ಶನಿವಾರ, ಏಪ್ರಿಲ್ 17, 2021
32 °C

ಬದುಕಿನ ಪಯಣ ಮುಗಿಸಿದ ಚಂದ್ರಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ತಂದೆ ಇಲ್ಲ. ತಾಯಿಯನ್ನು ನೋಡಿಕೊಳ್ಳಬೇಕು. ಹುಟ್ಟೂರು ತಿಮ್ಮಾಪುರವಾದರೂ ವಾಸಿಸುತ್ತಿದ್ದುದು ತಾಲ್ಲೂಕಿನ ಪುಡಕಲಕಟ್ಟಿ ಗ್ರಾಮ. ತಮ್ಮನ ಶಾಲೆಯ ಖರ್ಚು ಹಾಗೂ ಹೆತ್ತ ತಾಯಿಯನ್ನು ಚೆನ್ನಾಗಿ ಸಾಕಬೇಕು ಎನ್ನುವ ನಿರ್ಧಾರ ಅವನಲ್ಲಿತ್ತು. ಆದರೆ ವಿಧಿಯೇ ಬೇರೆ ಆಟ ಆಡಿತ್ತು. ತಾಲ್ಲೂಕಿನ ಪುಡಕಲಕಟ್ಟಿ ಗ್ರಾಮದಿಂದ ಅಣಸಿ-ದಾಂಡೇಲಿಗೆ ಭಾನುವಾರ ವಿಹಾರಕ್ಕೆ ಹೋಗಿದ್ದ ಚಂದ್ರಗೌಡ ದೊಡ್ಡಗೌಡರ ಮರಳಿದ್ದು ಶವವಾಗಿ.ಸಣ್ಣ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡು ತಾಯಿ ರತ್ನವ್ವಳ ತವರೂರಾದ ಪುಡಕಲಕಟ್ಟಿ ಗ್ರಾಮದಲ್ಲಿ ಬೆಳೆದಿದ್ದ. ಬೇಲೂರು ಕೈಗಾರಿಕಾ ಪ್ರದೇಶದ `ಎಂಜಿನ್ ಮೇಟ್ಸ್~ ಕಂಪೆನಿಯಲ್ಲಿ ಕೆಲಸ ಗಿಟ್ಟಿಸಿಕೊಂಡು ಮನೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ. ಅಲ್ಲಿ ಕೆಲಸ ಮಾಡುವ ಸುಮಾರು 15 ಜನ ಸಹೋದ್ಯೋಗಿಗಳೊಂದಿಗೆ ಕಂಪೆನಿ ವತಿಯಿಂದಲೇ ದಾಂಡೇಲಿಗೆ ತೆರಳಿದ್ದಾರೆ. ಎಲ್ಲರೂ ಸೇರಿ ಮೋಜು ಮಾಡಿದ್ದಾರೆ. ಕೊನೆಯ ಕ್ಷಣದಲ್ಲಿ ಚಂದ್ರಗೌಡನನ್ನು ವಿಧಿ ಕೈ ಬೀಸಿ ಕರೆಯಿತೇನೋ? ಕಾನೇರಿ ನದಿಯಲ್ಲಿ ಈಜಲು ಹೋಗಿ ಜೀವನದ ಪಯಣಕ್ಕೆ ಮಂಗಳ ಹಾಡಿದ್ದಾನೆ. ಸುಮಾರು 30 ಅಡಿ ಆಳವಿರುವ ನೀರಿನಲ್ಲಿ ಈಜಲು ಹೋಗಿದ್ದ ಚಂದ್ರಗೌಡ ನೀರಿನ ಆಳಕ್ಕೆ ಸಿಲುಕಿ ಮುಳುಗಿ ಮೃತಪಟ್ಟಿದ್ದಾನೆ. ಚಂದ್ರಗೌಡ ಕಾಣೆಯಾಗಿದ್ದಾನೆ ಎಂದು ದಾಂಡೇಲಿ ಪೊಲೀಸರು ಅವರ ಮನೆಯವರಿಗೆ ತಿಳಿಸಿದಾಗ, ಗ್ರಾಮದಿಂದ ಜನ ತಂಡೋಪತಂಡವಾಗಿ ಖಾಸಗಿ ವಾಹನಗಳ ಮೂಲಕ ಸ್ಥಳಕ್ಕೆ ಧಾವಿಸಿದ್ದರು. ಇತ್ತ ಚಂದ್ರಗೌಡ ಮತ್ತೆ ಜೀವಂತವಾಗಿ ಊರಿಗೆ ಬರುತ್ತಾನೆ ಎಂದು ಕಾಯ್ದು ಕುಳಿತಿದ್ದ ಗ್ರಾಮದವರ ಕನಸು ಕಮರಿಹೋಗಿತ್ತು.ಮಂಗಳವಾರ ರಾತ್ರಿ ಚಂದ್ರಗೌಡನ ಶವ ಗ್ರಾಮಕ್ಕೆ ಬರುತ್ತಿದ್ದಂತೆ ಅವನ ಗೆಳೆಯರ ಹಾಗೂ ಮನೆಯವರ ಆಕ್ರಂದನ ಮುಗಿಲು ಮುಟ್ಟಿತ್ತು. ಚಂದ್ರಗೌಡ ತನ್ನ ತಮ್ಮ ಫಕ್ಕೀರಗೌಡನಿಗೆ ಗ್ರಾಮದಲ್ಲಿ `ಪ್ರಜಾವಾಣಿ~ಯ ಏಜೆಂಟ್ ಆಗಲು ಸಹಾಯವನ್ನೂ ಮಾಡಿದ್ದ. ದುಬೈನ ಕಂಪೆನಿಯೊಂದರಲ್ಲಿ ಸುಮಾರು ನಾಲ್ಕು ತಿಂಗಳಿಗಿಂತಲೂ ಹೆಚ್ಚು ಕಾಲ ಕೆಲಸ ಮಾಡಿ ಊಟ ಸರಿಹೋಗುವುದಿಲ್ಲ ಎಂದು ವಾಪಸ್ ಗ್ರಾಮಕ್ಕೆ ಬಂದು ಬೇಲೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ಗ್ರಾಮಸ್ಥರು ತಿಳಿಸಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.