ಬದುಕು ಕಸಿದ ಬೈರಮಂಗಲ ಕೆರೆ!

7

ಬದುಕು ಕಸಿದ ಬೈರಮಂಗಲ ಕೆರೆ!

Published:
Updated:
ಬದುಕು ಕಸಿದ ಬೈರಮಂಗಲ ಕೆರೆ!

ಕೆರೆಯಲ್ಲಿ ಭರ್ತಿ ನೀರಿದೆ. ಕುಡಿಯುವಂತಿಲ್ಲ, ಬಳಸುವಂತಿಲ್ಲ. ಬೆಳೆಗೆ ಹಾಯಿಸುವಂತಿಲ್ಲ. ಇದೇ ನೀರಿನಿಂದ ಮರುಪೂರಣಗೊಂಡ ಕೊಳವೆ ಬಾವಿಗಳ ನೀರೂ ಬಳಕೆಗೆ ಯೋಗ್ಯವಲ್ಲ. ತನ್ನ ಸ್ವರ್ಶ ಮಾತ್ರದಿಂದ ಎಲ್ಲವನ್ನೂ ಶುದ್ಧಗೊಳಿಸುವ ಗಂಗಮ್ಮ ಇಲ್ಲಿ, ತನ್ನ ಸಂಪರ್ಕಕ್ಕೆ ಬಂದ ಎಲ್ಲವನ್ನೂ ನಿರುಪಯೋಗಿ ಎನಿಸುತ್ತಿದ್ದಾಳೆ!ಇದು ಬೆಂಗಳೂರು- ಮೈಸೂರು ರಸ್ತೆಯಲ್ಲಿ ಬಿಡದಿ ಸಮೀಪವಿರುವ ಬೈರಮಂಗಲ ಕೆರೆಯ ವ್ಯಥೆ. ಊರಿಗೆ ಮುಕ್ಕಾಲು ಕಿ.ಮೀ ದೂರದಲ್ಲಿರುವಾಗಲೇ ಕೊಳಚೆ ನೀರಿನ ಕಮಟು ವಾಸನೆ ಮೂಗಿಗೆ ಅಡರುತ್ತದೆ. ಕೆರೆ ಕೋಡಿಯಿಂದ ಧುಮ್ಮಿಕ್ಕುವ `ಜಲಧಾರೆ~ಯ ದೃಶ್ಯ ನಯನ ಮನೋಹರ.

 

ಆದರೆ ಅಲ್ಲಿ ಸಂಭ್ರಮದಿಂದ ಮೀಯುವಂತಿಲ್ಲ. ಅದು ಬೆಂಗಳೂರಿನ `ಕೊಳಕಾವತಿ~, ಮೊದಲು ಅದನ್ನೇ ನಮ್ಮ ಹಿರಿಯರು ಪವಿತ್ರ ವೃಷಭಾವತಿ ಎನ್ನುತ್ತಿದ್ದರು!ಬೆಂಗಳೂರು ಹೊರವಲಯದಲ್ಲಿ ಹುಟ್ಟಿ, ನಗರದ ನಡುವೆ ಹರಿಯುವ ವೃಷಭಾವತಿ ನದಿ ಪಾತ್ರದಲ್ಲಿದೆ ಈ ಬೈರಮಂಗಲ ಕೆರೆ. 1940ರಲ್ಲಿ ಈ ಕೆರೆಗೆ ಅಣೆಕಟ್ಟೆ ಕಟ್ಟಲಾಯಿತು. ಕೆರೆ ಆಶ್ರಯದಲ್ಲಿ 4,220 ಎಕರೆ ಸಾಗುವಳಿ, ಜನ- ಜಾನುವಾರು ಬಳಕೆಗೆ ಸಮೃದ್ಧವಾಗಿ ಬಳಕೆಯಾಗುತ್ತಿತ್ತು.ದಿನದಿಂದ ದಿನಕ್ಕೆ ನಗರೀಕರಣದ ಕಬಂಧ ಬಾಹುಗಳು ಬೆಂಗಳೂರನ್ನು ಆವರಿಸಿದವು. ನೂರೆಂಟು ಕೈಗಾರಿಕೆಗಳು ಸ್ಥಾಪನೆಯಾದವು. ನೋಡನೋಡುತ್ತಿದ್ದಂತೆ ವೃಷಭಾವತಿ ನದಿ ಪಾತ್ರ ನಗರದ ಹೊಲಸನ್ನೆಲ್ಲ ಸಾಗಿಸುವ ರಾಜಕಾಲುವೆಯಾಯಿತು.ಬಿಡದಿ ಕೈಗಾರಿಕಾ ಪ್ರದೇಶ ಆರಂಭವಾದ ಮೇಲಂತೂ ವೃಷಭಾವತಿ ನದಿ ಸಂಪರ್ಕಿಸುತ್ತಿದ್ದ ಎಲ್ಲಾ ಕೆರೆಗಳು, ಗ್ರಾಮಗಳ ಜಲಮೂಲಗಳು ಕಲುಷಿತಗೊಂಡವು. ಇತ್ತೀಚೆಗೆ ಈ ಕೊಳಚೆ ನೀರು ಹರಿಯುವ ನದಿ ಪಾತ್ರದ ಕೆಂಗೇರಿ, ಹೆಮ್ಮಿಗೆಪುರ, ಶ್ಯಾಲಮಂಗಲ, ಶೇಷಗಿರಿಹಳ್ಳಿ ಗ್ರಾಮಗಳಲ್ಲಿ ಜನ ಬದುಕುವುದೇ ಕಷ್ಟವಾಗಿದೆ.ಕುಸಿದ ಕೃಷಿ ಚಟುವಟಿಕೆ: ಒಂದೂವರೆ ದಶಕದಿಂದ ಈ ಭಾಗದಲ್ಲಿ ಕೃಷಿ ಚಟುವಟಿಕೆಗಳು ಕುಸಿದಿವೆ. ಕೃಷಿ ಇಲಾಖೆಯ ಮಾಹಿತಿ ಪ್ರಕಾರ ಬೈರಮಂಗಲ ಕೆರೆ ವ್ಯಾಪ್ತಿಯಲ್ಲಿ ಈ ವರ್ಷ ಕೇವಲ 600 ಹೆಕ್ಟೇರ್ ಭೂಮಿ ಸಾಗುವಳಿಯಾಗಿದೆ.

 

`ಕಾರ್ಖಾನೆ ತ್ಯಾಜ್ಯ ನೀರಿನಿಂದ ಮಣ್ಣಿನಲ್ಲಿ ನೈಟ್ರೇಟ್ ಅಂಶ ಹೆಚ್ಚಾಗಿದೆ. ಹಾಗಾಗಿ ಈ ಭೂಮಿ ಭತ್ತ, ಕಬ್ಬು ಬೆಳೆಯಲು ಯೋಗ್ಯವಾಗಿಲ್ಲ~ ಎನ್ನುತ್ತಾರೆ ಕೃಷಿ ವಿಶ್ವ ವಿದ್ಯಾಲಯದ ಬೇಸಾಯ ಶಾಸ್ತ್ರಜ್ಞರು. ಈ ಕಾರಣದಿಂದಲೇ ಶೇ 90ರಷ್ಟು ಭತ್ತದ ಬೇಸಾಯ ನಾಶವಾಗಿದೆ.ಒಂದು ಪಕ್ಷ ಬೆಳೆದರೂ ಇಳುವರಿ ಕಡಿಮೆ. ಬೆಳೆದ ಭತ್ತದಲ್ಲೂ ಜೊಳ್ಳು ಹೆಚ್ಚು. ಹೀಗಾಗಿ 8-10 ಎಕರೆ ಜಮೀನುಳ್ಳವರೂ ಹಣ ಕೊಟ್ಟು ಅಕ್ಕಿ ಕೊಳ್ಳುವಂತಾಗಿದೆ~ ಎಂದು ಬೈರಮಂಗಲದ ಹರೀಶ್ ಕುಮಾರ್ ಬೇಸರ ವ್ಯಕ್ತಪಡಿಸುತ್ತಾರೆ. ಪ್ರಸ್ತುತ ಈ ಭಾಗದಲ್ಲಿ ಒಂದು ಎಕರೆಯಲ್ಲಿ 18 ಟನ್ ಕಬ್ಬು ಬೆಳೆಯುವುದು ಕಷ್ಟವಾಗಿದೆ ( ಹಿಂದೆ 40 ಟನ್ ಬೆಳೆಯುತ್ತಿದ್ದರು). ಬೆಳೆದರೂ ಆ ಕಬ್ಬಿನಲ್ಲಿ ಸಿಹಿಯ ಜತೆ ಉಪ್ಪು ಮಿಶ್ರಿತವಾಗಿದೆ.  ಇದು `ಕೊಳಚೆ ನೀರಿನ ಪ್ರಭಾವ~ ಎನ್ನುತ್ತಾರೆ ರೈತರು.ಆರು ವರ್ಷಗಳ ಹಿಂದೆ ಇಟ್ಟಮಡು, ರಾಮನಹಳ್ಳಿ ಹಾಗೂ ಗೋಪಹಳ್ಳಿ ಗ್ರಾಮಗಳಲ್ಲಿ ಅಂತರ್ಜಲ ಕಲುಷಿತ - ಆರ್ಥಿಕ ಮತ್ತು ಪರಿಸರ ಪರಿಣಾಮಗಳ ಕುರಿತು ಬೆಂಗಳೂರು ಕೃಷಿ ವಿ. ವಿ.ಯ ಮೂವರು ವಿಜ್ಞಾನಿಗಳು ಸಂಶೋಧನೆ ನಡೆಸಿದ್ದಾರೆ. ಆ ಪ್ರಕಾರ ಮೂರು ಹಳ್ಳಿಗಳ 318 ಎಕರೆ ಸಾಗುವಳಿ ಭೂಮಿ ಈಗ 259 ಎಕರೆಗೆ ಕುಸಿದಿದೆ.ವಾರ್ಷಿಕವಾಗಿ ರೈತರು ಎಕರೆಗೆ ಅಂದಾಜು 17,000/-ರೂ. ನಷ್ಟ ಅನುಭವಿಸುತ್ತಿದ್ದಾರೆ. ನೀರಿನಲ್ಲಿ `ಭಾರ ಲೋಹಗಳು~ ಸೇರಿರುವುದರಿಂದ ಮಣ್ಣಿನ ಫಲವತ್ತತೆ ಕ್ಷೀಣಿಸಿದೆ.ಇದರಿಂದ ಪ್ರತಿ ಎಕರೆಗೆ ಶೇ 20ರಷ್ಟು ಭತ್ತ ಹಾಗೂ ಶೇ 37ರಷ್ಟು ಕಬ್ಬಿನ ಇಳುವರಿ ಕುಸಿತಕಂಡಿದೆ. ಹೀಗೆ ನೀರಾವರಿ ಭತ್ತ - ಕಬ್ಬು ಬೆಳೆಯುತ್ತಿದ್ದ ರೈತರ ಬದುಕು ಬೇಸಾಯದ ಅವಕಾಶ ಕಳೆದುಕೊಂಡು ಕಂಗಾಲಾಗುವ ಹೊತ್ತಿಗೆ, ಸುತ್ತಲಿನ ಗ್ರಾಮಸ್ಥರ ಆರೋಗ್ಯವೂ ಅಧೋಗತಿಗೆ ಇಳಿದಿದೆ.ಅನಾರೋಗ್ಯ ಸಮಸ್ಯೆ: ಕಲುಷಿತ ನೀರಿನಿಂದಾಗಿ ಬೈರಮಂಗಲ ವ್ಯಾಪ್ತಿಯ ಹತ್ತಾರು ಹಳ್ಳಿಗಳ ಕೆಲವರಿಗೆ ಚರ್ಮವ್ಯಾಧಿ ಕಾಣಿಸಿಕೊಂಡಿದೆ. ಭತ್ತದ ಗದ್ದೆ, ತೋಟಗಳಲ್ಲಿ ನೀರು ಕಟ್ಟುವವರಿಗೆ ಅಲರ್ಜಿಯ ತುರಿಕೆ ಸಾಮಾನ್ಯ. ಕೆರೆ ಸುತ್ತಲಿನ ಯಾವುದೇ ಹಳ್ಳಿಗೆ ಭೇಟಿ ನೀಡಿದರೂ ಕನಿಷ್ಠ 10-15 ಜನರ ಕೈಕಾಲುಗಳ ಮೇಲೆ ಇಸುಬು ಗೋಚರಿಸುತ್ತವೆ. ಕೆಲವರಿಗೆ ಪಾದಗಳಲ್ಲಿ ಗುಳ್ಳೆಗಳಾಗಿವೆ.`ತೋಟಕ್ಕೆ ನೀರು ಕಟ್ಟಿ, ಹೊರ ಬಂದಾಗ ಕಾಲಿನಲ್ಲಿ ತುರಿಕೆ ಶುರುವಾಶಗುತ್ತದೆ. ಮಂಡಿಯವರೆಗೂ ಬೂದು ಬಣ್ಣ. ಒಳ್ಳೆ ನೀರಿನಲ್ಲಿ ತಕ್ಷಣ ಕಾಲು ತೊಳೆದರೆ ಸ್ವಲ್ಪ ಶಮನ. ಇಲ್ಲವಾದರೆ ಅಸಾಧ್ಯ ತುರಿಕೆ ಅನುಭವಿ ಸಬೇಕಾಗುತ್ತದೆ~ ಎಂದು ಗ್ರಾಮಸ್ಥ ಶಿವಲಿಂಗಯ್ಯ ಹೇಳುತ್ತಾರೆ. ಚರ್ಮ ರೋಗ ಹೆಚ್ಚಾದ ಮೇಲೆ ಈ ಭಾಗದಲ್ಲಿ ತೋಟಕ್ಕೆ ನೀರು ಕಟ್ಟುವುದು ಕಡಿಮೆಯಾಯಿತು. ತೆಂಗಿನ ಬೇಸಾಯ ಬಿದ್ದು ಹೋಯ್ತು. ಭತ್ತದ ಬೇಸಾಯ ಕುಸಿಯಲೂ ಇದೇ ಕಾರಣ ಎನ್ನುತ್ತಾರೆ ರೈತರು.ಬೆಂಗಳೂರು ವಿಶ್ವವಿದ್ಯಾಲಯದ ಪರಿಸರ ವಿಭಾಗದ ಪ್ರಾಧ್ಯಾಪಕಿ ಡಾ. ನಂದಿನಿ ಮತ್ತು ಅವರ ತಂಡ ಬೈರಮಂಗಲದ ಕೆರೆ ನೀರನ್ನು ಪರೀಕ್ಷೆಗೆ ಒಳಪಡಿಸಿದಾಗ, ಅದರಲ್ಲಿ `ಭಾರ ಲೋಹಗಳು~ ಹಾಗೂ ಮಾರಣಾಂತಿಕ ರೋಗಗಳನ್ನು ಹರಡುವ ರಾಸಾಯನಿಕಗಳ ಉಳಿಕೆ ಇರುವುದು ಕಂಡು ಬಂತು. `ಕಲುಷಿತ ನೀರಿನಿಂದ ವಿವಿಧ ರೋಗಗಳು ಹರಡುತ್ತಿವೆ~ ಎಂದು ರೈತರು ಹೇಳುತ್ತಿದ್ದಾರೆಯೇ ಹೊರತು, ಅದೇ ನೀರು ಈ ರೋಗಕ್ಕೆ ಕಾರಣ ಎಂದು ಹೇಳುವ ವೈಜ್ಞಾನಿಕ ಅಥವಾ ವೈದ್ಯಕೀಯ ಸಂಶೋಧನೆಗಳು ನಡೆದಿಲ್ಲ.ಈ ಅಂಶವನ್ನು ಗಮನದಲ್ಲಿ ಇಟ್ಟುಕೊಂಡು ಬಿಡದಿಯ ಮೆಡಿಕಲ್ ಸ್ಟೋರ್‌ಗಳಲ್ಲಿ ವಿಚಾರಿಸಿದರೆ `ಬೈರಮಂಗಲ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಅನಾರೋಗ್ಯ ಪೀಡಿತರಲ್ಲಿ ಅತಿ ಹೆಚ್ಚು ಜನರು ಚರ್ಮ ರೋಗ, ಆಸ್ತಮಾ ಕಾಯಿಲೆಗೆ ಸಂಬಂಧಪಟ್ಟ ಔಷಧಗಳನ್ನು ಖರೀದಿಸುತ್ತಾರೆ. ಆಗಾದ ಬೇಧಿ, ಜಾಂಡೀಸ್‌ಗೆ  ಔಷಧಕ್ಕೆ ಬೇಡಿಕೆ ಹೆಚ್ಚುತ್ತದೆ~ ಎಂಬ ಅಂಶ ಬೆಳಕಿಗೆ ಬಂತು.ಇಡೀ ವರ್ಷ ಹರಿಯುವ ಕೊಳಚೆ ನೀರಿನಿಂದಾಗಿ ವರ್ಷವಿಡೀ ಸೊಳ್ಳೆಗಳ ಕಾಟ. ಈ `ಸೊಳ್ಳೆ ಓಡಿಸಲು ಬಿಡದಿಯ ಕಾರ್ಖಾನೆಗಳು ಇತ್ತೀಚೆಗೆ ಒಂದು ಔಷಧ ಸಿಂಪಡಿಸಿದರು. ಹೊಗೆ ರೂಪದ ಔಷಧದಿಂದ ಸೊಳ್ಳೆ ಕಡಿಮೆ ಆಯ್ತು. ಅದರ ಜೊತೆಗೆ ರೇಷ್ಮೆ ಹುಳುಗಳೂ ಸತ್ತವು. ಹೀಗಾಗಿ ಅನೇಕರು ರೇಷ್ಮೆ ಬೆಳೆಯೋದನ್ನೇ ನಿಲ್ಲಿಸಿದರು~ ಎನ್ನುತ್ತಾರೆ ಶಿವಲಿಂಗಯ್ಯ.ಇಷ್ಟೆಲ್ಲ ಸಮಸ್ಯೆಯಿದ್ದರೂ ಯಾವ ಸಂಘಟನೆಗಳೂ ಈ ಗ್ರಾಮದ ಜನರ ನೆರವಿಗೆ ಬಂದಿಲ್ಲ. ಆಗಾಗ ಊರ ಜನರೇ  ಮಾಧ್ಯಮಗಳ ಮೂಲಕ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಸರ್ಕಾರದಿಂದ ಯಾವುದೇ ಪರಿಹಾರಗಳು ದೊರೆತಿಲ್ಲ. ಮೂರು ವರ್ಷಗಳ ಹಿಂದೆ ಕೆಂಗೇರಿ ಬಳಿ ನೀರು ಶುದ್ಧೀಕರಣ ಘಟಕ ನಿರ್ಮಿಸಿರುವುದೊಂದೇ ಸರ್ಕಾರದ ಸಾಧನೆ. ಈ ಹಂತದಲ್ಲಿ ತ್ಯಾಜ್ಯ ನೀರು ಪರಿಪೂರ್ಣ `ಶುದ್ಧವಾಗುವುದಿಲ್ಲ~. ಕನಿಷ್ಠ ಮೂರು ಹಂತಗಳಲ್ಲಿ ನೀರು ಸಂಸ್ಕರಣೆಗೊಳ್ಳಬೇಕು ಎನ್ನುತ್ತಾರೆ ಜಲ ತಜ್ಞರು.ಪರಿಹಾರ ಏನು ?

ಇಂಥ ಕೆಲಸಗಳಿಂದ  ವೃಷಭಾವತಿಯಾಗಲಿ, ಬೈರಮಂಗಲವಾಗಲಿ ಚೊಕ್ಕಟವಾಗುವುದಿಲ್ಲ.ಲಂಡನ್‌ನಲ್ಲಿ ನಡೆದ `ಥೇಮ್ಸ ನದಿಯ ಕ್ಲೀನಿಂಗ್~ನಂತಹ ಕಾರ್ಯಾಚರಣೆ ಇಲ್ಲೂ ಆಗಬೇಕು. ಐತಿಹಾಸಿಕ ಥೇಮ್ಸ ನದಿ ಕೂಡ ನಗರದ ಮಧ್ಯೆ ಹರಿಯುತ್ತಾ,  ವೃಷಭಾವತಿಗಿಂತ ಹೆಚ್ಚು ಕೊಳಕಾಗಿತ್ತು.ಲಂಡನ್‌ನ ಸ್ವಯಂ ಸೇವಾ ಸಂಸ್ಥೆಗಳು, ನಾಗರಿಕರು, ಜನಪ್ರತಿನಿಧಿಗಳು ಇಚ್ಛಾಶಕ್ತಿಯ ಫಲವಾಗಿ, ಅದು ಇಂದು ಸ್ವಚ್ಛವಾಗಿದೆ. `ಈ ಕಾರ್ಯಾಚರಣೆ ಜಗತ್ತಿಗೇ ಮಾದರಿಯಾಗಿದೆ~ ಎನ್ನುತ್ತಾರೆ ಪರಿಸರವಾದಿಗಳು.ಈ ಮಾದರಿಯನ್ನೇ ಮುಂದಿಟ್ಟುಕೊಂಡು ಸರ್ಕಾರ `ಕ್ಲೀನ್  ವೃಷಭಾವತಿ~ ಘೋಷಿಸಬೇಕು. ಸ್ಯಾಂಕಿ ರಸ್ತೆಯಲ್ಲಿ ಮರಗಳಿಗೆ ಕೊಡಲಿ ಪೆಟ್ಟು ಬಿದ್ದಾಗ, ಬೀದಿ ದೀಪಗಳ ಬೆಳಕಿನಲ್ಲೇ `ಮೇಣದ ಬತ್ತಿ ಹಿಡಿದು~ ಪ್ರತಿಭಟನೆ ನಡೆಸಿದ ಪರಿಸರ ಪ್ರೇಮಿಗಳು `ವೃಷಭಾವತಿ ಸ್ವಚ್ಛತೆಗಾಗಿ~ ನದಿ ಪಾತ್ರದ ಗ್ರಾಮಸ್ಥರೊಂದಿಗೆ ಕೈಜೋಡಿಸಬಹುದಲ್ಲವೇ ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry