ಭಾನುವಾರ, ಜನವರಿ 26, 2020
27 °C

ಬದುಕಿದ್ದಾಗಲೇ ದಂತಕಥೆಯಾದರು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ:ಬದುಕಿದ್ದಾಗಲೇ ಸೇವಾಕ್ಷೇತ್ರದಲ್ಲಿ ದಂತಕಥೆಯಾದ ಕೆಲವೇ ಮಹನೀಯರಲ್ಲಿ ಒಬ್ಬರಾದ ವೆಂಕಟೇಶ ಗುರುನಾಯಕ ಅವರದು ಅಪ್ರತಿಮ ಕೊಡುಗೆ ಎಂದು ಹಲವು ಗಣ್ಯರು ಭಾವಪೂರ್ಣ ನಮನ ಸಲ್ಲಿಸಿದರು.ವಿವೇಕಾನಂದ ಕುಷ್ಠಸೇವಾ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ಸಂಜೆ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ವಿವಿಧ ಕ್ಷೇತ್ರಗಳ ಗಣ್ಯರು, ಸಾಮಾಜಿಕ ಸೇವಾ ಕ್ಷೇತ್ರಕ್ಕೆ ವೆಂಕಟೇಶ ಗುರುನಾಯಕ ಅಪ್ರತಿಮ ಕೊಡುಗೆ ನೀಡಿದ್ದಾರೆ ಎಂದು ಬಣ್ಣಿಸಿದರು.ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕ ಸು. ರಾಮಣ್ಣ ಮಾತನಾಡಿ, “ಹಲವರು ಮಾಡುವ ಹತ್ತಾರು ಸೇವಾಕಾರ್ಯಗಳ ಪೈಕಿ ಗುರುನಾಯಕರು ಮಾಡಿದ ಕೆಲಸ ಅಗ್ರಮಾನ್ಯ” ಎಂದು ಹೇಳಿದರು. ಸಮಾಜದ ಕೊರತೆಯನ್ನು ಗುರುತಿಸಿ ಸರಿಪಡಿಸುವ ಕೆಲಸಕ್ಕೆ ಮುಂದಾದ ಗುರುನಾಯಕರ ಕೈಂಕರ್ಯಕ್ಕೆ ಸಮಾಜದ ನೂರಾರು ಜನರು ಧಾರಾಳ ನೆರವು ನೀಡಿದರು. ಇದು ಅವರ ಮೇಲೆ ಜನರು ಇಟ್ಟಿದ್ದ ವಿಶ್ವಾಸ- ಅಭಿಮಾನಕ್ಕೆ ಸಾಕ್ಷಿ ಎಂದು ಹೇಳಿದ ಸು.ರಾಮಣ್ಣ, ಕುಷ್ಠರೋಗಿಗಳ ನಿರೋಗಿ ಮಕ್ಕಳು ಹಾಗೂ ಅನಾಥ ಶಿಶುಗಳಿಗೆ ಭವಿಷ್ಯ ನೀಡಿದ ಕಾರ್ಯವಂತೂ ಅನುಪಮ ಎಂದು ಕೊಂಡಾಡಿದರು.“ತನಗಾಗಿ ಏನೂ ಮಾಡಿಕೊಳ್ಳದೇ ಇಲ್ಲದವರಿಗಾಗಿ ಜೀವನ ಮುಡಿಪಾಗಿಟ್ಟವರು ಎಂದು” ಬಸವರಾಜಪ್ಪ ಅಪ್ಪಾ ಸ್ಮರಿಸಿದರೆ, “ಒಬ್ಬ ವ್ಯಕ್ತಿ ಸಮಾಜಕ್ಕೆ ಏನೇನು ಸೇವೆ ಮಾಡಬಹುದು ಎಂಬುದನ್ನು ಗುರುನಾಯಕರು ಸಾಧಿಸಿ ತೋರಿಸಿದರು” ಎಂದು ಬಸವರಾಜ ಪಾಟೀಲ ಸೇಡಂ ನುಡಿದರು.ಎನ್.ವಿ. ಸಂಸ್ಥೆ ಅಧ್ಯಕ್ಷ ಡಾ. ಮುರಳೀಧರ ಎಸ್. ರಾವ್, “ಒಂದು ಮಗುವಿಗೆ ಶಿಕ್ಷಣ, ಆರೋಗ್ಯ ನೀಡುವುದು ಕಷ್ಟಕರ. ಆದರೆ ಅಂಥ ಹತ್ತಾರು ಮಕ್ಕಳಿಗೆ ಬಾಳು ಕೊಟ್ಟ ಗುರುನಾಯಕರ ಕೆಲಸಕ್ಕೆ ಸಾಟಿಯೇ ಇಲ್ಲ!” ಎಂದು ಉದ್ಗರಿಸಿದರು. “ಹುಟ್ಟು- ಸಾವು ಎಂಬ ಎರಡು ಪುಟಗಳ ಮಧ್ಯೆ ಬದುಕಿನ ಹಲವು ಪುಟಗಳಿವೆ. ಅಂಥ ಪುಸ್ತಕದ ಒಂದು ಪುಟ ಕೂಡ ವ್ಯರ್ಥವಾಗದಂತೆ ಸೇವೆ ಸಲ್ಲಿಸಿದವರು ಗುರುನಾಯಕರು” ಎಂದು ಖ್ಯಾತ ವೈದ್ಯ ಡಾ.ಎಸ್.ಎಸ್.ಗುಬ್ಬಿ ಸ್ಮರಿಸಿದರು.ವಿಶ್ವ ಹಿಂದೂ ಪರಿಷತ್ತಿನ ಕೇಂದ್ರೀಯ ಸಲಹಾ ಸಮಿತಿ ಸದಸ್ಯ ಬಾಬುರಾವ ದೇಸಾಯಿ, ಪತ್ರಕರ್ತರಾದ ಎಸ್.ಆರ್.ಮಣೂರ, ಶ್ರೀನಿವಾಸ ಸಿರನೂರಕರ, ಡಾ. ಗೌತಮ ಜಹಗೀರದಾರ, ಉದ್ಯಮಿ ನೆವಿಲ್ ಇರಾನಿ ಇತರರು ಗುರುನಾಯಕರಿಗೆ ನುಡಿನಮನ ಸಲ್ಲಿಸಿದರು.ಸ್ವಾತಂತ್ರ್ಯಯೋಧ ವಿದ್ಯಾಧರ ಗುರೂಜಿ, `ಕಾಡಾ~ ನೀರಾವರಿ ಯೋಜನೆಗಳ ಅಧ್ಯಕ್ಷ ಗಿರೀಶ ಮಟ್ಟೆಣ್ಣವರ್, ಎಚ್‌ಕೆಡಿಬಿ ಅಧ್ಯಕ್ಷ ಅಮರನಾಥ ಪಾಟೀಲ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)