ಬದುಕು ಮಿನುಗಿಸಿದ ಪುಟ್ಟ ದೀಪ!

7
ನಾನೂ ಉದ್ಯಮಿ

ಬದುಕು ಮಿನುಗಿಸಿದ ಪುಟ್ಟ ದೀಪ!

Published:
Updated:

ಅವಕಾಶಗಳು ಕೆಲವರನ್ನು ಅರಸಿ ಬರುತ್ತವೆ. ಕೆಲವರು ಅವಕಾಶಗಳಿಗಾಗಿ ಕಾಯುತ್ತಾ ಕೂರುತ್ತಾರೆ. ಇನ್ನು ಕೆಲವರು ಅವಕಾಶಗಳನ್ನು ಸೃಷ್ಟಿಸಿಕೊಳ್ಳುತ್ತಾರೆ! ಹುಬ್ಬಳ್ಳಿಯ ನಾರಾಯಣ ಖೋಡೆ ಮೂರನೇ ಸಾಲಿಗೆ ಸೇರಿದ ವ್ಯಕ್ತಿ.ಗ್ರಾಮೀಣ ಭಾಗದ ಬಹಳಷ್ಟು ವಿದ್ಯಾರ್ಥಿಗಳ ಪಾಲಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎಂಬುದು ದೊಡ್ಡ ಸವಾಲು. ನಾರಾಯಣ ಖೋಡೆ ಪಾಲಿಗೂ ಅದು ಅಗ್ನಿಪರೀಕ್ಷೆಯೇ ಆಗಿತ್ತು. ಹಳ್ಳಿಯ ಎಲ್ಲ ಹುಡುಗರಂತೆ ತುಂಟತನ, ಹೊಸತರ ಹುಡುಕಾಟ ಮೊದಲಾದ ಗುಣಗಳನ್ನು ಮೈಗೂಡಿಸಿಕೊಂಡಿದ್ದ ಅವರು, ಪುಸ್ತಕ ಎಷ್ಟು ಓದಿದರೋ, ಅದೆಷ್ಟು ಪ್ರಶ್ನೆಗಳಿಗೆ ಉತ್ತರಿಸಿದರೋ.. ಪರೀಕ್ಷೆಯಂತೂ ಮುಗಿದಿತ್ತು.ಸದ್ಯ ಕಡೆಗೂ ಮುಗಿಯಿತಲ್ಲ ಎಂದು ನಿಟ್ಟಿಸಿರುಬಿಟ್ಟಿದ್ದರು ನಾರಾಯಣ. ಆದರೆ, ಫಲಿತಾಂಶ ಎಂಬುದು ನಿಲ್ಲಬೇಕಲ್ಲ. ತಿಂಗಳೊಪ್ಪತ್ತಿನಲ್ಲಿ ಅದೂ ಪ್ರಕಟವಾಯಿತು. ಪಾಸಾಗುವಷ್ಟು ಅಂಕಗಳನ್ನು ಗಳಿಸುವಲ್ಲಿ ಅವರು ವಿಫಲರಾಗಿದ್ದರು ಅರ್ಥಾತ್ ಫೇಲ್ ಆಗಿದ್ದರು.ಹಾಗೆಂದು ಫಲಿತಾಂಶ ಕಂಡು ನಾರಾಯಣ ವಿಚಲಿತರೇನೂ ಆಗಲಿಲ್ಲ. ಆದರೆ, ಮನೆಯಲ್ಲಿ ಖರ್ಚಿಗೆ ದುಡ್ಡು ಸಿಗುವುದು ಕಷ್ಟವಾಯಿತು. ಬೇರಾವುದಾದರೂ ಮಾರ್ಗ ಸಿಗುವುದೇನೋ ಎಂಬ ಹುಡುಕಾಟದಲ್ಲಿದ್ದಾಗ ಕಣ್ಣಿಗೆ ಬಿದ್ದಿದ್ದು ಪತ್ರಿಕೆಯಲ್ಲಿದ್ದ ಜಾಹೀರಾತು...ಬದುಕಿಗೆ ಪಾಠ ಹೇಳಿದ ನಪಾಸು!

`ವಿದ್ಯಾಭ್ಯಾಸ ಕುಂಟುತ್ತಾ ಸಾಗಿತ್ತು. ಎಸ್‌ಎಸ್‌ಎಲ್‌ಸಿಯಲ್ಲಿ ನಪಾಸಾದೆ. ಒಮ್ಮೆ ದಿನಪತ್ರಿಕೆ ಓದುತ್ತಿದ್ದಾಗ   ಮನೆಯಲ್ಲಿಯೇ ಪ್ಲಾಸ್ಟಿಕ್ ವಸ್ತು ತಯಾರಿಸುವ ಕುರಿತು ಕೊಲ್ಹಾಪುರದಲ್ಲಿ ತರಬೇತಿ ನೀಡಲಾಗುತ್ತದೆ ಎಂಬ ಜಾಹೀರಾತು ಕಣ್ಣಿಗೆ ಬಿತ್ತು. ಅರ್ಜಿ ಹಾಕಿ, ತರಬೇತಿ ಪಡೆದೆ. ನಂತರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕಟ್ಟಿ ಪಾಸಾದೆ. ಪಿಯುಸಿ ಸೇರಿದೆ. ಆದರೆ, ದ್ವಿತೀಯ ವರ್ಷದಲ್ಲಿ ಫೇಲಾದೆ. ಆಗ ತಂದೆ ನಾಗೇಂದ್ರ ಸಾ ನೀಡಿದ 2,500 ರೂಪಾಯಿ ಬಂಡವಾಳದಲ್ಲಿ ಮನೆಯಲ್ಲಿಯೇ ಕೈಯಿಂದಲೇ ಮೌಲ್ಡ್ (ಅಚ್ಚು ಹಾಕುವ) ಮಾಡುವ ಎರಡು ಯಂತ್ರಗಳನ್ನು ಖರೀದಿಸಿದೆ.  ನಾನು ಕಷ್ಟಪಟ್ಟು ಕೈಯಾರೆ ತಯಾರಿಸಿದ ಪ್ಲಾಸ್ಟಿಕ್ ಸಾಮಗ್ರಿಗಳು ಅದುಹೇಗೋ ಮಾರಾಟವಾಗುತ್ತಾ ಹೋದವು. ಬೇಡಿಕೆ ಹೆಚ್ಚುತ್ತಾ ಹೋದಂತೆ ಪ್ಲಾಸ್ಟಿಕ್ ಅಚ್ಚು ಹಾಕುವ ಯಂತ್ರಗಳ ಅಗತ್ಯವೂ ಹೆಚ್ಚಿತು. ನಂತರ 15 ಮೌಲ್ಡಿಂಗ್ ಯಂತ್ರಗಳನ್ನು ಖರೀದಿಸಿದೆ. ಅಲ್ಲಿಗೆ ನಾನೂ ಒಬ್ಬ ಪುಟ್ಟ ಉದ್ಯಮಿ ಎನಿಸಿಕೊಂಡೆ' ಓದು-ಉದ್ಯಮದ ಪಯಣದ ದಿನಗಳನ್ನು ನೆನಪಿಸಿಕೊಳ್ಳುತ್ತಾ ಹೋದರು ನಾರಾಯಣ.ನಂತರ, ಕೈಯಿಂದಲೇ ಎಲ್ಲವನ್ನೂ ಅಚ್ಚುಹಾಕಿ ಮಾರುಕಟ್ಟೆ ಬೇಡಿಕೆ ಪೂರೈಸುವುದು ಕಷ್ಟ ಎನಿಸಿತು. 1986ರಲ್ಲಿ ಸ್ವಯಂಚಾಲಿತ ಯಂತ್ರಗಳನ್ನು ಖರೀದಿಸಿದೆ. ಹುಬ್ಬಳ್ಳಿ ನಗರ ಸಮೀಪದ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ಕಾರ್ಖಾನೆ ಆರಂಭಿಸಿದೆ. ಅಲ್ಲಿ, ಬೆಂಗಳೂರು, ಮುಂಬೈ ಹಾಗೂ ಅಹ್ಮದಾಬಾದ್‌ನಿಂದ ಖರೀದಿಸಿದ ಈ ಯಂತ್ರಗಳನ್ನು ಜೋಡಿಸಿ ದೊಡ್ಡಮಟ್ಟದಲ್ಲಿಯೇ ಉದ್ಯಮವನ್ನು ವಿಸ್ತರಿಸಿದೆ. ಹೀಗಿದೆ ನೊನೀಡಿ ನನ್ನ ಪ್ಲಾಸ್ಟಿಕ್ ಮೌಲ್ಡಿಂಗ್ ಮತ್ತು ವಿದ್ಯುತ್ ಮಿನುಗು ದೀಪಗಳ ತಯಾರಿಕೆ ಉದ್ಯಮ' ಎಂದು ತಮ್ಮ ಕಾರ್ಖಾನೆಯ ಒಳಹೊರಗೆಲ್ಲ ಸುತ್ತಾಡಿಸಿ ತಮ್ಮ ಬದುಕಿನ ಬೀಳು-ಏಳು ಅನುಭವಗಳನ್ನು ಹಂಚಿಕೊಂಡರು ಖೋಡೆ.

ಹಿಂದೆಲ್ಲ ಹಳ್ಳಿ-ಪಟ್ಟಣಗಳಲ್ಲಿ ಮೊದಲು ದೀಪಾವಳಿ ಎಂದರೆ ಮಣ್ಣಿನ ಹಣತೆಯಿಂದ ಮನೆಯ ಅಂಗಳದಲ್ಲಿ ನೂರಾರು ದೀಪ ಸಾಲುಗಳ ಮಿನುಗುತ್ತಿದ್ದವು. ಹಬ್ಬದ ಸಡಗರವನ್ನು ಊರಿಗೆಲ್ಲಾ ಸಾರುತ್ತಿದ್ದವು. ಉಳಿದ ಹಬ್ಬ-ಹುಣ್ಣಿಮೆಗಳಲ್ಲಿ ಹೆಚ್ಚೆಂದರೆ ಮನೆಯ ಬಾಗಿಲಿಗೆ ಮಾವು-ಬೇವು-ಹೂವಿನ ತೋರಣವೇ ದೊಡ್ಡ  ಅಲಂಕಾರವಾಗಿರುತ್ತಿತ್ತು.ಈಗ ಕಾಲ ಬದಲಾಗಿದೆ. ಹಬ್ಬ-ಹುಣ್ಣಿಮೆಗಳಲ್ಲಿಯಷ್ಟೆ ಅಲ್ಲ, ಜನ್ಮದಿನ-ಮದುವೆ, ವಾರ್ಷಿಕೋತ್ಸವಗಳಲ್ಲಿ ಮನೆ-ಮಂದಿರದ ಗೋಡೆ-ಗೋಪುರಗಳಿಗೆಲ್ಲಾ ಮಿನುಗುಟ್ಟುವ ಬಗೆಬಗೆ ಬಣ್ಣದ ವಿದ್ಯುತ್ ದೀಪಗಳ ಮಾಲೆಗಳನ್ನು ಹಬ್ಬಿಸದೇ ಇದ್ದರೆ ಅದು ಸಂಭ್ರಮವೇ ಅಲ್ಲ ಎಂಬ ಮನೋಭಾವ.  ಗಣೇಶೋತ್ಸವಗಳ ಸಂದರ್ಭದಲ್ಲಿಯಂತೂ ಈ ವಿದ್ಯುತ್ ದೀಪದ ಸರಮಾಲೆಗಳಿಗೆ, ಅದರಿಂದ ಅಲಂಕಾರ ಮಾಡುವವರಿಗೆ ಭಾರಿ ಬೇಡಿಕೆ. ನವರಾತ್ರಿ, ದಸರಾ, ಮಾರಿಹಬ್ಬ, ಜಾತ್ರೆ ಎಲ್ಲದರಲ್ಲೂ ಈಗ ಮಿನುಗುಟ್ಟುವ ವಿದ್ಯುತ್ ದೀಪಗಳ ಅಲಂಕಾರ ಇರಲೇಬೇಕು. ಇಲ್ಲವಾದರೆ ಅದು ಸಂಭ್ರಮವೇ ಅಲ್ಲ ಎಂಬ ತೀರ್ಮಾನ. ಇದರ ಪರಿಣಾಮ, ಈ ವಿದ್ಯುತ್ ದೀಪಗಳ ಸರಮಾಲೆ ತಯಾರಿಸುವ ನಾರಾಯಣ ಖೋಡೆ ಅಂತಹವರ ಉದ್ಯಮಕ್ಕೆ ಶುಕ್ರದೆಸೆ ತಂದಿದೆ.ದಿನಕ್ಕೆ 3 ಲಕ್ಷ ದೀಪ ಮಾರಾಟ

ದೀಪಾವಳಿ ಸೇರಿದಂತೆ ವಿವಿಧ ಹಬ್ಬಗಳು ಹಾಗೂ ಶುಭ ಕಾರ್ಯಕ್ಕೆ ಅಲಂಕರಿಸುವ ವಿದ್ಯುತ್ ದೀಪಗಳನ್ನು (ಮಿನುಗುವ ವಿದ್ಯುತ್ ದೀಪಗಳ ಸರಮಾಲೆ) ನಿತ್ಯ ಮೂರು ಲಕ್ಷದಷ್ಟು ಅವರ `ಖೋಡೆ ಪ್ಲಾಸ್ಟಿಕ್ಸ್' ಕಾರ್ಖಾನೆಯಲ್ಲಿ ಸಿದ್ಧಗೊಳ್ಳುತ್ತವೆ.ವಿವಿಧ ಆಕಾರ, ಬಣ್ಣಗಳ ವಿದ್ಯುತ್ ದೀಪದ ಪುಟಾಣಿ ಬಲ್ಬ್‌ಗಳ ಬಣ್ಣದ ಮುಚ್ಚಳಗಳು ಒಂದು ನಿಮಿಷಕ್ಕೆ 8ರಿಂದ 36ರಷ್ಟು ತಯಾರಾಗುತ್ತವೆ. ಜತೆಗೆ 48 ಬಲ್ಬ್‌ಗಳೂ ತಯಾರಾಗುತ್ತವೆ.    ಬಲ್ಬ್‌ನ ಮುಚ್ಚಳಗಳ ತಯಾರಿಕೆ ವೇಳೆ ಹೊರಬರುವ ತ್ಯಾಜ್ಯವನ್ನೇನೂ ಅವರು ಕಸದ ಗುಂಡಿಗೆ ಸುರಿಯುವುದಿಲ್ಲ. ಮತ್ತೆ ಗ್ರೈಂಡರ್‌ಗೆ ಹಾಕಿ ಪುಡಿ ಮಾಡಿ ಮರುಬಳಕೆ ಮಾಡುತ್ತಾರೆ.50 ಬಲ್ಬ್‌ಗಳನ್ನು ಜೋಡಿಸಿದ 40 ಅಡಿ ಉದ್ದದ ಸರಮಾಲೆಯ ಬೆಲೆ 120 ರೂಪಾಯಿ. 50 ಬಲ್ಬ್‌ಗಳಿರುವ 75 ಅಡಿ ಉದ್ದದ ಸರಮಾಲೆಗೆ 300 ರೂಪಾಯಿ ದರ ನಿಗದಿಗೊಳಿಸಿದ್ದಾರೆ.ಸರಮಾಲೆ ಅಲಂಕಾರಕ್ಕೆ ಅಗತ್ಯವಾದ ಬಿಡಿಭಾಗಗಳೂ ಅವರ ಕಾರ್ಖಾನೆಯಲ್ಲಿಯೇ ತಯಾರಾಗುತ್ತವೆ. ಇವನ್ನು ರಾಜ್ಯದ ವಿವಿಧೆಡೆ ಮಾರಾಟಕ್ಕೆ ರವಾನಿಸಲಾಗುತ್ತದೆ. ಮಹಾರಾಷ್ಟ್ರ, ಗುಜರಾತ್, ಕೇರಳ, ತಮಿಳುನಾಡು, ದೆಹಲಿಗೂ ಕಳುಹಿಸಿಕೊಡಲಾಗುತ್ತದೆ.ಅನುಕರಣೆ ಮತ್ತು ಪಾಠ

ಕಡಿಮೆ ಬೆಲೆಯ ಲೈಟಿನ ಸರಮಾಲೆಗಳು `1999ರಿಂದ ಚೀನಾದಿಂದ ಆಮದಾಗುತ್ತಿರುವುದರಿಂದಾಗಿ ನಮ್ಮ ಉದ್ಯಮಕ್ಕೆ ದೊಡ್ಡ ಪೆಟ್ಟು ಬಿತ್ತು. ಚೀನಾದಿಂದ ಬಂದ 50 ಬಲ್ಬ್‌ಗಳ ಸರಮಾಲೆ ಬೆಲೆ ಕೇವಲ 20 ರೂಪಾಯಿ. ಚೀನಾ ಸರಕಿನ ಈ ಸ್ಪರ್ಧೆಯ ಕಾರಣದಿಂದಾಗಿ ನಾವೂ ಅದೇ ರೀತಿ ಹೋಲ್ಡರ್ ಹಾಗೂ ಕ್ಯಾಪ್ ಸಣ್ಣ ಆಕಾರಕ್ಕೆ ಇಳಿಸಿ ಉತ್ಪಾದಿಸಲು ಆರಂಭಿಸಿದೆವು' ಎಂದು ದಶಕದ ಹಿಂದಿನ ಮಾರುಕಟ್ಟೆ ಚಿತ್ರಗಳನ್ನು ಮತ್ತೆ ನೆನಪಿಗೆ ತಂದುಕೊಂಡರು ನಾರಾಯಣ ಖೋಡೆ.್ಙ1 ಕೋಟಿ ವಹಿವಾಟು!

`ಆಗ ನಾವೂ ಸಹ ಮೊದ ಮೊದಲು ಚೀನಾದ ಬಲ್ಬ್‌ಗಳನ್ನೇ ಬಳಸಿ ವಿದ್ಯುತ್ ದೀಪಗಳ ಸರಮಾಲೆ ತಯಾರಿಸಿ ಮಾರಲಾರಂಭಿಸಿದೆವು. ಆದರೆ ಚೀನಾದಿಂದ ಬಂದ ಲೈಟಿನ ಸರಗಳನ್ನು ಕೊಂಡಜನ ಕೆಲವೇ ದಿನಗಳಲ್ಲಿ ಅವನ್ನು ಬಿಸಾಡಲಾರಂಭಿಸಿದರು. ಒಂದೊಮ್ಮೆ ಆ ದೀಪಗಳನ್ನು ಕೆಟ್ಟುಹೋದರೆ ಮತ್ತೆ ದುರಸ್ತಿ ಆಗುತ್ತಿರಲಿಲ್ಲ. ಆ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸುಲಭಕ್ಕೆ ಹಾಳಾಗದ, ದೀರ್ಘ ಬಾಳಿಕೆ ಬರುವ ಲೈಟಿನ ಸರ ಉತ್ಪಾದಿಸಿದೆವು. ಜನರಿಗೆ ಮನವರಿಕೆ ಆಯಿತು. ಮತ್ತೆ ಉದ್ಯಮ ಕುಸಿಯಲಿಲ್ಲ. ಈಗ ವಾರ್ಷಿಕ ವಹಿವಾಟು ಒಂದು ಕೋಟಿ ರೂಪಾಯಿಗೂ ಅಧಿಕವಾಗಿದೆ' ಎಂದು ವಿವರಿಸುತ್ತಾರೆ ಅವರು.

`ರಾಜ್ಯದ ವಿವಿಧೆಡೆಗೆ ಸಗಟು ಲೆಕ್ಕದಲ್ಲಿ ಕಳಿಸುವುದರ ಜತೆಗೆ ಹುಬ್ಬಳ್ಳಿಯ ಜನತಾ ಬಜಾರದಲ್ಲಿ ನಮ್ಮದೇ ಖೋಡೆ ಪ್ಲಾಸ್ಟಿಕ್ ಅಂಗಡಿಯಲ್ಲಿ ಬಿಡಿಭಾಗಗಳನ್ನೂ ಮಾರುತ್ತೇವೆ. ನಮಗಿರುವ ಹೆಚ್ಚಿನ ಗ್ರಾಹಕರು ಎಂದರೆ, ಶಾಮಿಯಾನದವರು. ಅವರು ವರ್ಷದ 12 ತಿಂಗಳೂ ಈ ವಿದ್ಯುತ್ ಅಲಂಕಾರಿಕ ದೀಪಗಳನ್ನು ಖರೀದಿಸುತ್ತಲೇ ಇರುತ್ತಾರೆ. ಎಲೆಕ್ಟ್ರಿಕಲ್ ಅಲಂಕಾರಿಕ ವಸ್ತು ಮಾರುವವರೂ ಕೊಳ್ಳುತ್ತಾರೆ. ನಮಗೆ ಸೀಜನ್ ಎಂದರೆ ಗಣೇಶನ ಹಬ್ಬ. ಇದರಲ್ಲೇ ಲೈಟಿನ ಸರಗಳು ಹೆಚ್ಚು ಮಾರಾಟ ಆಗುತ್ತವೆ. ನಂತರ ದಸರಾ, ದೀಪಾವಳಿಯಾದ ಮೇಲೆ ಕ್ರಿಸ್‌ಮಸ್ ಹಬ್ಬದವರೆಗೂ ಬೇಡಿಕೆ ಹೆಚ್ಚೇ ಇರುತ್ತದೆ' ಎಂದು ನಾರಾಯಣ ಖುಷಿಯಿಂದ ಹೇಳುತ್ತಾರೆ.22 ಮಂದಿಗೆ ನೌಕರಿ

ಸದ್ಯ ಅವರ ಕಾರ್ಖಾನೆಯಲ್ಲಿ 18 ಮಹಿಳೆಯರು ಮತ್ತು ನಾಲ್ವರು ಯುವಕರು ದುಡಿಯುತ್ತಿದ್ದಾರೆ. ಜತೆಗೆ 25 ಕುಟುಂಬಗಳು ತಮ್ಮ ಮನೆಗಳಲ್ಲಿಯೇ ಲೈಟಿನ ಸರಗಳನ್ನು ಜೋಡಿಸಿಕೊಡುತ್ತವೆ. ನಾರಾಯಣ ಅವರೊಂದಿಗೆ ಪುತ್ರ ರಾಜೇಶ ಹಾಗೂ ಅಳಿಯ ಶ್ರೀಕಾಂತ ಕೈಜೋಡಿಸಿದ್ದಾರೆ.`ಕಚ್ಚಾ ಪದಾರ್ಥಗಳನ್ನು ಬೆಂಗಳೂರು, ಮುಂಬೈ ಹಾಗೂ ದೆಹಲಿಯಿಂದ ತರಿಸುತ್ತೇವೆ. ಸದ್ಯಕ್ಕೆ ದುಡಿಯುವ ಬಂಡವಾಳ 50 ಲಕ್ಷ ರೂಪಾಯಿ ಮೀರುತ್ತದೆ. ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕಲ್ ಮಲ್ಟಿ ಸ್ಟ್ಯಾಂಡ್ ವೈರ್(ತಂತಿ) ಉತ್ಪಾದಿಸುವ ಆಲೋಚನೆ ಇದೆ' ಎನ್ನುವ 55 ವರ್ಷದ ನಾರಾಯಣ ಖೋಡೆ  (ಮೊ: 9845741756) ತಮ್ಮ ಕನಸುಗಳ ವ್ಯಾಪ್ತಿಯನ್ನು ಇನ್ನೂ ಹಿಗ್ಗಿಸುತ್ತಲೇ ಇದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry