ಬದಲಾವಣೆಯ ಚೌಕದಲ್ಲಿ...

7

ಬದಲಾವಣೆಯ ಚೌಕದಲ್ಲಿ...

Published:
Updated:
ಬದಲಾವಣೆಯ ಚೌಕದಲ್ಲಿ...

ಕೈರೋದ ತೆಹ್ರೀರ್ ಚೌಕದಲ್ಲಿ ಧರಣಿ ಕುಳಿತವರ ಬದಲಾವಣೆ ಬೇಕೆಂಬ ಹಠ ಇಡೀ ಆಫ್ರಿಕಾ ಮತ್ತು ಅರೇಬಿಯಾದಲ್ಲಿ ಅನುರಣಿಸಿತು. ಯೆಮನ್ ರಾಜಧಾನಿ ಸನಾದಲ್ಲಿರುವ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ಬದಲಾವಣೆಗೆ ಆಗ್ರಹಿಸಿ ತಾಗ್ಹ್ಯೀರ್ ಚೌಕದಲ್ಲಿ ಧರಣಿ ಆರಂಭಿಸಿದರು. ಅರಬ್ಬಿ ಭಾಷೆಯಲ್ಲಿ ತೆಹ್ರೀರ್ ಎಂದರೆ ಸ್ವಾತಂತ್ರ್ಯ ಎಂಬರ್ಥವಿದೆ. ಹಾಗೆಯೇ ತಾಗ್ಹ್ಯೀರ್ ಅಂದರೆ ಬದಲಾವಣೆ ಎಂದರ್ಥ. ಕೈರೋದ ‘ಸ್ವಾತಂತ್ರ್ಯ ಚೌಕ’ದಿಂದ ಸನಾದ ‘ಬದಲಾವಣೆ ಚೌಕ’ದ ತನಕದ ಬೆಳವಣಿಗೆಗಳು ಆಫ್ರಿಕಾ ಮತ್ತು ಅರೇಬಿಯಾಕ್ಕೆ ಅತ್ಯಂತ ಅಗತ್ಯವಾಗಿರುವ ಸ್ವಾತಂತ್ರ್ಯ ಮತ್ತು ಬದಲಾವಣೆಯೆಂಬ ಎರಡು ಮೌಲ್ಯಗಳನ್ನು ಧ್ವನಿಸುತ್ತಿವೆ.ವರ್ತಮಾನದಲ್ಲಿ ಅರೇಬಿಯಾದ ಅತ್ಯಂತ ಬಡರಾಷ್ಟ್ರಗಳಲ್ಲಿ ಒಂದಾಗಿರುವ ಯೆಮನ್ ಐತಿಹಾಸಿಕವಾಗಿ ಅರೇಬಿಯಾ ಭೂಶಿರದ ಅತ್ಯಂತ ಶ್ರೀಮಂತ ರಾಷ್ಟ್ರ. ಗ್ರೀಕ್ ಭೂಗೋಳ ಶಾಸ್ತ್ರಜ್ಞ ಟಾಲೆಮಿಯ ದೃಷ್ಟಿಯಲ್ಲಿ ಇದು ‘ಯುದಾಯಿಮನ್ ಅರೇಬಿಯಾ’ ಅಂದರೆ ‘ಆನಂದದ ಆರೇಬಿಯಾ’ ಅಥವಾ ‘ಸುಭಿಕ್ಷ ಅರೇಬಿಯಾ’. ಕ್ರಿಸ್ತಪೂರ್ವ ಏಳನೇ ಶತಮಾನದಷ್ಟು ಹಿಂದೆಯೇ ಯೆಮನ್ ಮಾರಿಬ್‌ನಲ್ಲಿ ಒಂದು ಅಣೆಕಟ್ಟೆ ಇತ್ತು.ಕ್ರಿಸ್ತಶಕ ಆರನೇ ಶತಮಾನದ ತನಕವೂ ಯೆಮನ್‌ನ ಖ್ಯಾತಿಯಿದ್ದದ್ದೇ ಮಾರಿಬ್‌ನ ಅಣೆಕಟ್ಟೆಯಿಂದ. ನೂರಾರು ಚದರ ಕಿಲೋಮೀಟರ್‌ಗಳಷ್ಟು ವ್ಯಾಪ್ತಿಯ ಕೃಷಿ ಭೂಮಿಗೆ ಈ ಅಣೆಕಟ್ಟು ಒದಗಿಸುತ್ತಿದ್ದ ನೀರಿನ ಕುರಿತೇ ಕಥೆಗಳಿವೆ. ಇಡೀ ಅರೇಬಿಯಾಕ್ಕೆ ಆಹಾರವನ್ನು ರಫ್ತು ಮಾಡುತ್ತಿದ್ದ ಖ್ಯಾತಿಯೂ ಈ ದೇಶಕ್ಕಿತ್ತು. ಯೂರೋಪ್ ಮತ್ತು ಭಾರತದ ನಡುವಣ ವ್ಯಾಪಾರ ಸಂಬಂಧಗಳಿಗೆ ಯೆಮನ್ ಒಂದು ಮುಖ್ಯ ಕೇಂದ್ರವಾಗಿತ್ತು. ಅರೇಬಿಯಾದ ಎಲ್ಲಾ ಪ್ರಮುಖ ನಾಗರಿಕತೆಗಳ ಪ್ರಭಾವವೂ ಯೆಮನ್‌ನ ಮೇಲಿತ್ತು. ಸುಭಿಕ್ಷವಾಗಿದ್ದ ಯೆಮನ್‌ನ ಅವನತಿಗೂ ಮಾರಿಬ್‌ನ ಅಣೆಕಟ್ಟು ಒಡೆದದ್ದಕ್ಕೂ ಸಂಬಂಧವಿದೆ. ಮಾರಿಬ್‌ನ ಅಣೆಕಟ್ಟೆ ಏಕೆ ಒಡೆಯಿತು ಎಂಬುದರ ಕುರಿತು ಇದಮಿತ್ಥಂ ಎಂದು ಹೇಳುವಂಥ ಮಾಹಿತಿಗಳಿಲ್ಲ. ತಜ್ಞರ ಅಂದಾಜಿನಂತೆ ಇಂಥದ್ದೊಂದು ಅಣೆಕಟ್ಟೆಯನ್ನು ನಿರ್ವಹಿಸುವ ತಾಂತ್ರಿಕ ಅರಿವು ವಿಸ್ಮೃತಿಗೆ ಸರಿದಿದ್ದರಿಂದ ಅಣೆಕಟ್ಟೆ ಒಡೆದು ಹೋಯಿತು.ರಾಣಿ ಶೆಬಾಳ ವೈಭವೋಪೇತ ಆಡಳಿತವನ್ನು ಕಂಡಿದ್ದ ಯೆಮನ್ ಬ್ರಿಟಿಷ್ ವಸಾಹತಾಗಿದ್ದ ಕಾಲದಿಂದಲೂ ಒಂದಲ್ಲ ಒಂದು ಬಗೆಯ ಆಂತರಿಕ ಸಮಸ್ಯೆಗಳಿಂದ ಬಳಲುತ್ತಲೇ ಇದೆ. ಶೀತಲ ಸಮರದ ಕಾಲದಲ್ಲಿ ದಕ್ಷಿಣ ಯೆಮನ್ ಸೋವಿಯತ್ ಯೂನಿಯನ್‌ನ ಪ್ರಭಾವದಿಂದ ‘ಜನತಾ ಪ್ರಜಾಸತ್ತಾತ್ಮಕ ಗಣರಾಜ್ಯ’ವಾಗಿತ್ತು. ಇದೇ ಕಾಲಘಟ್ಟದಲ್ಲಿ ಯೆಮನ್ ಅರಬ್ ಗಣರಾಜ್ಯ (ವೈಎಆರ್) ಸೌದಿ ಅರೇಬಿಯಾದ ಪ್ರಭಾವದಡಿಯಲ್ಲಿತ್ತು. ಬಹುಕಾಲದ ತಿಕ್ಕಾಟ ಮತ್ತು ಸಂಧಾನಗಳ ಫಲವಾಗಿ 1990ರಲ್ಲಿ ಎರಡೂ ಯೆಮನ್‌ಗಳು ವಿಲೀನಗೊಂಡು ಈಗಿನ ಯೆಮನ್ ರೂಪುಗೊಂಡಿತು. 1978ರಲ್ಲೇ ಉತ್ತರ ಯೆಮನ್‌ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಅಲೀ ಅಬ್ದುಲ್ ಸಾಲೇಹ್ ಬೃಹತ್ ಯೆಮನ್‌ಗೂ ಅಧ್ಯಕ್ಷರಾದರು. ಎರಡೂ ಯೆಮನ್‌ಗಳು ಒಂದಾಗಿ ಮತ್ತೊಮ್ಮೆ ಸುಭಿಕ್ಷತೆ ನೆಲೆಸುತ್ತದೆ ಎಂಬ ಜನರ ಲೆಕ್ಕಾಚಾರ ಸುಳ್ಳಾಗುವಂತೆ ದಕ್ಷಿಣದ ಮತ್ತು ಉತ್ತರ ಯೆಮನ್‌ಗಳ ಸೇನಾಪಡೆಗಳ ನಡುವೆ ಅಂತರ್ಯುದ್ಧ ಆರಂಭವಾಯಿತು.1994ರಲ್ಲಿ ದಕ್ಷಿಣದ ಸೇನೆ ಸೋಲುವುದ ರೊಂದಿಗೆ ಅಂತರ್ಯುದ್ಧ ಕೊನೆಗೊಂಡಿತು. ಯೆಮನ್‌ನ ಸಮಸ್ಯೆಗಳೆಲ್ಲವೂ ಮುಂದುವರಿದವು. ಹಾಗೆಯೇ ಅಲೀ ಅಬ್ದುಲ್ ಸಾಲೇಹ್‌ರ ಅಧಿಕಾರದ ಆಸೆಯೂ ಮೇರೆಯಿಲ್ಲದಂತೆ ಬೆಳೆಯುತ್ತಲೇ ಹೋಯಿತು. ಮಗ ಮತ್ತು ಸಂಬಂಧಿಗಳೇ ಸರ್ಕಾರದ ವಿವಿಧ ಅಂಗಗಳ ಮುಖ್ಯಸ್ಥರಾದರು. ಯೆಮನ್ ಎಂಬುದು ಅಲೀ ಅಬ್ದುಲ್ ಸಾಲೇಹ್‌ರ ಕೌಟುಂಬಿಕ ಸೊತ್ತಿನಂತಾಯಿತು. ಮಗನನ್ನು ತಮ್ಮ ಉತ್ತರಾಧಿಕಾರಿಯಾಗಿಸಲು ಬೇಕಾದ ಸಿದ್ಧತೆಗಳನ್ನು ಆರಂಭಿಸುವು ದರೊಂದಿಗೆ ತಮ್ಮ ಆಡಳಿತಾ ವಧಿಯನ್ನು ಜೀವಿತಾವಧಿಗೆ ವಿಸ್ತರಿಸುವ ಸಂವಿಧಾನ ತಿದ್ದುಪಡಿಯ ಪ್ರಯತ್ನವನ್ನೂ ಸಾಲೇಹ್ ಆರಂಭಿಸಿದರು.ಟ್ಯುನೀಷಿಯಾದಲ್ಲಿ ತರಕಾರಿ ವ್ಯಾಪಾರಿ ಮುಹಮ್ಮದ್ ಬವಾಝಿಜಿಯನ್ನು ಅಲ್ಲಿನ ಆಡಳಿತ ಸ್ವಲ್ಪ ಮಾನವೀಯವಾಗಿ ನಡೆಸಿಕೊಂಡಿದ್ದರೂ ಸಾಲೇಹ್ ಅವರ ಉಪಾಯಗಳೆಲ್ಲವೂ ಫಲಿಸುತ್ತಿದ್ದವೇನೋ. ಆದರೆ ಟ್ಯುನೀಷಿಯಾದ ಆಡಳಿತಕ್ಕೆ ತಾನೇನು ಮಾಡುತ್ತಿದ್ದೇನೆಂಬುದರ ಅರಿವಿರಲಿಲ್ಲ. ಅದರ ಕ್ರೂರ ನಡವಳಿಕೆ ಬವಾಝಿಜಿಯವರ ಆತ್ಮಾಹುತಿಗೆ ಪ್ರೇರೇಪಿಸಿದವು. ಈ ಘಟನೆ ಅಲ್ಲಿಯತನಕ ಎಲ್ಲ ಸಮಸ್ಯೆಗಳನ್ನೂ ಸಹಿಸಿಕೊಂಡು ಕುಳಿತಿದ್ದ ಟ್ಯುನಿಷಿಯಾದ ಜನತೆಯನ್ನು ರೊಚ್ಚಿಗೆಬ್ಬಿಸಿತು. ಜನರು ಬದಲಾವಣೆಗೆ ಆಗ್ರಹಿಸಿ ಬೀದಿಗಿಳಿದರು. ತರಕಾರಿ ವ್ಯಾಪಾರಿಯ ಆತ್ಮಹತ್ಯೆ ಟ್ಯುನೀಷಿಯಾದ ಆಡಳಿತವನ್ನು ಬದಲಾಯಿಸಿತು. ಈಜಿಪ್ಟ್‌ನಲ್ಲಿ ಹೋಸ್ನಿ ಮುಬಾರಕ್ ಗದ್ದುಗೆಯಿಂದ ಇಳಿಯ ಬೇಕಾಯಿತು. ಲಿಬಿಯಾದಲ್ಲಿ ಗಡ್ಡಾಫಿ ತಿಣುಕಾಡುವ ಸ್ಥಿತಿ ಬಂತು. ಯೆಮನ್‌ನಲ್ಲಿ ಸಾಲೇಹ್‌ರ 23 ವರ್ಷಗಳ ಸ್ವಜನ ಪಕ್ಷಪಾತದ ಅಂತಿಮ ಕ್ಷಣಗಣನೆ ಆರಂಭವಾಗಿದೆ.ಪ್ರಜಾಸತ್ತೆಗೆ ಆಗ್ರಹಿಸಿ ನಡೆಸುವ ಯಾವ ಹೋರಾಟದ ಹಿನ್ನೆಲೆಯೂ ಸರಳವಾಗಿರುವುದಿಲ್ಲ. ಹಾಗೆಯೇ ಅದು ಸಾಗುವ ಹಾದಿಯೂ ರೇಖಾತ್ಮಕವಾದುದಲ್ಲ. ಸನಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ‘ಬದಲಾವಣೆಯ ಚೌಕ’ದಲ್ಲಿ ಒಂದುಗೂಡಿದಾಗ ಮೊದಲಿಗೆ ಸಾಲೇಹ್ ಕೂಡಾ ತಣ್ಣಗಿದ್ದರು. ಆದರೆ ಅವರ ರಾಜಕೀಯ ವಿರೋಧಿಗಳು ಇದಕ್ಕೆ ಜೊತೆಗೂಡಿದಾಗ ಅವರು ‘2013ರಲ್ಲಿ ನನ್ನ ಆಡಳಿತಾವಧಿ ಮುಗಿಯುವ ತನಕವಷ್ಟೇ ಇರುತ್ತೇನೆ. ಅಧಿಕಾರವನ್ನು ನನ್ನ ಮಗನಿಗೆ ಹಸ್ತಾಂತರಿಸುವುದಿಲ್ಲ. ಸಂವಿಧಾನವನ್ನು ತಿದ್ದುಪಡಿ ಮಾಡುವುದಿಲ್ಲ. ಹೊಸ ಸಂವಿಧಾನ ರಚಿಸೋಣ’ ಎಂದೆಲ್ಲಾ ಭರವಸೆ ಕೊಟ್ಟರು. ಆದರೆ ಈ ಭರವಸೆ ಗಳನ್ನು ಯಾರೂ ನಂಬಲು ಸಿದ್ಧರಿರಲಿಲ್ಲ. ಕಾರಣ 2006ರಲ್ಲಿ ಆಯ್ಕೆಯಾಗುವ ಮೊದಲು ಕೂಡಾ ಸಾಲೇಹ್ ತಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದಿದ್ದರು. ಆ ಮಾತನ್ನು ಅವರು ಉಳಿಸಿಕೊಂಡಿಲ್ಲ. ಈಗಲೂ ಅಷ್ಟೇ. ಒಮ್ಮೆ ಇನ್ನು ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರ ಹಿಂದೆಯೇ ‘ಆಡಳಿತದಲ್ಲಿ ಬದಲಾವಣೆ ಬೇಕು ಅಂದರೆ ಅದನ್ನು ಒಪ್ಪುತ್ತೇನೆ. ಆದರೆ ಅದು ಚುನಾವಣೆಯ ಮೂಲಕವೇ ಆಗಲಿ’ ಎಂದು ಹೇಳುವುದರ ಮೂಲಕ ತಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆಂಬ ಪರೋಕ್ಷ ಸುಳಿವನ್ನು ಸಾಲೇಹ್ ನೀಡಿದ್ದರು.ಸದ್ಯ ಯೆಮನ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳೆಲ್ಲವೂ ಈಜಿಪ್ಟ್‌ನ ಬೆಳವಣಿಗೆಗಳನ್ನೇ ಹೋಲುತ್ತಿವೆ. ಕೈರೋದ ತೆಹ್ರೀರ್ ಚೌಕದಲ್ಲಿ ಜನರು ಸೇರಲಾರಂಭಿಸಿದ್ದರ ಹಿಂದೆಯೇ ಹೋಸ್ನಿ ಮುಬಾರಕ್ ಏನೇನು ಮಾಡಿದ್ದರೋ ಅದನ್ನೆಲ್ಲಾ ಸಾಲೇಹ್ ಕೂಡಾ ಮಾಡಿದರು. ಮೊದಲಿಗೆ ಯೆಮನ್‌ಗಾಗಿ ತಾನು ಯಾವ ತ್ಯಾಗಕ್ಕೂ ಸಿದ್ಧ ಎಂದರು. ಅದರ ಹಿಂದೆಯೇ ತಮ್ಮ ಬೆಂಬಲಿಗರನ್ನು ಬಳಸಿಕೊಂಡು ಪ್ರತಿಭಟನಕಾರರ ಮೇಲೆ ದಾಳಿ ನಡೆಸಿದರು. ಈಗ ಮತ್ತೆ ಬಾಹ್ಯ ಒತ್ತಡಗಳ ಪರಿಣಾಮವಾಗಿ ಬೇರೊಂದು ಬಗೆಯಲ್ಲಿ ಮಾತನಾಡಲು ಆರಂಭಿಸಿದ್ದಾರೆ. ಈ ಬೆಳವಣಿಗೆಗಳನ್ನು ನೋಡುತ್ತಿದ್ದರೆ ಅಂತಿಮ ಫಲಿತಾಂಶ ಈಜಿಪ್ಟ್‌ನಂತೆಯೇ ಇರಬಹುದು ಎಂಬುದು ಪಶ್ಚಿಮ ಏಷ್ಯಾ ವಿಶ್ಲೇಷಕರ ಅಭಿಪ್ರಾಯ.ಸಾಲೇಹ್ ಅಧಿಕಾರ ತ್ಯಜಿಸಿದರೆ ಸನಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಬಯಸುತ್ತಿರುವ ಉತ್ತರದಾಯಿತ್ವವುಳ್ಳ ಪ್ರಜಾಸತ್ತಾತ್ಮಕ ಆಡಳಿತ ಬರುತ್ತದೆ ಎಂದು ನಿರೀಕ್ಷಿಸಲೂ ಸಾಧ್ಯವಿಲ್ಲದಂತೆ ಬೆಳವಣಿಗೆಗಳು ನಡೆಯುತ್ತಿವೆ. ಬಹುಶಃ ಅಮೆರಿಕವೂ ಸೇರಿದಂತೆ ಎಲ್ಲಾ ಪಾಶ್ಚಾತ್ಯ ಶಕ್ತಿಗಳಿಗೆ ತಲೆನೋವು ತರುತ್ತಿರುವ ವಿಚಾರವೂ ಇದುವೇ. ಯೆಮನ್‌ನಲ್ಲಿ ಸೌದಿ ಅರೇಬಿಯಾದ ಪ್ರಭಾವವಿರುವುದು ನಿಜ. ಹಾಗೆಯೇ ಸೌದಿ ಅರೇಬಿಯಾದ ಭಿನ್ನಮತೀಯರಿಗೂ ಇದೊಂದು ನೆಲೆ. ಹಾಗೆಯೇ ಇಸ್ಲಾಮಿಕ್ ಕ್ರಾಂತಿಯೊಂದನ್ನು ಬಯಸುತ್ತಿರುವವರೂ ಈಗಿನ ‘ಬದಲಾವಣೆ’ಯ ಹೋರಾಟದಲ್ಲಿದ್ದಾರೆ. ಇವರ ಜೊತೆಯಲ್ಲೇ ದಕ್ಷಿಣ ಯೆಮನ್‌ನ ಪ್ರತ್ಯೇಕತಾವಾದಿಗಳೂ ಇದ್ದಾರೆ. ಸೌದಿ ಅರೇಬಿಯಾದ ಮಟ್ಟಿಗಂತೂ ಯೆಮನ್‌ನಲ್ಲಿ ನಡೆಯುತ್ತಿರುವ ಹೋರಾಟಗಳು ಮಗ್ಗುಲ ಮುಳ್ಳಿನಂತೆ ಭಾಸವಾಗುತ್ತಿದೆ. ಇಷ್ಟು ಸಾಲದು ಎಂಬಂತೆ ಯೆಮನ್ ಬುಡಕಟ್ಟುಗಳು ಬಹಳ ಪ್ರಬಲವಾಗಿರುವ ದೇಶ. ಇದನ್ನೇ ಬಳಸಿಕೊಂಡು ಸಾಲೇಹ್ ತನ್ನ ಬುಡಕಟ್ಟಿನ ಜನರನ್ನು ಬಳಸಿಕೊಂಡು ಅಧಿಕಾರವನ್ನು ಉಳಿಸಿ ಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಒಂದು ವೇಳೆ ಸಾಲೇಹ್ ಅಧಿಕಾರ ತೊರೆದರೆ ಇಲ್ಲಿ ಅರಾಜಕತ್ವ ನೆಲೆಸುತ್ತದೆ. ಅದನ್ನು ಈಗಾಗಲೇ ಯೆಮನ್‌ನಲ್ಲಿ ತನ್ನ ಕೇಂದ್ರವನ್ನು ಸ್ಥಾಪಿಸಿಕೊಂಡಿರುವ ಅಲ್ ಖೈದಾ ಬಳಸಿಕೊಳ್ಳುತ್ತದೆ ಎಂಬ ಭಯವೊಂದನ್ನು ವಿಶ್ವ ಸಮುದಾಯದಲ್ಲಿ ಬಿತ್ತುವ ಪ್ರಯತ್ನವೂ ನಡೆಯುತ್ತಿದೆ.ಅಬ್ದುಲ್ ಘನಿ ಅಲ್ ಇರ್ಯಾನಿಯವರಂಥ ಯೆಮೆನಿ ಸಂಶೋಧಕರು ಈ ವಾದವನ್ನು ಅಲ್ಲಗಳೆಯುತ್ತಿದ್ದಾರೆ. ಅವರು ಹೇಳುವಂತೆ “ಯೆಮನ್‌ನಲ್ಲಿ ಬುಡಕಟ್ಟುಗಳಿರುವುದು ನಿಜ. ಆದರೆ ಎಲ್ಲವನ್ನೂ ಬುಡಕಟ್ಟು ನಾಯಕರು ನಿಯಂತ್ರಿಸುವಂಥ ಸ್ಥಿತಿಯೇನೂ ಇಲ್ಲಿಲ್ಲ. ಬುಡಕಟ್ಟುಗಳ ಪ್ರಮಾಣವಿರುವುದು ಶೇಕಡಾ 25ರಷ್ಟು ಮಾತ್ರ. ಉಳಿದವರು ನಗರವಾಸಿಗಳು ಮತ್ತು ರೈತರು. ಯೆಮೆನಿ ಆಡಳಿತ ವರ್ಗ ಇಲ್ಲಿ ಯಾವತ್ತೂ ಮಧ್ಯಮ ವರ್ಗ ಬೆಳೆಯಲು ಬಿಟ್ಟಿಲ್ಲ. ಮಧ್ಯಮ ವರ್ಗ ಪ್ರಬಲವಾದರೆ ತಮ್ಮ ಆಡಳಿತಕ್ಕೆ ಕುತ್ತು ಎಂಬುದು ಅವರಿಗೆ ತಿಳಿದಿತ್ತು. ಆದರೆ ಟ್ಯುನೀಷಿಯಾದಿಂದ ಹೊರಟ ಸ್ವಾತಂತ್ರ್ಯದ ರೈಲು ಈಗ ಯೆಮನ್ ಪ್ರವೇಶಿಸಿಬಿಟ್ಟಿದೆ. ಅದನ್ನು ನಿಲ್ಲಿಸುವುದು ಅಷ್ಟು ಸುಲಭವಲ್ಲ”. ಅಲ್‌ಖೈದಾ ವಿರುದ್ಧದ ಹೋರಾಟದಲ್ಲಿ ತಮ್ಮ ಮಿತ್ರನಾಗಿದ್ದ ಸಾಲೇಹ್ ಅವರನ್ನು ಕೈ ಬಿಡಲು ಈಗ ಅಮೆರಿಕವೂ ತೀರ್ಮಾನಿಸಿಬಿಟ್ಟಿರುವುದರಿಂದ ಇರ್ಯಾನಿಯವರ ಮಾತುಗಳನ್ನು ಒಪ್ಪಲೇಬೇಕಾಗುತ್ತದೆ. ಸಾಲೇಹ್ ಅವರ ಬುಡಕಟ್ಟಿಗೇ ಸೇರಿದ ಅಬ್ದುಲ್ಲಾ ಬಿಲ್ ಹುಸೇನ್ ಅಲ್ ಅಹ್ಮರ್‌ರಂಥವರೂ ಈಗ ಸಾಲೇಹ್ ವಿರೋಧಿ ಬಣದಲ್ಲಿದ್ದಾರೆ. ಹಾಗಾಗಿ ಹಾಶಿದ್ ಬುಡುಕಟ್ಟು ಸಾಲೇಹ್ ಅವರ ಬೆಂಬಲಕ್ಕೆ ನಿಂತುಬಿಡುತ್ತದೆ ಎಂಬುದನ್ನು ಪೂರ್ಣವಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ.ಈಗ ಸಾಲೇಹ್ ಅವರ ಮುಂದೆ ಬಹಳ ಆಯ್ಕೆಗಳಿಲ್ಲ. ಹಾಗೆಯೇ ಸಾಲೇಹ್ ಅವರ ನಿರ್ಗಮನದ ನಂತರ ತಮ್ಮ ಬೇಳೆ ಬೇಯಿಸಿಕೊಳ್ಳಬಹುದು ಎಂದು ಭಾವಿಸುತ್ತಿರುವ ಸುನ್ನಿ ಇಸ್ಲಾಮಿಸ್ಟರು, ಅಲ್‌ಖೈದಾ, ಅಧಿಕಾರಕ್ಕಾಗಿ ತಹತಹಿಸುತ್ತಿರುವ ಕುಲೀನ ವರ್ಗಗಳಿಗೂ ಬಹಳ ಆಯ್ಕೆಗಳೇನೂ ಉಳಿದಿಲ್ಲ. ಸಾಲೇಹ್ ನಿರ್ಗಮನದ ನಂತರ ಯಾವುದಾದರೂ ಒಂದು ವರ್ಗ ಅಧಿಕಾರವನ್ನು ವಶಪಡಿಸಿಕೊಳ್ಳಲು ಹೊರಟರೆ ಮತ್ತೊಂದು ಅಂತರ್ಯುದ್ಧವೇ ಸಂಭವಿಸುವ ಸಾಧ್ಯತೆ ಇದೆ. ‘ಬದಲಾವಣೆಯ ಚೌಕ’ದಲ್ಲಿ ಧರಣಿ ಕುಳಿತಿರುವ ಯುವ ವಿದ್ಯಾರ್ಥಿಗಳು ನಿಜ ಅರ್ಥದಲ್ಲಿ ಭಾವೀ ಯೆಮನ್ ಅನ್ನು ಕಟ್ಟುವವರು. ಅವರ ಆಯ್ಕೆಗಳಲ್ಲಿ ಬುಡಕಟ್ಟು ಪ್ರತಿಷ್ಠೆಗಳಿಲ್ಲ. ಒಣ ಶಾಸ್ತ್ರಾಂಧತೆಯೂ ಅವರಿಗಿಲ್ಲ. ಅವರ ಪ್ರಾರ್ಥನೆ ಸರಳವಾದುದು ‘ಓ ದೇವರೇ...ನಮ್ಮನ್ನು ಪ್ರೀತಿಸದ, ನಮ್ಮ ಒಳಿತನ್ನು ಬಯಸದ ಪ್ರಭುತ್ವವನ್ನು ನಮ್ಮ ಮೇಲೇ ಹೇರಬೇಡ’. ಈ ಪ್ರಾರ್ಥನೆ ಧ್ವನಿಯನ್ನು ಗ್ರಹಿಸುವುದು ತಡವಾದಷ್ಟೂ ಯೆಮನ್‌ನ ಈಗಿನ ಆಡಳಿತ ವರ್ಗ ಎದುರಿಸಬೇಕಾದ ಸಮಸ್ಯೆಗಳ ಪ್ರಮಾಣ ಹೆಚ್ಚುತ್ತಲೇ ಇರುತ್ತದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry