ಬದುಕು ಸಾಗುತ್ತಿದೆ ಎಲ್ಲ ಬವಣೆಯ ಮಧ್ಯೆ...

7
33ನೇ ವಾರ್ಡ್

ಬದುಕು ಸಾಗುತ್ತಿದೆ ಎಲ್ಲ ಬವಣೆಯ ಮಧ್ಯೆ...

Published:
Updated:
ಬದುಕು ಸಾಗುತ್ತಿದೆ ಎಲ್ಲ ಬವಣೆಯ ಮಧ್ಯೆ...

ತುಮಕೂರು: `ಗ್ರಾಮ ಪಂಚಾಯಿತಿ ಆಡಳಿತ ಇದ್ದಾಗಲೇ ನಾವು ಎಷ್ಟೋ ಚೆನ್ನಾಗಿದ್ವಿ. ಈಗ ಹೆಸರಿಗಷ್ಟೇ ನಗರಸಭೆ ನಮ್ಮನ್ನು ಸೇರಿಸಿಕೊಂಡಿದೆ, ಸೌಲಭ್ಯ ಮಾತ್ರ ಇಲ್ಲ' ಎಂದು ನಿಟ್ಟುಸಿರಿನೊಂದಿಗೆ ತಮ್ಮಲ್ಲಿನ ಅನಾಥ ಭಾವ ಹೊರಹಾಕಿದರು 33ನೇ ವಾರ್ಡ್‌ನ ಜನತೆ.ಕಾರಣ; ಇಲ್ಲಿನ ಚರಂಡಿ ದುರ್ನಾತ ಬೀರಿದರೆ, ರಸ್ತೆಯಲ್ಲಿ ಗುಂಡಿ ಬಿದ್ದರೆ, ನಲ್ಲಿ ಕೆಟ್ಟು ನಿಂತರೆ ನಗರಸಭೆ ಬದಲು ಜನರೇ ಖುದ್ದಾಗಿ ದುರಸ್ತಿ ಮಾಡಬೇಕಾದ ಪರಿಸ್ಥಿತಿ. ಇಲ್ಲಿ  ಪಕ್ಕಾ ರಸ್ತೆಗಳು ಕಚ್ಚಾ ರಸ್ತೆಗಳಂತೆ ಕಾಣುತ್ತವೆ. ಲೇಔಟ್ ತಯಾರಿಸುವಾಗ ಅವೈಜ್ಞಾನಿಕ ನಕ್ಷೆಯೇ ಸಮಸ್ಯೆಗೆ ಕಾರಣ ಎನ್ನಲಾಗುತ್ತದೆ. ಇದರಿಂದ ಬಡವರು, ಮಧ್ಯಮ ವರ್ಗ ಹಾಗೂ ಶ್ರೀಮಂತ ವರ್ಗ ಎಲ್ಲರೂ `ಸಮಾನ'ವಾಗಿ ಕಷ್ಟ ಅನುಭವಿಸಬೇಕಾಗಿದೆ.ಕೆಸರುಮಡು ರಸ್ತೆ ವಿಸ್ತಾರವಾಗಿದೆ ಆದರೆ ದೂಳು ಎಲ್ಲೆಡೆ ಹಾರಾಡುತ್ತಿರುತ್ತದೆ. ಇಲ್ಲಿಗೆ ಸಮೀಪದ ಹಳ್ಳವು ಈಗ ಒತ್ತುವರಿಯಿಂದ ಮಣ್ಣು ತುಂಬಿಸಿಕೊಳ್ಳುತ್ತಾ ಕಣ್ಮರೆಯಾಗುವ ಲಕ್ಷಣ ತೋರಿಸುತ್ತಿದೆ. ಇಡೀ ಕ್ಯಾತ್ಸಂದ್ರದ ಮಳೆ ನೀರು ಸಂಗಮವಾಗುತ್ತಿದ್ದ ಸ್ಥಳ ಇನ್ನು ನೆನಪಿನಲ್ಲಿ ಮಾತ್ರ ಉಳಿಯಲಿದೆ.ನೀರು ಐದು ದಿನಕ್ಕೊಮ್ಮೆ ಬರುತ್ತದೆ. ವಾರ್ಡಿನ ಬಹುತೇಕ ಕಡೆ ತ್ಯಾಜ್ಯ ವಿಲೇವಾರಿ ಆಗದಿರುವುದು ಮೂಗಿಗೆ ಬಡಿಯುತ್ತದೆ. ಬ್ರಾಹ್ಮಣರ ಬೀದಿ, ಗೌಡರ ಬೀದಿ ಸ್ವಲ್ಪಮಟ್ಟಿಗೆ ಅಚ್ಚುಕಟ್ಟಾಗಿವೆ ಆದರೆ ಇಕ್ಕಟ್ಟು. ಕ್ಯಾತ್ಸಂದ್ರ ಪೇಟೆ ಬೀದಿಯ ಚರಂಡಿಯಲ್ಲಿ ಹರಿದು ಹೋಗಬೇಕಾಗಿದ್ದ ಕೊಳಚೆ ನೀರು ರಸ್ತೆಯಲ್ಲೇ ಹರಿಯುತ್ತದೆ. ನೀರಿನ ಮೇಲೆಯೇ ಜನರು ಓಡಾಡುವ ಪರಿಸ್ಥಿತಿ. ದಶಕಗಳಿಂದ ತರಕಾರಿ ವ್ಯಾಪಾರ ಮಾಡುತ್ತಿದ್ದವರು ಬದುಕಿನ ಮೇಲೂ ಹೊಡೆತ ಬಿದ್ದಿದೆ.ಪಂಚಾಯಿತಿ ಅವಧಿಯಲ್ಲಿಯೇ ಕೊಳವೆ ಬಾವಿಗಳು ಕೊರೆಯಿಸಿರುವುದು ಬಿಟ್ಟರೆ ಎಲ್ಲಿಯೂ ಹೊಸದಾಗಿ ಕೊಳವೆ ಕೊರೆಯಿಸಿಲ್ಲ ಎನ್ನುತ್ತಾರೆ ಇಲ್ಲಿನ ಜನರು. `ಪಂಚಾಯಿತಿ'ಗೆ ಮತ್ತೆ ನಮ್ಮನ್ನು ಸೇರಿಸಬೇಕು ಎಂದು ವಾರ್ಡ್ ಜನರು ತಮ್ಮಷ್ಟಕ್ಕೆ ತಾವೇ ವ್ಯಂಗ್ಯವಾಡಿಕೊಳ್ಳುತ್ತಾರೆ.ನೀರಿನದೆ ಸಮಸ್ಯೆ

33ನೇ ವಾರ್ಡಿನಲ್ಲಿ ತ್ಯಾಜ್ಯ ವಿಲೇವಾರಿ ಹಾಗೂ ನೀರಿನ ಸಮಸ್ಯೆ ಹೊರತಾಗಿ ಚರಂಡಿ, ಸಿಮೆಂಟ್ ರಸ್ತೆ, ಡಾಂಬರೀಕರಣ, 4 ಕೊಳವೆಬಾವಿ, ರಾಜಕಾಲುವೆ ಹಾಗೂ ಹೈಮಾಸ್ಟ್ ಅಳವಡಿಕೆಗಾಗಿ ಒಟ್ಟು 2.5 ಕೋಟಿ ರೂಪಾಯಿ ಕೆಲಸವಾಗಿದೆ. ಚಂದ್ರಮೌಳೇಶ್ವರ 1ನೇ ಕ್ರಾಸ್ ರಸ್ತೆಗೆ ಡಾಂಬರೀಕರಣ, ಗಾಣಿಗೇರ ಬೀದಿ, ಹಳೆ ಅಂಚೆ ಕಚೇರಿ ರಸ್ತೆಗೆ ಸಿಮೆಂಟ್ ಹಾಕಲಾಗಿದೆ. ಕೊರೆಯಿಸಿದ ಆರು ಕೊಳವೆ ಬಾವಿಗಳಲ್ಲಿ ನಾಲ್ಕು ಕಾರ್ಯನಿರ್ವಹಿಸುತ್ತಿವೆ. ಬಡ್ಡಿಹಳ್ಳಿ ಕೆರೆಗಾಗಿ ರಾಜಕಾಲುವೆ ನಿರ್ಮಿಸಲಾಗಿದೆ. ಎಸ್‌ಎಲ್‌ಎನ್ ನಗರದಲ್ಲಿನ 40 ಲಕ್ಷ ರೂಪಾಯಿ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಲಾಗಿದೆ.

-ವೇದಾವತಿ, ನಗರಸಭೆ ಮಾಜಿ ಸದಸ್ಯೆ, 33ನೇ ವಾರ್ಡ್

 

ಜನ ದನಿ

ನಿತ್ಯ ನರಕ


ಪೇಟೆ ಬೀದಿ ಎನ್ನುವುದು ನಿತ್ಯ ನರಕದ ಅನುಭವ ನೀಡುವ ಸ್ಥಳ. ರಸ್ತೆ ವಿಸ್ತರಿಸಿ ವರ್ಷವಾದರೂ ಮುಂದಿನ ಕಾಮಗಾರಿ ಪೂರ್ಣಗೊಳಿಸಿಲ್ಲ.

-ಜಗನ್ನಾಥ್ಹಿಂದುಳಿದ ನೋವು


ತ್ಯಾಜ್ಯ ವಿಲೇವಾರಿ ಅಂಥ ಕೆಲಸಗಳನ್ನು ಜನರೆ ಮಾಡಬೇಕಾದರೆ ನಾವು ನಗರಸಭೆಗೆ ಏಕೆ ತೆರಿಗೆ ಕಟ್ಟಬೇಕು ? ಅಭಿವೃದ್ಧಿಯಲ್ಲಿ ನಮ್ಮ ವಾರ್ಡ್ ತೀರ ಹಿಂದುಳಿದಿದೆ.

-ಪ್ರಕಾಶ್ಮಲಿನ ನೀರು


ಬಡ್ಡಿಹಳ್ಳಿ ಕೆರೆಗೆ ಮಲಿನ ನೀರು ಸೇರುತ್ತಿರುವುದರಿಂದ ಮಕ್ಕಳು ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ. ಈ ಪ್ರದೇಶ ಪರವಾಗಿಲ್ಲ ಎಂದುಕೊಂಡು ಈ ಕಡೆ ಬಾಡಿಗೆಗೆ ಬಂದರೆ ಇಲ್ಲೂ ಅದೇ ಸಮಸ್ಯೆ.

-ಅಸ್ಲಾಂಖಾನ್

ಸ್ವಚ್ಛತೆ ಇಲ್ಲ

ಎಲ್ಲ ಬೀದಿಯ್ಲ್ಲಲೂ ಸ್ವಚ್ಛತೆಯೇ ಪ್ರಮುಖ ಸಮಸ್ಯೆ. ನೀರು ಐದು ದಿನಕ್ಕೊಮ್ಮೆ ಬರುತ್ತದೆ. ಪೌರಕಾರ್ಮಿಕರು ಇತ್ತ ತಲೆಯೇ ಹಾಕುವುದಿಲ್ಲ.

-ಸಿದ್ದಪ್ಪ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry