ಶುಕ್ರವಾರ, ಮೇ 20, 2022
27 °C

ಬದುಕು ಕಟ್ಟಿಕೊಟ್ಟ ಜನಪದ ಮೂಲೆಗುಂಪು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ: ಹೈಬ್ರೀಡ್ ಸಂಸ್ಕೃತಿಗೆ ಜೋತು ಬೀಳುತ್ತಿರುವುದರಿಂದ ಗ್ರಾಮೀಣ ಜನರಿಗೆ ಬದುಕನ್ನು ಕಟ್ಟಿಕೊಟ್ಟ ಮೂಲ ಜನಪದ ಸಂಸ್ಕೃತಿ, ಅಪ್ಪಟ ದೇಶಿಪರಂಪರೆ ಮೂಲೆಗುಂಪಾಗುತ್ತಿದೆ ಎಂದು ಜನಪದ ಕಲಾವಿದ ಶರಣಪ್ಪ ವಡಗೇರಿ ಗುರುವಾರ ಇಲ್ಲಿ ವಿಷಾಧಿಸಿದರು. ಬುತ್ತಿಬಸವೇಶ್ವರ ದೇವಸ್ಥಾನದ ಆವರಣದಲ್ಲಿ, ಸ್ಥಳೀಯ ಸಮೃದ್ಧಿ ವಿವಿಧೋದ್ದೇಶಗಳ ಅಭಿವೃದ್ಧಿ ಸೇವಾ ಸಂಸ್ಥೆ ಏರ್ಪಡಿಸಿದ್ದ ಎರಡು ದಿನಗಳ ‘ಜನಪದ ಕಲಾ ಉತ್ಸವ’ಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.ಯಾವದೇ ಪಿಎಚ್‌ಡಿ ಪದವಿ ಪಡೆಯದ ಅನಕ್ಷರಸ್ಥ ಮಹಿಳೆಯರು ಇಡಿ ರಾತ್ರಿ ಸಂಪ್ರದಾಯದ ಪದ, ಬೀಸುಕಲ್ಲಿನ ಪದ ಹಾಡುತ್ತಿದ್ದರು ಎಂಬುದನ್ನು ಗಮನಿಸಬೇಕು, ಕೃಷಿಮೂಲ ಸಂಸ್ಕೃತಿಯೊಂದಿಗೆ ತಳುಕು ಹಾಕಿಕೊಂಡಿದ್ದ ಜನಪದ ಕಲಾಪರಂಪರೆಯ ಕೊಂಡಿ ಕಳಚದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು. ಕಣದಲ್ಲಿ ಹಂತಿ ಪದ ಹಾಡಿನಲ್ಲಿ ರೈತರು ಮೈಮರೆಯುತ್ತಿದ್ದುದು ಸಂಸ್ಕೃತಿಯಾದರೆ ಈಗ ಅದನ್ನು ಮರೆತ ರೈತರು ರಸ್ತೆಯನ್ನೇ ಕಣವನ್ನಾಗಿಸಿಕೊಂಡಿರುವುದು ಅದರ ವಿಕೃತ ರೂಪವಾಗಿದೆ. ಬದುಕಿನೊಂದಿಗೆ ಹಾಸುಹೊಕ್ಕಾಗಿದ್ದ ಬೀಸುಕಲ್ಲಿನಪದ, ಏಕತಾರಿ ಪದ, ಲಾವಣಿ ಪದ, ಗೀಗೀಪದ ಮೊದಲಾದವುಗಳು ಮಾಯವಾಗಿ ಜನ ಟಿ.ವಿ ಬೆನ್ನುಹತ್ತಿದ್ದಾರೆ, ಇದೇ ಸ್ಥಿತಿ ಮುಂದುವರೆದರೆ ಜನಪದ ಕಲೆ ನಶಿಸುವುದರಲ್ಲಿ ಅನುಮಾನವಿಲ್ಲ ಎಂದರು.ಮದ್ದಾನಿ ಹಿರೇಮಠದ ಕರಿಬಸವ ಸ್ವಾಮೀಜಿ  ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಜನಪದ ಕಲಾವಿದ ವಾಲ್ಮೀಕಿ ಯಕ್ಕರನಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪುರಸಭೆ ಉಪಾಧ್ಯಕ್ಷೆ ರೂಪಾ ಕೊನಸಾಗರ, ಸದಸ್ಯರಾದ ಉಮೇಶ ಮಂಗಳೂರು, ಜಂಬಣ್ಣ ಬೂದ, ಅಡಿವೆಮ್ಮ ನಂದಿಕೋಲಮಠ, ಸೋಮಶೇಖರ ತುಪ್ಪದ, ರವೀಂದ್ರ ಬಾಕಳೆ, ಪ್ರಾಧ್ಯಾಪಕ ಡಾ.ಶರಣಬಸವ ಡಾಣಿ, ಎ.ವೈ.ಲೋಕರೆ, ಪೀಕಾರ್ಡ್ ಬ್ಯಾಂಕ್ ಅಧ್ಯಕ್ಷ ಶಂಕರಗೌಡ, ಚನ್ನಪ್ಪ ಕುಡತಿನಿ, ಮುಖೇಶ್ ನಿಲೋಗಲ್, ಇಮಾಮ್‌ಸಾಬ್ ಮತ್ತಿತರರು ವೇದಿಕೆಯಲ್ಲಿದ್ದರು.

 ಸಮೃದ್ಧಿ ಸಂಸ್ಥೆ ಕಾರ್ಯದರ್ಶಿ ನಬಿಸಾಬ್ ಕುಷ್ಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಶ್ ಮಂಗಳೂರು ಸ್ವಾಗತಿಸಿದರು. ನಟರಾಜ ಸೋನಾರ ನಿರೂಪಿಸಿದರು.

 ಉತ್ಸವದಲ್ಲಿ ವಿವಿಧ ಕಲಾ ತಂಡಗಳಿಂದ ಡೊಳ್ಳುಕುಣಿತ, ಗೀಗಿಪದ, ರಿವಾಯತ ಪದ, ಕೋಲಾಟ, ಸುಗ್ಗಿ ಹಾಡು, ಸಂಪ್ರದಾಯದ ಪದಗಳನ್ನು ಪ್ರಸ್ತುಪಡಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.