ಬದುಕಿನ ಭದ್ರತೆಗೆ ಸಾಧನೆ ಮುಖ್ಯ

7

ಬದುಕಿನ ಭದ್ರತೆಗೆ ಸಾಧನೆ ಮುಖ್ಯ

Published:
Updated:

ಚಿತ್ರದುರ್ಗ: ಕಾಲಚಕ್ರ ಆಯುಷ್ಯವನ್ನು ಕಬಳಿಸಿದರೆ ಸಾಧನೆ ಬದುಕನ್ನು ಭದ್ರಗೊಳಿಸುತ್ತದೆ ಎಂದು ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.ಬಿಹಾರ ಬೋಧಗಯಾದಲ್ಲಿ ಮುರುಘಾಮಠ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಏಕತಾ ಮೇಳದ ನೇತೃತ್ವ ವಹಿಸಿ ಅವರು ಮಾತನಾಡಿದರು.ಕಾಲ ಬೇರೆ ಆಗಿರಬಹುದು. ಆದರೆ ಕಾಲ ಕೆಟ್ಟಿಲ್ಲ. ಕಾಲದ ಒಳಗೆ ಬದುಕುತ್ತಿರುವ ಮಾನವನ ಮತಿ ಕೆಟ್ಟಿದೆ. ದುರಾಸೆಗೆ ಒಳಗಾದವರು ಕೊಳ್ಳುಬಾಕತನಕ್ಕೀಡಾಗಿ, ಕೊಳ್ಳೆ ಹೊಡೆಯುತ್ತಿದ್ದಾರೆ. ಭೌತಿಕ ದಾಸ್ಯಕ್ಕೆ ಒಳಗಾಗಿರುವ ಮಾನವ ಅದರಿಂದ ನಿಜವಾದ ಸಂತೃಪ್ತಿಯನ್ನು ಪಡೆಯಲಾರ. ಅಶಾಶ್ವತವಾದುದನ್ನೇ ಶಾಶ್ವತವೆಂದು ಭಾವಿಸಿರುವ ಆಧುನಿಕ ಮಾನವನದು ಭ್ರಮೆಯ ಬದುಕು. ಭೌತಿಕ ದಾಸ್ಯವು ಭ್ರಮೆಯ ಬದುಕಿಗೆ ತಳ್ಳುತ್ತದೆ. ಇದರ ಅರಿವು ಉಂಟಾದರೆ, ಮುಂದಾಗುವ ಅನಾಹುತಗಳನ್ನು ತಪ್ಪಿಸಬಹುದು. ಇಲ್ಲದಿದ್ದರೆ ಕಾಲವೇ ಮುಂದಾಗಿ ಕ್ರಮವನ್ನು ಜರುಗಿಸಬಲ್ಲದು.ಉಪಕಾರ ಮಾಡುವ ಪ್ರವೃತ್ತಿಯು ಆಧುನಿಕ ಜಗತ್ತಿನಲ್ಲಿ ಕಡಿಮೆ ಆಗುತ್ತಿದೆ. ಅಪಕಾರ ಮಾಡುವವರ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕ್ಕೆ ಮಾತ್ರವಲ್ಲ ಆತಂಕಕ್ಕೆ ಕಾರಣವಾಗಿದೆ. ಪರರಿಗೆ ಉಪಕಾರ ಮಾಡುವುದರಿಂದ ಸಿಗುವ ಸಂತೃಪ್ತಿಯು ಮತ್ತೆಲ್ಲಿಯೂ ಸಿಕ್ಕಲಾರದು. ಉಪದ್ರವ ಮಾಡಿದಾಗ ವಿಘ್ನಸಂತೋಷ ಸಿಗಬಹುದು. ಆದರೆ ಅದು ಬದುಕಿನ ನೆಮ್ಮದಿಯನ್ನು ಇಲ್ಲವಾಗಿಸುತ್ತದೆ. ಉಪದ್ರವ ಅಥವಾ ಅಪಕಾರದಿಂದ ಅಪರಾಧಿ ಪ್ರಜ್ಞೆ.ಅಪರಾಧಿ ಪ್ರಜ್ಞೆಯಿಂದ ಬಳಲುವ ವ್ಯಕ್ತಿಯ ಬದುಕಿನಲ್ಲಿ ಭಯ - ಭೀತಿ. ಅಷ್ಟೇ ಅಲ್ಲ, ಧೃತಿಗೆಡುವ ಸಾಧ್ಯತೆ. ಧೃತಿ ಕೆಟ್ಟಾಗ ಮತಿ ಕೆಡದಿರುತ್ತದೆಯೇ? ಆದ್ದರಿಂದ ಬದುಕಿಗೆ ಮತಿ ಬೇಕು. ಸುಮತಿ ಅಂದರೆ ಸುಜ್ಞಾನ. ಮತಿ ಮಾತ್ರವಲ್ಲ ಗತಿಯೂ ಬೇಕು. ಅದುವೆ ಸದ್ಗತಿ. ಮಾನವ ತಾನು ಮಾಡುವ ಎಲ್ಲ ಪಾಪಕೃತ್ಯಗಳು ನಿಲ್ಲಬೇಕು.ಅದಕ್ಕೆ ಸೂಕ್ತವಾದ ಪರಿಹಾರವೆಂದರೆ, ಪ್ರಾಯಶ್ಚಿತ್ತ. ಪಾರಮಾರ್ಥ ಸಾಧನೆಯಿಂದ ಪಾಪಕೃತ್ಯಗಳಿಗೆ ವಿದಾಯ. ಪಾಪ ಕೃತ್ಯಗಳಿಗೆ ಒಳಗಾಗುವ ವ್ಯಕ್ತಿಯ ಬದುಕಿನಲ್ಲಿ ಒಂದು ದಿನ ಪ್ರಾಯಶ್ಚಿತ್ತ ಆಗಲೇಬೇಕು. ಅದಕ್ಕೆ ಸಮಯ ಬೇಕಾಗುತ್ತದೆ. ಆದರೆ ಪರಮಾರ್ಥ ಪ್ರಜ್ಞೆಯಿಂದ ಅದನ್ನು ಬೇಗನೆ ಸಾಧಿಸಬಹುದು.ಮೇಳದ ಸಮ್ಮುಖ ವಹಿಸಿದ್ದ ಕರ್ನಾಟಕ ಹೊಸದುರ್ಗ ಭಗೀರಥ ಪೀಠದ  ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಅಸಮಾನತೆ ತೊಲಗಿಸುವ ಹಿನ್ನೆಲೆಯಲ್ಲಿ ಬುದ್ಧ - ಬಸವರು ಹೋರಾಟ ನಡೆಸಿದರು. ಈ ಹಿನ್ನೆಲೆಯಲ್ಲಿ ಅವರ ಸನ್ಮಾರ್ಗ ಅನುಕರಣೆ ಇಂದು ತುರ್ತು ಅಗತ್ಯವಿದೆ. ದಯವಿಲ್ಲದ ಧರ್ಮ ಯಾವುದಯ್ಯ ಎಂದ ಬಸವಣ್ಣ, ಆಸೆಯೇ ದುಃಖಕ್ಕೆ ಮೂಲ ಎಂದು ಬುದ್ಧ ಹೇಳಿದ. ದಾರ್ಶನಿಕರ ತತ್ವಗಳು ಸರ್ವಕಾಲಿಕ ಸತ್ಯ ಎಂದು ನುಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry