ಬದುಕಿಗೆ ಭದ್ರತೆ, ನೆಮ್ಮದಿ: ಸರ್ಕಾರದ ಆಶಯ

7

ಬದುಕಿಗೆ ಭದ್ರತೆ, ನೆಮ್ಮದಿ: ಸರ್ಕಾರದ ಆಶಯ

Published:
Updated:
ಬದುಕಿಗೆ ಭದ್ರತೆ, ನೆಮ್ಮದಿ: ಸರ್ಕಾರದ ಆಶಯ

ಬೆಂಗಳೂರು: ಆಹಾರ, ಆರೋಗ್ಯ, ಶಿಕ್ಷಣ, ವಸತಿ ಸೌಕರ್ಯ ಮತ್ತು ಸಾಮಾಜಿಕ ನ್ಯಾಯವನ್ನು ರಾಜ್ಯದ ಜನತೆಗೆ ಹಕ್ಕಿನ ನೆಲೆಯಲ್ಲಿ ಒದಗಿಸುವ ಮೂಲಕ ಅವರ ಬದುಕಿನಲ್ಲಿ ಭದ್ರತೆ ಮತ್ತು ನೆಮ್ಮದಿ ತರುವುದು ಸರ್ಕಾರದ ಆಶಯ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಘೋಷಿಸಿದರು.ಇಲ್ಲಿನ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಸೋಮವಾರ ಆಚರಿಸಲಾದ 65ನೇ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನಡೆಸಿ, ಸಶಸ್ತ್ರ ಪಡೆಗಳ ಕವಾಯತು ವೀಕ್ಷಿಸಿದ ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾಡಿದರು. ಇದು  ಮುಖ್ಯಮಂತ್ರಿಯಾಗಿ ಗೌಡರ ಮೊದಲ ಸ್ವಾತಂತ್ರ್ಯೋತ್ಸವ ಭಾಷಣ.`ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ವಿಶಿಷ್ಟ ಸ್ಥಾನವಿದೆ. ಆದರೆ ಹಸಿವು, ಬಡತನ, ಅನಾರೋಗ್ಯ ಮತ್ತು ನಿರುದ್ಯೋಗ ಸಮಸ್ಯೆ ಪೂರ್ಣವಾಗಿ ನಿವಾರಣೆಯಾಗಿಲ್ಲ. ಅಸಮಾನತೆ ಹೋಗಲಾಡಿಸಲು ಸಾಧ್ಯವಾಗಿಲ್ಲ. ದೇಶಕ್ಕೆ ಸ್ವದೇಶಿ ಅಭಿವೃದ್ಧಿ ಮಾದರಿ ಬೇಕು. ಇಲ್ಲಿನ ಶಿಕ್ಷಣ ಮತ್ತು ಆರ್ಥಿಕ ನೀತಿಗಳು ಸ್ವದೇಶಿ ನೆಲೆಯಲ್ಲಿ ರೂಪುಗೊಳ್ಳಬೇಕು. ಆಗ ಮಾತ್ರ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗೆ ಪರಿಹಾರ ಸಾಧ್ಯ~ ಎಂದರು.`ಆಶಯಗಳಿಗೆ ಸ್ಪಂದಿಸಬೇಕು~: ರಾಜ್ಯದ ಆಡಳಿತ ಯಂತ್ರ ನಾಗರಿಕರ ನ್ಯಾಯಯುತ ಆಶಯಗಳಿಗೆ ಸ್ಪಂದಿಸುವಂತಿರಬೇಕು ಎಂದ ಗೌಡರು, `ಕಡತ ವಿಲೇವಾರಿ ಹದಿನೈದು ದಿನಗಳಲ್ಲಿ ಆಗಬೇಕು. ಸಚಿವರು ಮತ್ತು ಅಧಿಕಾರಿಗಳ ನಡುವೆ ಪೂರ್ಣ ಸಹಕಾರ ಇರಬೇಕು. ಕೆಲವು ಕ್ಲಿಷ್ಟ ಕಾನೂನುಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ಸರಳೀಕರಿಸಬೇಕು~ ಎಂದರು.ರಾಜ್ಯದ ಯುವಕರಿಗೆ ಅಗತ್ಯ ತರಬೇತಿ ಮತ್ತು ಉದ್ಯೋಗ ಕಲ್ಪಿಸಲು ಪೂರಕವಾದ ಯೋಜನೆಗಳನ್ನು ಸರ್ಕಾರ ರೂಪಿಸಲಿದೆ ಎಂದು ಘೋಷಿಸಿದರು.ಚಿತ್ರದುರ್ಗ, ತುಮಕೂರು ಮತ್ತು ಗದಗ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಈ ವರ್ಷ ಮಳೆಯ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ. ಆ ಪ್ರದೇಶಗಳಲ್ಲಿ ಪರ್ಯಾಯ ಕೃಷಿ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲು ಕೃಷಿ ಇಲಾಖೆ ಕ್ರಮ ಕೈಗೊಂಡಿದೆ. ಪರಿಸ್ಥಿತಿ ಕೈಮೀರಿದರೆ ಅಗತ್ಯ ಪರಿಹಾರ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.ಸಮನ್ವಯದ ಮಂತ್ರ: ಸಮಾಜದ ಎಲ್ಲ ವರ್ಗಗಳ ಜನರಿಗೆ ಸಮಾನ ಅವಕಾಶಗಳು ದೊರೆಯುವಂತೆ ಮಾಡಲಾಗುವುದು. ಆಡಳಿತದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮನ್ವಯ ಭಾವದಿಂದ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದ ಗೌಡರು, `ಕೇಂದ್ರದೊಂದಿಗೆ ರಾಜ್ಯ ಸರ್ಕಾರ ಉತ್ತಮ ಬಾಂಧವ್ಯ ಕಾಯ್ದುಕೊಳ್ಳಲಿದೆ.ರಾಜ್ಯದ ಯೋಜನೆಗಳಿಗೆ ಸಕಾಲದಲ್ಲಿ ನೆರವು ನೀಡುವಂತೆ ಪ್ರಧಾನಿ ಮತ್ತು ಕೇಂದ್ರದ ಸಚಿವರನ್ನು ಕೋರಿದ್ದೇನೆ.  ರಾಜ್ಯವನ್ನು ಪ್ರತಿನಿಧಿಸುವ ಎಲ್ಲ ಸಂಸದರೂ ನಾಡಿನ ಅಭಿವೃದ್ಧಿಗೆ ಸಹಕಾರ ನೀಡುವ ಭರವಸೆ ಇತ್ತಿದ್ದಾರೆ~ ಎಂದರು.ಸಂವಿಧಾನದ 371ನೇ `ಡಿ~ ವಿಧಿಗೆ ತಿದ್ದುಪಡಿ ತಂದು ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಕುರಿತು ಕೇಂದ್ರ ಸರ್ಕಾರದೊಡನೆ ಚರ್ಚೆ ನಡೆದಿದೆ. ರಾಜ್ಯದ ರೇಷ್ಮೆ ಬೆಳೆಗಾರರ ಹಿತರಕ್ಷಣೆಯ ನಿಟ್ಟಿನಲ್ಲಿ ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. ಈ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆ ಕೇಂದ್ರ ಸರ್ಕಾರದಿಂದ ದೊರೆತಿದೆ ಎಂದು ತಿಳಿಸಿದರು.ನಮ್ಮ ಮೆಟ್ರೊ: ಸರ್ಕಾರದ ಮಹತ್ವಾಕಾಂಕ್ಷೆಯ `ನಮ್ಮ ಮೆಟ್ರೊ~ ಯೋಜನೆಯ ಮೊದಲ ಹಂತದ ಕಾಮಗಾರಿ (ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಿಂದ ಬೈಯ್ಯಪ್ಪನಹಳ್ಳಿವರೆಗೆ) ಪೂರ್ಣಗೊಂಡಿದೆ. ಈ ಮಾರ್ಗದಲ್ಲಿ ಮೆಟ್ರೊ ರೈಲು ಸೇವೆಯನ್ನು ಶೀಘ್ರವೇ ಉದ್ಘಾಟಿಸಬೇಕು ಎಂದು ಪ್ರಧಾನಿಯನ್ನು  ಕೋರಿದ್ದೇವೆ. ಯೋಜನೆಯ ಎರಡನೆಯ ಹಂತದ ಕಾಮಗಾರಿಗೂ ಅನುಮೋದನೆ ನೀಡುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ. ನಕ್ಸಲೀಯ ಚಟುವಟಿಕೆಗಳನ್ನು ನಿಯಂತ್ರಿಸಲಾಗಿದೆ. ಹಿಂದಿನ ಸರ್ಕಾರಗಳ ಅವಧಿಗೆ ಹೋಲಿಸಿದರೆ ಕೋಮು ಗಲಭೆಗಳ ಪ್ರಮಾಣ ಗಣನೀಯ ಇಳಿಕೆ ಕಂಡಿದೆ. ಇದಕ್ಕಾಗಿ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಕೂಡ ರಾಜ್ಯಕ್ಕೆ ಸಂದಿದೆ ಎಂದು ತಿಳಿಸಿದರು.ಬಿಎಸ್‌ವೈಗೆ ಪ್ರಶಂಸೆ: ಮೂರು ವರ್ಷಕ್ಕಿಂತ ಹೆಚ್ಚಿನ ಕಾಲ ಆಡಳಿತ ನಡೆಸಿದ ನಿಕಟಪೂರ್ವ ಸರ್ಕಾರ, ರಾಜ್ಯದ ಅಭಿವೃದ್ಧಿ ಪ್ರಕ್ರಿಯೆಗೆ ಹೆಚ್ಚಿನ ವೇಗ ಮತ್ತು ಹೊಸ ಆಯಾಮ ನೀಡಿದೆ. ಸರ್ಕಾರದ ಆರ್ಥಿಕ ಸ್ಥಿತಿಯೂ ಉತ್ತಮವಾಗಿದೆ ಎಂದು ಯಡಿಯೂರಪ್ಪ ನೇತೃತ್ವದ ಹಿಂದಿನ ಸರ್ಕಾರವನ್ನು ಪ್ರಶಂಸಿಸಿದರು.ಯಡಿಯೂರಪ್ಪ ನೇತೃತ್ವದ ಸರ್ಕಾರ ದೇಶದಲ್ಲೇ ಮೊದಲ ಬಾರಿಗೆ ಕೃಷಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸಿದ್ದು, ಶೇಕಡ 1ರ ಬಡ್ಡಿ ದರದಲ್ಲಿ ಕೃಷಿ ಸಾಲ ನೀಡಿದೆ ಎಂದು ಸ್ಮರಿಸಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ವಿವಿಧ ಯೋಜನೆಗಳಿಂದ ಈವರೆಗೆ 1.8 ಕೋಟಿ ಮಂದಿಗೆ ಪ್ರಯೋಜನವಾಗಿದೆ ಎಂದು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry