ಬದುಕಿಗೆ ಶಬ್ದರೂಪದ ಬಿಂಬಗಳು...

7

ಬದುಕಿಗೆ ಶಬ್ದರೂಪದ ಬಿಂಬಗಳು...

Published:
Updated:

ಬೆಂಗಳೂರು: ಇಪ್ಪತ್ತೆರಡು ಕವನಗಳ ವಾಚನ. ಅದರಲ್ಲಿ ಅರ್ಧಕ್ಕೂ ಹೆಚ್ಚು ಕವನಗಳು ಸಮಕಾಲೀನ ಬದುಕಿಗೆ ಕನ್ನಡಿಯಾದ ಶಬ್ದರೂಪದ ಬಿಂಬಗಳಂತಿದ್ದವು. ವಿಧಾನಸೌಧವು ಕೆಂಗಲ್ ಕೋಟೆಯಾಗಿ, ಯಡಿಯೂರಪ್ಪನವರು ಚೌಡೂರಪ್ಪನಾಗಿ ರೂಪಾಂತರಗೊಂಡು ಕವಿಮನಸ್ಸಿನ ಕದ ತಟ್ಟಿದ್ದಾರೆ. ಸದನದೊಳಗಿನ ಕದನ, ಗಣಿ ಹಗರಣ ಎಲ್ಲವೂ ಕಾವ್ಯದ ವಸ್ತುವಾಗಿ ಕಾವ್ಯಪ್ರೇಮಿಗಳ ಗಮನ ಸೆಳೆಯಿತು.ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ಆಯೋಜಿಸಿದ್ದ ಕವಿಗೋಷ್ಠಿ, ವರ್ತಮಾನ ಬದುಕಿನ ದೃಶ್ಯಾವಳಿಗಳು ಶಬ್ದಚಿತ್ರಗಳಾಗಿ ಅನಾವರಣಗೊಳ್ಳಲು ವೇದಿಕೆಯಾಯಿತು. ಮುರುಗೇಶ ಸಂಗಮ್ ವಾಚಿಸಿದ ‘ಕೆಂಗಲ್ ಕೋಟೆ’ ಕವನವು ಜನಪ್ರತಿನಿಧಿಗಳ ವರ್ತನೆಯನ್ನು, ಶಾಸನಸಭಾ ಕಲಾಪದ ಔಚಿತ್ಯವನ್ನು ಪ್ರಶ್ನಿಸುತ್ತದೆ. ದಡ್ಡ ದೊರೆಗಳ ದುಂಡಾವರ್ತನೆ... ಶಕ್ತಿಸೌಧವೇ ಕಲ್ಮಷ ಎಂಬ ಮಾತಿಗೆ ಸಭಿಕರಿಂದ ಚಪ್ಪಾಳೆ.ಸಿದ್ಧರಾಮ ಹೊನಕಲ್ ಅವರ ‘ಚೌಡೂರಪ್ಪ ಮತ್ತು ಊಟ’ ಕವನ ಸಭಾಂಗಣದಲ್ಲಿ ನಗೆ ಉಕ್ಕಿಸಿತು. ‘ಊಟವಿದ್ದೂ ದಿನವಿಡೀ ಉಪವಾಸ ಮಲಗುತ್ತಾರೆ ಚೌಡೂರಪ್ಪ’ ಎಂಬ ಸಾಲಿನೊಂದಿಗೆ ಮುಕ್ತಾಯವಾಗುವ ಕವನದಲ್ಲಿ ಜನಪ್ರತಿನಿಧಿಗಳು ಮೂದಲಿಕೆಗೆ ಒಳಗಾಗಿದ್ದಾರೆ.‘ಉದಯವಾಗಲೇ ಇಲ್ಲ ನಮ್ಮ ಚೆಲುವ ಕನ್ನಡ ನಾಡು...’ ಎಂದು ಶುರುವಾಗುವ ಚಂ.ಸು. ಪಾಟೀಲ ಅವರ ಕವನ ವಿಷಾದವನ್ನು ಧ್ವನಿಸುತ್ತದೆ. ಕೆ.ವಿ. ನಾಗರೆಡ್ಡಿ ಕವನದ ಶೀರ್ಷಿಕೆ ‘ಆಸೆ’. ಭ್ರಷ್ಟರು, ಲೂಟಿಕೋರರಲ್ಲಿ ಸದಾಶಯ ಬಿತ್ತುವುದು ಅವರ ಕವನದ ಆಶಯ. ‘ಸ್ವಾತಂತ್ರ್ಯವ್ವ ನೀ ಬಂದು ನಮಗೇನಾಯಿತು...’ ಎಂದು ಪ್ರಶ್ನಿಸುತ್ತದೆ ರುದ್ರಗೌಡ ಪಾಟೀಲ ಅವರ ಕವನ.ಹೀಗೆ 12-13 ಕವಿತೆಗಳು ಇಂದಿನ ಅವ್ಯವಸ್ಥೆಗೆ ಸೂಜಿಮೊನೆ ತಾಕಿಸಿದವು. ಐದಾರು ಕವನಗಳು ಸಂಸ್ಕೃತಿ, ನೆಲ-ಜಲ ಕುರಿತ ವಸ್ತುವನ್ನು ಒಳಗೊಂಡಿದ್ದವು. ತುರುವೀಹಾಳ ಚಂದ್ರು ಮತ್ತು ನಿಸಾರ್ ಅಹಮದ್ ಅವರ ರಚನೆಗಳು ಅಕ್ಕ ಮಹಾದೇವಿ ಜತೆ ಅನುಸಂಧಾನಕ್ಕೆ ಇಳಿಯುತ್ತವೆ. ಬಸು ಬೇವಿನಗಿಡದ ಅವರನ್ನು ಗಾಂಧೀಜಿ ಕಾಡಿದ್ದಾರೆ. ‘ಹೇಗೆ ಸಾಯುವೆ ನೀನು ಮೋಹನದಾಸ, ಈ ದೇಶದ ಜನರ ನಿಜ ಮಂದಹಾಸ’ ಎಂಬ ಆರಾಧನಾಭಾವ ಅವರ ಕವನದಲ್ಲಿ ಇದೆ.ದಸ್ತಗೀರಸಾಬ್ ದಿನ್ನಿ ಒಂದು ಗಜಲ್ ವಾಚಿಸಿದರು. ಉಮಾ ಸುಶಿಪ್ರ ಹೆಣ್ತನದ ಹಿರಿಮೆಯನ್ನು ಎತ್ತಿತೋರುವ ‘ಅಗ್ಗಳಿಕೆ’ ಕವನ ಓದಿದರು. ಸ. ರಘುನಾಥ್ ಅವರ ‘ಗಡಿಗರ ಹಾಡು’ ಕವನದ ಸ್ಥಾಯೀಭಾವ ಭಾಷೆ-ಸಂಸ್ಕೃತಿಯ ಸಮನ್ವಯ. ಎನ್.ಜಿ. ಪಟವರ್ಧನ್ ‘ಈ ಗಂಡಸರೇ ಹೀಗೆ’ ಎಂದು ಸ್ತ್ರೀವಾದಿಯಾದರು. ಸಿ.ಎನ್. ರಮೇಶ್, ಎಂ.ಎನ್. ಶುಭಶ್ರೀ, ಜಾ.ಮು. ಚಂದ್ರ, ಗುರುನಾಥ ಅಕ್ಕಣ್ಣ, ಭೀಮೋಜಿರಾವ್ ಜಗತಾಪ್, ಶಾರದಾ ಮುಳ್ಳೂರ, ರಾಜಶೇಖರ ಶಿರಗೂರು, ವಿ. ರಾಣಿ ಗೋವಿಂದರಾಜ್, ಕೊತ್ತಲ ಮಹಾದೇವಪ್ಪ, ಕಾಜೂರು ಎನ್. ಸತೀಶ ಅವರೂ ಕವನ ವಾಚಿಸಿದರು.ಆದರೆ ಕವಿತೆಯನ್ನು ಯಾರೊಬ್ಬರೂ ಹಾಡಲಿಲ್ಲ. ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಜಾನಪದ ವಿದ್ವಾಂಸ ಡಾ. ಶ್ರೀರಾಮ ಇಟ್ಟಣ್ಣನವರ ಅವರು ಈ ಕೊರತೆಯನ್ನು ಗುರುತಿಸಿದರು. ‘ಏಕತಾರಿ ನುಡಿಯ ತಾರಣ್ಣ’ ಎಂಬ ತಮ್ಮ ಕವನವನ್ನು ಹಾಡುವ ಮೂಲಕ ಆ ಕೊರತೆ ತುಂಬಿದರು. ಎಲ್ಲ ಒತ್ತಡಗಳ ನಡುವೆಯೂ ಜೀವನಶ್ರದ್ಧೆ ಉಳಿಸಿಕೊಳ್ಳುವಂತಹ ಕಾವ್ಯ ರಚಿಸಬೇಕು ಎಂದು ಅವರು ಸೂಚಿಸಿದರು.ಇತ್ತೀಚಿನ ದಿನಗಳಲ್ಲಿ ಜನಮುಖಿ ಕಾವ್ಯ ನಿರೀಕ್ಷಿತ ಪ್ರಮಾಣದಲ್ಲಿ ಹುಟ್ಟು ಪಡೆಯುತ್ತಿಲ್ಲ. ಕಾವ್ಯ ಹೆಚ್ಚು ಜನಪರ ಹಾಗೂ ಸೈದ್ಧಾಂತಿಕ ನೆಲೆ ಪಡೆಯಬೇಕು. ಕ್ಷೀಣಿಸುತ್ತಿರುವ ಚಳವಳಿಗಳ ಜತೆಗೆ ಕವಿಯಾದವನು ನಿಕಟ ಸಂಬಂಧ ಉಳಿಸಿಕೊಂಡರೆ ಸಾಮಾಜಿಕ ಕಳಕಳಿ ಬಲಗೊಳ್ಳುತ್ತದೆ ಎಂದು ಡಾ.ಕಾ.ವೆಂ. ಶ್ರೀನಿವಾಸಮೂರ್ತಿ  ಆಶಯ ಭಾಷಣದಲ್ಲಿ ಪ್ರತಿಪಾದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry