ಬದುಕಿಗಾಗದ ಬಿಳಿ ಬಂಗಾರ

7

ಬದುಕಿಗಾಗದ ಬಿಳಿ ಬಂಗಾರ

Published:
Updated:

ರೋಣ: ವಾಣಿಜ್ಯ ಬೆಳೆಗಳಲ್ಲಿ ಬಿಳಿ ಬಂಗಾರ ಎಂದೇ ಹೆಸರಾದ ಹತ್ತಿ ಬೆಳೆಯು ಪ್ರಸ್ತುತ ಹಿಂಗಾರು ಹಂಗಾಮಿನಲ್ಲಿ ರೈತರ ಪಾಲಿಗೆ ಲಾಭವನ್ನು ತರದ ಬೆಳೆಯಾಗಿ ಪರಿಣಮಿಸಿದೆ.ರೈತಾಪಿ ವರ್ಗದ ಮುಖದಲ್ಲಿನ ಮುಂದಹಾಸವನ್ನು ಮಾಯ ಮಾಡಿದ್ದು ಅಲ್ಲದೆ ರೈತರಲ್ಲಿ ಚಿಂತೆ ಹೆಚ್ಚಿಸಿದೆ. ತಾಲ್ಲೂಕಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಜಯಧರ ಹತ್ತಿ ಬೆಳೆಯಲಾಗುತ್ತಿದ್ದು ಪ್ರಸ್ತುತ ಹಿಂಗಾರು ಹಂಗಾಮಿನಲ್ಲಿ ಬೆಳೆಯ ಲಾಗಿದ್ದ ಜಯಧರ ಹತ್ತಿಯು ಹವಾಮಾನದ ವೈಪರೀತ್ಯದಿಂದ ಗಿಡಗಳಲ್ಲಿ ಹೂವು, ಕಾಯಿಗಳು ಇಲ್ಲದೆ ಇಳುವರಿ ಸಂಪೂರ್ಣ ಕುಂಠಿತವಾಗಿದೆ. ಪ್ರತಿ ವರ್ಷ ಎಕರೆಗೆ 4ರಿಂದ 5 ಕ್ವಿಂಟಲ್ ಹತ್ತಿಯನ್ನು ಒಣ ಬೇಸಾಯ ಮತ್ತು ನೀರಾವರಿ ಭೂಮಿಯಲ್ಲಿ ಬೆಳೆಯಲಾಗುತ್ತಿದ್ದು ಈ ವರ್ಷ ಪ್ರತಿ ಎಕರೆಗೆ ಒಂದು ಕ್ವಿಂಟಲ್ ಬೆಳೆ ಸಹ ಬಾರದ ಸ್ಥಿತಿ ನಿರ್ಮಾಣವಾಗಿದೆ.ಕಳೆದ ವರ್ಷದ ಅಂತ್ಯದ ಅವಧಿಯಲ್ಲಿ ಉಂಟಾದ ಜಲ್ ಚಂಡಮಾರುತದ ಪ್ರಭಾವದಿಂದ ಅಕಾಲಿಕವಾಗಿ ಸುರಿದ ಮಳೆಯಿಂದ ಹತ್ತಿ ಗಿಡಗಳು ತಂಪಿಗೆ ಸಿಲುಕಿ ನಿರೀಕ್ಷಿತ ಪ್ರಮಾಣದಲ್ಲಿ ಭೂಮಿ ಯಿಂದ ಮೇಲೆ ಏಳದೆ ಸಣ್ಣ ಸಸ್ಯಗಳ ಹಂತದಲ್ಲಿಯೇ ಉಳಿದವು. ಜನವರಿ ತಿಂಗಳ ಅಂತ್ಯದ ವೇಳೆಗೆ ಭೂಮಿ ಬಿಟ್ಟು ಮೇಲೆ ಏಳಲು ಆರಂಭಿಸಿದವು. ಹೀಗಾಗಿ ನಿಗದಿತ ಅವಧಿಗೆ ಅನುಗುಣವಾಗಿ ಹೂವು, ಕಾಯಿಗಳಾಗುವ ಹಂತವನ್ನು ತಲುಪದೆ ಬೆಳೆ ಹಿಂದೆ ಬಿದ್ದವು. ಶಿವರಾತ್ರಿ ವೇಳೆಗೆ ಹತ್ತಿ ಸಸ್ಯಗಳು ಹತ್ತಿ ತೊಳೆಗಳನ್ನು ಹೊಂದಿರುವ ಸನ್ನಿವೇಶ ಕಂಡು ಬರುತ್ತಿತ್ತು.ಆದರೆ ಈ ಹಂಗಾಮಿನಲ್ಲಿ ಹತ್ತಿ ಗಿಡಗಳು ಕೆಲವು ಕಡೆಗೆ ಹೂ ಕಾಯಿ, ಹಂತದಲ್ಲಿದ್ದರೆ ಕೆಲವೆಡೆ ಸಂಪೂರ್ಣ ಬರಡಾದ ಗಿಡಗಳು ಬೆಳೆದು ನಿಂತಿವೆ. ರೋಣ ತಾಲ್ಲೂಕಿನ ಅಬ್ಬಿಗೇರಿ, ಬೆಳವಣಕಿ, ಮಲ್ಲಾಪೂರ, ಹುಲ್ಲೂರ, ನಿಡಗುಂದಿ, ಕೊತಬಾಳ, ಸೂಡಿ ಮುಂತಾದ ಹಳ್ಳಿಗಳಲ್ಲಿ ರೈತರು ಸಾವಿರಾರು ಹೆಕ್ಟೇರ್ ಭೂಮಿಯಲ್ಲಿ ಪ್ರತಿ ಎಕರೆಗೆ 10ರಿಂದ 12 ಸಾವಿರ ರೂ. ವೆಚ್ಚ ಮಾಡಿ ಜಯಧರ ಮತ್ತು ಬಿಟಿ ಹತ್ತಿ ಬೀಜವನ್ನು ಬಿತ್ತನೆ ಮಾಡಿದ್ದು ಬೆಳೆಯಲ್ಲಿ ಉಂಟಾದ ಕುಸಿತದಿಂದಾಗಿ ಮಾರುಕಟ್ಟೆಯಲ್ಲಿ ಹತ್ತಿ ಬೆಲೆಯು ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿದ್ದು ಅದನ್ನು ಅನುಭವಿಸುವ ಸ್ಥಿತಿ ಮಾತ್ರ ರೈತರಿಗಿಲ್ಲ.ತಾಲ್ಲೂಕಿನಲ್ಲಿ ಸುರಿದ ಅಕಾಲಿಕ ಮಳೆ ರೈತರನ್ನು ಹಿಂಡಿ ಹಿಪ್ಪೆ ಮಾಡಿದೆ. ಇದರಿಂದ ಕೃಷಿಕರು ಅತಂತ್ರ ಸ್ಥಿತಿಯನ್ನು ತಲುಪಿದ್ದು ಹತ್ತಿ ಬೆಳೆಯಲು ಕೈಕೊಂಡ ಖರ್ಚು ಸಹ ಗಿಟ್ಟದಂತಹ ಸ್ಥಿತಿ ತಲುಪಿದ್ದಾರೆ ರೈತರ ಪಾಲಿಗೆ ಕೃಷಿ ಲಾಭ ತರುವ ವಿದ್ಯೆ ಎಂಬುದು ಕನಸಿನ ಮಾತಾಗಿ ಪರಿಣಮಿಸಿದೆ.ಜಾಗತಿಕವಾಗಿ ಹತ್ತಿ ಬೆಳೆ ಇಳುವರಿ ಕನಿಷ್ಠ ಮಟ್ಟಕ್ಕೆ ಕುಸಿದಿರುವ ಹಿನ್ನೆಲೆ ಯಲ್ಲಿ ಭಾರತದಲ್ಲಿ ಬೆಳೆಯಲಾಗುವ ಹತ್ತಿಗೆ ವ್ಯಾಪಕ ಬೇಡಿಕೆ ಉಂಟಾಗಿದ್ದು ಜಿನ್ನಿಂಗ್ ಪ್ರೆಸಿಂಗ್ ಮಿಲ್‌ಗಳಿಂದ ನೂಲಿನ ಗಿರಣಿಗಳಿಂದ ಹತ್ತಿ ಅರಳಿಗೆ ಕಚ್ಚಾ ಹತ್ತಿಗೆ ಬೇಡಿಕೆ ಹೆಚ್ಚುತ್ತಾ ಹೊರಟಿದ್ದು ಬೆಲೆ ಕೂಡ ಕನಿಷ್ಠ 4 ಸಾವಿರ ರೂ.ಗಳಿಂದ ಗರಿಷ್ಠ 9 ಸಾವಿರ ರೂ.ಗಳವರೆಗೆ ತಲುಪಿದೆ.ಇಳುವರಿ ಕುಸಿತದಿಂದ ರೈತರು ಹತ್ತಿ ಬೆಳೆಯಲು ಮಾಡಿದ ಖರ್ಚು ಸಹ ದೊರಕದ ಹಂತವನ್ನು ತಲುಪಿದ್ದಾರೆ. ಒಟ್ಟಾರೆ ಅಕಾಲಿಕವಾಗಿ ಸುರಿದ ಮಳೆಯು ಹತ್ತಿ ಬೆಳೆ ಹಾಗೂ ಇಳುವರಿ ಮೇಲೆ ಗಂಭೀರ ಪರಿಣಾಮ ವನ್ನು ಉಂಟುಮಾಡಿದ್ದು ರೈತರ ಮುಖದಲ್ಲಿನ ನಗುವನ್ನೇ ಕಸಿದು ಹಾಕಿ ಅವರನ್ನು ಇನ್ನಷ್ಟು ಚಿಂತಾಕ್ರಾಂತ ರಾಗುವಂತೆ ಮಾಡಿದೆ.

ಬಸವರಾಜ ಪಟ್ಟಣಶೆಟ್ಟಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry