ಭಾನುವಾರ, ಮೇ 16, 2021
24 °C

ಬದಲಾವಣೆಗೆ ತೀರ್ಪು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾನ್‌ನ ಅಧ್ಯಕ್ಷರಾಗಿ ಹಸನ್ ರೋಹನಿ ಅವರ ಆಯ್ಕೆ ಬದಲಾವಣೆಗೆ ಮತದಾರರು ನೀಡಿದ ಸ್ಪಷ್ಟ ತೀರ್ಪಾಗಿದೆ. ಸ್ಪರ್ಧಾಕಣದಲ್ಲಿದ್ದ ಎಂಟು ಅಭ್ಯರ್ಥಿಗಳಲ್ಲಿ ಸೌಮ್ಯವಾದಿಯಾಗಿರುವ ಅವರಿಗೆ ಒಟ್ಟು ಚಲಾವಣೆಯಾಗಿರುವ ಮತಗಳಲ್ಲಿ ಶೇ. 50.7ರಷ್ಟು ಮತಗಳು ದೊರಕಿವೆ. ಅತಿ  ಸಮೀಪದ ಪ್ರತಿಸ್ಪರ್ಧಿಗೆ ದೊರಕಿರುವ ಮತಗಳು ಕೇವಲ ಶೇ. 16ರಷ್ಟು ಮಾತ್ರ.  ರೋಹನಿ ಅವರು ಸೌಮ್ಯವಾದಿ ಮಾತ್ರವಲ್ಲ, ಶಾಂತಿಪ್ರಿಯ ಸುಧಾರಣಾವಾದಿ ಕೂಡ. ಅವರ ಈ ಧೋರಣೆ ಮತದಾರರನ್ನು ಸೆಳೆಯುವುದರಲ್ಲಿ ಯಶಸ್ವಿಯಾಗಿದೆ.

ಜತೆಗೆ ಅಲ್ಲಿನ ಬಹುಸಂಖ್ಯಾತರ ಒಲವು ಯಾವ ಕಡೆಗೆ ಇದೆ ಎನ್ನುವುದರ ಸ್ಪಷ್ಟ ಸೂಚನೆ ಕೂಡ ಈ ಚುನಾವಣೆ ನೀಡಿದೆ. ಕಣದಲ್ಲಿದ್ದವರಲ್ಲಿ ನಾಲ್ಕು ಮಂದಿ ಇರಾನಿನ ಅತ್ಯುಚ್ಚ ನಾಯಕ ಆಯೋತೊಲ್ಲ ಅಲಿ ಖೆಮೇನಿ ಅವರಿಗೆ  ಪರಮನಿಷ್ಠೆ ಹೊಂದಿದವರು. ಇವರನ್ನು ಸೋಲಿಸುವುದರ ಮೂಲಕ ಸಂಪ್ರದಾಯವಾದಿಗಳ ಧೋರಣೆಗೆ ರೋಹನಿ ಪ್ರತಿ ಏಟು ನೀಡಿದಂತೆ ಆಗಿದೆ. ರೋಹನಿ ಅವರು ಇರಾನ್‌ನ ಈ ಹಿಂದಿನ ಅಧ್ಯಕ್ಷರಾಗಿದ್ದ ಮಹಮೂದ್ ಅಹ್ಮದಿನೆಜಾದ್ ಅವರ ಕಟು ಟೀಕಾಕಾರರೂ ಆಗಿದ್ದರು. ಆದ್ದರಿಂದ ರೋಹನಿ ಅವರ ಆಯ್ಕೆ, ಅಹ್ಮದಿನೆಜಾದ್ ಅವರ ಆಕ್ರಮಣಕಾರಿ ಮತ್ತು ಸಂಘರ್ಷ ಶೈಲಿಯ ರಾಜಕೀಯವನ್ನು  ತಿರಸ್ಕರಿಸಿದಂತೆಯೂ ಆಗಿದೆ.ಸದ್ಯ ರೋಹನಿ ಎದುರಿಸುತ್ತಿರುವ ಸವಾಲು ಎಂದರೆ ಇರಾನಿನ ಆರ್ಥಿಕ  ವ್ಯವಸ್ಥೆಯ ಸುಧಾರಣೆ. ಈ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ತಕ್ಷಣದ ಕ್ರಮ ಎಂದರೆ ಪಾಶ್ಚಾತ್ಯ ರಾಷ್ಟ್ರಗಳ ಜತೆಗೆ ಸಂಬಂಧ ಸುಧಾರಣೆ. ಹಿಂದಿನ ಅಧ್ಯಕ್ಷರು ಪಾಶ್ಚಾತ್ಯ ರಾಷ್ಟ್ರಗಳ ಜತೆ ಸಂಘರ್ಷದ ಹಾದಿ ತುಳಿದ ಕಾರಣ ಆರ್ಥಿಕ ದಿಗ್ಬಂಧನಕ್ಕೆ ಒಳಗಾದ ಇರಾನ್ ಸಾಕಷ್ಟು ಕಷ್ಟನಷ್ಟ ಅನುಭವಿಸಿದೆ. ನ್ಯಾಯ ಮತ್ತು ಮಾನವಹಕ್ಕು ಗೌರವಿಸಿ ಆಡಳಿತ ನಡೆಸುವ ಭರವಸೆ ನೀಡಿದ್ದ ರೋಹನಿ ತಮ್ಮ ಮಾತನ್ನು ಎಷ್ಟರ ಮಟ್ಟಿಗೆ ಉಳಿಸಿಕೊಳ್ಳುವರು ಎಂಬುದನ್ನು ಕಾದುನೋಡಬೇಕಿದೆ. ಏಕೆಂದರೆ ತೀವ್ರವಾದಿಗಳ ಒತ್ತಡಗಳೂ ಸಾಕಷ್ಟಿವೆ.ಇರಾನ್-ಅಮೆರಿಕ ಸಂಬಂಧ ಸುಧಾರಣೆಯ ವಿಚಾರದಲ್ಲಿ ಈಗ ಆಶಾವಾದ ಮೂಡಿದೆ. ಆದರೆ ಇರಾನ್‌ನ ಅಣು ನೀತಿಯ ವಿಷಯದಲ್ಲಿ ನಾಟಕೀಯ ಬದಲಾವಣೆಯನ್ನು ನಿರೀಕ್ಷಿಸುವಂತಿಲ್ಲ. ಏಕೆಂದರೆ ಅಣು ಇಂಧನ ಕಾರ್ಯಕ್ರಮ ಮುಂದುವರಿಸುವ ತನ್ನ ಹಕ್ಕಿನ ಬಗ್ಗೆ ಇರಾನ್‌ನಲ್ಲಿ ಒಮ್ಮತವಿದೆ. ಆದ್ದರಿಂದ ರೋಹನಿ ಈ ನೀತಿಯಿಂದ ದೂರ ಸರಿಯುವ ಸಾಧ್ಯತೆ ಇಲ್ಲ. ಆದರೆ ಅವರು ಅಮೆರಿಕದ ಜತೆ ಈ ಹಿಂದಿನ ಅಧ್ಯಕ್ಷ ಅಹ್ಮದಿನೆಜಾದ್ ಅವರಂತೆ  ವೈರತ್ವ ಹೊಂದುವ ಸಾಧ್ಯತೆ ಇಲ್ಲ.

ಅಮೆರಿಕದ ಜೊತೆ ಮಾತುಕತೆಗೆ ಮುಂದಾಗುವ ಸಾಧ್ಯತೆ ಇದೆ. ಇದೇ ಸಂದರ್ಭದಲ್ಲಿ ಭಾರತ-ಇರಾನ್ ಸಂಬಂಧ ಅತ್ಯಂತ ನಿರ್ಣಾಯಕ ಹಂತ ತಲುಪಿದೆ. ಮುಂದಿನ ವರ್ಷ ನ್ಯಾಟೋ ಪಡೆ ಆಫ್ಘಾನಿಸ್ತಾನವನ್ನು ತ್ಯಜಿಸಲಿದ್ದು ದೆಹಲಿ-ಟೆಹರಾನ್ ಜತೆಯಾಗಿ ಮುನ್ನಡೆಯಬೇಕಾಗುತ್ತದೆ. ರೋಹನಿ ಸೌಮ್ಯವಾದಿಯಾಗಿರುವ ಕಾರಣ ಟೆಹರಾನ್ ಜತೆಗೆ ನಮ್ಮ ಸಂಬಂಧ ಸುಧಾರಣೆ ಸಲೀಸಾಗಬಹುದು. ಈ ನಿಟ್ಟಿನಲ್ಲಿ ಭಾರತ ತುರ್ತಾಗಿ ಮುಂದಾಗಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.