ಬುಧವಾರ, ಮೇ 12, 2021
18 °C

ಬದಿಯಡ್ಕ: ಮಳೆ ನೀರಿನ ಹರಿವಿಗೆ ತಡೆ- ಜನರಿಗೆ ಸಮಸ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬದಿಯಡ್ಕ: ಮಳೆಗಾಲದ ಮೊದಲು ಸೂಕ್ತ ಚರಂಡಿ ವ್ಯವಸ್ಥೆಗಳನ್ನು ನಿರ್ಮಿಸಿಕೊಳ್ಳದ ಕಾರಣ ಪೆರ್ಲ, ಬದಿಯಡ್ಕ, ಮುಳ್ಳೇರಿಯಾಗಳಲ್ಲಿ ಬಹುತೇಕವಾಗಿ ಮಳೆ ನೀರು ರಸ್ತೆಯ ಮೇಲೆಯೇ ಹರಿಯುತ್ತದೆ. ಇದರಿಂದ ಪಾದಚಾರಿಗಳು, ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ಪ್ರಯಾಣಿಕರಿಗೆ ನಿತ್ಯವೂ ಕೆಸರಿನ ಸಿಂಚನ ಉಂಟಾಗುತ್ತದೆ. ನಗರಗಳು ಬೆಳೆದಂತೆ ವ್ಯವಸ್ಥೆಗಳು ಬೆಳೆಯದಿರುವುದರಿಂದ ಜನ ಸಾಮಾನ್ಯನಿಗೆ ರಸ್ತೆ ಬದಿಯಲ್ಲಿ ಸಂಚರಿಸುವುದಕ್ಕೂ ಕಷ್ಟವಾಗಿದೆ.ಪೆರ್ಲದಲ್ಲಿ ಮಳೆ ಬಂದಾಗ ವಿಟ್ಲ ಕಡೆಗೆ ಪ್ರವಾಹೋಪಾದಿಯಾಗಿ ಹರಿಯುವ ಮಳೆನೀರಿಗೆ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲ. ಇರುವ ಚರಂಡಿ ಅವೈಜ್ಞಾನಿಕ ರೀತಿಯಲ್ಲಿ ನಿರ್ಮಾಣಗೊಂಡಿದ್ದು, ಕಸಕಡ್ಡಿಗಳು ತುಂಬಿಹೋಗಿದೆ. ಹೂಳೆತ್ತುವ ಕಾರ್ಯ ನಡೆದಿಲ್ಲ. ಪೆರ್ಲ ಪೇಟೆಯ ಮಳೆನೀರು ಬಜಕೂಡ್ಲು ರಸ್ತೆಯ ಬದಿಯಲ್ಲಿ ಒಟ್ಟು ಸೇರಿ ಕೃತಕ ನೆರೆ ಉಂಟಾಗುತ್ತದೆ. ಇದರಿಂದಾಗಿ ವಾಹನಗಳು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ. ಈ ಮಳೆ ನೀರಿನಲ್ಲಿ ತ್ಯಾಜ್ಯಗಳೂ ಸೇರಿರುವುದರಿಂದ ಪರಿಸರವೇ ದುರ್ಗಂಧದಿಂದ ಕೂಡಿದೆ. ಇದೇ ನೀರು ಖಾಸಗೀ ಬಾವಿ ಹಾಗೂ ಕೆರೆಗಳನ್ನು ಸೇರುವುದರಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಯೂ ಇದೆ ಎಂದು ನಾಗರಿಕರು ಆತಂಕ ವ್ಯಕ್ತ ಪಡಿಸುತ್ತಾರೆ.ಬದಿಯಡ್ಕದಲ್ಲೂ ಕೂಡಾ ಇದೇ ಸ್ಥಿತಿಯದೆ. ಮೇಲಿನಪೇಟೆಯಿಂದ ಹರಿದ ನೀರು ವೃತ್ತದ ಬಳಿ ಶೇಖರಣೆಯಾಗಿ ಈ ಪ್ರದೇಶ ಸಾಗರದಂತೆ ಗೋಚರವಾಗುತ್ತದೆ. ಮುಳ್ಳೇರಿಯದ ಗಾಡಿಗುಡ್ಡೆ ರಸ್ತೆಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆಯೇ ಇಲ್ಲ. ಇಲ್ಲಿ ರಸ್ತೆಯ ಮೇಲೆಯೇ ಮಳೆನೀರು ಹರಿಯುತ್ತದೆ. ಇದೇ ರಸ್ತೆಯಲ್ಲಿ ಶಾಲೆ, ಪಶು ಆಸ್ಪತ್ರೆ, ನರ್ಸಿಂಗ್ ಹೋಂ, ವಿದ್ಯುತ್ ಇಲಾಖಾ ಕಚೇರಿ, ಪೆಟ್ರೋಲ್ ಬಂಕ್, ವಿವಿಧ ಸರ್ಕಾರಿ ಕಚೇರಿಗಳು ಇರುವುದರಿಂದ ಈ ರಸ್ತೆ ಸದಾ ಜನನಿಬಿಡವಾಗಿರುತ್ತದೆ. ಈ ರಸ್ತೆಯಲ್ಲಿ ಬೇಕಾಬಿಟ್ಟಿಯಾಗಿ ವಾಹನಗಳು ನಿಲ್ಲುವುದರಿಂದ ಸಂಚಾರವೂ ತಡೆಯಲ್ಪಡುತ್ತದೆ. ವಾಹನಗಳ ಸಂಚಾರದಿಂದಾಗಿ ರಾಚುವ ಮಳೆಯ ನೀರಿನಿಂದ ಸಾರ್ವಜನಿಕರು ತೊಂದರೆಗೊಳಗಾಗಿದ್ದಾರೆ.ದುರಸ್ತಿಗೆ ಅವಕಾಶ: ಕಳೆದ ಕೆಲವು ದಿನಗಳಿಂದ ಮಳೆಯ ಬಿರುಸು ತಗ್ಗಿರುವುದರಿಂದ ಇದೀಗ ಚರಂಡಿಗಳ ಅವ್ಯವಸ್ಥೆ ಸರಿಪಡಿಸಲು ಸೂಕ್ತ ಸಮಯವಾಗಿದೆ. ಸಾರ್ವಜನಿಕ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಮಳೆ ನೀರು ಚರಂಡಿಗಳಲ್ಲಿ ಸಾಗಲು ಸೂಕ್ತ ಪರಿಹಾರ ಕಾರ್ಯಗಳನ್ನು ಕೂಡಲೇ ಸ್ಥಳೀಯಾಡಳಿತ ಸಂಸ್ಥೆಗಳು ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.