ಶನಿವಾರ, ಫೆಬ್ರವರಿ 27, 2021
31 °C

ಬದುಕಿನ ಪಾಠ ಕಲಿಸಿದ ಜೈಲು ಜೀವನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬದುಕಿನ ಪಾಠ ಕಲಿಸಿದ ಜೈಲು ಜೀವನ

ಬೆಂಗಳೂರು: ‘ಜೈಲಿನಲ್ಲಿ ಕಳೆದ ದಿನಗಳು ಬದುಕಿನ ದೊಡ್ಡ ಪಾಠ ಕಲಿಸಿವೆ. ಕೆಟ್ಟ ಗಳಿಗೆಯಲ್ಲಿ ದುಡುಕಿ ತಪ್ಪು ಮಾಡಿದೆ. ಇಲ್ಲಿಗೆ ಬಂದ ಮೇಲೆ ನನ್ನಂತೆ ದುಡುಕಿ, ಪಶ್ಚಾತ್ತಾಪದಲ್ಲಿ ದಿನ ಕಳೆಯುತ್ತಿದ್ದವರನ್ನು ಕಂಡಾಗಲೇ ಮನ ಪರಿವರ್ತನೆಯಾಯಿತು...’ಗಣರಾಜ್ಯೋತ್ಸವದ ಪ್ರಯುಕ್ತ ನಗರದ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಿಂದ ಸನ್ನಡತೆ ಆಧಾರದ ಮೇಲೆ ಮಂಗಳವಾರ  ಬಿಡುಗಡೆಯಾದ 98 ಕೈದಿಗಳ ಪೈಕಿ, ಸಾಗರದ 52 ವರ್ಷದ ಸುಬ್ರಮಣ್ಯ ಅವರ ಮಾತುಗಳಿವು. ಕೃಷಿಕರಾಗಿದ್ದ ಅವರು ಕೌಟುಂಬಿಕ ವಿಷಯಕ್ಕಾಗಿ ಪತ್ನಿ ಹತ್ಯೆಗೈದು ಜೀವಾವಧಿ ಶಿಕ್ಷೆಗೊಳಗಾಗಿದ್ದರು. ಇಂದಿಗೆ 16 ವರ್ಷ,  24 ದಿನಗಳನ್ನು ಅವರು ಜೈಲಿನಲ್ಲಿ ಕಳೆದಿದ್ದಾರೆ.‘ಜೀವನದ ಅಮೂಲ್ಯ ಕ್ಷಣಗಳನ್ನು ಕಂಬಿಗಳ ಹಿಂದೆ ಕಳೆದೆ. ನನ್ನ ಮೂರು ಹೆಣ್ಣುಮಕ್ಕಳಿಗೆ ತಂದೆ ಪ್ರೀತಿ ಕೊಡಲಾಗಲಿಲ್ಲ. ಈ ಅಕಾಲಿಕ ಬಿಡುಗಡೆ ನನಗೆ ಸಿಕ್ಕ ಮರುಜನ್ಮ. ಮಗಳ ಮದುವೆ ಸೇರಿದಂತೆ ಮಾಡಬೇಕಾದ್ದುದು  ಬೇಕಾದಷ್ಟಿದೆ. ಇನ್ನು ಯಾರ ಮೇಲೂ ಕೈ ಎತ್ತದೆ ಬದುಕುತ್ತೇನೆ’ ಎಂದಾಗ ಅವರ ಕಣ್ಣುಗಳು ತೇವಗೊಂಡವು.ಕೈದಿಗಳಿಗೆ ಪ್ರಮಾಣ ಪತ್ರದ ಜತೆಗೆ, ಹೊಸ ಬಟ್ಟೆಯ ಬ್ಯಾಗ್ ವಿತರಿಸಿ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ್, ‘ವರದಕ್ಷಿಣೆ ಸಾವು ಸೇರಿದಂತೆ ವಿವಿಧ ಪ್ರಕರಣಗಳಲ್ಲಿ 14ವರ್ಷಕ್ಕಿಂತ ಅಧಿಕ ಕಾಲ ಶಿಕ್ಷೆ ಅನುಭವಿಸಿದ 60 ವರ್ಷ ವಯೋಮಾನ ಮೀರಿದ ಕೈದಿಗಳನ್ನು ಬಿಡುಗಡೆ ಮಾಡುವ ಕುರಿತು ಚಿಂತನೆ ನಡೆಸಲಾಗುವುದು’ ಎಂದರು.14 ವರ್ಷದ ಮಿತಿ ಕಡಿಮೆ ಮಾಡಿ: ಸನ್ನಡತೆ ಆಧಾರದ ಮೇಲೆ ಬಿಡುಗಡೆಗೊಂಡು ಮಾತನಾಡಿದ ಬನಶಂಕರಿಯ ಮಮತಾ, ‘ಮಾಡಿದ ತಪ್ಪಿಗೆ ಪಶ್ಚಾತ್ತಾಪವಾಗಲು ಹೆಚ್ಚಿನ ವರ್ಷಗಳು ಬೇಕಿಲ್ಲ. ಬದಲಿಗೆ ಕೆಲವೇ ದಿನಗಳು ಸಾಕು. ಹಾಗಾಗಿ ಸನ್ನಡತೆ ಆಧಾರದ ಮೇಲೆ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಕೈದಿಗಳ ಬಿಡುಗಡೆಗೆ ಇರುವ 14  ವರ್ಷದ ಮಿತಿ ಕಡಿಮೆ ಮಾಡಬೇಕು’ ಎಂದು ಮನವಿ ಮಾಡಿದರು.ಜೈಲಿನಲ್ಲೇ 3 ಸ್ನಾತಕೋತ್ತರ ಪದವಿ!: ‘ಒಂದು ಕ್ಷಣದ ತಪ್ಪಿಗೆ ನಾನು ತೆತ್ತ ಬೆಲೆ 15 ವರ್ಷ. ಆರಂಭದಲ್ಲಿ ಖಿನ್ನತೆಗೆ ಒಳಗಾಗಿದ್ದ ನನಗೆ, ಜೈಲಿನಲ್ಲಿದ್ದು ಕೊಂಡೇ ಓದುವಂತೆ ತಂದೆ ಉತ್ತೇಜಿಸಿ ದರು. ಇಲ್ಲಿನ ಸಿಬ್ಬಂದಿಯ  ಪ್ರೋತ್ಸಾಹ ಕೂಡ ಸಿಕ್ಕಿತು. ಅಂತೆಯೇ ಕನ್ನಡ ಸಾಹಿತ್ಯ ಸೇರಿದಂತೆ 3 ವಿಷಯಗಳಲ್ಲಿ ಸ್ನಾತ ಕೋತ್ತರ ಪದವಿ ಪಡೆದೆ’ ಎಂದು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿ ಬಿಡುಗಡೆಗೊಂಡ ಮಂಡ್ಯದ  ಅರವಿಂದ್ ಕುಮಾರ್ ಹೇಳಿದರು.ಕನಸಲ್ಲೇ ಕಣ್ಮುಚಿದರು: ‘ರಾಜ್ಯದಲ್ಲಿ 2006ರಿಂದ 2015ರವರೆಗೆ ಕೈದಿಗಳ ಬಿಡುಗಡೆಗೆ ಯೋಗ ಕೂಡಿ ಬಂದಿ ರಲಿಲ್ಲ.  ಈ ಅವಧಿಯಲ್ಲಿ ಬಿಡುಗಡೆ ಕನಸು ಕಂಡಿದ್ದ ಕೆಲ ಕೈದಿಗಳು ಕಣ್ಮುಚ್ಚಿ ದರು’ ಎಂದು ಸನ್ನಡತೆ ಕೈದಿಗಳ ಸಲಹಾ ಮಂಡಳಿ ಸದಸ್ಯೆ ಸಿಸ್ಟರ್ ಅಡೆಲ್ ವಿಷಾದಿಸಿದರು.42 ಕೈದಿಗಳ ಬಿಡುಗಡೆ

ಮೈಸೂರು:
ಸನ್ನಡತೆ ಆಧರಿಸಿ ಮೂವರು ಮಹಿಳಾ ಕೈದಿಗಳು ಸೇರಿದಂತೆ 42 ಕೈದಿಗಳು ನಗರದ ಕೇಂದ್ರ ಕಾರಾಗೃಹದಿಂದ ಗಣರಾ ಜ್ಯೋತ್ಸವ ದಿನದಂದ ಬಿಡುಗಡೆ ಗೊಂಡರು.

ನಗರದ ಕೇಂದ್ರ ಕಾರಾಗೃಹದ ಆವರಣದಲ್ಲಿ 67ನೇ ಗಣರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಗರ ಪೊಲೀಸ್‌ ಕಮಿಷನರ್‌ ಬಿ. ದಯಾನಂದ ಮತ್ತು ದಕ್ಷಿಣ ವಲಯ ಐಜಿಪಿ ಬಿ.ಕೆ. ಸಿಂಗ್‌ ಅವರು 42 ಮಂದಿಗೆ ಬಿಡುಗಡೆ ಪ್ರಮಾಣಪತ್ರ ವಿತರಿಸಿದರು.

ಉತ್ತಮ ಗುಣಗಳನ್ನು ಅಳವಡಿಸಿಕೊಂಡು ಯಶಸ್ಸು ಸಾಧಿಸುವಂತೆ ಬಂಧಮುಕ್ತರಿಗೆ ಅಧಿಕಾರಿಗಳು ಕಿವಿಮಾತು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.