ಭಾನುವಾರ, ಮೇ 22, 2022
27 °C

`ಬದುಕಿ ಬರುವ ಆಸೆ ಉಳಿದಿರಲಿಲ್ಲ...'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: `ಮಗಾ ಯಾತ್ರಿಗಿ ಕರಕೊಂಡ್ ಹೊಂಟಾನ ಅಂತ ಖುಷಿ ಆಗಿತ್ತು. ಬದರಿನಾಥ ಕ್ಷೇತ್ರಕ್ಕೆ ಹ್ವಾದಮ್ಯಾಲೆ ಸಂತಸ ಆಗಿ ಬದರಿನಾಥ ಕೀ ಜೈ ಅಂದೆ. ಆ ನಂತ್ರ ಮಳಿ-ಚಳಿ ನೋಡಿ ನಾವು ವಾಪಸ್ಸು ಬರುವ ವಿಶ್ವಾಸ ಉಳಿಲಿಲ್ಲ. ಇಲ್ಲಿದ್ದವರ ಮುಖ ನೋಡತಿನೊ ಇಲ್ಲೊ ಅನಿಸ್ತಿತ್ತು...' - ಹೀಗೆ ಹೇಳುತ್ತ 65 ವರ್ಷ ವಯಸ್ಸಿನ ವನಿತಾ ಓಂಕಾರ ದುಃಖ ತಡೆಯಲಾಗದೆ ಅತ್ತು ಬಿಟ್ಟರು.`ನಮಗೆ ದಿಕ್ಕೇ ತಪ್ಪಿ ಹೋಗಿತ್ತು. ಕೊನೆಯ ಎರಡು ದಿನವಂತೂ ಬಿಸ್ಕತ್- ಬ್ರೇಡ್ ಮಾತ್ರ ತಿಂದ್ವಿ. ಅನ್ನ ಇಲ್ದ ನಿತ್ರಾಣ ಆಗಿ ಕಣ್ಣಿಗೆ ಕತ್ತಲು ಬರುತ್ತಿತ್ತು. ಬ್ಯಾಗ್ ಸಹ ಹೊರಾಕ್ ಆಗ್ಲಿಲ್ಲ. ಅಲ್ಲಿ ಏನೂ ಸಿಗ್ತಿರಲಿಲ್ಲ. ಮಕ್ಳಿಗೆ ಏನ್ ಕೊಡಸೂದ್ ಹೇಳ್ರಿ' ಎಂದು ಅವರ ಸೊಸೆ ರೂಪಾ ಪ್ರಶ್ನಿಸಿದರು.`ಹಣ-ನೀರಿಗಾಗಿ ಪರದಾಟ. ಔಷಧಿಯ ಕೊರತೆ. ಕೊನೆ ಕೊನೆಗೆ ಸೇನೆಯವರು ಔಷಧಿ, ಕುರುಕಲು ತಿಂಡಿ ತಂದು ಕೊಡಲಾರಂಭಿಸಿದರು. ಎರಡು ಮಾತ್ರೆಯನ್ನು ಮಾತ್ರ ನೀಡುತ್ತಿದ್ದರು. ಮತ್ತೊಮ್ಮೆ ಸರದಿಯಲ್ಲಿ ನಿಂತರೆ ದುಬಾರಾ ಮತ್ ಆವೊ ಎನ್ನುತ್ತಿದ್ದರು' ಎಂದು ಪ್ರದೀಪ ಓಂಕಾರ ಹೇಳಿದರು.ಇಲ್ಲಿಯ ಅಥಣಿ ರಸ್ತೆ ಪಡಗಾನೂರ ಕಾಲೊನಿಯ ನಿವಾಸಿ, ಕರ್ನಾಟಕ ಬ್ಯಾಂಕ್‌ನ ಸ್ಥಳೀಯ ಶಾಖೆಯ ಉದ್ಯೋಗಿ ಪ್ರದೀಪ ಓಂಕಾರ ತಮ್ಮ ತಾಯಿ ವನಿತಾ, ಪತ್ನಿ ರೂಪಾ, ಪುತ್ರಿ  ಶ್ರೀಲಕ್ಷ್ಮಿ (10), ಪುತ್ರ ಜಯತೀರ್ಥ (6) ಹಾಗೂ ಅತ್ತೆ-ಮಾವ ಅವರನ್ನು ಕರೆದುಕೊಂಡು ಉತ್ತರಾಖಂಡ ಪ್ರವಾಸಕ್ಕೆ ತೆರಳಿದ್ದರು. ಬದರಿನಾಥದಲ್ಲಿ 15 ದಿನ ಸಿಕ್ಕಿಹಾಕಿಕೊಂಡಿದ್ದ ಅವರು ಬುಧವಾರ ನಗರಕ್ಕೆ ಸುರಕ್ಷಿತವಾಗಿ ವಾಪಸ್ಸಾಗಿದ್ದಾರೆ. ಅಲ್ಲಿ ಅನುಭವಿಸಿದ ಯಾತನೆಯನ್ನು ಅವರ ಮಾತಿನಲ್ಲೇ ಕೇಳಿ.`ತಾಯಿಗೆ ಯಾತ್ರೆ ಮಾಡಿಸಲು, ತಂದೆಯ ಶ್ರಾದ್ಧ ಪೂರೈಸಲು ಹೋಗಿದ್ವಿ. ಹೈದ್ರಾಬಾದ್‌ನ ಟ್ರಾವೆಲ್ ಏಜೆನ್ಸಿ ಮೂಲಕ ನಾವು 20 ದಿನದ ಉತ್ತರ ಭಾರತ ಪ್ರವಾಸಕ್ಕೆ ತೆರಳಿದ್ದೆವು. ತಲಾ ರೂ.10,000 ಹಣ ಪಾವತಿಸಿದ್ದೆವು. ಜೂನ್ 1ರಂದು ವಿಜಾಪುರ ಬಿಟ್ಟಿದ್ದ ನಾವು ಅಲ್ಲಿಲ್ಲಿ ಸುತ್ತಾಡಿ ಜೂನ್ 15ರಂದು ಬದರಿನಾಥ ತಲುಪಿದ್ದೆವು. ಅಂದು ಮಧ್ಯಾಹ್ನ 1.30ಕ್ಕೆ ಆರಂಭವಾದ ಮಳೆ ಸತತ 60 ಗಂಟೆಗಳ ಕಾಲ ಸುರಿಯಿತು. 235 ಸೆಂ.ಮೀ. ಮಳೆಯಾಗಿದೆ. 30 ವರ್ಷಗಳ ನಂತರ ಇಂತಹ ಮಳೆ ಸುರಿದಿದೆ ಎಂದು ಸ್ಥಳೀಯರು ಹೇಳಿದರು. ಜೂನ್ 18ರ ನಂತರ ಮಳೆ ನಿಂತಿತು. ಜೂನ್ 20ರ ನಂತರ ಸೂರ್ಯ ಮೂಡಿದ್ದ. ಐದು ದಿನ ನಾವು ಸೂರ್ಯನನ್ನೇ ನೋಡಿರಲಿಲ್ಲ'.`ರಸ್ತೆ ಸಂಚಾರ ಕಡಿದುಹೋಗಿದೆ. ಹೆಲಿಕಾಪ್ಟರ್‌ನಿಂದ ಮಾತ್ರ ಸ್ಥಳಾಂತರಿಸಬೇಕು. ಕೆಲವೇ ದಿನಗಳಲ್ಲಿ ಮತ್ತೆ ಮಳೆಯಾಗಲಿದೆ ಎಂಬ ಮಾಹಿತಿ ಮತ್ತು ಕೇದಾರನಾಥದಲ್ಲಿಯ ಸಾವು-ನೋವು ತಿಳಿದು ಮತ್ತಷ್ಟು ಗಾಬರಿ ಆಯಿತು. ನಾವು ಬದುಕುಳಿಯುವ ಆಸೆಯನ್ನೇ ಬಿಟ್ಟಿದ್ದೆವು'.ಧರ್ಮಶಾಲೆಯಲ್ಲಿ ವಾಸ: `ಬದರಿನಾಥದಲ್ಲಿ ಬಾಂಗಡ ಧರ್ಮ ಶಾಲಾದಲ್ಲಿ 15 ದಿನ ಇದ್ವಿ. ಚಹಾಕ್ಕೆ ರೂ.20, ಒಂದು ಬಾಟಲ್ ನೀರಿಗೆ ರೂ. 40, ಒಬ್ಬರಿಗೆ ಸ್ನಾನದ ಬಿಸಿ ನೀರಿಗೆ ರೂ. 100 ಹಣ ಕೊಡಬೇಕು. ಇದ್ದ ಹಣ ಖಾಲಿ ಆತು. 3-4 ದಿನ ಎಟಿಎಂ ಸಹ ಬಂದ್ ಆಗಿತ್ತು. ಹಣ ಇದ್ದವರು ಇಲ್ದವ್ರಿಗೆ ಕೊಟ್ರು. ಸೇನೆಯ ಅಧಿಕಾರಿಗಳಿಗೆ ಮನವಿ ಮಾಡಿದಾಗ ಅವರು ಜೋಶಿಮಠದಿಂದ ಡೀಸೆಲ್ ತಂದು ಎಟಿಎಂ ಚಾಲೂ ಮಾಡಿ, ಅದಕ್ಕೆ ಹಣ ಹಾಕಿಸಿದ್ರು. ನಮ್ಮನ್ನು ಕರೆದೊಯ್ದಿದ್ದ ಏಜೆನ್ಸಿಯವರ ಬಳಿಯ ರೇಷನ್ ನಾಲ್ಕ ದಿನದಲ್ಲಿ ಖಾಲಿ ಆಯಿತು. ಒಂದು ಅಡುಗೆ ಅನಿಲ ಸಿಲಿಂಡರ್‌ಗೆ ರೂ.6,000, ಲೀಟರ್ ಹಾಲಿಗೆ ರೂ. 100 ಕೊಟ್ಟು ಅವ್ರ ಕೊಂಡಕೊಂಡ್ರು. 10 ದಿನದ ನಂತರ ಉತ್ತರಾಖಂಡ ಸರ್ಕಾರ ಊಟ ಕೊಡಲಾರಂಭಿಸಿತು'.`ನಾವು ಇಳಿದುಕೊಂಡಿದ್ದ ಧರ್ಮಶಾಲೆಯಿಂದ 1 ಕಿ.ಮೀ. ಅಂತರದಲ್ಲಿ ಅನಂತಮಠ ಇತ್ತು. ಉತ್ತರಾದಿ ಮಠಾಧೀಶರು, ಪೇಜಾವರ ಮಠಾಧೀಶರು ನಮಗೆ ಅಲ್ಲಿ ಊಟದ ವ್ಯವಸ್ಥೆ ಮಾಡಿಸಿದ್ದರು. ಹೀಗಾಗಿ ಊಟದ ತೊಂದರೆ ಆಗಲಿಲ್ಲ. ಅಲ್ಲಿಯ ಸರ್ಕಾರ-ಸೇನೆಯವ್ರ ನಮಗೆ ಊಟ ತಂದ ಕೊಟ್ಟಿಲ್ಲ. ಉತ್ತರಾಖಂಡ ಸರ್ಕಾರ ತಕ್ಷಣಕ್ಕೆ ರಕ್ಷಣಾ ಕಾರ್ಯ ಕೈಗೊಳ್ಳಲಿಲ್ಲ'.

`ಬಿಸಿ ನೀರು ಸಿಗದ ಕಾರಣ ಮಂದಿರದ ಬಳಿಯ ತಪ್ತ ಕುಂಡದಲ್ಲಿ ಸ್ನಾನ ಮಾಡುತ್ತಿದ್ದೆವು. ಅಲ್ಲಿ ಸ್ವಲ್ಪ ಬೆಚ್ಚಗಿನ ನೀರು ಬರುತ್ತದೆ. ಆ ನೀರು ಸ್ನಾನಮಾಡಿ ಚರ್ಮಕ್ಕೆ ಸೋಂಕು ತಗುಲಿದೆ. ಊಟ ಮಾಡುವಾಗಲೂ ಚಪ್ಪಲಿ ಹಾಕಿಕೊಂಡು ಅಡ್ಡಾಡುತ್ತಿದ್ದೆವು. ಅಷ್ಟೊಂದು ಚಳಿ ಅಲ್ಲಿ'.ನೆರವಿಗೆ ಬಂತು ಕನ್ನಡ...

ಹೆಲಿಕಾಪ್ಟರ್ ಮೂಲಕ ಸ್ಥಳಾಂತರಗೊಳ್ಳಬೇಕಾದರೆ ಧರ್ಮಶಾಲೆಯಿಂದ 3 ಕಿ.ಮೀ. ಅಂತರದಲ್ಲಿರುವ ಮಾನಾ ಹೆಲಿಪ್ಯಾಡ್‌ಗೆ ಬರಬೇಕು. ಮೂರು ದಿನ ನಿತ್ಯವೂ ಸಾಮಾನು ತೆಗೆದುಕೊಂಡು ಬಂದು ಟೋಕನ್‌ಗೆ ಪಾಳಿ ಹಚ್ಚಿದರೂ ನಮಗೆ ಅವಕಾಶ ದೊರೆಯಲಿಲ್ಲ. ಆರಂಭದ ಎರಡು ದಿನ ಕೇವಲ ಎರಡು ಹೆಲಿಕಾಪ್ಟರ್‌ಗಳಿದ್ದವು.ಸುಸ್ತಾಗಿ ನಾವೆಲ್ಲ ಹೆಲಿಪ್ಯಾಡ್‌ನಲ್ಲಿಯೇ ಕುಳಿತಿದ್ವಿ. ರಕ್ಷಣಾ ಕಾರ್ಯಾರಚಣೆಯಲ್ಲಿ ತೊಡಗಿದ್ದ ಮೂವರು ಯೋಧರು (ಮುದ್ದೇಬಿಹಾಳದ ಬಸವರಾಜ, ಬಾದಾಮಿಯ ಪ್ರಕಾಶ ಮೂಲಿಮನಿ, ಅಳ್ನಾವರದ ಮಲ್ಲಿಕಾರ್ಜುನ) ನಾವು ಕನ್ನಡ ಮಾತನಾಡುವುದನ್ನು ಕೇಳಿಸಿಕೊಂಡು ನಮ್ಮಲ್ಲಿಗೆ ಬಂದರು. ಕನ್ನಡಿಗರೆಂಬ ಕಾರಣಕ್ಕೆ ಅವರು ನಮಗೆಲ್ಲ ಬಹಳ ಸಹಾಯ ಮಾಡಿದ್ರು. ಅವರು ಬಿಸ್ಕತ್ತು, ಹೊದಿಕೆ, ನೀರು ಮತ್ತು ಔಷಧಿ ಮತ್ತು ಟೋಕನ್ ಸಹ ಅವರೇ ತಂದು ಕೊಟ್ಟರು. ಅವರು ಇಲ್ಲದಿದ್ದರೆ ನಮ್ಮ ಸರದಿ ಇನ್ನೂ ಬರುತ್ತಿರಲಿಲ್ಲ.ಹವಾಮಾನ ವೈಪರಿತ್ಯ ಇದೆ ಹೋಗಬೇಡಿ ಎಂದು ಅಲ್ಲಿಯ ಸರ್ಕಾರ ಹೇಳಿದರೂ ಸಹ ಸಚಿವ ಸಂತೋಷ ಲಾಡ್ ಅಪಾಯ ಲೆಕ್ಕಿಸದೆ ಹೆಲಿಕಾಪ್ಟರ್‌ನಲ್ಲಿ ಜೂನ್ 25ರ ಮಧ್ಯಾಹ್ನ ನಮ್ಮಲ್ಲಿಗೆ ಆಗಮಿಸಿದರು.ನಾವು ಇದ್ದಲ್ಲಿ 15ರಿಂದ 16ಸಾವಿರ ಜನ ಯಾತ್ರಿಕರು ಇದ್ದರು. ಎಲ್ಲ ರಾಜ್ಯದ ಮಂತ್ರಿಗಳೂ ಅಲ್ಲಿಗೆ ಬಂದಿದ್ದರು. ಅವರ ಗತ್ತೇ ಬೇರೆಯಾಗಿತ್ತು. ಆದರೆ, ನಮ್ಮ ಸಚಿವ ಲಾಡ್ ಮಾತ್ರ ಸಾದಾ ಉಡುಗೆ ತೊಟ್ಟು ನಮ್ಮ ಬ್ಯಾಗ್‌ಗಳನ್ನೂ ಎತ್ತಿ ಇಡುತ್ತಿದ್ದರು. ನೀನು ನನ್ನ ತಾಯಿ ಸಮ, ನಿನ್ನನ್ನು ಕರೆದುಕೊಂಡೇ ನಾನು ಹೋಗುತ್ತೇನೆ ಎಂದರು. ನಿಮ್ಮ ಸಚಿವ ಎಂ.ಬಿ. ಪಾಟೀಲ ನಿತ್ಯವೂ ನಿಮ್ಮ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ ಎನ್ನುತ್ತಿದ್ದರು ಎಂದು ವನಿತಾ ಹೇಳಿದರು.ಸಂಕಷ್ಟದಲ್ಲೂ ಖುಷಿ!

ಇಷ್ಟೆಲ್ಲ ಸಂಕಷ್ಟಗಳ ಮಧ್ಯೆಯೂ ಈ ಕುಟುಂಬ ಖುಷಿಯ ಬುತ್ತಿ ಹೊತ್ತು ತಂದಿದೆ!

`ನಾವು ಹೋದಾಗ ಬದರಿನಾಥನ ದರ್ಶನ ಸರಿಯಾಗಿ ಆಗಲಿಲ್ಲ. ಅಲ್ಲಿದ್ದ 15 ದಿನಗಳ ಕಾಲವೂ ನಿತ್ಯ ದೇವರ ದರ್ಶನ ಮಾಡಿದ್ವಿ. ನಾವು ಇಳಿದುಕೊಂಡ ಸ್ಥಳದಿಂದ ದೇವಸ್ಥಾನ ಒಂದೂವರೆ ಕಿ.ಮೀ. ಇತ್ತು. ಇಂತಹ ಪುಣ್ಯ ಯಾರಿಗೂ ಸಿಗುವುದಿಲ್ಲ' ಎಂದರು ರೂಪಾ.`ಮೋಡಗಳು ನಮ್ಮ ತಲೆಯ ಮೇಲೆಯೇ ಹಾರಾಡುತ್ತಿದ್ದವು. ಸೂರ್ಯ ಬೆಳಗಿನ 5.30ಕ್ಕೇ ಉದಯವಾಗಿ ಬಿಡುತ್ತಿದ್ದ. ಸಂಜೆ 7ರ ನಂತರವೇ ಸೂರ್ಯಾಸ್ತ. ಇದೆಲ್ಲ ನಮಗೆ ಖುಷಿಕೊಟ್ಟಿತು' ಎಂದು ನಕ್ಕರು ಆಕೆ. ಇಷ್ಟೆಲ್ಲ ಯಾತನೆ ಅನುಭವಿಸಿದರೂ ಇನ್ನೆಂದೂ ಯಾತ್ರೆಗೆ ಹೋಗಬಾರದು ಅನ್ನಿಸಿಲ್ಲ. ಈ ಪುಣ್ಯಕ್ಷೇತ್ರಗಳ ದರ್ಶನ ಮಾಡಲೇಬೇಕು ಎನ್ನುತ್ತಾರೆ ಪ್ರದೀಪ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.