ಸೋಮವಾರ, ನವೆಂಬರ್ 18, 2019
28 °C

`ಬದಲಾವಣೆಗೆ ಶಿಕ್ಷಣ ವ್ಯವಸ್ಥೆ ಬದಲಾಗಲಿ'

Published:
Updated:

ಬೀದರ್: `ಮೌಲ್ಯಯುತ ಸಮಾಜ ನಿರ್ಮಾಣ ಮಾಡಲು ಇಂದಿನ ಶಿಕ್ಷಣ ವ್ಯವಸ್ಥೆ ಸಂಪೂರ್ಣವಾಗಿ ಬದಲಾವಣೆ ಆಗಬೇಕಾದ ಅಗತ್ಯವಿದೆ' ಎಂದು ಜಿಲ್ಲಾಧಿಕಾರಿ ಡಾ. ಪಿ.ಸಿ. ಜಾಫರ್ ಅವರು ಅಭಿಪ್ರಾಯಪಟ್ಟರು.ಸರ್ವ ಶಿಕ್ಷಣ ಅಭಿಯಾನ ಹಾಗೂ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಗಳ ಆಶ್ರಯದಲ್ಲಿ ಹೊರವಲಯದ ಸಿಂಧೋಲ್ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ಶಿಕ್ಷಕಿಯರ ಸಮಾವೇಶದಲ್ಲಿ ಪ್ರಸಕ್ತ ಸಾಲಿನ ಶಾಲಾ ಪಂಚಾಂಗ ಹಾಗೂ ದಿನಚರಿ ಬಿಡುಗಡೆ ಮಾಡಿ ಮಾತನಾಡಿದರು.ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ವರ್ಷ ಪೂರ್ಣ ಅಭ್ಯಸಿಸಿದ ವಿದ್ಯಾರ್ಥಿಗಳ ಬುದ್ಧಿಶಕ್ತಿಯನ್ನು ಕೇವಲ 2-3 ಗಂಟೆಗಳಲ್ಲಿ ಮೌಲ್ಯಮಾಪನ ಮಾಡಲಾಗುತ್ತದೆ. ಈ ವ್ಯವಸ್ಥೆಯಿಂದ ಮಕ್ಕಳ ಶೈಕ್ಷಣಿಕ ಬೆಳವಣಿಗೆ ಸರಿಯಾಗಿ ಆಗುತ್ತಿಲ್ಲ. ಆದ್ದರಿಂದ ಈ ವ್ಯವಸ್ಥೆ ಬದಲಾವಣೆ ಮಾಡಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.ಮಕ್ಕಳ ಮೇಲಿನ ಪ್ರಭಾವ ಕಡಿಮೆ ಮಾಡುವ ಉದ್ದೇಶದಿಂದ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ನಿರಂತರ ವ್ಯಾಪಕ ಮೌಲ್ಯಮಾಪನ ಜಾರಿಗೊಳಿಸಲಾಗುತ್ತಿದೆ. ಈ ವ್ಯವಸ್ಥೆಯ ಜೊತೆಗೆ ಪಠ್ಯಪುಸ್ತಕ ಬದಲಾವಣೆ ಮಾಡಿದ್ದಾಗ ಮಾತ್ರ ಮಕ್ಕಳು ಮಾನಸಿಕವಾಗಿ ಬೆಳವಣಿಗೆ ಹೊಂದಲು ಸಾಧ್ಯ ಎಂದು ತಿಳಿಸಿದರು.ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಗುರಿಕಾರ್ ಸಮಾವೇಶ ಉದ್ಘಾಟಿಸಿದರು. ಸಂಘದ ಜಿಲ್ಲಾ ಅಧ್ಯಕ್ಷ ವೆಂಕಟರೆಡ್ಡಿ ಕೋಪಗಿರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಭೀಮಸೇನ ಗುಡೂರು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಚ್.ಆರ್. ಬಸಪ್ಪ, ಶಿಕ್ಷಣಾಧಿಕಾರಿ ಕೆ.ಜಿ. ಹಣಮಂತಪ್ಪ, ಸರ್ವ ಶಿಕ್ಷಣ ಅಭಿಯಾನ ಉಪ ಯೋಜನಾಧಿಕಾರಿ ಇನಾಯತ್ ರೆಹಮಾನ್ ಶಿಂಧೆ, ಮಹಿಳಾ ವೇದಿಕೆ ಉಪಾಧ್ಯಕ್ಷೆ ರಮಾದೇವಿ, ಸಂಚಾಲಕಿ ರಫೀಖ್‌ಉನ್ನಿಸಾ ಬೇಗಂ, ತಾಲ್ಲೂಕು ಸಂಚಾಲಕರಾದ ಶ್ರೀದೇವಿ, ಶಾರದಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗುಲ್ಬರ್ಗ ವಿಭಾಗ ಉಪಾಧ್ಯಕ್ಷ ಶಿವರಾಜ ಕಪಲಾಪುರೆ, ಜಿಲ್ಲಾ ಕಾರ್ಯದರ್ಶಿ ನಿರ್ಮಲಾ ಚಲ್ವಾ, ಸಹ ಕಾರ್ಯದರ್ಶಿ ಸುನಿತಾ, ಬಸವಕಲ್ಯಾಣ ತಾಲ್ಲೂಕು ಅಧ್ಯಕ್ಷ ಜಗನ್ನಾಥ ಪತಂಗೆ, ಔರಾದ್ ತಾಲ್ಲೂಕು ಅಧ್ಯಕ್ಷ ಶಿವಾಜಿ ನರೋಟಿ, ಶಾಹೀನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ಖದೀರ್, ಜಿಲ್ಲಾ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಸುರೇಶ ಚನ್ನಶಟ್ಟಿ ಉಪಸ್ಥಿತರಿದ್ದರು. ಶಿಕ್ಷಕರಾದ ಬಾಬುರಾವ್ ಬಿರಾದಾರ್ ಸ್ವಾಗತಿಸಿದರು. ಶ್ರೀದೇವಿ ಪ್ರಭಾ ನಿರೂಪಿಸಿದರು.

ಪ್ರತಿಕ್ರಿಯಿಸಿ (+)