ಬದಲಾವಣೆ ಒತ್ತಡದಲ್ಲಿ ಅಲ್ಯುಮಿನಿಯಂ

7

ಬದಲಾವಣೆ ಒತ್ತಡದಲ್ಲಿ ಅಲ್ಯುಮಿನಿಯಂ

Published:
Updated:

ಬದಲಾವಣೆ ಜಗದ ನಿಯಮ. ಕಾಲ ಬದಲಾದಂತೆ ಮನುಷ್ಯರೂ ಬದಲಾಗುತ್ತಾರೆ. ಅವರ ಆಲೋಚನಾ ದಾಟಿ, ಆದ್ಯತೆಗಳು, ಅಗತ್ಯಗಳು, ಜೀವನಶೈಲಿ ಎಲ್ಲವೂ ಆಯಾ ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಹೋಗುತ್ತವೆ.ಆದರೆ, ಇಂಥದೊಂದು ಬದಲಾವಣೆ, ಜನರಲ್ಲಿನ ಪರಿವರ್ತನೆ ಒಂದು ಪ್ರಮುಖ ಉದ್ಯಮವನ್ನೇ ಕೊನೆಗಾಣಿಸುವಂತೆ ಮಾಡಿದರೆ?!

ಹಳ್ಳಿಗಳು ಪಟ್ಟಣಗಳಾಗುತ್ತಿವೆ. ಪಟ್ಟಣಗಳು ನಗರಗಳಾಗುತ್ತಿವೆ. ನಗರಗಳು `ಮಹಾ' ನಗರಗಳಾಗುತ್ತಿವೆ. ಮನೆಗಳೂ ಹೊಸ ರೂಪ ಪಡೆದುಕೊಳ್ಳುತ್ತಿವೆ.ಮನೆಯೊಳಗಿನ ಕೋಣೆಗಳೂ, ಅದರೊಳಗಿನ ವಸ್ತುಗಳೂ, ಕೊನೆಗೆ ಗೃಹಿಣಿಯರು ದಿನದ ಹೆಚ್ಚು ಸಮಯ ಕಳೆಯುವ `ಅಡುಗೆ ಕೋಣೆ' ಎಲ್ಲವೂ ಬದಲಾಗುತ್ತಿವೆ, ಆಧುನಿಕಗೊಳ್ಳುತ್ತಿವೆ. ಅದರ ಕಪಾಟಿನಲ್ಲಿದ್ದ ಪಾತ್ರೆ, ಡಬ್ಬಿ ಮತ್ತಿತರ ಪರಿಕರಗಳೂ ಜಾಗ ಖಾಲಿ ಮಾಡುತ್ತಿವೆ. ಹೊಸ ಸಾಮಗ್ರಿಗಳಿಗೆ ಸ್ಥಳಾವಕಾಶ ಮಾಡಿಕೊಟ್ಟಿವೆ.ಗ್ರಾಮೀಣ ಪ್ರದೇಶವಷ್ಟೇ ಅಲ್ಲ; ಒಂದು ಕಾಲದಲ್ಲಿ ಪಟ್ಟಣಗಳ ಮನೆಗಳಲ್ಲಿನ ಅಡುಗೆ ಕೋಣೆಯನ್ನು ಅಲಂಕರಿಸಿದ್ದ ಮಡಿಕೆ, ಕುಡಿಕೆಗಳು ಉರುಳಿಹೋಗಿ ಇತಿಹಾಸದ ಪುಟ ಸೇರಿವೆ. ಕಾರಣ ಇವುಗಳಿಗೆ ಪರ್ಯಾಯವಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದ ಹೊಳೆವ, ಆಕರ್ಷಕವಾದ ಹಿಂಡಾಲಿಯಂ, ಅಲ್ಯುಮಿನಿಯಂ ಪಾತ್ರೆ, ಪರಿಕರಗಳು. ಇಂಥ  ಪಾತ್ರೆ, ಪರಿಕರಗಳ ಉತ್ಪಾದಕರನ್ನು ಅಂದು `ಆಧುನಿಕ ಕುಂಬಾರರು' ಎಂದೇ ಬಣ್ಣಿಸಲಾಗಿದ್ದಿತು.ಬದಲಾದ ಸನ್ನಿವೇಶದಲ್ಲಿ ದಶಕದ ಹಿಂದೆಯೇ ಇದು ಉದ್ಯಮದ ಸ್ವರೂಪ ಪಡೆದುಕೊಂಡಿದ್ದರೂ, ಈಗಿನ ಸ್ಪರ್ಧಾಯುಗದಲ್ಲಿ ಈ ಉದ್ದಿಮೆ ಕಷ್ಟ-ನಷ್ಟದ ಹಾದಿಯಲ್ಲಿದೆ.ಹೊಸ ವಿನ್ಯಾಸದ, ನಾವೀನ್ಯತೆಯಿಂದ ಕೂಡಿದ ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆಗಳು ಮತ್ತು ಪ್ರೆಷರ್ ಕುಕ್ಕರ್‌ಗಳು ಅಡುಗೆ ಮನೆ ಕಪಾಟುಗಳನ್ನು ಅಲಂಕರಿಸುತ್ತಿದ್ದಂತೆಯೇ ಅಲ್ಯುಮಿನಿಯಂ, ಹಿಂಡಾಲಿಯಂ ಪಾತ್ರೆಗಳು, ಪರಿಕರಗಳು ನಿಧಾನಗತಿಯಲ್ಲಿ ನಿರ್ಗಮಿಸುತ್ತಿವೆ. ಅಡುಗೆ ಮನೆಯಿಂದ ದೂರ ಸರಿಯುತ್ತಿವೆ. ಈ ಅಲ್ಯುಮಿನಿಯಂ ಪಾತ್ರೆ-ಪರಿಕರಗಳ ತಯಾರಿಕೆ ಮತ್ತು ಮಾರಾಟವನ್ನೇ ಅವಲಂಬಿಸಿದ್ದ ಉದ್ಯಮಗಳು ಸದ್ಯ ನಷ್ಟದ ಭೀತಿಯಲ್ಲಿವೆ.ಈಗ ಈ ಉದ್ಯಮ ಎದುರಿಸುತ್ತಿರುವುದು ಮಾರುಕಟ್ಟೆಯೊಂದರದ್ದೇ ಸಮಸ್ಯೆಯಲ್ಲ; ನುರಿತ ಕಾರ್ಮಿಕರ ಕೊರತೆ ಮತ್ತು ಉತ್ಪಾದನಾ ವೆಚ್ಚದ ಏರಿಕೆಯೂ ಈ ಕ್ಷೇತ್ರವನ್ನು ಕಂಗೆಡಿಸಿದೆ. ಇಷ್ಟೆಲ್ಲದರ ಜತೆಗೆ ಎಲ್ಲ ಉದ್ದಿಮೆಗಳನ್ನು ಕಾಡುತ್ತಿರುವ ವಿದ್ಯುತ್ ಸಮಸ್ಯೆಯೂ ಅಲ್ಯುಮಿನಿಯಂ ಪರಿಕರ ತಯಾರಿಕೆ ಘಟಕಗಳನ್ನು ಕಣ್ಣಾ ಮುಚ್ಚಾಲೆಯಾಡಿಸುತ್ತಿದೆ ಎನ್ನುತ್ತಾರೆ ಗಡಿ ಜಿಲ್ಲೆಯಲ್ಲಿ ಅಲ್ಯುಮಿನಿಯಂ ಪರಿಕರ ತಯಾರಿಸುವ `ಪ್ರೀಮಿಯರ್ ಇಂಡಸ್ಟ್ರೀಸ್'ನ ಮಾಲೀಕ ಮಹಮ್ಮದ್ ಮಸಿಯುಜಾಮಾ ಕುಸ್ರು.ಎರಡು ದಶಕಗಳ ಹಿಂದೆ ಅಲ್ಯುಮಿನಿಯಂ ಪಾತ್ರೆಗಳನ್ನು ತಯಾರಿಸುವ ಘಟಕ ಆರಂಭಿಸಿದ ಕುಸ್ರು, ಇಡೀ ಉದ್ಯಮದ ನಾಡಿ ಮಿಡಿತವನ್ನು ತಕ್ಕಮಟ್ಟಿಗೆ ಬಲ್ಲವರು.`ಹಿಂಡಾಲಿಯಂ, ಅಲ್ಯೂಮಿನಿಯಂ ಪರಿಕರ ಉತ್ಪಾದಿಸುವ ಉದ್ದಿಮೆಗಳು ರಾಜ್ಯದಲ್ಲಿ ಸದ್ಯ ಸುಮಾರು 25ರಷ್ಟಿರಬಹುದು ಅಷ್ಟೆ. ನಾನು 20 ವರ್ಷದ ಹಿಂದೆ ಉದ್ದಿಮೆ ಆರಂಭಿಸಿದಾಗ ಅಲ್ಯುಮಿನಿಯಂ ಪಾತ್ರೆ-ಪಗಡೆ ತಯಾರಿಸುವ 40 ಕಾರ್ಖಾನೆಗಳು ರಾಜ್ಯದ ವಿವಿಧೆಡೆ ಇದ್ದವು. ಇತ್ತೀಚಿನ ವರ್ಷಗಳಲ್ಲಿ ಕಾರ್ಮಿಕರ ಕೊರತೆ, ಮಾರುಕಟ್ಟೆ ಸಮಸ್ಯೆಯಿಂದಾಗಿ 10-15 ಕಾರ್ಖಾನೆಗಳು ಮುಚ್ಚಿ ಹೋದವು' ಎಂದು ರಾಜ್ಯದಲ್ಲಿನ ಅಲ್ಯುಮಿನಿಯಂ ಉದ್ದಿಮೆಗಳ ಏರಿಳಿತ ಗತಿಯ ಚಿತ್ರಣ ನೀಡುತ್ತಾರೆ.ಸದ್ಯ ರಾಜ್ಯದಲ್ಲಿ ಅಭಿವೃದ್ಧಿ ಹೊಂದಲೂ ಆಗದೆ, ಕಣ್ಣು ಮುಚ್ಚಲೂ ಆಗದೆ ಹೇಗೋ ಕಷ್ಟಪಟ್ಟು ಉಸಿರಾಡುತ್ತಿರುವ ಹಿಂಡಾಲಿಯಂ-ಅಲ್ಯುಮಿನಿಯಂ ಪರಿಕರ ತಯಾರಿಕಾ ಘಟಕಗಳನ್ನು ಬೆರಳು ಮಡಿಚಿ ಎಣಿಸುತ್ತಾ ಮಾತುಮುಂದುವರಿಸಿದ ಕುಸ್ರು, `ರಾಜಧಾನಿ ಬೆಂಗಳೂರಿನಲ್ಲಿ ಇಂಥ 8 ಅಲ್ಯಮಿನಿಯಂ-ಹಿಂಡಾಲಿಯಂ ಕಾರ್ಖಾನೆಗಳಿವೆ. ಗುಲ್ಬರ್ಗದಲ್ಲಿ ಮೂರು ಉದ್ದಿಮೆಗಳಿವೆ. ಉಳಿದಂತೆ ಬೀದರ್, ಮಂಗಳೂರು, ಧಾರವಾಡ ಹೀಗೆ ವಿವಿಧ ಜಿಲ್ಲೆಗಳಲ್ಲಿ ಹಂಚಿ ಹೋಗಿವೆ. ಅನೇಕ ಸವಾಲುಗಳ ನಡುವೆಯೂ ಹೈದರಾಬಾದ್ ಕರ್ನಾಟಕದ ಭಾಗದ ಜಿಲ್ಲೆಗಳಲ್ಲಿ ಕೆಲವೇ ಉದ್ಯಮಗಳು ಇನ್ನೂ ಉಳಿದಿವೆ' ಎನ್ನುತ್ತಾರೆ.`ಸ್ಟೇನ್‌ಲೆಸ್ ಸ್ಟೀಲ್ ಪರಿಕರಗಳು, ಕಾಪರ್ ಬಾಟಮ್ ಒಳಗೊಂಡ ಆಧುನಿಕ ಶೈಲಿ-ವಿನ್ಯಾಸದ ಪಾತ್ರೆಗಳು, ಗಾಜು-ಪಿಂಗಾಣಿ ಭರಣಿ-ಪಾತ್ರೆಗಳ ಸ್ಪರ್ಧೆ ಹೆಚ್ಚಿದಂತೆ ಅಲ್ಯುಮಿನಿಯಂ -ಹಿಂಡಾಲಿಯಂ ಪರಿಕರಗಳ ಮಾರುಕಟ್ಟೆಯೂ ದಿನೇ ದಿನೇ ಕುಗ್ಗುತ್ತಲೇ ಇದೆ. ಈ ಕಠಿಣ ಸ್ಪರ್ಧೆಯ ಜತೆಗೇ, ಉದ್ಯಮ ಒಂದೆಡೆ ನೆಲೆಗೊಳ್ಳದೇ ವಿವಿಧ ಜಿಲ್ಲೆಗಳಲ್ಲಿ ಹರಡಿಹೋಗಿದ್ದೂ ಸಹ ಅದರ ಕುಸಿತಕ್ಕೆ ಕಾರಣ' ಎನ್ನುತ್ತಾ ಬದಲಾದ ಕಾಲ ಹೇಗೆ ಒಂದು ಉದ್ಯಮವನ್ನು ತೆರೆಮರೆಗೆ ಸರಿಸುತ್ತದೆ ಎಂಬುದರ ವಿವರಣೆ ನೀಡುತ್ತಾರೆ ಕುಸ್ರು.`ಇದು ಈಗ ಉದ್ಯೋಗ ಸೃಷ್ಟಿಯ ಉದ್ಯಮವಾಗಿ ಉಳಿದಿಲ್ಲ. ಕೆಲವೇ ಮಂದಿಗೆ ಉದ್ಯೋಗ ನೀಡಿ, ಒಂದು ಕುಟುಂಬ ತಕ್ಕಮಟ್ಟಿಗೆ ನೆಮ್ಮದಿಯಿಂದ ಜೀವನ ಸಾಗಿಸಬಹುದು ಎಂಬುದಕ್ಕಷ್ಟೇ ಸೀಮಿತವಾಗಿದೆ' ಎಂಬುದು ಮಹಮ್ಮದ್ ಮಸಿಯುಜಾಮಾ ಕುಸ್ರು ಅವರ ಅನುಭವದ ನುಡಿ.`ಅಲ್ಯುಮಿನಿಯಂ ಉದ್ಯಮ ಅನೇಕ ಸಮಸ್ಯೆ ಎದುರಿಸುತ್ತಿದ್ದರೂ ಇಂದಿಗೂ ತನ್ನದೇ ಆದ ಸಂಘಟನೆ ಹೊಂದಿಲ್ಲ. ಸಂಘಟನೆಯೇ ಇಲ್ಲದಿರುವಾಗ ಉದ್ಯಮದ ವಾರ್ಷಿಕ ವಹಿವಾಟು ಇಷ್ಟೇ ಎಂದು ನಿಖರವಾಗಿ ಹೇಳುವುದು ಕಷ್ಟ. ವಹಿವಾಟು ಉದ್ದಿಮೆಯಿಂದ ಉದ್ದಿಮೆಗೆ ಭಿನ್ನವಾಗಿ ಇರುತ್ತದೆ. ರಾಜ್ಯದಲ್ಲಿರುವ ಎಲ್ಲ ಘಟಕಗಳ ವಾರ್ಷಿಕ ವಹಿವಾಟು ಅಂದಾಜು ಸುಮಾರು ್ಙ5ಕೋಟಿ ಇರಬಹುದು' ಎನ್ನುತ್ತಾರೆ ಅವರು.`ಹೈದರಾಬಾದ್ ಕರ್ನಾಟಕ ಜಿಲ್ಲೆಗಳಲ್ಲಿ ದಶಕಗಳ ಹಿಂದೆ ಒಂದೆರಡು ಉದ್ಯಮವಷ್ಟೇ ಇದ್ದವು. ಈಗ ಬಿಜಾಪುರ, ಗುಲ್ಬರ್ಗ ಸೇರಿದಂತೆ ಇತರೆ ಜಿಲ್ಲೆಗಳಲ್ಲೂ ಉದ್ಯಮ ಸ್ಥಾಪನೆಯಾಗಿವೆ. ನೆರೆ ಜಿಲ್ಲೆಗಳಷ್ಟೇ ಅಲ್ಲದೆ ಮಹಾರಾಷ್ಟ್ರದ ಉದಗೀರ್, ಆಂಧ್ರಪ್ರದೇಶದ ಜಹೀರಾಬಾದ್ ಕಡೆಗೂ ಉತ್ಪನ್ನಗಳನ್ನು ಪೂರೈಸುತ್ತಿದ್ದೆವು. ಈಗ ಮಾರುಕಟ್ಟೆ ವ್ಯಾಪ್ತಿ ಜಿಲ್ಲೆಗಷ್ಟೇ ಸೀಮಿತವಾಗಿದೆ'.50 ಲಕ್ಷದಿಂದ 7 ಲಕ್ಷಕ್ಕೆ

`ಇದು ಕಳೆದ 20 ವರ್ಷಗಳಲ್ಲಿ ಆಗಿರುವ ಉದ್ಯಮದ ಸ್ಥಿತ್ಯಂತರ. ಹತ್ತು-ಹನ್ನೆರಡು ವರ್ಷಗಳ ಹಿಂದೆ ನಮ್ಮ ಘಟಕದ ವಹಿವಾಟು ಸರಾಸರಿ ವಾರ್ಷಿಕ ರೂ. 50 ಲಕ್ಷದಷ್ಟು ಇದ್ದಿತು. ಕಳೆದ ವರ್ಷ ಕೇವಲ ಏಳು ಲಕ್ಷ ಆಗಿದೆ. ಘಟಕವನ್ನು ಮುಚ್ಚುವ ಮನಸ್ಸಿಲ್ಲ; ನಡೆಸುವ ವಾತಾವರಣವೂ ಈಗ ಇಲ್ಲ. ಆರಂಭಿಸಿದ್ದೇವೆ, ಮುಚ್ಚುವುದೇಕೆ? ಹೇಗೋ ನಡೆಸೋಣ ಎಂಬ ಸ್ಥಿತಿಯಲ್ಲಿ ಸಾಗುತ್ತಿದೆ' ಎಂದು ಅಲ್ಯುಮಿನಿಯಂ ಘಟಕ ನಡೆಸುವ ಕಷ್ಟವನ್ನು ತೆರೆದಿಡುತ್ತಾರೆ ಕುಸ್ರು.

ಈ ಪಾತ್ರೆ-ಪರಿಕರ ತಯಾರಿಕಾ ಘಟಕಗಳು ಮೊದಲು ಹಿಂಡಾಲಿಯಂ, ಅಲ್ಯುಮಿನಿಯಂ ಹಾಳೆಗಳನ್ನು (ಕಚ್ಚಾದಾರ್ಥ) ತರಿಸಿ ಅದರಿಂದ ವಿವಿಧ ವಿನ್ಯಾಸ, ಅಳತೆಯ ಪಾತ್ರೆಗಳನ್ನು, ತಟ್ಟೆಗಳನ್ನು ಉತ್ಪಾದಿಸುತ್ತಿದ್ದವು. ಹಿಂಡಾಲಿಯಂ ಬೆಲೆ ಗಗನಕ್ಕೇರಿರುವುದರಿಂದ ಈಗ ಹೆಚ್ಚಾಗಿ ಅಲ್ಯುಮಿನಿಯಂ ಪಾತ್ರೆ-ಪರಿಕರ ತಯಾರಿಕೆಗೇ ಹೆಚ್ಚು ಗಮನ ಕೇಂದ್ರೀಕರಿಸಿವೆ. ಅಲ್ಯುಮಿನಿಯಂ ಕಚ್ಚಾಪದಾರ್ಥದ ಬೆಲೆಯೂ ತುಟ್ಟಿಯಾಗಿರುವುದರಿಂದ ನಿರುಪಯೋಗಿಯಾದ ಹಾಗೂ ಹಳೆಯದಾದ ಅಲ್ಯುಮಿನಿಯಂ ಪಾತ್ರೆ-ಪರಿಕರಗಳನ್ನು ಖರೀದಿಸಿ ಪರಿವರ್ತಿಸಿ ಮರುಬಳಕೆ ಮಾಡುತ್ತಿವೆ.ಅಲ್ಯುಮಿನಿಯಂ ಪರಿಕರಗಳ ಉತ್ಪಾದನೆ ಎಂದರೆ ಕುಲುಮೆಯ ಕೆಲಸ. ಶಾಖದ ಪರಿಸರದಲ್ಲೇ ಕೆಲಸ. ಸಹಜವಾಗಿ ನೌಕರರ ಕೊರತೆಯೂ ಕಾಡುತ್ತಿದೆ. ಕಚ್ಚಾ ಪದಾರ್ಥಗಳನ್ನು ಅಧಿಕ ಶಾಖದ ಬೆಂಕಿಯಲ್ಲಿ ಕರಗಿಸಿ, ಅಚ್ಚು ಮಾಡುವುದು; ಬಳಿಕ ತೆಳುವಾದ ಪ್ಲೇಟ್‌ಗಳಾಗಿ ಪರಿವರ್ತಿಸಿ, ಅಳತೆಗೆ ತಕ್ಕತಂಎ ವಿವಿಧ ವಿನ್ಯಾಸದ ಪಾತ್ರೆ, ಪ್ಲೇಟ್‌ಗಳನ್ನು ಸಿದ್ಧಪಡಿಸಲಾಗುತ್ತದೆ.`ಕೆಲ ವರ್ಷಗಳ ಹಿಂದೆ ಕೈಗಾರಿಕಾ ಇಲಾಖೆ ಸಹಯೋಗದಲ್ಲಿ ಉದ್ಯೋಗ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  ತರಬೇತಿ ಪೂರೈಸಿದವರಿಗೆ ಇಲಾಖೆ ವತಿಯಿಂದ ಪ್ರಮಾಣಪತ್ರ ನೀಡುವ ವ್ಯವಸ್ಥೆಯೂ ಇದ್ದಿತು. ಇದರಿಂದ ನುರಿತ ನೌಕರರ ಕೊರತೆ ಸಮಸ್ಯೆಯಾದರೂ ಬಗೆಹರಿಯುತ್ತಿತ್ತು. ಈ ಕಾರ್ಯಕ್ರಮ ಈಗ ನಿಂತೇ ಹೋಗಿದೆ. ಇಂತಹುದೇ ಚಟುವಟಿಕೆ ಮತ್ತೆ ಆರಂಭವಾದರೆ ಉದ್ಯಮ ಚೇತರಿಸಿಕೊಳ್ಳುತ್ತದೆ. ಅಷ್ಟೇ ಅಲ್ಲ, ಹೊಸ ಉದ್ಯೋಗಗಳು ಸೃಷ್ಟಿಯಾದಂತೆಯೂ ಆಗುತ್ತದೆ' ಎಂದು ಕುಸ್ರು ಅಭಿಪ್ರಾಯ ಪಡುತ್ತಾರೆ.ಈ ಎಲ್ಲ ಏರುಪೇರು ನಡುವೆಯೂ `ಎಷ್ಟೇ ಆಧುನಿಕತೆ ಬರಲಿ; ನಗರೀಕರಣ ಆಗಲಿ, ಯಾವ ಮನೆಗೇ ಹೋದರೂ ಕೆಲವಾದರೂ ಅಲ್ಯುಮಿನಿಯಂ, ಹಿಂಡಾಲಿಯಂನ ಸಾಮಗ್ರಿ ಇರುತ್ತವೆ. ಆ ಒಂದು ವಿಶ್ವಾಸ, ಭರವಸೆಯೇ ಉದ್ಯಮವನ್ನು ಜೀವಂತವಾಗಿ ಉಳಿಸಿದೆ' ಎಂಬುದು ಈ ಉದ್ಯಮವನ್ನೇ ನಂಬಿಕೊಂಡಿರುವ ಕುಸ್ರು ಅಂತಹವರ  ಸಮಾಧಾನದ ಭಾವ ಮೂಡಿಸುತ್ತಿದೆ.ಉದ್ಯಮಗಳೇ ಸ್ಥಾಪನೆ ಆಗುವುದಿಲ್ಲ, ಸ್ಥಾಪನೆಯಾದರೂ ಹೆಚ್ಚು ದಿನ ಉಳಿಯವುದಿಲ್ಲ ಎಂಬ ಕೊರಗು ಇರುವ ಬೀದರ್‌ನಂತಹ ಜಿಲ್ಲೆಯಲ್ಲಿ `ಆಧುನಿಕ ಕುಂಬಾರರ' ಈ ಉದ್ಯಮ ಇನ್ನೂ ಉಳಿದಿದೆ ಎಂಬುದೇ ಅಚ್ಚರಿ ಹಾಗೂ ಸಮಾಧಾನದ ಅಂಶ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry