ಗುರುವಾರ , ನವೆಂಬರ್ 14, 2019
19 °C

ಬದಲಾವಣೆ ಗಾಳಿ ಬೀಸುತ್ತಿದೆ: ರಮೇಶ್ ಕುಮಾರ್

Published:
Updated:

ಶ್ರೀನಿವಾಸಪುರ: ಕ್ಷೇತ್ರದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಪಾರಂಪರಿಕವಾಗಿ ಒಬ್ಬ ಮುಖಂಡನಿಗೆ ನಿಷ್ಠೆ ತೋರಿಸುತ್ತಿದ್ದ ಗ್ರಾಮಗಳಲ್ಲಿ ಹಿಂದಿನ ಪರಿಸ್ಥಿತಿ ಇಲ್ಲ. ಇಂಥ ಪರಿಸ್ಥಿತಿಯಲ್ಲಿ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಕ್ಷೇತ್ರಕ್ಕೆ ಹಲವು ಸಲ ಬಂದು ಹೋದರೂ ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ಮತದಾರರ ಒಲವು ಮುಖ್ಯವೇ ಹೊರತು, ಯಾರು ಬರುತ್ತಾರೆ, ಯಾರು ಹೋಗುತ್ತಾರೆ ಎಂಬುದು ಮುಖ್ಯವಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಕೆ.ಆರ್.ರಮೇಶ್ ಕುಮಾರ್ ಹೇಳಿದರು.ತಾಲ್ಲೂಕಿನ ಆರಿಕುಂಟೆ ಗ್ರಾಮದಲ್ಲಿ ಸೋಮವಾರ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈ ಕ್ಷೇತ್ರದ ಜನರ ಋಣ ನನ್ನ ಮೇಲಿದೆ. ಶಾಶ್ವತ ನೀರಾವರಿ ಯೋಜನೆ ಜಾರಿಗೆ ತಂದು ಕೆರೆಗಳಿಗೆ ನೀರು ತುಂಬುವುದರ ಮೂಲಕ ಋಣ ತೀರಿಸಬೇಕಾಗಿದೆ. ಅದಕ್ಕೆ ಮತದಾರರ ಬೆಂಬಲ ಬೇಕಾಗಿದೆ ಎಂದು ಮನವಿ ಮಾಡಿದರು.ಮತ ಬ್ಯಾಂಕ್ ಎಂದು ಹೇಳಿಕೊಳ್ಳುವ ಕಾಲ ಹೋಯಿತು. ಯಾರಿಗೂ ಮತ ಬ್ಯಾಂಕ್ ಎಂಬುದಿಲ್ಲ. ಎಲ್ಲ ಕಡೆ ಮತದಾರರು ಹಂಚಿಹೋಗಿದ್ದಾರೆ. ಎಲ್ಲ ಅಭ್ಯರ್ಥಿಗಳಿಗೂ ಪ್ರವೇಶ ದೊರೆಯುತ್ತಿದೆ. ಕ್ಷೇತ್ರದ ಜನರ ಸೇವೆ ಮಾಡುವ ಉದ್ದೇಶ ಹೊಂದಿರುವ ನಾನು ಯಾರನ್ನೂ ಟೀಕಿಸುವುದಿಲ್ಲ. ತಮ್ಮ ವ್ಯಕ್ತಿತ್ವ ಮತ್ತು ಕಾಂಗ್ರೆಸ್ ಪಕ್ಷದ ನೀತಿಯಿಂದ ಆಕರ್ಷಿತರಾಗಿ ಬರುವವರನ್ನು ಪ್ರೀತಿಯಿಂದ ಬರಮಾಡಿಕೊಳ್ಳಲಾಗುವುದು. ಬಂದವರನ್ನು ಗೌರವದಿಂದ ನಡೆಸಿಕೊಳ್ಳಲಾಗುವುದು ಎಂದು ಹೇಳಿದರು.ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಒದಗಿಸುವುದು ಮತ್ತು ಗ್ರಾಮೀಣ ಜನರಿಗೆ ಸುಸಜ್ಜಿತ ಆಸ್ಪತ್ರೆ ಸೌಲಭ್ಯ ಕಲ್ಪಿಸುವುದು ಕಾಂಗ್ರೆಸ್ ಪ್ರಣಾಳಿಕೆಯ ಮುಖ್ಯ ವಿಷಯಗಳಾಗಿವೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ಸಮುದಾಯಗಳ ಬಡವರ ಅಭಿವೃದ್ಧಿಗೆ ಅಗತ್ಯವಾದ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಹೇಳಿದರು.ಈ ಸಂದರ್ಭದಲ್ಲಿ ಜೆಡಿಎಸ್‌ನ ಕೆಲವು ಬೆಂಬಲಿಗರು ಕಾಂಗ್ರೆಸ್ ಸೇರಿದರು. ಮುಖಂಡರಾದ ಲಕ್ಷ್ಮಣರೆಡ್ಡಿ, ವೆಂಕಟರೆಡ್ಡಿ, ದಿಂಬಾಲ ನಾರಾಯಣಸ್ವಾಮಿ, ಅಯ್ಯಪ್ಪ, ದಿಂಬಾಲ ಆಶೋಕ್, ಚಂದ್ರಶೇಖರ್, ವೆಂಕಟಶಾಮಿರೆಡ್ಡಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)