ಶನಿವಾರ, ಮಾರ್ಚ್ 6, 2021
18 °C
ಪುಟ ಬಂಗಾರ

ಬದುಕಿನ ಚದುರಂಗದಾಟ

ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿ,ಸಿರಿಗೆರೆ Updated:

ಅಕ್ಷರ ಗಾತ್ರ : | |

ಬದುಕಿನ ಚದುರಂಗದಾಟ

(ಜಿ.ಎಸ್.ಎಸ್. ಕಾವ್ಯಾಂತರಾಳ (ಸಂ: ಎಚ್.ಎಸ್. ವೆಂಕಟೇಶಮೂರ್ತಿ, ಲೋಕೇಶ ಅಗಸನಕಟ್ಟೆ) ಕೃತಿಯ ‘ಆಶಯ ನುಡಿ’ ಬರಹದ ಆಯ್ದಭಾಗ)

ತಂದೆ, ತಾಯಿ ಮತ್ತು ತೊಟ್ಟಿಲ ಕೂಸು. ಮನೆಯಲ್ಲಿ ಮೂವರನ್ನು ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ತಂದೆ ಹಳ್ಳಿಯ ಶಾಲೆಯೊಂದರಲ್ಲಿ ಶಿಸ್ತಿನ ಮಾಸ್ತರು. ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮಾಸ್ತರು ಸಮಯಕ್ಕೆ ಸರಿಯಾಗಿ ಶಾಲೆಗೆ ಹೋದರು. ಅವರ ಮಡದಿ ಮಗುವಿಗೆ ಹಾಲುಣಿಸಿ ತೊಟ್ಟಿಲಲ್ಲಿ ಮಲಗಿಸಿ ಬೆಳಗಿನ ಎಲ್ಲ ಮನೆಗೆಲಸಗಳನ್ನು ಮುಗಿಸಿ ಬಾಗಿಲನ್ನು ಎಳೆದುಕೊಂಡು ಹತ್ತಿರದ ಬಾವಿಯಿಂದ ನೀರು ಸೇದಿಕೊಂಡು ಬರಲು ಹೋದಳು.ಹೋದ ಕೆಲವೇ ನಿಮಿಷಗಳಲ್ಲಿ ಪಕ್ಕದ ಹುಲ್ಲು ಜೋಪಡಿಗೆ ಬೆಂಕಿ ಹತ್ತಿಕೊಂಡಿತು. ಗಾಳಿಯ ಹೊಡೆತಕ್ಕೆ ಕ್ಷಣಾರ್ಧದಲ್ಲಿ ಬೆಂಕಿ  ಭುಗಿಲೆದ್ದು ಅಕ್ಕಪಕ್ಕದ ಮನೆಗಳೆಲ್ಲವೂ  ಹೊತ್ತಿ ಉರಿಯಲಾರಂಭಿಸಿದವು. ಬೆಂಕಿಯ ಒಂದು ಉಂಡೆ ತೊಟ್ಟಿಲಲ್ಲಿ ಮಗು ಮಲಗಿದ್ದ ಮನೆಯ ಮೇಲೂ ಬಿದ್ದು ಮೇಲುಛಾವಣಿಗೆ ಹೊದಿಸಿದ್ದ ಗಳಗಳು ಬೆಂಕಿ ಹತ್ತಿ ಒಂದೊಂದೇ ಉರಿಯುತ್ತಾ ಬೀಳತೊಡಗಿದವು.ಬೆಂಕಿಯ ಜ್ವಾಲೆ ಮತ್ತು  ಹೊಗೆ ಮುಗಿಲಿಗೇರಿದಂತೆ ಹಳ್ಳಿಗರ ಆರ್ತನಾದ ಮತ್ತು ಕೂಗು ಸಹ ಮುಗಿಲು ಮುಟ್ಟಿತು. ಬೆಂಕಿಯನ್ನು ನಂದಿಸಲು ಹಳ್ಳಿಗರು ಹರಸಾಹಸ ಮಾಡುತ್ತಿದ್ದರು. ಬಾವಿಗೆ ನೀರು ಸೇದಲು ಹೋಗಿದ್ದ ತಾಯಿಗೆ ದಿಗಿಲಾಯಿತು. ಓಡೋಡಿ ಬಂದಳು. ಯಾರು ಎಷ್ಟೇ ಹೇಳಿದರೂ ಲೆಕ್ಕಿಸದೆ ‘ನನ್ನ ಕಂದಾ’ ಎಂದು ಧಗಧಗಿಸುವ ಬೆಂಕಿಯ ಮಧ್ಯೆ ಮನೆಯೊಳಗೆ ನುಗ್ಗಿದಳು. ತೊಟ್ಟಿಲಲ್ಲಿದ್ದ ತನ್ನ ಮಗುವನ್ನು ಎತ್ತಿಕೊಂಡು ಹೊರಬಂದಳು. ಮನೆಯೊಳಗೆ ಆವರಿಸಿದ್ದ ದಪ್ಪನೆಯ ಹೊಗೆಯಿಂದ ಆಕೆಯ ಮುಖ ಕರಿಬಡಿದಿತ್ತು. ಅಳುತ್ತಿದ್ದ ಮಗುವನ್ನು ತನ್ನೆದೆಯಲ್ಲಿ ಬಿಗಿಯಾಗಿ ಅಪ್ಪಿಕೊಂಡು ಸೀರೆಯ ಅಂಚಿಗೆ ಹತ್ತಿಕೊಂಡ ಬೆಂಕಿಯನ್ನು ಕೊಡವಿಕೊಂಡಳು. ಜಾತ್ರೆಯಲ್ಲಿ ಕೆಂಡಹಾಯ್ದ ವೀರಭದ್ರೆ ಅವಳಾಗಿದ್ದಳು! ಏದುಸಿರುಬಿಡುತ್ತಾ ಹುಚ್ಚಿಯಂತೆ ಬೀದಿಗಳಲ್ಲಿ ಓಡಿ ಊರ ಹೊರವಲಯದಲ್ಲಿದ್ದ ಮರದ ಕೆಳಗೆ ಕುಳಿತುಕೊಂಡು ಮಗುವನ್ನು ಸಂತೈಸತೊಡಗಿದಳು.ಅರ್ಧಗಂಟೆಯಲ್ಲಿ ಅರ್ಧಕ್ಕರ್ಧ ಊರು ಸುಟ್ಟು ಹೋಗಿ ಸ್ಮಶಾನವಾಗಿತ್ತು. ಸುದ್ದಿ ಕೇಳಿ ಶಾಲೆಯ ಮಾಸ್ತರಿಗೆ ಗರಬಡಿದಂತಾಯಿತು. ಓಡಿ ಬಂದು ನೋಡಿದರೆ ಮನೆಯ ಛಾವಣಿ ಕುಸಿದು ಬಿದ್ದು ಸುಟ್ಟು ಕರಕಲಾಗಿತ್ತು. ತಾಯಿ–ಮಗು ಇರಲಿಲ್ಲ. ಆಕಾಶವೇ ಕಳಚಿಬಿದ್ದಂತಾಗಿದ್ದ ಶಾಲಾ ಮಾಸ್ತರರಿಗೆ ನಂತರ ತಾಯಿ–ಮಗು ಸುರಕ್ಷಿತವಾಗಿದ್ದಾರೆಂದು ಊರ ಜನರಿಂದ ತಿಳಿದು ಮರುಜೀವ ಬಂದಂತಾಯಿತು. ಆದರೆ ಆ ತಾಯಿ ಬಹಳ ಕಾಲ ಬದುಕಲಿಲ್ಲ. ಆರು ವರ್ಷಗಳ ನಂತರ ಅಸು ನೀಗಿದಳು. ಅವಳ ಮಗು ಬೇರೆ ಯಾರೂ ಅಲ್ಲ; ಕನ್ನಡ ಸಾರಸ್ವತ ಲೋಕದ ಮಕುಟ ಮಣಿಯಾದ ರಾಷ್ಟ್ರಕವಿ ಜಿ. ಎಸ್‌. ಶಿವರುದ್ರಪ್ಪನವರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.