ಬದುಕಿನ ತುಡಿತದ ‘ತಿಥಿ’

7

ಬದುಕಿನ ತುಡಿತದ ‘ತಿಥಿ’

Published:
Updated:
ಬದುಕಿನ ತುಡಿತದ ‘ತಿಥಿ’

ಭಾಷೆಗೆ ಒಂದು ವ್ಯಾಕರಣ ಇರುವಂತೆ ಪ್ರತಿಯೊಂದು ಕಲಾಪ್ರಕಾರವೂ ತನ್ನದೇ ಆದ ವ್ಯಾಕರಣ ಹೊಂದಿರುತ್ತದೆ. ಸಿನಿಮಾ ಮಾಧ್ಯಮಕ್ಕೆ ಕೂಡ ತನ್ನದೇ ಆದ ಒಂದು ಭಾಷೆ – ವ್ಯಾಕರಣ ಇದೆ. ಸಾಮಾನ್ಯವಾಗಿ, ಈ ವ್ಯಾಕರಣವನ್ನು ಬಳಸಿಕೊಂಡು ಸಾಂಪ್ರದಾಯಿಕ ಕ್ರಮಗಳಲ್ಲಿ ಸಿನಿಮಾಗಳನ್ನು ರೂಪಿಸಲಾಗುತ್ತದೆ. ಕೆಲವೊಮ್ಮೆ, ಇಂಥ ಸಾಂಪ್ರದಾಯಿಕ ಚೌಕಟ್ಟುಗಳನ್ನು ಮೀರಿದ ಸಿನಿಮಾಗಳು ಸೃಷ್ಟಿಯಾಗುತ್ತವೆ. ಅಂಥದೊಂದು ಚೌಕಟ್ಟು ಮೀರಿದ ಸಿನಿಮಾ ಎನ್ನುವ ಕಾರಣಕ್ಕಾಗಿ ‘ತಿಥಿ’ ಅತ್ಯಂತ ಮಹತ್ವದ ಚಿತ್ರ.ಓರ್ವ ನಿರ್ದೇಶಕನಾಗಿ ದೃಶ್ಯ ಮಾಧ್ಯಮದ ಸಾಧ್ಯತೆಗಳನ್ನು ಅರಗಿಸಿಕೊಂಡ ಹಿರಿಯ ವಯ್ಯಾಕರಣಿಗಳ –ಮಾಸ್ಟರ್ಸ್‌ಗಳ– ಸಿನಿಮಾಗಳ ಬಗ್ಗೆ ಹೊಂದಿರುವಷ್ಟೇ ಕುತೂಹಲವನ್ನು ಹೊಸ ಸಿನಿಮಾ ನಿರ್ಮಾತೃಗಳ ಬಗ್ಗೆಯೂ ನಾನು ಹೊಂದಿದ್ದೇನೆ. ಸಿನಿಮಾ ಭಾಷೆ ಈಗ ಬದಲಾಗಿದೆ. ಸಿನಿಮಾ ಕಟ್ಟುವ ವಿಧಾನ ಬದಲಾಗಿದೆ. ಸಿನಿಮಾ ಕಟ್ಟುವ ಹೊಸ ಕ್ರಮಗಳನ್ನು ಅರಿತುಕೊಳ್ಳುವ ‘ವಿದ್ಯಾರ್ಥಿ ಕುತೂಹಲ’ದಿಂದಲೇ ಹೊಸಬರ ಚಿತ್ರಗಳನ್ನು ನಾನು ನೋಡುತ್ತೇನೆ. ಈ ನಿಟ್ಟಿನಲ್ಲಿ ‘ತಿಥಿ’ ನನಗೆ ಪುಲಕವನ್ನೂ ಅಚ್ಚರಿಯನ್ನೂ ಏಕಕಾಲದಲ್ಲಿ ಉಂಟು ಮಾಡಿದ ಸಿನಿಮಾ.‘ತಿಥಿ’ ಬೆಂಗಳೂರಿನ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನ ಕಾಣುವ ಮೊದಲೇ ನನ್ನಲ್ಲಿ ಅಪಾರ ಕುತೂಹಲ ಕೆರಳಿಸಿತ್ತು. ವಿಶ್ವದ ಅತ್ಯಂತ ಹಳೆಯ ಸಿನಿಮೋತ್ಸವಗಳಲ್ಲಿ ಒಂದಾದ ಸ್ವಿಟ್ಜರ್‌ರ್ಲೆಂಡ್‌ನ ಪ್ರತಿಷ್ಠಿತ ‘ಲೊಕಾರ್ನೊ ಅಂತರರಾಷ್ಟ್ರೀಯ ಚಿತ್ರೋತ್ಸವ’ದಲ್ಲಿ ಎರಡು ಪ್ರಶಸ್ತಿಗಳನ್ನು ಪಡೆದ ಅಗ್ಗಳಿಕೆ ಈ ಚಿತ್ರದ್ದು.‘ಸಂಸ್ಕಾರ’ ಲೊಕಾರ್ನೊದಲ್ಲಿ ಗೌರವಕ್ಕೆ ಪಾತ್ರವಾದ ಮತ್ತೊಂದು ಸಿನಿಮಾ. ಅದಾದ ಸುಮಾರು ನಾಲ್ಕು ದಶಕಗಳ ನಂತರ ಲೊಕಾರ್ನೊದಲ್ಲಿ ಕನ್ನಡದ ಕಲರವವನ್ನು ಮೂಡಿಸಿದ ಚಿತ್ರ ಎನ್ನುವ ಕಾರಣಕ್ಕಾಗಿ ‘ತಿಥಿ’ ಕುತೂಹಲ ಕೆರಳಿಸಿತ್ತು. ಅಷ್ಟು ಮಾತ್ರವಲ್ಲ, ಈ ಚಿತ್ರದ ನಿರ್ದೇಶಕ ರಾಮ್ ರೆಡ್ಡಿ  ಪ್ರಾಗ್‌ನ ‘ಫಿಲ್ಮ್‌ ಇನ್‌ಸ್ಟಿಟ್ಯೂಟ್‌’ನಲ್ಲಿ ಕಲಿತ ಪ್ರತಿಭೆ ಎನ್ನುವುದು ಕೂಡ ಸಿನಿಮಾದ ಬಗ್ಗೆ ಆಸಕ್ತಿಯನ್ನು ಹುಟ್ಟಿಸಿತ್ತು. ‘ಎನ್‌ಎಫ್‌ಡಿಸಿ’ಯ ಸ್ಕ್ರಿಪ್ಟ್ ಲ್ಯಾಬ್‌ನಲ್ಲಿ ತೇರ್ಗಡೆಯಾದ ಕಾರಣಕ್ಕಾಗಿ ಕೂಡ ‘ತಿಥಿ’ ನಿರೀಕ್ಷೆಗಳನ್ನು ಮೂಡಿಸಿತ್ತು. ಈ ನಿರೀಕ್ಷೆಗಳನ್ನು ಹುಸಿಗೊಳಿಸದೆ ಇರುವುದು ‘ತಿಥಿ’ಯ ವಿಶೇಷ.ತಾಜಾ ನಿರೂಪಣಾ ವಿಧಾನ ಹಾಗೂ ಹೊಸ ನುಡಿಗಟ್ಟುಗಳ ಮೂಲಕ ‘ತಿಥಿ’ ಗಮನಸೆಳೆಯುತ್ತದೆ. ಈ ಚಿತ್ರದ ನಿರೂಪಣೆಯ ವಿಧಾನ ನನ್ನನ್ನು ಅಚ್ಚರಿಗೊಳಿಸಿತು. ಇದು ತೀರಾ ಅಪರೂಪದ್ದು. ಹಲವು ಸಿನಿಮಾಗಳನ್ನು ಮಾಡಿದ ನಿರ್ದೇಶಕ ಕೂಡ ತನ್ನದೇ ಆದ ಶೈಲಿಯನ್ನು ಕಂಡುಕೊಳ್ಳಲು ಹೆಣಗುತ್ತಿರುತ್ತಾನೆ. ಆದರೆ, ರಾಮ್ ರೆಡ್ಡಿಯವರು ಚೊಚ್ಚಿಲ ಸಿನಿಮಾದಲ್ಲೇ ತಮ್ಮದೇ ಆದ ನಿರೂಪಣಾ ವಿಧಾನ ಕಂಡುಕೊಂಡಿರುವುದು ಕಡಿಮೆ ಸಾಧನೆಯಲ್ಲ. ಈವರೆಗಿನ ಯಾವ ಕನ್ನಡ ಸಿನಿಮಾದ ಜೊತೆಗೂ ‘ತಿಥಿ’ಯನ್ನು ಹೋಲಿಸುವುದು ಕಷ್ಟ. ಹೊಸ ತಲೆಮಾರಿನ, ಹೊಸ ಕಾಲದ ಸಿನಿಮಾದ ಸಮರ್ಥ ಪ್ರತಿನಿಧಿಯಂತೆ ಅವರು ಕಾಣಿಸುತ್ತಿದ್ದಾರೆ.ಕನ್ನಡ ಮಾತ್ರವಲ್ಲ- ಭಾರತೀಯ ಚಿತ್ರರಂಗದ ಪಾಲಿಗೆ ಕೂಡ ‘ತಿಥಿ’ ಒಂದು ಹಿತವಾದ ಅಚ್ಚರಿ. ಸಿನಿಮಾದ ನಿರೂಪಣೆಯಲ್ಲಿ ಸಾಧ್ಯವಾಗಿರುವ ಬಿಗಿ ಹಾಗೂ ನಿರ್ಲಿಪ್ತತೆ ಬಹಳ ಮುಖ್ಯವಾದುದು. ‘ತಿಥಿ’ಯ ಹಿನ್ನೆಲೆಯಲ್ಲಿ ಮರಾಠಿಯ ‘ಕೋರ್ಟ್’ ಹಾಗೂ ಹಿಂದಿಯ ‘ಲಂಚ್‌ಬಾಕ್ಸ್’ ಚಿತ್ರಗಳನ್ನು ಕೊಂಚ ನೆನಪಿಸಿಕೊಳ್ಳಬಹುದು. ಈ ಸಿನಿಮಾಗಳೆಲ್ಲವೂ ಅನನ್ಯ ನಿರ್ಲಿಪ್ತತೆಯನ್ನು ದಕ್ಕಿಸಿಕೊಂಡ ಕಲಾಕೃತಿಗಳು. ಹೊಸ ಪ್ರತಿಭೆಗಳು ಸಿನಿಮಾ ವ್ಯಾಕರಣಕ್ಕೆ ನೀಡುತ್ತಿರುವ ತಿರುವುಗಳು ನಾಳಿನ ಭಾರತೀಯ ಚಿತ್ರಗಳ ಬಗ್ಗೆ ಆಸೆಹುಟ್ಟಿಸುವಂತಿವೆ.‘ತಿಥಿ’ಯ ಧನಾತ್ಮಕ ಅಂಶಗಳಲ್ಲಿ, ಚಿತ್ರದಲ್ಲಿ ಬಳಕೆಯಾಗಿರುವ ಮಂಡ್ಯದ ಭಾಷೆಯ ಸೊಗಡೂ ಸೇರಿಕೊಂಡಿದೆ. ಈ ಭಾಷೆಯನ್ನು ಮುಖ್ಯವಾಹಿನಿಯ ಕೆಲವು ಚಿತ್ರಗಳು ಬಳಸಿಕೊಂಡು ಗೆಲುವು ಕಂಡಿವೆ. ಆದರೆ ಅಲ್ಲಿನ ಭಾಷೆ ಕೃತ್ರಿಮ ಎನ್ನಿಸುತ್ತದೆ. ‘ತಿಥಿ’ಯಲ್ಲಿ ಬಳಕೆಯಾಗಿರುವುದು ‘ಕರಪ್ಟ್’ ಆಗಿರದ ಮಂಡ್ಯ ಕನ್ನಡ! ಇದಕ್ಕೆ, ವೃತ್ತಿಪರರಲ್ಲದ ಕಲಾವಿದರು (Non Actors) ನಟಿಸಿರುವುದು ಕೂಡ ಕಾರಣವಾಗಿರಬಹುದು. ನಾನು ಕೂಡ ನನ್ನ ಆರಂಭದ ಚಿತ್ರಗಳಲ್ಲಿ ನಾನ್ ಆಕ್ಟರ್ಸ್‌ಗಳನ್ನು ಬಳಸಿಕೊಳ್ಳಲು ಪ್ರಯತ್ನಿಸಿರುವೆ. ಇಂಥ ಪ್ರಯೋಗಗಳ ಹಿಂದಿನ ಕಷ್ಟವನ್ನು ಅನುಭವಿಸಿಯೇ ತೀರಬೇಕು. ಆದರೆ, ರಾಮ್ ರೆಡ್ಡಿಯವರು ನಾನ್ ಆಕ್ಟರ್ಸ್‌ಗಳನ್ನು ಅದ್ಭುತವಾಗಿ ಬಳಸಿಕೊಂಡಿದ್ದಾರೆ. ನಿರೀಕ್ಷಿತವಲ್ಲದ ಅಭಿನಯದ ಆಯಾಮಗಳು ‘ತಿಥಿ’ಯಲ್ಲಿ ಸೊಗಸಾಗಿ ಅಭಿವ್ಯಕ್ತಗೊಂಡಿವೆ. ಈ ಅಭಿನಯ ಸಿನಿಮಾಕ್ಕೆ ಸಹಜತೆಯನ್ನು ತಂದುಕೊಟ್ಟಿದೆ.ಈವರೆಗೆ ಕನ್ನಡ ಸಿನಿಮಾದ ಕಥನಗಳಲ್ಲಿ ಎರಡು ಪ್ರಧಾನ ಧಾರೆಗಳನ್ನು ಗುರ್ತಿಸಬಹುದು. ಒಂದು ಬ್ರಾಹ್ಮಣ ಕಥನಗಳು ಅಥವಾ ಬ್ರಾಹ್ಮಣ್ಯವನ್ನು ವಿರೋಧಿಸುವ ಕಥನಗಳು. ಮತ್ತೊಂದು ದಲಿತರ ಬದುಕಿನ ತವಕತಲ್ಲಣಗಳ ಕಥೆಗಳು. ಈ ಎರಡು ಧಾರೆಗಳಿಗಿಂತಲೂ ಭಿನ್ನವಾದ ಬದುಕು ‘ತಿಥಿ’ ಚಿತ್ರದಲ್ಲಿದೆ. ಮಂಡ್ಯ ಸೀಮೆಯ ಗೌಡರ ಸಂಸ್ಕೃತಿ (ಇದನ್ನು ಶೂದ್ರ ಧಾರೆ ಎನ್ನಬಹುದೇನೊ?) ಚಿತ್ರದಲ್ಲಿ ದಟ್ಟವಾಗಿ ಮೂಡಿದೆ. ಇದರಿಂದಾಗಿ ಸಿನಿಮಾಕ್ಕೊಂದು ನೇಟಿವಿಟಿ ಹಾಗೂ ಸಶಕ್ತ ಸಾಂಸ್ಕೃತಿಕ ಪರಿವೇಷ ದೊರೆತಿದೆ.ಹೆಸರು ‘ತಿಥಿ’ಯಾದರೂ ಇದು ಸಾವಿನ ಬಗೆಗಿನ ಚಿತ್ರವಲ್ಲ, ಬದುಕಿನ ಕುರಿತಾದುದು. ಇಲ್ಲಿ ಸಾವು ಒಂದು ರೂಪಕವಾಗಿ ಬಳಕೆಯಾಗಿದೆ. ಮೂರು ತಲೆಮಾರುಗಳ ಕಥೆಯಲ್ಲಿ ಆಧ್ಯಾತ್ಮಿಕ, ಲೌಕಿಕ ಬದುಕುಗಳನ್ನು ಪ್ರತಿನಿಧಿಸುವ ಪಾತ್ರಗಳಿವೆ. ಓರ್ವ ಪ್ರೇಕ್ಷಕನಾಗಿ ಹಾಗೂ ನಿರ್ದೇಶಕನಾಗಿ ‘ತಿಥಿ’ ಚಿತ್ರದಲ್ಲಿನ ಗಡ್ಡದಯ್ಯ ನನ್ನ ಮನಸ್ಸನ್ನು ಸೂರೆಗೊಂಡಿದ್ದಾನೆ. ಓದು–ಬರಹ ತಿಳಿಯದ ಈ ವ್ಯಕ್ತಿ ಅಧ್ಯಾತ್ಮದ ನೆಲೆಯಲ್ಲಿ ವರ್ತಿಸುತ್ತಾನೆ. ಇನ್ನು ಇಡೀ ಕಥನಕ್ಕೆ ಕಾರಣನಾದ ಸೆಂಚುರಿಗೌಡನ ಪಾತ್ರವನ್ನು ಹೊರಗಿಟ್ಟು, ಆ ಪಾತ್ರವನ್ನು ಪ್ರೇಕ್ಷಕರ ಕಲ್ಪನೆಗೆ ಬಿಟ್ಟಿದ್ದರೆ ಹೇಗಿರುತ್ತಿತ್ತು ಎನ್ನುವ ಕುತೂಹಲವೂ ನನಗಿದೆ. ಪ್ರೇಮ ಪ್ರಕರಣದ ಮೂಲಕ ಎರಡು ಸಂಸ್ಕೃತಿಗಳನ್ನು (ಮಂಡ್ಯ – ಉತ್ತರ ಕರ್ನಾಟಕ) ಬೆಸೆಯುವ ಪ್ರಯತ್ನ ಮಾಡಿರುವುದೂ ಚೆನ್ನಾಗಿದೆ. ಇಲ್ಲಿನ ಕುರಿಗಳನ್ನು ಕೂಡ ಒಂದು ಸಂಕೇತದಂತೆ ನೋಡಬಹುದು.‘ತಿಥಿ’ಯ ಚಿತ್ರಕಥೆಯ ಹೆಣಿಗೆಯಲ್ಲಿ ಅಪಾರ ಜಾಣ್ಮೆಯಿದೆ. ಈ ಅತೀವ ಎಚ್ಚರಿಕೆ ಸಿನಿಮಾದ ಮಿತಿ ಕೂಡ. ಅಂತೆಯೇ, ಸಿನಿಮಾದ ಅಂತ್ಯ ಕೂಡ ನಿರೀಕ್ಷಿತ. ಇವೆಲ್ಲವೂ ಸಣ್ಣಪುಟ್ಟ ತಕರಾರುಗಳು. ಇದರ ಹೊರತಾಗಿ ತಂತ್ರಜ್ಞಾನವನ್ನು ಅಬ್ಬರವಿಲ್ಲದೆ, ಅತ್ಯಂತ ಸಹಜವಾಗಿ ಬಳಸಿಕೊಂಡಿರುವುದು ಸಿನಿಮಾ ವಿದ್ಯಾರ್ಥಿಗಳು ಗಮನಿಸಬೇಕಾದ ಅಂಶ. ಇಲ್ಲಿ ಅನವಶ್ಯಕವಾಗಿ ಯಾವುದೂ ಬಳಕೆಯಾಗಿಲ್ಲ. ಸಿನಿಮಾದ ರೇಶ್ಯೂ (ಪರದೆಯ ಮೇಲೆ ಮೂಡುವ ಚಿತ್ರದ ಗಾತ್ರ) ಕೂಡ ಭಿನ್ನವಾಗಿದೆ.ವಿದೇಶಿ ವಿದ್ಯಾಲಯದಲ್ಲಿ ಓದಿದ ತರುಣನೊಬ್ಬ ಇಲ್ಲಿನ ಸಂವೇದನೆಗಳನ್ನು ಹಿಡಿಯಲು ಪ್ರಯತ್ನಿಸಿರುವುದು ಸಂತೋಷದ ಸಂಗತಿ. ಸಾಂಪ್ರದಾಯಿಕ ಹಾಗೂ ಆಧುನಿಕ ಸಂವೇದನೆಗಳ ನಡುವಣ ಮಧ್ಯಮ ಮಾರ್ಗದಂತೆ ರಾಮ್ ರೆಡ್ಡಿ ಕಾಣಿಸುತ್ತಾರೆ. ಈರೇಗೌಡ ಎನ್ನುವ ಮಂಡ್ಯದ ಗ್ರಾಮೀಣ ಹಿನ್ನೆಲೆಯ ತರುಣ ‘ತಿಥಿ’ ಚಿತ್ರದ ಕಥಾಲೇಖಕ. ಶಾಸ್ತ್ರೀಯ ಹಾಗೂ ಜಾನಪದ ಪ್ರತಿಭೆಗಳ ಸಹಪಯಣದಂತೆ, ರಾಮ್ ರೆಡ್ಡಿ – ಈರೇಗೌಡ ಅವರ ಜೋಡಿ  ಕುತೂಹಲ ಹುಟ್ಟಿಸುವಂತಿದೆ.‘ತಿಥಿ’ ಚಿತ್ರದ ಛಾಯಾಗ್ರಹಣ ಹಾಲೆಂಡ್‌ನ ಡೊರಾನ್‌ ಟೆಂಪರ್ಟ್‌ ಅವರದು. ‘ಸಂಸ್ಕಾರ’ ಚಿತ್ರಕ್ಕೆ ಕೂಡ ಟಾಮ್ ಕೋವನ್ ಎನ್ನುವ ವಿದೇಶಿ ಛಾಯಾಗ್ರಾಹಕ ದುಡಿದಿದ್ದನ್ನು ನೆನಪಿಸಿಕೊಳ್ಳಬಹುದು. ಎರಡೂ ಸಿನಿಮಾಗಳು ಸೂತಕದ ಕಥೆಗಳೇ ಆಗಿವೆ. ‘ಸಂಸ್ಕಾರ’ ಹಾಗೂ ‘ತಿಥಿ’ ಚಿತ್ರಗಳ ಯಶಸ್ಸಿನ ಹಿನ್ನೆಲೆಯಲ್ಲಿ ಮೂಡುವ- ಗ್ರಾಮೀಣ ಭಾರತದ ದಾರುಣ ಚಿತ್ರಗಳು ಅಥವಾ ಸಾಂಪ್ರದಾಯಿಕ ಆಚರಣೆಗಳ ಕಥೆಗಳನ್ನು ಒಳಗೊಂಡ ಸಿನಿಮಾಗಳನ್ನಷ್ಟೇ ವಿದೇಶಿಯರು ನಮ್ಮಿಂದ ನಿರೀಕ್ಷಿಸುತ್ತಾರೆಯೇ ಎನ್ನುವ ಪ್ರಶ್ನೆಯನ್ನೂ ಇಲ್ಲಿ ದಾಖಲಿಸಬೇಕು.ಒಂದಂತೂ ನಿಜ. ಕನ್ನಡ ಹಾಗೂ ಭಾರತೀಯ ಚಿತ್ರರಂಗದ ಮಟ್ಟಿಗೆ ‘ತಿಥಿ’ ಒಂದು ಗಮನಾರ್ಹ ಸಿನಿಮಾ. ಈವರೆಗಿನ ನಮ್ಮ ಸಿನಿಮಾ ವ್ಯಾಕರಣವನ್ನು ಮುರಿದು ಕಟ್ಟುವ ನಿಟ್ಟಿನಲ್ಲಿ ಇದು ಮುಖ್ಯವಾದ ಸಿನಿಮಾ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry