್ರಿಕೆಟ್ ಮೇಲಿನ ತಮ್ಮ ಪ್ರೀತಿ ಬಗ್ಗೆ ಈ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದ ಸಮಯದಲ್ಲಿ ಏಕಾಂಗಿಯಾಗಿ ಕಿಟಿಕಿಯಾಚೆ ನೋಡುತ್ತಾ ಕನಸು ಕಾಣುತ್ತಿದ್ದ ಪರಿಯನ್ನು ವಿವರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry