ಸೋಮವಾರ, ಡಿಸೆಂಬರ್ 9, 2019
24 °C

ಬದುಕಿನ ಚಾಲನೆಗೆ ಕಾರು ವಿನ್ಯಾಸ ಶಿಕ್ಷಣ

Published:
Updated:
ಬದುಕಿನ ಚಾಲನೆಗೆ  ಕಾರು ವಿನ್ಯಾಸ ಶಿಕ್ಷಣ

ಕಾ ರು ವಿನ್ಯಾಸವು ಆಟೋಮೊಬೈಲ್ ಕ್ಷೇತ್ರದ  ಅವಿಭಾಜ್ಯ ಅಂಗ. ಆದರೆ ಬಹಳಷ್ಟು ಜನರಿಗೆ ಇದು ಒಂದು ಕನಸಿನ ಉದ್ಯೋಗ. ಏಕೆಂದರೇ ಕಾರು ವಿನ್ಯಾಸಕರಾಗಲು ಮೊದಲು ವಿದೇಶಕ್ಕೆ ಹೋಗಿ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಬೇಕಿತ್ತು. ಆದರೆ ಈಗ ಭಾರತವು ಆಟೋಮೊಬೈಲ್ ಕ್ಷೇತ್ರದಲ್ಲಿ ತನ್ನ ಛಾಪನ್ನು ಮೂಡಿಸುತ್ತಿದ್ದು, ಈ ಕ್ಷೇತ್ರದಲ್ಲಿ ಗಣನೀಯ ಪ್ರಗತಿಯನ್ನು ಕಾಣುತ್ತಿದೆ.ಭಾರತದಲ್ಲೆಗ ಹಲವಾರು ಕಾರು ವಿನ್ಯಾಸ ಶಾಲೆಗಳಿವೆ. ಅದರಲ್ಲಿ ಪ್ರಮುಖ ವಾದವುಗಳೆಂದರೆ ಪುಣೆಯಲ್ಲಿರುವ ಡಿಎಸ್‌ಕೆ-ಐಎಸ್‌ಡಿ, ಎಂಎಇಇಆರ್‌ಎಸ್ ಹಾಗೂ ಅಹಮದಾಬಾದ್‌ನಲ್ಲಿರುವ ಎಂಐಟಿ-ವಿನ್ಯಾಸ ಸಂಸ್ಥೆ ಮತ್ತು ಎನ್‌ಐಡಿ-ರಾಷ್ಟ್ರೀಯ ವಿನ್ಯಾಸ ಸಂಸ್ಥೆ. ಯಾವ ವಿನ್ಯಾಸ ಶಾಲೆಯು ಅನುಕೂಲಕರ ಕಲಿಕಾ ವಾತಾವರಣ ಒದಗಿಸುತ್ತದೆ? ಯಾವ ಶಾಲೆಯು ಪ್ರಾಯೋಗಿಕ ಕಲಿಕೆಗೆ ಅತ್ಯುನ್ನತವಾಗಿದೆ? ಹಾಗೆಯೇ ಶಾಲೆಯು ಯಾವ ಕಾರು ತಯಾರಿಕಾ ಕಂಪನಿಗಳಲ್ಲಿ ಉದ್ಯೋಗಾವಕಾಶ ಒದಗಿಸುತ್ತದೆ  ಎಂಬುದನ್ನು ವಿದ್ಯಾರ್ಥಿಗಳು ಪ್ರಮುಖವಾಗಿ  ಗಮನಿಸಬೇಕು.ಇನ್ನೊಂದು ಪ್ರಮುಖ ಅಂಶವೆಂದರೆ, ಈ ಶಾಲೆಯಲ್ಲಿ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮ,ಅಂದರೆ ಇಲ್ಲಿನ ವಿದ್ಯಾರ್ಥಿಯು ವಿದೇಶಿ ವಿನ್ಯಾಸ ಶಾಲೆಗಳಿಗೆ ಹೋಗಿ ಕಲಿಯಬಹುದು. ಹಾಗೆಯೇ ವಿದೇಶಿ ವಿದ್ಯಾರ್ಥಿಗಳು ಭಾರತಕ್ಕೆ ಬಂದು ಕಲಿಯುವ ಅವಕಾಶವಿರುತ್ತದೆ. ಇದರ ಪ್ರಮುಖ ಪ್ರಯೋಜನವೇನೆಂದರೆ ವಿದ್ಯಾರ್ಥಿಗಳು ಕೇವಲ ತಮ್ಮ ನೆಲದ ವಾತಾವರಣದಲ್ಲಿ ಕಲಿಯುವುದರ ಜೊತೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅವರನ್ನು ಬೆಳೆಸುವುದು. ಹಾಗೂ ತಮ್ಮ ಅಂತರಾಷ್ಟ್ರೀಯ ಗ್ರಾಹಕರನ್ನು ತಮ್ಮೆಡೆಗೆ ಆಕರ್ಷಿಸುವುದು ಇದರ ಪ್ರಮುಖ ಉದ್ದೇಶ.ಕಾರು ವಿನ್ಯಾಸವು ಎಲ್ಲ ವಿನ್ಯಾಸಗಳ ಗೋಪುರವಾಗಿದೆ. ಕಾರು ವಿನ್ಯಾಸಕರಾಗಬೇಕೆಂಬುವವರು ತುಂಬಾ ಪ್ರಯೋಗಾತ್ಮಕ ಹಾಗೂ ವಿಚಾರಶೀಲರಾಗಿರಬೇಕು. ಸಮಸ್ಯೆಗಳನ್ನು ಬಗೆಹರಿಸುವದರಲ್ಲಿ ನಿಸ್ಸೀಮರಾಗಿರಬೇಕು. ವಸ್ತುಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ತಿಳಿಯುವ ಕುತೂಹಲಿಗಳಾಗಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಒಳ್ಳೆಯ ಚಿತ್ರಕಾರರಾಗಿರಬೇಕು. ಈ ಎಲ್ಲ ಗುಣಗಳು ನಿಮ್ಮಲ್ಲಿದ್ದರೇ ನೀವೊಬ್ಬ ಅತ್ಯುತ್ತಮ ವಿನ್ಯಾಸಕಾರರಾಗಬಹುದು. ಒಬ್ಬ ಅತ್ಯುತ್ತಮ ಕಾರು ವಿನ್ಯಾಸಕನ ವಾರ್ಷಿಕ ಆದಾಯ ಪ್ರತಿ ವರ್ಷ ಕನಿಷ್ಟ 60,000 ಡಾಲರ್‌ಗಳಷ್ಟಿರುತ್ತದೆ. ಅದು ಮುಂದೆ 120,000 ರಿಂದ 200,000 ಡಾಲರ್‌ಗಳಷ್ಟಾಗಬಹುದು. ವರಮಾನವು ವಿನ್ಯಾಸಗಾರನ ಕೌಶಲದ ಮೇಲೆ ಅವಲಂಬಿತವಾಗಿರುತ್ತದೆ. ಭಾರತದಲ್ಲಿ ಒಬ್ಬ ವಿನ್ಯಾಸಗಾರನ ವಾರ್ಷಿಕ ಆದಾಯ 8 ರಿಂದ 12 ಲಕ್ಷದವರೆಗೆ ಇರುತ್ತದೆ.ಬಹಳಷ್ಟು ವಿದ್ಯಾರ್ಥಿಗಳಿಗೆ ಕಾರು ವಿನ್ಯಾಸದ ಬಗ್ಗೆ ಸರಿಯಾದ ಮಾಹಿತಿ ದೊರೆಯದೆ ತಮ್ಮ ಅತ್ಯಮೂಲ್ಯ ಪ್ರತಿಭೆಯನ್ನು ಮುಚ್ಚಿಡುವಂತಾಗಿದೆ. ಅದಕ್ಕೆ ಕಾರಣಗಳು ತಂದೆ-ತಾಯಿ ಒತ್ತಡದಿಂದಲೋ ಅಥವಾ ಪ್ರತಿಷ್ಠೆಗೆ ಉಂಟಾಗುವ ದಕ್ಕೆಯಿಂದಲೋ ವಿದ್ಯಾರ್ಥಿಗಳು ಎಂಜಿನಿಯರ್, ಮೆಡಿಕಲ್, ಎಂಬಿಎ, ಮೊರೆ ಹೋಗುವುದು ಸಾಮಾನ್ಯ. ಆದರೆ ವಿದ್ಯಾರ್ಥಿಗಳು ತಮಗಿಷ್ಟವಲ್ಲದ ಕೋರ್ಸುಗಳಲ್ಲಿ ಆಸಕ್ತಿ ತೋರಿಸುವುದಾದರೂ ಹೇಗೆ? ಅದರ ಪರಿಣಾಮಗಳನ್ನು ನಾವು ನೋಡುತ್ತಿದ್ದೇವಲ್ಲವೇ?ಆದರೆ ಈಗ ಕಾಲ ಕೊಂಚ ಮಟ್ಟಿಗೆ ಬದಲಾದಂತಿದೆ. ಇತ್ತೀಚಿಗೆ ಪೋಷಕರು ವಿದ್ಯಾರ್ಥಿಗಳ ಮನಸ್ಸು ಅರಿತು ಅವರಿಷ್ಟದ ಕೋರ್ಸುಗಳಿಗೆ ಸೇರಲು ಅವಕಾಶ ನೀಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ.   ಇನ್ನೂ ಕೆಲ ವಿದ್ಯಾರ್ಥಿಗಳು ತಮ್ಮ ಸ್ವಂತ ವಿಚಾರ ಶಕ್ತಿಯನ್ನು ಉಪಯೋಗಿಸದೇ ತನ್ನ ಸಹಪಾಠಿಯು ಅದನ್ನೇ ಮಾಡುತ್ತಿದ್ದಾನೆ, ಅದಕ್ಕೆ ಒಳ್ಳೆಯ ದುಡ್ಡು ಬರುತ್ತದೆ, ಒಳ್ಳೆಯ ಭವಿಷ್ಯವಿದೆ ಎಂದೆಲ್ಲ ಹೇಳಿ ಪೋಷಕರ ತಲೆ ತಿಂದು ಅದಕ್ಕೆ ಪ್ರವೇಶ ಪಡೆಯುತ್ತಾರೇನೋ ನಿಜ, ಆದರೆ ಕೆಲ ತಿಂಗಳುಗಳ ನಂತರ ಅವರು ಹಿಂದಿರುಗುವುದೇಕೆ? ಇಂತಹ ವಿದ್ಯಾರ್ಥಿಗಳು ಮೊದಲಿಗೆ ತಮ್ಮನ್ನು ತಾವು ಅರಿತು ಅವರಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಬೇಕು. ತಡವಾದರೂ ಸರಿ ಅದನ್ನು ಬೆಳಕಿಗೆ ತರಬೇಕು. ನೋಡಿ ಯಾವುದೇ ವ್ಯಕ್ತಿಗೆ ಪ್ರತಿಭೆ ಎಂಬುದು ಹುಟ್ಟಿನಿಂದ ಬಂದಿರುತ್ತದೆ, ಅದನ್ನು ಪೋಷಿಸಿ ಬೆಳೆಸಬೇಕಷ್ಟೇ. ಭಾರತದಲ್ಲಿ ಅನೇಕರು ಕಾರು ವಿನ್ಯಾಸಕಾರಾಗಬೇಕೆಂದು ಚಡಪಡಿಸುತ್ತಿದ್ದಾರೆ. ಆದರೆ ಸರಿಯಾದ ಮಾಹಿತಿ, ಶಾಲೆ, ದೊರೆಯದೇ ಹತಾಶರಾಗಿದ್ದಾರೆ. ಈ ಮಾಹಿತಿಯು ಅವರಿಗೆ ಸ್ವಲ್ಪವಾದರೂ ಉಪಯೋಗವಾಗಬಹುದೇನೋ.ಕಾರು ವಿನ್ಯಾಸವು ಶಿಕ್ಷಣದ ಒಂದು ಭಾಗವೆಂದು ಅದೆಷ್ಟೋ ಜನರಿಗೆ ಇನ್ನೂ ಗೊತ್ತೇ ಇಲ್ಲ. ಎಂಜಿನಿಯರಿಂಗ್‌ನಲ್ಲಿ ಮೆಕ್ಯಾನಿಕಲ್, ಆಟೋಮೊಬೈಲ್ ಹೇಗೆ ವಿಷಯಗಳಾಗಿವೆಯೋ ಹಾಗೆಯೇ ಕಾರು ವಿನ್ಯಾಸವು ಟ್ರಾನ್ಸ್‌ಪೋರ್ಟೆಶನ್ ಡಿಸೈನಿಂಗ್‌ನಲ್ಲಿ ಒಂದು ವಿಷಯವಾಗಿದೆ. ಕಾರು ನಿರ್ಮಾಣದಲ್ಲಿ ಎಂಜಿನಿಯರಿಂಗ್ ಎಷ್ಟು ಮುಖ್ಯವೋ, ವಿನ್ಯಾಸಗಾರರು ಅಷ್ಟೇ ಮುಖ್ಯ! ಕೇವಲ ಡಿಪ್ಲೊಮಾ/ಎಂಜಿನಿಯರಿಂಗ್ ಅಥವಾ ಅನಿಮೇಷನ್ /3ಡಿ ಮಾಡಲಿಂಗ್  ಮಾಡಿದರೆ ಯಾರೂ ಕಾರು ವಿನ್ಯಾಸಗಾರರಾಗಲು ಸಾಧ್ಯವಿಲ್ಲ. ಕಾರು ವಿನ್ಯಾಸಕ್ಕಾಗಿಯೇ ಪ್ರತ್ಯೇಕ ಶಾಲೆಗಳಿವೆ ಅಲ್ಲಿ ಕಲಿತರೆ ಮಾತ್ರ ಒಳ್ಳೆಯ ಭವಿಷ್ಯ ಉಂಟು.ಡಿವೈಪಿ-ವಾಹನ ಸಂಶೋಧನಾ ಹಾಗೂ ಅಧ್ಯಯನ ಕೇಂದ್ರ

ಪುಣೆಯಲ್ಲಿರುವ ಈ ಕೇಂದ್ರವು  ಏಷ್ಯಾದ ಮೂರನೇ ಆಟೋಮೊಟಿವ್ ಡಿಸೈನಿಂಗ್ ಶಾಲೆ.  ಈ ಮೊದಲು ಜಪಾನಿನ ಟಿಸಿಎ-ಟೋಕಿಯೊ ಕಮ್ಯೂನಿಕೇಶನ್ ಆರ್ಟ್ಸ್ ) ಹಾಗೂ ಚೀನಾದ ಗಾಂಗ್‌ಝಾನ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್‌ನಲ್ಲಿ ಈ ಕೋರ್ಸ್  ಲಭ್ಯವಿತ್ತು.

ಇದು ಭಾರತದ ಪ್ರಥಮ ವಿಶ್ವದರ್ಜೆಯ ಕಾರು ವಿನ್ಯಾಸ ಶಾಲೆಯೂ ಹೌದು. ಪ್ರಖ್ಯಾತ ಅಂತರಾಷ್ಟ್ರೀಯ ಖ್ಯಾತಿಯ ಕಾರ್ ಡಿಸೈನರ್ ದಿಲೀಪ್ ಚಾಬ್ರಿಯಾ ಮತ್ತು ಡಿ.ವಾಯ್. ಪಾಟೀಲ್ ಇವರಿಬ್ಬರ ಸಂಘಟನೆಯಲ್ಲಿ ಈ ಶಾಲೆ ಪ್ರಾರಂಭವಾಗಿದೆ. ಡಿಐಪಿ-ಡಿಸಿ ಶಾಲೆಯ ಪಠ್ಯಕ್ರಮವು  ಅಮೆರಿಕದ ನ್ಯಾಷನಲ್ ಅಸೋಸಿಯೇಶನ್ ಆಫ್ ಸ್ಕೂಲ್ಸ್ ಆಫ್ ಆರ್ಟ್ಸ್ ಆ್ಯಂಡ್ ಡಿಸೈನ್ (ಎನ್‌ಎಎಸ್‌ಡಿಎ)  ಚೌಕಟ್ಟಿನ ಮೇಲೆ ಆಧಾರವಾಗಿದೆ.ಡಿವೈಪಿ-ಡಿಸಿಯು 4 ಸ್ಟಾರ್ ಎಜುಕೇಷನ್ ಕೋರ್ಸ್ ಆಗಿದೆ. ವಿಶ್ವದರ್ಜೆ ಕಲಿಕಾ ಪ್ರಯೋಗಾಲಯಗಳು, ಪ್ರೊಜೆಕ್ಟ್ ರೂಮುಗಳು, ಅಂತರರಾಷ್ಟ್ರೀಯ ಶಿಕ್ಷಕ ವೃಂದ -ಇಲ್ಲಿನ ವಿಶೇಷವಾಗಿದೆ. ಈ ಶಾಲೆಯ ಒಂದು ಪ್ರಯೋಜನಕಾರಿ ಅಂಶವೇನೆಂದರೆ, ಇಲ್ಲಿ ನಿಮಗೆ ನೀಡಿರುವ ಪ್ರೊಜೆಕ್ಟ್‌ನಲ್ಲಿ ನಿಮ್ಮದೆ ವಿನ್ಯಾಸದ ಚಲಿಸಬಹುದಾದಂತಹ ಕಾರನ್ನು ವಿನ್ಯಾಸ ಮಾಡಬಹುದು. ಇಲ್ಲಿ ವಿದ್ಯಾರ್ಥಿ ಆಯ್ಕೆ ಪ್ರಕ್ರಿಯೆ ಅತ್ಯಂತ ಕಟ್ಟುನಿಟ್ಟಿನಿಂದ ನಡೆಯುತ್ತದೆ. ಅಂದರೆ ವರ್ಷದಲ್ಲಿ ಕೇವಲ 30 ವಿದ್ಯಾರ್ಥಿಗಳು ಮಾತ್ರ ಈ ಶಾಲೆಗೆ ಪ್ರವೇಶ ಪಡೆಯಬಹುದು. ಇದರಲ್ಲಿ ಅಂತರಾಷ್ಟ್ರೀಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. 30 ಮಂದಿಯಲ್ಲಿ 10 ಜನ ಮಾತ್ರ ಭಾರತೀಯ ವಿದ್ಯಾರ್ಥಿಗಳು ಆಯ್ಕೆಯಾಗುತ್ತಾರೆ. ಇಲ್ಲಿ ಪ್ರಥಮವಾಗಿ ಶಾಲೆಯ ಆಯ್ಕೆ ಸಮಿತಿಯು ನಿಮ್ಮನ್ನು ಸಂದರ್ಶಿಸುತ್ತದೆ. ನಂತರ ನೇರವಾಗಿ ದಿಲೀಪ್ ಚಾಬ್ರಿಯಾ ಅವರು ನಿಮ್ಮ ಹೊಸ ವಿನ್ಯಾಸಗಳ ಮೇಲೆ ನಿಮ್ಮ ಪ್ರವೇಶವನ್ನು ದೃಢಪಡಿಸುವರು.ಪ್ರತಿ ವರ್ಷ ಜನವರಿ ಹಾಗೂ ಜುಲೈನಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಈ ಶಾಲೆಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಕುರಿತು www.dypdc.com ನಲ್ಲಿ ನೋಡಬಹುದು. ನಮ್ಮ ವಿದ್ಯಾರ್ಥಿಗಳು ಕೂಡ ಅಂತರರಾಷ್ಟ್ರೀಯ ಯಾವುದೇ ವಿದ್ಯಾರ್ಥಿಗಳಿಗೆ ಕಡಿಮೆ ಇಲ್ಲ ಎಂಬುದನ್ನು ತೋರಿಸುವುದಕ್ಕೆ ಇದು ಒಂದು ಒಳ್ಳೆಯ ಅವಕಾಶ ಅಲ್ಲವೇ.....?

ಪ್ರತಿಕ್ರಿಯಿಸಿ (+)