ಬದುಕಿದ್ದರೂ ದಾಖಲೆಯಲ್ಲಿ ಮೃತಪಟ್ಟ ಮಾಜಿ ಶಾಸಕ

ಶುಕ್ರವಾರ, ಜೂಲೈ 19, 2019
26 °C

ಬದುಕಿದ್ದರೂ ದಾಖಲೆಯಲ್ಲಿ ಮೃತಪಟ್ಟ ಮಾಜಿ ಶಾಸಕ

Published:
Updated:

ರಾಮದುರ್ಗ: ರಾಮದುರ್ಗದ ಮಾಜಿ ಶಾಸಕ ಎನ್. ವಿ. ಪಾಟೀಲ ಅವರು ಜೀವಂತವಿದ್ದರೂ ಅವರು ನಿಧನರಾಗಿದ್ದಾರೆ ಎಂಬ ಪತ್ರವನ್ನು ವಿಧಾನಸಭೆ ಸಚಿವಾಲಯ ಮಾಜಿ ಶಾಸಕರ ಮನೆಗೆ ಕಳುಹಿಸಿದೆ.

2012 ಜುಲೈ 7ರಂದು ಮಾಜಿ ಶಾಸಕ ಎನ್. ವಿ. ಪಾಟೀಲ ಅವರು ನಿಧನ ಹೊಂದಿದ್ದು, ಅವರ ಪಿಂಚಣಿ ನಿಲ್ಲಿಸಲಾಗುತ್ತದೆ. ಪಿಂಚಣಿಗೆ ಸಂಬಂಧಪಟ್ಟ ದಾಖಲಾತಿಗಳನ್ನು ಸಚಿವಾಲಯಕ್ಕೆ ಹಿಂದಿರುಗಿಸಬೇಕೆಂದು ಬೆಳಗಾವಿ ಜಿಲ್ಲಾ ಖಜಾನೆ ಕಚೇರಿಗೆ ವಿಧಾನಸಭೆ ಸಚಿವಾಲಯದ ಅಧೀನ ಕಾರ್ಯದರ್ಶಿ ಎನ್. ಗೋಪಾಲಕೃಷ್ಣ ರಾವ್ ಪತ್ರದ ಮೂಲಕ ತಿಳಿಸಿದ್ದಾರೆ.

ಪಾಟೀಲರ ವೇತನ ಮತ್ತು ಪಿಂಚಣಿ ಭತ್ಯೆಯನ್ನು ಈ ತಿಂಗಳ 7 ರವರೆಗೆ ಪಾವತಿಸಿ, 8 ರಿಂದ ಜಾರಿಗೆ ಬರುವಂತೆ ಪಿಂಚಣಿ ತಡೆ ಹಿಡಿಯಬೇಕು ಎಂದೂ ಅವರು ಬೆಳಗಾವಿ ಜಿಲ್ಲಾ ಖಜಾನೆ ಕಚೇರಿಗೆ ಸೂಚಿಸಿದ್ದಾರೆ.  ಈ ಪತ್ರದ ಪ್ರತಿಯನ್ನು ಪಾಟೀಲರ ಕುಟುಂಬದವರಿಗೆ ಹಾಗೂ ಸ್ಥಳೀಯ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಗೂ ರವಾನಿಸಲಾಗಿದೆ.

ರಾಮದುರ್ಗದಿಂದ 1999ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಪಾಟೀಲರು ಚುನಾಯಿತರಾಗಿದ್ದರು. ಈಗ ಅವರು ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿದ್ದಾರೆ.

ಸುದ್ದಿಗಾರರ ಮುಂದೆ ಈ ಪತ್ರವನ್ನು ಓದಿದ ಪಾಟೀಲರು, ದಿಗ್ಭ್ರಮೆ ವ್ಯಕ್ತಪಡಿಸಿ `ನಾನು ಜೀವಂತವಿರುವಾಗಲೇ ಈ ರೀತಿ ಸಂದೇಶ ಬಂದಿರುವುದರಿಂದ ಬೇಸರವಾಗಿದೆ. ನಮ್ಮಂತಹವರಿಗೇ ಅಧಿಕಾರಿಗಳು ಈ ರೀತಿ ಮಾಡುತ್ತಾರೆ. ಇನ್ನು ಜನಸಾಮಾನ್ಯರ ಬಗ್ಗೆ ಹೇಗೆ ವರ್ತಿಸುತ್ತಾರೆ~ ಎಂದು ನೊಂದು ನುಡಿದರು.  `ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಎಲ್ಲವೂ ತಿರುವು-ಮುರುವಾಗಿದೆ. ನಾಯಕರು ಅಧಿಕಾರಕ್ಕಾಗಿ ಕಚ್ಚಾಟ ನಡೆಸಿದ್ದರೆ, ಅಧಿಕಾರಿಗಳು ಬೇಜವಾಬ್ದಾರಿಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ~ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. `ಈ ರೀತಿ ಬೇಜವಾಬ್ದಾರಿ ವರ್ತನೆ ತೋರುವ ಅಧಿಕಾರಿಗಳು ಮತ್ತು ಆಡಳಿತ ನಡೆಸುತ್ತಿರುವ ನಾಯಕರಿಗೆ ಜನತೆ ಸೂಕ್ತ ಪಾಠ ಕಲಿಸಬೇಕಿದೆ~ ಎಂದರು.

ಶಿಸ್ತುಕ್ರಮ: ಇದು ಅಕ್ಷಮ್ಯ ಅಪರಾಧ. ಈ ಬಗ್ಗೆ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನಸಭೆಯ ಅಧ್ಯಕ್ಷ ಕೆ.ಜಿ.ಬೋಪಯ್ಯ ತಿಳಿಸಿದರು.

ಶಿಗ್ಗಾಂವಿಯ ನೀಲಕಂಠಗೌಡ ಪಾಟೀಲ ಅವರು ಈ ತಿಂಗಳ ಮೊದಲ ವಾರದಲ್ಲಿ ನಿಧನ ಹೊಂದಿದ್ದರು. ಅವರಿಗೆ ತಲುಪಬೇಕಾದ ಪತ್ರ ಎನ್.ವಿ.ಪಾಟೀಲ ಅವರಿಗೆ ತಲುಪಿದೆ. ಅಂಚೆಪೇದೆಯ ಲೋಪದಿಂದ ಈ ರೀತಿ ಆಗಿರಬಹುದು. ಏನೇ ಆಗಲಿ, ಲೋಪ ಆಗಿರುವುದರಿಂದ ಕ್ಷಮೆ ಯಾಚಿಸುವುದಾಗಿ ಗೋಪಾಲಕೃಷ್ಣ ರಾವ್ ತಿಳಿಸಿದರು.

ಆದರೆ ಇದನ್ನು ಒಪ್ಪದ ಬೋಪಯ್ಯ, `ವಿಳಾಸ ಬೇರೆ ಇರುತ್ತದೆ. ಅಂಚೆ ಪೇದೆಯಿಂದ ತಪ್ಪು ಆಗಿರಲು ಸಾಧ್ಯವಿಲ್ಲ. ಪರಿಶೀಲನೆ ನಂತರ ಅಧಿಕಾರಿಗಳಿಂದ ತಪ್ಪಾಗಿರುವುದು ಖಚಿತವಾದರೆ ಖಂಡಿತ ಕ್ರಮ ಕೈಗೊಳ್ಳುತ್ತೇನೆ~ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry