ಶುಕ್ರವಾರ, ಜನವರಿ 24, 2020
28 °C

ಬದುಕಲು ಬಿಡಿ ಪ್ಲೀಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ನಾನು ಅಕೈ ಪದ್ಮಶಾಲಿ. ನನಗೆ ಎಂಟು ವರ್ಷವಾದಾಗ ನನ್ನ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳ ಅರಿವಾಯಿತು. ಗಂಡಿನ ದೇಹದೊಳಗೆ ಬಂಧಿಯಾಗಿರುವ ಹೆಣ್ಣು ನಾನು. ಆದರೆ ಇದನ್ನು ಯಾರ ಬಳಿಯೂ ಹೇಳಿಕೊಳ್ಳಲಾಗದ ಸ್ಥಿತಿ. ಜಗತ್ತು ನನ್ನನ್ನು ನೋಡುವ ದೃಷ್ಟಿ ಬೇರೆ. ಗಂಡಸಾಗಿ ಹುಟ್ಟಿ ಹೆಂಗಸಾದದ್ದು ತಪ್ಪು ಎಂಬುವುದು ಅವರ ವಾದ. ದಾರಿಯಲ್ಲಿ ಹೋಗುವಾಗ ಮಕ್ಕಳಿಂದ ಹಿಡಿದು ಮುದುಕರವರೆಗೂ ವಿಚಿತ್ರವಾಗಿ ನೋಡುತ್ತಾರೆ~.ಆಕೆ ಈಗ ಅಕೈ ಪದ್ಮಶಾಲಿ. ಮೊದಲು ಜಗದೀಶ್. ಬೆಂಗಳೂರು ಮೂಲದ ಇವರು ಸದ್ಯ ಅಶ್ವಥ್ ನಗರದಲ್ಲಿರುವ `ಸಂಗಮ~ ಸಂಸ್ಥೆಯಲ್ಲಿ ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟರು.ಇದು ಕೇವಲ ಅವರ ಸಮಸ್ಯೆಯಲ್ಲ, ಇಡಿಯ ಸಮುದಾಯವನ್ನೇ ಪ್ರತಿನಿಧಿಸುವಂತೆ ಮಾತನಾಡುತ್ತಿದ್ದರು ಪದ್ಮಶಾಲಿ.`ನಮಗೂ ಭಾವನೆಗಳಿವೆ. ಯಾರಾದರೂ ಹೊಡೆದರೆ, ಬೈದರೆ, ನೋವಾಗುತ್ತೆ. ಯಾರಾದರೂ ಪ್ರೀತಿಸಬೇಕು, ಅವರ ಜೊತೆ ಸದಾ ಇರಬೇಕು ಎಂದು ನನಗೂ ಅನಿಸುತ್ತೆ. ಆದರೆ ಯಾಕೆ ಈ ಸಮಾಜ ನಮ್ಮನ್ನ ಒಪ್ಪುತ್ತಿಲ್ಲ? ಬೀದಿಬೀದಿಯಲ್ಲಿ ಭಿಕ್ಷೆ ಎತ್ತಿ, ಸೆಕ್ಸ್ ವರ್ಕ್‌ರ್ ಆಗಿ, ಬದುಕೋಕೆ ಯಾರಿಗೂ ಇಷ್ಟ ಇಲ್ಲ. ಆದರೆ ನನ್ನಂತವರಿಗೆ ನೀವು ಉದ್ಯೋಗ ಕೊಡ್ತಿರಾ ಹೇಳಿ...? ನಿಮ್ಮ ಮನೆಯಲ್ಲಿ ಮಗು ಹುಟ್ಟಿದಾಗ ಹರಸಲು ಬೇಕು, ಶುಭ ಶಕುನ ಅಂತೀರಿ ಆದರೆ ನಮಗೆ ಒಂದು ಕೆಲಸ  ನೀಡಲು ಹಿಂದೆ  ಮುಂದೆ ನೋಡುತ್ತೀರಿ.~ ಹೀಗೆ ಪ್ರಶ್ನಿಸುತ್ತಲೇ ಎಲ್ಲರನ್ನು ಜರೆಯುತ್ತಿದ್ದರು ಅವರು.

 

 ಸಂಗಮ ಸಂಸ್ಥೆ
ಈಸಂಸ್ಥೆಯನ್ನು 1999ರಲ್ಲಿ ಯಲವರ್ತಿ ಮನೋಹರ್ ಅವರು ಹುಟ್ಟು ಹಾಕಿದರು. ಇಲ್ಲಿ ಎಲ್ಲರಿಂದ ಕಡೆಗಣಿಸಲ್ಪಟ್ಟವರು ಇದ್ದಾರೆ. ಅಶ್ವಥ್ ನಗರದಲ್ಲಿರುವ ಈ ಸಂಸ್ಥೆ ನೊಂದ ಜೀವಕ್ಕೆ ಆಸರೆಯಾಗುವುದಲ್ಲದೇ ಅವರಲ್ಲಿ ಭರವಸೆಯ ಬೆಳಕು ಬೀರುವ ಕೆಲಸ ಮಾಡುತ್ತಿದೆ.

`ಸಾರ್ವಜನಿಕ ಶೌಚಾಲಯದಲ್ಲಿ ನಮಗೆ ಯಾಕೆ ಪ್ರವೇಶವಿಲ್ಲ? ಗಂಡಸರ ಶೌಚಾಲಯಕ್ಕೆ ಹೋದರೆ ಓಡಸ್ತೀರಿ, ಹೆಂಗಸರ ಶೌಚಾಲಯಕ್ಕೆ ಬಂದ್ರೂ ಅಸಹ್ಯವಾಗಿ ನೋಡ್ತಿರಿ ನಾವು ಅಷ್ಟು ಕೀಳೇ...?  ಈ ಬದುಕನ್ನು ನಾವಾಗಿಯೇ ಬಯಸಿ ಪಡೆದಿದ್ದಲ್ಲ. ಮೂತ್ರ ಕಟ್ಟಿಕೊಂಡರೆ ನಮಗೂ ತೊಂದರೆಯಾಗುತ್ತದೆ ಅರ್ಥಮಾಡಿಕೊಳ್ಳಿ ಪ್ಲೀಸ್...~ ಎಂದು ಕಂಬನಿಗೂಡಿದ ಕಣ್ಣಿನೊಂದಿಗೆ ಒಂದೇ ಉಸಿರಿನಲ್ಲಿ ಅವಲತ್ತುಕೊಂಡಿದ್ದರು.

 

 ಇವರ ಶಾಪ ತಟ್ಟುತ್ತದೆಯೇ?
ರಾಮಾಯಣದಲ್ಲಿ ರಾಮ 14 ವರ್ಷ ವನವಾಸಕ್ಕೆ ಹೊರಟಾಗ ಅವನ ಪ್ರಜೆಗಳು ವಿದಾಯ ಹೇಳೋಕೆ ಬಂದರಂತೆ. ಅವರಲ್ಲಿ ಗಂಡಸರು, ಹೆಂಗಸರು ಇಬ್ಬರೂ ಇದ್ದರು. ಕಾಡಿನ ಅಂಚಿನವರೆಗೆ ಹೋದ ಅವರು ರಾಮನ ಜೊತೆ ವನವಾಸಕ್ಕೂ ಹೋಗಲು ತಯಾರಾಗಿದ್ದರಂತೆ. ಆದರೆ ರಾಮ `ಗಂಡಸರೇ, ಹೆಂಗಸರೇ, ಮಕ್ಕಳೇ, ನೀವೆಲ್ಲ ನಿಮ್ಮ ನಿಮ್ಮ ಮನೆಗಳಿಗೆ ಹೋಗಿ ನಾನು 14 ವರ್ಷ ವನವಾಸ ಮುಗಿಸಿ ಬಂದು ರಾಜ್ಯಭಾರ ಮಾಡ್ತೀನಿ~ ಎಂದು ಹೇಳಿದಾಗ ಅವರೆಲ್ಲರೂ ಹೊರಟುಹೋದರಂತೆ. ಆದರೆ ಒಂದು ಗುಂಪಿನ ಜನ ಮಾತ್ರ ಅಲ್ಲೇ ಉಳಿದು ರಾಮ ಬರುವವರೆಗೂ ಕಾದರಂತೆ. ವನವಾಸ ಮುಗಿಸಿ ಬಂದ ರಾಮನಿಗೆ ಆಶ್ಚರ್ಯವಾಗಿ `ಯಾರು ನೀವು? ನಿಮ್ಮ ಮನೆಗಳಿಗೆ ನೀವೇಕೆ ಹಿಂತಿರುಗಲಿಲ್ಲ?~ ಅಂತ ಕೇಳಿದಾಗ, ಆಗವರು `ಸ್ವಾಮಿ ನೀವು ಗಂಡಸರು, ಹೆಂಗಸರು, ಮಕ್ಕಳು ಹಿಂತಿರುಗಬೇಕು ಎಂದು ಹೇಳಿದ್ರೆ ಹೊರತು ನಮಗಲ್ಲ. ನಾವು ಹೆಣ್ಣುಕುಲಕ್ಕೋ ಸೇರಿದವರಲ್ಲ, ಗಂಡುಕುಲಕ್ಕೂ ಸೇರಿದವರಲ್ಲ. ನಿಮ್ಮ  ಆಶಯದಂತೆ ಇಲ್ಲೇ ಉಳಿದವು~ ಎಂದು ಹೇಳಿದಾಗ ಅವರ ನಿಷ್ಠೆಗೆ ಮನಸೋತ ರಾಮ `ನೀವಾಡುವ ಮಾತೆಲ್ಲ ನಿಜವಾಗಲಿ~ ಎಂದು ವರ ನೀಡಿದನಂತೆ. ಇದು ಪೌರಾಣಿಕ ಹಿನ್ನೆಲೆ. ಇನ್ನು ಇವರ ಬಗೆಗಿನ ಭಯ, ಭಕ್ತಿ ಪ್ರೀತಿ ಎಲ್ಲವೂ ಅವರವರ ನಂಬಿಕೆಗೆ ಬಿಟ್ಟಿದ್ದು.`ನನ್ನ ಬಾಲ್ಯದ ಕರಾಳ ದಿನಗಳನ್ನು ನೆನಪು ಮಾಡಿಕೊಳ್ಳುವುದಕ್ಕೂ ಇಷ್ಟವಿಲ್ಲ. ಮನೆಯಲ್ಲಿ ಮದುವೆಗೆ ಬಲವಂತ ಮಾಡುತ್ತಿದ್ದರು. ಬೇಸತ್ತು ಆತ್ಮಹತ್ಯೆಯ ಪ್ರಯತ್ನವನ್ನೂ ಮಾಡಿದ್ದೆ. ಆದರೆ ನನ್ನ ತಮ್ಮನ ಬೆಂಬಲ ಬದುಕಿನಲ್ಲಿ ಹೊಸ ಚಿಗುರು ಮೂಡಿಸಿತು~ ಎಂದು ಸಹೋದರ ಬೆಂಬಲವನ್ನು ಸ್ಮರಿಸುತ್ತಾರೆ.`ಆದರೆ ಬಯಸದ ಬದುಕನ್ನು ನಾಲ್ಕು ವರ್ಷ ಲೈಂಗಿಕ  ಕಾರ್ಮಿಕಳಾಗಿ ಬದುಕಿದೆ. ಕೊನೆಗೆ `ಸಂಗಮ~ ಸಂಸ್ಥೆಗೆ ಬಂದು ಸೇರಿದೆ. ಈಗ ಇದರ ಕಾರ್ಯ ಸಂಯೋಜಕಿಯಾಗಿದ್ದೇನೆ~ ಎಂದಾಗ ಬದುಕಿನ ಒಂದು ಮಜಲು ದಾಟಿದಂತೆ ನಿರಾಳವಾಗಿದ್ದರು.`ನಾನು ವೀಣಾ. ದಲಿತ ಕುಟುಂಬದಲ್ಲಿ  ಹುಟ್ಟಿದ್ದು. ನಾನು `ಎಮ್ ಟು ಎಫ್~. ಅಂದರೆ ಗಂಡಾಗಿ ಹುಟ್ಟಿ ಹೆಂಗಸಿನ ಭಾವನೆ ತುಂಬಿಸಿಕೊಂಡವಳು. ಅಕ್ಕಪಕ್ಕದ ಮನೆಯವರು ನನ್ನಿಂದ ಎಲ್ಲಾ ಕೆಲಸವನ್ನು ಮಾಡಿಸಿಕೊಳ್ಳುತ್ತಿದ್ದರು. ನನ್ನ ನೋವು  ಮಾತ್ರ ಯಾರಿಗೂ ಅರ್ಥವಾಗುತ್ತಿರಲಿಲ್ಲ. ಕೊನೆಗೂ ಮನೆಯಲ್ಲಿ ನನ್ನ ಬಗ್ಗೆ ತಿಳಿಯಿತು. ಆದರೆ ಹೆತ್ತವ್ವನೇ ಮನೆಯಿಂದ ಹೊರ ಹಾಕಿದರು. 18ನೇ ವರ್ಷಕ್ಕೆ ಹಿಜ್ರಾ ಸಮುದಾಯಕ್ಕೆ ಸೇರಿಕೊಂಡೆ.ಸ್ವಂತ ಹಣದಿಂದ ಲಿಂಗಪರಿವರ್ತನೆ ಮಾಡಿಸಿಕೊಂಡೆ. ಆದರೆ ಮುಂದೇನು ಎಂಬ ಪ್ರಶ್ನೆ ಆಗಾಗ ಎದುರಾಗುತ್ತಿತ್ತು. ನನ್ನ ಮುಂದೆ ಇದ್ದಿದ್ದು ಎರಡೇ ಆಯ್ಕೆ. ಒಂದು ಭಿಕ್ಷಾಟನೆ, ಇಲ್ಲವೆ ಸೆಕ್ಸ್ ವರ್ಕ್‌ರ್ ಆಗುವುದು. ಹಸಿವಿನ ಎದುರು ಸೆಣಸಲು ಸಾಧ್ಯವಿರಲಿಲ್ಲ ...ಕೊನೆಗೆ 1999ರಿಂದ 2005ರವರೆಗೆ ಲೈಂಗಿಕ ಕಾರ್ಯಕರ್ತಳಾಗಿ ದುಡಿದೆ. ನವೆದೆ, ಸವೆದೆ. ಯಾರೊಂದಿಗಾದರೂ ಹೋಗುವಾಗ `ನಾನೂ ಹೆಣ್ಣು~ ಎಂಬ ಭಾವನೆ ಖುಷಿ ಕೊಡುತ್ತಿತ್ತು. ಈಗ ಮನೆಯವರು ನನ್ನನ್ನು ಸ್ವೀಕರಿಸಿದ್ದಾರೆ.`ಸಂಗಮ~ ಸಂಸ್ಥೆಯಲ್ಲಿ ಈಗ ನಾನು ಕಮ್ಯೂನಿಟಿ ಮೊಬಿಲೈಸರ್ ಆಗಿದ್ದೇನೆ. ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.ಸಿಗ್ನಲ್‌ನ ಕೆಂಪುದೀಪ ಅಥವಾ ಕೆಂಪು ದೀಪದ ಅಡಿಯೇ ಇವರ ಬದುಕು ನಿಂತಿರುವುದು ಅನಿವಾರ್ಯ. ಭಿಕ್ಷಾಟನೆ ನಿಯಂತ್ರಿಸಲು ಪೊಲೀಸರು ಕ್ರಮ ಕೈಗೊಂಡರು. ಆದರೆ ಅದಕ್ಕೆ ಪರ್ಯಾಯವಾಗಿ ವ್ಯಭಿಚಾರವನ್ನು ಸೃಷ್ಟಿಸಿದರೆ? ಇವರ ಪುನರ್ವಸತಿಗೆ ಏನು ಕ್ರಮಗಳಿವೆ? ಅವು ಇವರಿಗೆ ತಲುಪಿವೆಯೇ?ಹಿಜ್ರಾ, ಮಂಗಳಮುಖಿ, ಶಿಖಂಡಿ ಹೀಗೆ ವಿವಿಧ ಹೆಸರುಗಳಿಂದ ಕರೆಯುತ್ತೇವೆ. ಒಮ್ಮೆ ತೆರೆದ ಕಣ್ಣಿನಿಂದ ಅವರ ಜೀವನವನ್ನು ನೋಡಿದರೆ ಮಾತ್ರ ಅಲ್ಲಿರುವ ನೋವು ನಮಗೆ ಅರ್ಥವಾಗುತ್ತದೆ. ಇವರಲ್ಲಿಯೂ ಅನೇಕ ಸಮುದಾಯಗಳಿವೆ. ಇವರದ್ದೇ ಸಂಪ್ರದಾಯಗಳಿವೆ. ಗಂಡಾಗಿ ಹುಟ್ಟಿ ಹೆಂಗಸಿನ ಭಾವನೆ ಹೊಂದಿರುವವರನ್ನು ಎಮ್ ಟು ಎಫ್ ಎಂದು ಕರೆಯುತ್ತಾರೆ.ಎಫ್ ಟು ಎಮ್  ಹೆಣ್ಣಾಗಿ ಹುಟ್ಟಿ ಗಂಡಸಿನ ಭಾವನೆ ಹೊಂದಿದವರು. ಇನ್ನೊಂದು ಕೋಥಿ ಎಂಬ ಸಮುದಾಯವಿದೆ. ಇವರು ಹೆಚ್ಚಾಗಿ ಗಂಡಸರ ಉಡುಗೆ ಇಷ್ಟಪಡುತ್ತಾರೆ. ಪುರುಷರ ಉಡುಗೆಯಲ್ಲಿಯೇ ಇರುತ್ತಾರೆ. ಆದರೆ ಇವರು ಹೆಂಗಸರ ಭಾವನೆ ಹೊಂದಿರುತ್ತಾರೆ.ಜೋಗಪ್ಪ ಎಂಬ ಸಮುದಾಯ ಅವರದೇ ರೀತಿಯ ಸಂಸ್ಕೃತಿ ಹೊಂದಿದೆ. ಇವರು ಉತ್ತರ ಕರ್ನಾಟಕದವರು. ತಲೆ ಮೇಲೆ ಯಲ್ಲಮ್ಮನನ್ನು ಹೊತ್ತು ತಿರುಗುತ್ತಾರೆ. ಸಾಂಸ್ಕೃತಿಕವಾಗಿ, ಪಾರಂಪರಿಕವಾಗಿ ಸಮಾಜ ಇವರನ್ನು ಒಪ್ಪಿಕೊಂಡಿದೆ.ಚಪ್ಪಾಳೆ ಹಿನ್ನೆಲೆ

ಇವರು ಹೊಡೆಯುವ ಚಪ್ಪಾಳೆಯ ವೈಖರಿಯೇ ವಿಶಿಷ್ಟವಾದದ್ದು. ಇವರಲ್ಲಿ ಎಲ್ಲರೂ ಚಪ್ಪಾಳೆ ಹೊಡೆಯುವುದಿಲ್ಲ, ಎಲ್ಲರಿಗೂ ಹಾಗೇ ಹೊಡೆಯುವುದಕ್ಕೆ ಬರುವುದೂ ಇಲ್ಲ. ಮುಖ್ಯವಾಗಿ ಅವರು ತಮ್ಮ ನೋವು ನಲಿವನ್ನು ವ್ಯಕ್ತಪಡಿಸುವಾಗ, ಅಳಬೇಕು ಅನಿಸಿದಾಗ, ಇಲ್ಲ ಕೆಲವೊಮ್ಮೆ ಜಗಳ ಮಾಡುವಾಗ ಚಪ್ಪಾಳೆ ಹೊಡೆಯುತ್ತಾರೆ ಅಷ್ಟೇ.ಸರ್ಕಾರದ ಯಾವುದೇ ಯೋಜನೆಗಳು ನಮಗೆ ದೊರಕುತ್ತಿಲ್ಲ. ಎಲ್ಲಿಯೂ ಉದ್ಯೋಗವಿಲ್ಲ. ನಮಗೂ ಕನಸಿದೆ, ಆಸೆ ಆಂಕಾಂಕ್ಷೆಗಳಿವೆ. ಅನುಕಂಪ, ಕರುಣೆ ಬೇಡ. ಸ್ವಾಭಿಮಾನದಿಂದ ಬದುಕಲು ಬಿಡಿ. ಸಮಾನತೆ ಬೇಕು, ಸಮಾಜದ ಒಪ್ಪಿಗೆ ಬೇಕು ಎಂಬ ಕೂಗು ಅವರದು. ಕೇಳಿಸುತ್ತಿದೆಯೇ? 

ಪ್ರತಿಕ್ರಿಯಿಸಿ (+)