ಸೋಮವಾರ, ಏಪ್ರಿಲ್ 12, 2021
23 °C

ಬದುಕುಳಿದ ಅದೃಷ್ಟವಂತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸುನಾಮಿ ಮತ್ತು ಭೂಕಂಪದಿಂದಾಗಿ ಜಪಾನ್‌ನ ಜನಜೀವನವೇ ಅಲ್ಲೋಲ ಕಲ್ಲೋಲವಾಗಿವೆ. ಅದರಲ್ಲಿ ಕೆಲ ಅದೃಷ್ಟವಂತರು ಸುರಕ್ಷಿತವಾಗಿದ್ದಾರೆ.ನಗರದ ಶ್ಯಾಮಲಾ ಗಣೇಶ್ ಅವರ ಪುತ್ರ ಪ್ರಸನ್ನಕುಮಾರ್ ಅವರು ಮದುವೆಯಾದದ್ದು ಜಪಾನಿನ ಮೆಗುಮಿ ಕವಾಮುರಾ ಅವರನ್ನು. ಈ ಮೊದಲು ಟೊಯೊಟಾ ಕಂಪೆನಿಯಲ್ಲಿ ಕೆಲಸ ಮಾಡಿದ್ದ ಪ್ರಸನ್ನಕುಮಾರ್ ಪ್ರಸ್ತುತ ಬೆಲ್ಜಿಯಂನ ಬ್ರಸೆಲ್ಸ್‌ನಲ್ಲಿ ಪತ್ನಿಯೊಂದಿಗೆ ವಾಸವಾಗಿದ್ದಾರೆ. ಮೆಗುಮಿ ಅವರ ತಂದೆ-ತಾಯಿ ಟೋಕಿಯೊದಲ್ಲಿದ್ದಾರೆ.ಅವರೂ ಈ ದುರಂತದಲ್ಲಿ ಸಿಲುಕಿದ್ದಾರೆಂಬ ದುಗುಡ ಆವರಿಸಿದ್ದಾಗಲೇ ಸಂತಸದ ಸುದ್ದಿಯೊಂದು ಬಂದಿದ್ದು, ಯಾವುದೇ ಅಪಾಯಗಳಿಲ್ಲದೇ ಸುರಕ್ಷಿತವಾಗಿದ್ದಾರೆಂದು ಇ ಮೇಲ್ ಸಂದೇಶವನ್ನು ಅವರು ಕಳುಹಿಸಿದ್ದಾಗಿ ಶ್ಯಾಮಲಾ ಅವರು ಶನಿವಾರ ‘ಪ್ರಜಾವಾಣಿ’ಗೆ ತಿಳಿಸಿದರು.‘ಅಲ್ಲಿರುವ ಇನ್ನು ಕೆಲ ಸ್ನೇಹಿತರ ಸುರಕ್ಷತೆ ಬಗ್ಗೆ ತಿಳಿದುಕೊಳ್ಳಲು ಇ ಮೇಲ್ ಕಳಿಸಿದ್ದೇವೆ, ಅವರ ಉತ್ತರಕ್ಕಾಗಿ ಕಾಯುತ್ತಿದ್ದೇವೆ. ಅವರೂ ಸುರಕ್ಷಿತವಾಗಿರಬಹುದು’ ಎಂದು ಆಶಾಭಾವ ವ್ಯಕ್ತಪಡಿಸಿದರು. ‘ಅಷ್ಟಾಗಿ ಸುನಾಮಿ ತಟ್ಟದ ಪ್ರದೇಶದಲ್ಲಿ ಕೆಲಸ ಕಾರ್ಯಗಳು ನಡೆದಿದ್ದು, ಜನರು ಕಚೇರಿಗಳಿಗೆ ಹೋಗಿ ಬರುತ್ತಿದ್ದಾರೆ. ಆದರೆ ಆಟೊ-ಟ್ಯಾಕ್ಸಿಗಳ ಸಂಖ್ಯೆ ಕಡಿಮೆ ಇದೆ. ಸಾರಿಗೆ ವ್ಯವಸ್ಥೆ ವಿರಳವಾಗಿದ್ದರಿಂದ ಕೆಲವರು ರಾತ್ರಿಯೆಲ್ಲ ರೈಲ್ವೆ ನಿಲ್ದಾಣಗಳಲ್ಲಿ ಕಳೆಯುತ್ತಿದ್ದಾರೆ’ ಎಂದೂ ತಿಳಿಸಿದರು.ಹಬ್ಬದ ಬದಲು ಸೂತಕ!: ಭಾರತ-ಜಪಾನ್ ಸಾಂಸ್ಕೃತಿಕ ವಿನಿಮಯ ಯೋಜನೆಯಡಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಬಂದಿರುವ ಜಪಾನ್ ವಿದ್ಯಾರ್ಥಿಗಳಿಗೆ ಸುನಾಮಿ ಅಲೆಗಳ ಅಪ್ಪಳಿಸಿದ ಸುದ್ದಿ ಅಷ್ಟೇ ವೇಗವಾಗಿ ಇವರನ್ನೂ ಅಪ್ಪಳಿಸಿತು. ಜಪಾನ್ ಹಬ್ಬದ ಆಚರಣೆಯಲ್ಲಿದ್ದ ಈ ತಂಡವು ಅಲ್ಲಿ ತಮ್ಮವರು ಏನಾಗಿದ್ದಾರೋ ಎಂಬ ದುಗುಡದಲ್ಲೇ ಶುಕ್ರವಾರ ಕಳೆಯಿತು.ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಜಪಾನಿ ಭಾಷೆಯ ಶಿಕ್ಷಕರಾಗಿರುವ ಸತೋಷಿ ಹತಾ ಪತ್ನಿ ಯಾಕೊ ಅವರೊಂದಿಗೆ ತಮ್ಮ ಬಂಧುಗಳ ಸುರಕ್ಷೆಗಾಗಿ ಪ್ರಾರ್ಥಿಸಿ ಚರ್ಚ್‌ನಲ್ಲಿ ಕಳೆದಿದ್ದಾಗಿ ತಿಳಿಸಿದರು,ಕಳೆದ ಆರು ವರ್ಷಗಳಿಂದ ನಗರದಲ್ಲಿರುವ ಅವರು 1995ರಲ್ಲಿ ಜಪಾನ್‌ನಲ್ಲಿ ಸಂಭವಿಸಿದ ಭೂಕಂಪವನ್ನು ಕಣ್ಣಾರೆ ಕಂಡಿದ್ದರು. ‘ಆದರೆ ಈ ದುರಂತ ಮಾತ್ರ ಅದಕ್ಕಿಂತ ಎಷ್ಟೋ ಪಾಲು ಭೀಕರವಾದುದು’ ಎಂದು ನೆನಪಿಸಿಕೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.