ಬದುಕು ಬದಲಿಸಿದ ಸಾವಯವ ಕೃಷಿ
ಪ್ರಸಕ್ತ ವೈಜ್ಞಾನಿಕ ಯುಗದಲ್ಲಿ ಆಧುನಿಕ ಕೃಷಿ ಪದ್ಧತಿಗೆ ತಿಲಾಂಜಲಿ ಇತ್ತು ಸಾವಯವ ಕೃಷಿ ಪದ್ಧತಿ 5 ವರ್ಷದ ಪ್ರಯೋಗದಲ್ಲಿ ಯಶಸ್ಸು ಕಂಡ ರೈತ ಕುಟುಂಬ ಮಲೇಬೆನ್ನೂರು ಸಮೀಪದ ಮಾದರಿ ಗ್ರಾಮ ಕುಂಬಳೂರಿನ ಎನ್. ಚಂದ್ರಶೇಖರ್ ಶಾರದ ದಂಪತಿ ಯಶೋಗಾಥೆ ಇದು.
ಪ್ರಯೋಗ ಶಾಲೆಯಾದ ಭೂಮಿ
ಹೆಚ್ಚು ನೀರು, ರಸಗೊಬ್ಬರ, ರಾಸಾಯನಿಕ ಬಳಸಿ ಹೆಚ್ಚು ಲಾಭ ಪಡೆಯುವ ನಿಟ್ಟಿನಲ್ಲಿ ಕೈಸುಟ್ಟುಕೊಂಡ ನಂತರ ಪ್ರಯೋಗಾರ್ಥವಾಗಿ ಸಾಂಪ್ರದಾಯಿಕ ದೇಸಿಯ ಕೃಷಿ ಚಿಕ್ಕದಾಗಿ ಪ್ರಾರಂಭವಾಯ್ತು.
ಆರಂಭ ಕಷ್ಟಕರವಾಗಿತ್ತು, ರೋಗಬಾಧೆ ಹೆಚ್ಚಾದಂತೆ ಕ್ರಿಮಿನಾಶಕ ಬಳಕೆ ಬಳಸುವ ಅನಿವಾರ್ಯತೆ ಎದುರಾದವು. ಬೆಳೆ ಉಳಿಸಿಕೊಳ್ಳಲು ದೇಸಿ ಪದ್ಧತಿ ಕೈಬಿಟ್ಟು ವೈಜ್ಞಾನಿಕ ಚಿಂತನೆ ಅಳವಡಿಸಿಕೊಳ್ಳುವಂತೆ ಉಚಿತ ಸಲಹೆ ಬಂದವು.
ಆದರೆ ಪ್ರಯೋಗ ನಡೆಸುವ ತೀರುವ ಹಂಬಲ ನಿಲ್ಲಿಸಲಿಲ್ಲ. ಜಮೀನು ಪ್ರಯೋಗಶಾಲೆಯಾಯಿತು. ಸಾವಯವ ಕೃಷಿ ಬೆಂಗಳೂರಿನ ಸಹಜ ಸಮೃದ್ಧ ಸಂಸ್ಥೆ, ಶರಣ ಮುದ್ದಣ ಸಾವಯವ ಕೃಷಿಕರ ಬಳಗ, ಕೃಷಿ ಇಲಾಖೆ ಸಲಹೆ ನೀಡಿ ಪ್ರೇರೇಪಿಸಿದವು.
ದೇಸಿ ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆಸಿಗುತ್ತದೆ ಎಂಬುದನ್ನು ತೋರಿಸಲು ಮುಖ್ಯವಾಗಿ ದೇಸಿಯ ತಳಿ 12 ಮಾದರಿ ಬೀಜದಬತ್ತ, ಅಡಿಕೆ ಸಸಿ, ಬಾಳೆ, ತೆಂಗು ಹಾಗೂ ಉಪಬೆಳೆಯಾಗಿ ತರಕಾರಿ ಬೆಳೆದು ಪ್ರಯೋಗ ಫಲ ನೀಡಿತು.
ಕಳೆ ನಿಯಂತ್ರಣ-ಸಾವಯವ ಗೊಬ್ಬರ
ಮುಖ್ಯವಾಗಿ ಸಾವಯವ ಕೃಷಿಕರ ಸಲಹೆಯಂತೆ ಕಳೆಯಿಂದ ರಕ್ಷಣೆ ಪಡೆಯಲು ಪಿಲಿಪ್ ಹೆಸರು, ಸೆಣಬು. ವೆಲ್ವೆಟ್ ಬೀನ್ಸ್ ಹಾಗೂ ಡಯಾಂಚ ಬೆಳೆಯ ಪ್ರಯೋಗ ಯಶಸ್ವಿಯಾಗಿ ಭೂಸಾರ ಸಂರಕ್ಷಿಸಿದೆ.
ಹಸಿರೆಲೆ, ಎರೆಹುಳು ಗೊಬ್ಬರ, ರೋಗಬಾಧೆ, ಕ್ರಿಮಿ ಕೀಟ ನಿಯಂತ್ರಣಕ್ಕೆ ಬಿಲ್ವಪತ್ರೆ, ಬೇವಿನಸೊಪ್ಪು, ಹೊಂಗೆ ಸೊಪ್ಪು, ಗಂಜಲ, ಜೀವಾಮೃತ ಬಳಸಲಾಗುತ್ತಿದೆ
3 ಎರೆಹುಳು ಗೊಬ್ಬರ , 1 ಜೀವಸಾರ ತೊಟ್ಟಿಯ ರಸವನ್ನು ಸೋಸಿ ನೀರಿನೊಂದಿಗೆ ಮಿಶ್ರಣ ಮಾಡಿ ಬೆಳೆಗೆ ನೀಡಲಾಗುತ್ತಿದೆ.
ರೋಗ ರಹಿತ ಕಲ್ಪವೃಕ್ಷ
ಕಪ್ಪುತಲೆಹುಳು ಬಾಧೆಯಿಂದ ಪಾರಾಗಲು ತೆಂಗಿನತೋಟಕ್ಕೆ ಬೇವಿನಣ್ಣೆ ಬಳಸಿದ್ದು ಹಸಿರು ಗರಿ ಹಾಗೂ ರೋಗರಹಿತ ತೆಂಗಿನಕಾಯಿಗಳಿಂದ ಕಂಗೊಳಿಸುತ್ತಿದೆ.
ಪ್ರಸಕ್ತ ಸಾಲಿನಲ್ಲಿ ಒಟ್ಟು 20 ಸಾವಿರ ತೆಂಗಿನಕಾಯಿ ಕೀಳಲಾಗಿದೆ, 35 ಕ್ವಿಂಟಲ್ ಬತ್ತ, 100 ಕ್ವಿಂಟಲ್ ಹಸಿ ಅಡಿಕೆ, ತೋಟದಲ್ಲಿ ಮಿಶ್ರಬೆಳೆಯಾಗಿ ಬೆಂಡೆ, ಬದನೆಕಾಯಿ, ಜವಳಿಕಾಯಿ, ಹೀರೆ, ಹುರುಳಿಕಾಯಿ, ಹಾಗಲಕಾಯಿ ಬೆಳೆದು ಸ್ಥಳೀಯವಾಗಿ ಮಾರಾಟ ಮಾಡಲಾಗಿದೆ.
ಆಯ ವ್ಯಯ
ಒಟ್ಟು 8 ಎಕರೆ ತೋಟ ಹಾಗೂ 1.50 ಎಕರೆ ಬತ್ತದಗದ್ದೆಯಿಂದ ್ಙ 1.20 ಲಕ್ಷ ಖರ್ಚಾಗಿ ್ಙ 2.20 ಲಕ್ಷ ರೂ ಆದಾಯ ಬಂದಿದೆ.
ಮನೆಯಲ್ಲಿ ಒಟ್ಟು 3 ದೇಸಿ ತಳಿ ಹಸು ಸಾಕಿದ್ದು, ಅಡುಗೆ ಮಾಡಲು ಗೋಬರ್ ಗ್ಯಾಸ್, ಸೋಲಾರ್ ದೀಪ ಬಳಸಲಾಗುತ್ತದೆ.
ಸಾವಯವ ಪದ್ದತಿ ಅಕ್ಕಿ, ಬತ್ತದ ಬೀಜ ಹಾಗೂ ತರಕಾರಿಗೆ ಬೇಡಿಕೆಗೆ ತಕ್ಕಂತೆ ಎಲ್ಲರಿಗೂ ಪೂರೈಕೆ ಮಾಡಲಾಗುತ್ತಿಲ್ಲ. ಸಾವಯವ ಕೃಷಿಗೆ ಸಮಾಧಾನ ಅಗತ್ಯ.
ಪ್ರಸಕ್ತ ದಿನ ಹೊಲ ಕೆಲಸಕ್ಕೆ ಕಾರ್ಮಿಕರ ಕೊರತೆ ನಡುವೆ ಗುತ್ತಿಗೆ ಮಾದರಿಯಡಿ ಕೃಷಿ ಚಟುವಟಿಕೆ ಮಾಡಲಾಗುತ್ತಿದೆ, ಮುಂದಿನ ದಿನಗಳಲ್ಲಿ ಸಾವಯವ ಕೃಷಿ ಉತ್ಪನ್ನಗಳನ್ನು ಹೆಚ್ಚು ಜನಪ್ರಿಯಗೊಳಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ ಎಂಬ ಮಾಹಿತಿ ನೀಡಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.