ಬದಲಾವಣೆ ಸೋನಂ ನಿಯಮ

7

ಬದಲಾವಣೆ ಸೋನಂ ನಿಯಮ

Published:
Updated:

ನಾಲ್ಕು ವರ್ಷದ ಹಿಂದಿನ ದೀಪಾವಳಿ. ಹುಡುಗಿಯ ಚಿಗರೆ ಕಂಗಳಲ್ಲಿ ನಿರೀಕ್ಷೆಯ ಮತಾಪು. `ಸಾವರಿಯಾ~ ಎಂಬ ಹಿಂದಿ ಸಿನಿಮಾ ಬಂದಾಗ ದೇಶ ವಿದೇಶದಲ್ಲಿದ್ದ ಸಂಜಯ್‌ಲೀಲಾ ಬನ್ಸಾಲಿ ಅಭಿಮಾನಿಗಳೆಲ್ಲಾ ಸಣ್ಣ ಮೂಗಿನ ಆಕರ್ಷಕ ಹುಡುಗಿಯನ್ನು ಎವೆಯಿಕ್ಕದೆ ನೋಡಿದ್ದರು. ಆದರೆ, ಮತಾಪು ಹೆಚ್ಚು ಬೆಳಕು ಬೀರಲಿಲ್ಲ. ಸಿನಿಮಾ ಮಕಾಡೆಯಾಯಿತು. ಸಂಜಯ್‌ಲೀಲಾ ಬನ್ಸಾಲಿ ವೃತ್ತಿ ಬದುಕಿನಲ್ಲಿ ಮೊದಲ ಬಾರಿಗೆ ಅಷ್ಟು ದೊಡ್ಡ ಮಟ್ಟದಲ್ಲಿ ಸೋತರು. ಆದರೂ ಹುಡುಗಿ ಸೋಲಲಿಲ್ಲ.ಮುಂದಿನದ್ದು `ಡೆಲ್ಲಿ 6~. ಅಭಿಷೇಕ್ ಬಚ್ಚನ್ ನಾಯಕ. ಎ.ಆರ್.ರೆಹಮಾನ್ ಸಂಗೀತ ಗೆದ್ದಿದ್ದರಿಂದ ಮತ್ತೊಮ್ಮೆ ನಿರೀಕ್ಷೆ ಮಡುಗಟ್ಟಿತ್ತು. ಆದರೆ, ಕಂಡದ್ದು ಮತ್ತೆ ಸೋಲು. ಹಾಗಿದ್ದೂ ಹುಡುಗಿ ಎದೆಗುಂದಲಿಲ್ಲ. `ಐ ಹೇಟ್ ಲವ್ ಸ್ಟೋರೀಸ್~ ಸಿನಿಮಾ ಸಿಕ್ಕಿತು. ಚಿತ್ರವೂ ಬುರ್ನಾಸು, ನಾಯಕಿಯ ಅಭಿನಯವೂ ಡಬ್ಬಾ ಎಂದು ಅಂಕಣಕಾರ್ತಿ ಶೋಭಾ ಟೀ ಮಾಡಿದ ಟೀಕೆಯನ್ನು ಹುಡುಗಿ ಅತಿ ಗಂಭೀರವಾಗಿ ಪರಿಗಣಿಸಿದಳು. ಸಭ್ಯತೆಯ ಎಲ್ಲೆ ಮೀರಿ ಪ್ರತಿಕ್ರಿಯಿಸಿ (ಬಿಚ್ ಆಫ್ ಬಾಲಿವುಡ್ ಎನ್ನುವ ಮೂಲಕ) ಸದ್ದು ಮಾಡಿದಳು. `ಐಶಾ~ ಚಿತ್ರ ಬಿಡುಗಡೆಯಾದಾಗ. ನಾಯಕ ಅಭಯ್ ಡಿಯೋಲ್‌ಗೆ ಥ್ಯಾಂಕ್ಸ್ ಹೇಳುವ ಕನಿಷ್ಠ ಸೌಜನ್ಯವೂ ಇಲ್ಲ ಎಂದು ಟೀಕಿಸಿ ಹುಡುಗಿ ಸುದ್ದಿಯಾದಳು.ಹೀಗೆಲ್ಲಾ ಮಾಡಿದ ಹುಡುಗಿಗೆ ಯಾರಾದರೂ ತನ್ನನ್ನು ಏಕವಚನದಲ್ಲಿ ಸಂಬೋಧಿಸಿದರೆ ನಖಶಿಖಾಂತ ಸಿಟ್ಟು. ಎಲ್ಲರಂತಲ್ಲದ ಈ ಹುಡುಗಿಯೇ ಸೋನಂ ಕಪೂರ್. ಇನ್ನು ಅವರ ಕುರಿತು ಬಹುವಚನದಲ್ಲೇ ಬರೆಯುವುದು ಕ್ಷೇಮ!`ಬ್ಲಾಕ್~ ಸಿನಿಮಾ ಬಂದಾಗ ಸಂಜಯ್‌ಲೀಲಾ ಬನ್ಸಾಲಿ ಸಹಾಯಕರಲ್ಲಿ ಒಬ್ಬರಾಗಿದ್ದ ಸೋನಂ ಕ್ಯಾಮೆರಾ ಬಳಕೆ, ಲೆನ್ಸ್‌ಗಳ ಮಹತ್ವ, ನಿರ್ದೇಶನದ ಪಟ್ಟುಗಳು ಎಲ್ಲವನ್ನೂ ಗಂಭೀರ ವಿದ್ಯಾರ್ಥಿಯಂತೆ ಕಲಿಯುತ್ತಿದ್ದರು. ಯಾವುದೋ ಗೌನ್‌ನಂಥ ಬಟ್ಟೆ ತೊಡುತ್ತಿದ್ದ ಅವರ ದೇಹತೂಕ ಆಗ ಒಂದು ಕ್ವಿಂಟಾಲ್ ಮೀರಿತ್ತು. ದಿನವೂ ತಿನ್ನುತ್ತಿದ್ದ ಚಾಕೊಲೇಟ್‌ಗಳಿಗೆ ಲೆಕ್ಕವಿರಲಿಲ್ಲ. ಒಮ್ಮೆ ಮೌನಧ್ಯಾನದಲ್ಲಿದ್ದ ಸಂಜಯ್ ಲೀಲಾ ಬನ್ಸಾಲಿ, ಸೋನಂ ಮುಖವನ್ನು ಎವೆಯಿಕ್ಕದೆ ನೋಡಿದರು. ಇಷ್ಟು ಸುಂದರ ಮುಖ ಇಟ್ಟುಕೊಂಡು ನಟಿಯಾಗದೇ ಇರುವುದು ತರವಲ್ಲ ಎನ್ನಿಸಿತು. ದೇಹತೂಕ ಇಳಿಸಿಕೊಂಡರೆ ಮುಂದಿನ ಚಿತ್ರದ ನಾಯಕಿ ನೀನೇ ಎಂದು ಭರವಸೆ ಕೊಟ್ಟರು. ಸೋನಂ ದೈಹಿಕ ಕಸರತ್ತು ಶುರುವಾಯಿತು.ತಮ್ಮ ಮಗಳಿಗೆ ಗಂಡು ಹುಡುಕಲು ಮನಸ್ಸು ಮಾಡಿದ್ದ ಸುನಿತಾ ಅವರಿಗೆ ಬನ್ಸಾಲಿ ಮಾತು ಶಾಕ್ ಕೊಟ್ಟಿತ್ತು. ಕ್ವಿಂಟಾಲ್ ತೂಕದ ಮಗಳು ನಟಿಯಾಗುವುದು ಹೇಗೆ ಎಂಬ ಸಹಜವಾದ ಪ್ರಶ್ನೆ ಅವರಲ್ಲಿ ಹುಟ್ಟಿತ್ತು. `ಸಾವರಿಯಾ~ ಚಿತ್ರ ಸೆಟ್ಟೇರಿದಾಗ ಸೋನಂ ಸಪೂರವಾಗಿದ್ದ ಪರಿಯನ್ನು ನೋಡಿ ಬನ್ಸಾಲಿ ತಂಡದವರಿಗೇ ಪರಮಾಶ್ಚರ್ಯ.ಈ ದೀಪಾವಳಿ ಹೊತ್ತಿಗೆ ಸೋನಂ ಸಂಪೂರ್ಣ ಬದಲಾಗಿದ್ದರು. ನಾಲ್ಕು ವರ್ಷದ ಹಿಂದೆ ಮತಾಪು, ಹೂವಿನ ಕುಂಡ ಎನ್ನುತ್ತಿದ್ದ ಅವರು ಈಗ ದೀಪಾವಳಿ ಬಗ್ಗೆ ತಲೆಕೆಡಿಸಿಕೊಳ್ಳುವವರಲ್ಲ. ತಲೆಗೆ ಹಾಕುವ ಹೇರ್‌ಪಿನ್‌ನಿಂದ ಹಿಡಿದು ಕುತ್ತಿಗೆ ಮೇಲೆ ಯಾವ ಸರವಿರಬೇಕು ಎನ್ನುವವರೆಗೆ ಸಲಹೆ ಕೊಡಲು ಒಂದು ಡಜನ್ ಸಹಾಯಕರು ದೇಶ-ವಿದೇಶಗಳಲ್ಲಿ ಅವರಿಗೆ ಇದ್ದಾರೆ. ಕೊಳ್ಳುವ ಕಾಸ್ಮೆಟಿಕ್‌ಗಳ ಬ್ರಾಂಡ್‌ನ ದೊಡ್ಡ ಪಟ್ಟಿಯನ್ನು ಆಗಾಗ ಗಮನಿಸುವುದುಂಟು. ತುಟಿ ಮೇಲೆ ಬಂದ ಮಾತನ್ನು ಥಟ್ಟನೆ ಆಡಿಬಿಡುವ ಜಾಯಮಾನದ ಅವರಿಗೆ ಸಿನಿಮಾರಂಗದಲ್ಲಿ ಯಾವ ಗೆಳತಿಯೂ ಇಲ್ಲ. `ಸ್ಪರ್ಧಿ ಎಂದಿದ್ದರೂ ಸ್ಪರ್ಧಿಯೇ; ಗೆಳತಿ ಆಗಲು ಸಾಧ್ಯವಿಲ್ಲ~ ಎಂದು ಕಡ್ಡಿ ತುಂಡುಮಾಡುವಂತೆ ಮಾತನಾಡುವ ಸೋನಂ ಡೇಟಿಂಗ್ ನಡೆಸಿದ್ದಾರೆ ಎನ್ನಲಾದ ಅರ್ಧ ಡಜನ್ ಪುರುಷರು ನಾಚಿಕೆಯಿಂದ ಓಡಾಡಿಕೊಂಡಿದ್ದಾರೆ.ಸೋನಂ ತಾಯಿಗೆ ಈಗ ಮಗಳ ಮದುವೆಯ ಚಿಂತೆ ಇಲ್ಲ. ಯಾಕೆಂದರೆ, ಅದೀಗ ಅವರ ನಿರ್ಧಾರದ ಮೇಲೆ ನಿಂತಿಲ್ಲ. ತಂದೆ ಅನಿಲ್ ಕಪೂರ್ ಕೂಡ ಮೊದಲಿನಷ್ಟು ಸಲಹೆ ಕೊಡುವುದನ್ನು ಬಿಟ್ಟಿದ್ದಾರೆ. ಸಿನಿಮಾಗಳ ಅವಕಾಶ ಸಿಗುತ್ತಲೇ ಇದೆ. ನಿರೀಕ್ಷೆಗಳ ಪಟಾಕಿ ಠುಸ್ ಎನ್ನುತ್ತಿರುವುದೇ ಹೆಚ್ಚು.`ನಾನು ಬರೀ ನಟಿಯಲ್ಲ; ಫ್ಯಾಷನ್‌ಲೋಕದ ಸುಂದರಿಯೂ ಹೌದು~ ಎನ್ನುವ ಸೋನಂ ಶೂಟಿಂಗ್ ಸಂದರ್ಭದಲ್ಲಿ ಸಣ್ಣ ರಾಜಿಯನ್ನೂ ಮಾಡಿಕೊಳ್ಳದ ಕಾರಣಕ್ಕೂ ಸುದ್ದಿಯಾಗುತ್ತಿದ್ದಾರೆ. `ಮೌಸಮ್~ ಚಿತ್ರದ ನಿರ್ದೇಶಕ ಪಂಕಜ್ ಕಪೂರ್ ಆ ಕಾಟವನ್ನು ಅನುಭವಿಸಿ ಗಡ್ಡ ಬಿಟ್ಟಿರುವ ತಾಜಾ ಉದಾಹರಣೆ ಇದೆ.ಮೇಕಪ್ ಇಲ್ಲದೆ ತನ್ನನ್ನು ನೋಡಲು ಬರುವವರಿಗೆ ಚಹರೆಯನ್ನು ತೋರದ ಸೋನಂಗೆ ಈಗಲೂ ಬಾಲ್ಯದಿಂದ ಅಂಟಿಕೊಂಡ ಒಂದು ಗೀಳಿದೆ- ಆಗಾಗ `ಮಹಾಭಾರತ~ ಓದುವುದು. ಭಾರತದ ಯಾವ ಪಾತ್ರ ಯಾವಾಗ ಪರಕಾಯ ಪ್ರವೇಶ ಮಾಡುತ್ತದೋ ಎಂದು ಸೋನಂ ಆಪ್ತರು ಬೆನ್ನಹಿಂದೆ ಕಿಚಾಯಿಸಲು ಕೂಡ ಅವರ ವರ್ತನೆಯೇ ಕಾರಣ! 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry