ಮಂಗಳವಾರ, ಜನವರಿ 21, 2020
28 °C

ಬದುಕಿ, ಬದುಕಲು ಬಿಡಿ

–ಪರಮೇಶ್ ಮಲ್ಲೇಗೌಡ ಬೆಂಗಳೂರು Updated:

ಅಕ್ಷರ ಗಾತ್ರ : | |

ಹು ಲಿ ದಾಳಿಯಿಂದ ದುರದೃಷ್ಟವಶಾತ್ ಪ್ರಾಣ ಕಳೆದುಕೊಂಡವರಿಗೆ ನನ್ನ ನಮನವನ್ನರ್ಪಿಸುತ್ತಾ...

ವನ್ಯಜೀವಿಗಳು ಹಾಗೂ ಮಾನವನ ನಡುವಿನ ಸಂಘರ್ಷವು ಅನಾದಿಕಾಲದಿಂದಲೂ ಬಗೆಹರಿ­ಯದ ಒಂದು ಸಮಸ್ಯೆಯಾಗಿದೆ. ಶೇ ೨೦ ಭಾಗ ಅರಣ್ಯ ಪ್ರದೇಶವನ್ನು ಹೊಂದಿರುವ ಭಾರತ­ದಲ್ಲಿ, ಸಂರಕ್ಷಿತ ಅರಣ್ಯ ಪ್ರದೇಶವಿರುವುದು ಕೇವಲ ಶೇ ೪ ರಷ್ಟು.

 

ಇಂದು ಬಹುತೇಕ ವನ್ಯಜೀವಿಗಳ ಆವಾಸ ಸ್ಥಾನಗಳು ಅಭಿವೃದ್ಧಿಯ ಹೆಸರಿನಲ್ಲಿ ಹರಿದು ಹಂಚಿಹೋಗಿವೆ. ಅದರಲ್ಲೂ ಕೆಲವು ಅರಣ್ಯ ಪ್ರದೇಶಗಳಂತೂ ಜನ, ದನ, ಕೃಷಿ ಭೂಮಿಗಳಿಂದ ಮತ್ತು ಶ್ರೀಮಂತರ ಮೋಜಿನ ತಾಣಗಳಾದ ರೆಸಾರ್ಟ್ ಹಾಗೂ ಎಕೊ -ಟೂರಿಸಂ ಎಂಬ ಅಡ್ಡಗಳಿಂದ ತುಂಬಿಹೋಗಿವೆ.ಇವುಗಳ ಜೊತೆಗೆ ಇಂದು ಬಹುತೇಕ ಕಾಡು­ಗಳಲ್ಲಿ ಲಂಟಾನಾದಂತಹ ಮಾರಕ ಅತಿಕ್ರಮಣ­ಕಾರಿ ವಿದೇಶಿ ಗಿಡಗಳು ಕೂಡ ಮೂಲ ಮರಗಿಡಗಳ ಬೆಳವಣಿಗೆಯನ್ನು ಕುಂಠಿತಗೊಳಿಸಿ, ವನ್ಯಜೀವಿಗಳ ಆಹಾರ ಸರಪಣಿಗೆ ಮಾರಕವಾಗಿವೆ.ಭಾರೀ ಜನಸಂಖ್ಯೆಯಿರುವ ನಮ್ಮ ದೇಶದಲ್ಲಿ ಕೇವಲ ಶೇ ೪ರಷ್ಟು ಸಂರಕ್ಷಿತ ಅರಣ್ಯಪ್ರದೇಶ­ವಿರುವ ಕಾರಣ ಇಂದು ವನ್ಯಜೀವಿಗಳು ಹಾಗೂ ಮಾನವನ ಮುಖಾಮುಖಿ ಸರ್ವೇ ಸಾಮಾನ್ಯ­ವಾಗಿದೆ. ಇದಕ್ಕೆ ಯಾವುದೇ ರೀತಿಯ ಪರಿಹಾರ­ಗಳನ್ನು ಕಂಡುಹಿಡಿದರೂ, ಆವಾಸಸ್ಥಾನದಲ್ಲಿನ ನಿರಂತರ ಬದಲಾವಣೆಗಳು ಮತ್ತು ಪ್ರಾಣಿಗಳ ಸ್ವಭಾವದಲ್ಲಿನ ಬದಲಾವಣೆಗಳು ಇದನ್ನು ಒಂದು ಬಗೆಹರಿಯದ ಸಮಸ್ಯೆಯನ್ನಾಗಿ ಮಾಡಿವೆ. ನಾಲ್ಕು ಜನರನ್ನು ಬಲಿ ತೆಗೆದುಕೊಂಡ ಹುಲಿಯ ವಿಚಾರದಲ್ಲೂ ಇದೇ ಆಗಿರಬಹುದು.ಪ್ರಸ್ತುತ ವಿಷಯವೇನೆಂದರೆ, ಆ ನಾಲ್ಕು ದಿನದ ವಿಷಮ ಪರಿಸ್ಥಿತಿಯನ್ನು ನಿಭಾಯಿಸುವ ಸಂಬಂಧ ನಮ್ಮ ಮಂತ್ರಿಗಳ ಹಾಗೂ ಸಂಶೋಧಕರ ಹೇಳಿಕೆಗಳು, ಹುಲಿಯನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲುವ ಆದೇಶಗಳು, ಹುಲಿಯನ್ನು ಸೆರೆಹಿಡಿದ ನಂತರ ಅದನ್ನು ಕಣ್ಣೆದುರೇ ಕೊಲ್ಲಬೇಕೆಂಬ ಗ್ರಾಮಸ್ಥರ ಹುಚ್ಚು ಬೇಡಿಕೆಗಳು, ಹಿಡಿದ ಹುಲಿಯನ್ನು ಕಾಡಿಗೆ ಬಿಡಬೇಕೇ ಅಥವಾ ಪ್ರಾಣಿ ಸಂಗ್ರಹಾಲಯದಲ್ಲಿ ಇಟ್ಟುಕೊಳ್ಳಬೇಕೇ ಎಂಬ ಚರ್ಚೆಗಳನ್ನು ಅವಲೋಕಿಸಿದಾಗ ನಮ್ಮ ಸಂರಕ್ಷಣಾ ವ್ಯವಸ್ಥೆ ಇನ್ನೂ ಗ್ರಾಮ ಮಟ್ಟವನ್ನು  ತಲುಪದೇ, ಇಲಾಖಾ ಮಟ್ಟದಲ್ಲೇ ಸುತ್ತುತ್ತಿರುವುದನ್ನು ಮನಗಾಣಬಹುದು.ತಮ್ಮ ಕುಟುಂಬದ ಒಬ್ಬನನ್ನು ಕಳೆದುಕೊಂಡ ಯಾವುದೇ ವ್ಯಕ್ತಿಗೆ ಆ ಹುಲಿಯನ್ನು ಕೊಂದು­ಬಿಡುವಷ್ಟು ಕೋಪ ಇರಬಹುದು ಅಥವಾ ಗ್ರಾಮಸ್ಥರಿಗೆ ಅದರ ಬಗ್ಗೆ ಭಯ ಇರಬಹುದು. ಆದರೆ ಅದನ್ನು ಕೊಲ್ಲುವುದು ಸಮಸ್ಯೆಗೆ ಪರಿಹಾರವೇ? ಅದೆಷ್ಟು ಕಾಡುಪ್ರಾಣಿಗಳು ರೈತರು ಹಾಕಿದ ಅಕ್ರಮ ವಿದ್ಯುತ್ ಬೇಲಿಗೆ, ಸಿಡಿಮದ್ದಿಗೆ ಹಾಗೂ ಬೇಟೆಗಾರರ ಗುಂಡಿಗೆ ಬಲಿಯಾಗಿಲ್ಲ. ಇಂದು ಇದರ ಬಗ್ಗೆ ಯಾರೂ ಚಕಾರವೆತ್ತುವುದಿಲ್ಲ ಯಾಕೆ?ಒಂದು ವೇಳೆ ‘ಆ’ ಹುಲಿಯನ್ನು ಸಾಯಿಸಿದ್ದೇ ಆದರೆ, ಈ ಸಮಸ್ಯೆಯು ಬಗೆಹರಿಯುತ್ತದೆಯೇ? ಹಾಗಾದರೆ ಇದಕ್ಕೆ ಪರಿಹಾರವೇನು?

ಸ್ವಲ್ಪ ದೂರದೃಷ್ಟಿಯಿಂದ ಯೋಚಿಸಿ ನೋಡಿ... ಮೇಲ್ನೋಟಕ್ಕೆ ಸರಿ ಎನಿಸಿದರೂ, ಇನ್ನೂ ಬಂಡೀಪುರ, ನಾಗರಹೊಳೆ ಕಾಡುಗಳಲ್ಲಿ ಸಾಕಷ್ಟು ಹುಲಿಗಳಿವೆ. ಅವುಗಳೂ ಹೊರಬಂದು ಅಥವಾ ಊರುಗಳ ಕಡೆ ಬಂದು ತೊಂದರೆ ಕೊಡುವುದಿಲ್ಲವೆಂದು ಏನು ಗ್ಯಾರಂಟಿ? ಅವುಗಳನ್ನು ಕೂಡ ಕೊಲ್ಲಲಾಗುತ್ತದೆಯೇ?  ಯಾವ ಆಧಾರದ ಮೇಲೆ ಕೊಲ್ಲಬೇಕೆಂದು ತೀರ್ಮಾನಿಸುತ್ತಾರೆ.ಈಗ ನೋಡಿದರೆ ಹುಲಿ ದಾಳಿಯಿಂದ ಗಾಯಗೊಂಡ ಒಬ್ಬ ಗಾಯಾಳು, ‘ಸೆರೆಹಿಡಿದಿರುವ ಹುಲಿ, ದಾಳಿ ಮಾಡಿದ ಹುಲಿಯೇ ಅಲ್ಲ’ ಎಂದು ಹೇಳಿದ್ದಾನೆ, ಇದಕ್ಕೇನು ಹೇಳೋಣ? ಮುಂದೆ ಇದೇ ರೀತಿ ಪ್ರತೀ ಗ್ರಾಮ­ದಲ್ಲೂ ಸಂಘರ್ಷಕ್ಕೆ ಕಾರಣವಾಗುವ ಇತರ ಪ್ರಾಣಿಗಳನ್ನು ಕೊಲ್ಲಬೇಕು ಎಂಬ ಬೇಡಿಕೆ ಹೆಚ್ಚಾ­ಗುತ್ತಾ ಹೋದರೆ, ದೇಶದಲ್ಲಿ ಸೀಮಿತ ಸಂಖ್ಯೆ­ಯಲ್ಲಿರುವ ಹುಲಿಗಳು ಹಾಗೂ ಇತರ ವನ್ಯ­ಜೀವಿ­ಗಳ ಸಂರಕ್ಷಣೆ ಹೇಗೆ ಸಾಧ್ಯ?ಮೇಲಾಗಿ ಈಗ ನಡೆದಿರುವಂತಹ ಘಟನೆಗಳೆಲ್ಲವೂ ಕಾಡಿ­ನಲ್ಲಿ ಒಳಗಡೆ ಆಗಿರುವವೇ ಹೊರತು, ಊರಿನ ಒಳಗಲ್ಲ. ಆದ್ದರಿಂದ ಅರಣ್ಯದಂಚಿನಲ್ಲಿರುವ ಗ್ರಾಮಸ್ಥರು ಕೂಡ ತಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಒಳ್ಳೆಯದು.ಇನ್ನೊಂದು ಮುಖ್ಯವಾದ ವಿಚಾರ ಎಂದರೆ, ನೂರಾರು ಜನರನ್ನು ಬಲಿ ತೆಗೆದುಕೊಂಡು ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಯೋತ್ಪಾದಕರು,  ಅಪರಾಧಿಗಳು  ಕ್ಷಮಾ­ದಾನಕ್ಕೆ ಅರ್ಜಿ ಸಲ್ಲಿಸಬ­ಹುದು. ತಮಗೆ ಸರಿ ಕಾಣಿಸಿದರೆ  ಅಂಥವರನ್ನು ಕ್ಷಮಿಸಲು ರಾಷ್ಟ್ರಪತಿಯವರಿಗೆ ಅವಕಾಶವಿದೆ.ಹೀಗಿರು­ವಾಗ ಪ್ರಾಣಿಗಳಿಂದ ಆಕಸ್ಮಿಕವಾಗಿ ಸಂಭವಿಸಿ­ರುವ ಹಾಗೂ ಸಂಭವಿಸುವ ಇಂತಹ ದುರಂತ­ಗಳಿಗಾಗಿ ಅವನ್ನು  ಕೊಲ್ಲುವುದೇ ಪರಿಹಾರವಲ್ಲ. ಇದರ ಬದಲು ಮಂತ್ರಿಗಳು, ಸಂಶೋಧಕರು ಹಾಗೂ ಅರಣ್ಯಾಧಿಕಾರಿಗಳು, ಸ್ಥಳೀಯ ಜನರ ಸಹಭಾಗಿತ್ವ ಪಡೆದು ವನ್ಯಜೀವಿ­ಗಳು ಹಾಗೂ ಮಾನವನ ನಡುವಿನ ಸಂಘರ್ಷದ ನಿರ್ವಹಣಾ ವಿಧಾನಗಳನ್ನು ರೂಪಿಸುವ ನಿಟ್ಟಿ­ನತ್ತ ಗಮನಹರಿಸಿ, ಅದರಲ್ಲಿ ಸಫಲತೆಯನ್ನು ಕಾಣ­ಬೇಕೆಂಬುದೇ ಪ್ರಾಣಿಪ್ರಿಯರ ಮನವಿ.ಏಕೆಂದರೆ, ನಾವು ಕೈಗೊಳ್ಳುವ ಯೋಜನೆಗಳು ಹಾಗೂ ಕಾರ್ಯಕ್ರಮಗಳು, ವನ್ಯಜೀವಿಗಳು ಹಾಗೂ ಮನುಷ್ಯರ ನಡುವೆ ಬಾಂಧವ್ಯ ಬೆಳೆಸಬೇಕೇ ಹೊರತು, ದ್ವೇಷವನ್ನಲ್ಲ.

 

ಪ್ರತಿಕ್ರಿಯಿಸಿ (+)