ಬದುಕು ಹಸನಾಗಿಸಿದ ಹೈನುಗಾರಿಕೆ

7

ಬದುಕು ಹಸನಾಗಿಸಿದ ಹೈನುಗಾರಿಕೆ

Published:
Updated:

ಉದ್ಯೋಗ ಅರಸಿ ಬೇರೆ ರಾಜ್ಯದಿಂದ ಬರಿಗೈಯಲ್ಲಿ ಬಂದು ಹೈನುಗಾರಿಕೆಯಲ್ಲಿ ತೊಡಗಿ ನಾಲ್ಕಾರು ವರ್ಷಗಳಲ್ಲಿ ನೆಲೆ ಕಂಡುಕೊಂಡ ನಾಲ್ಕು ಎಕರೆ ಹೊಲದ ಒಡೆಯರ ಯಶಸ್ವಿ `ಕಥೆ' ಇದು. ಸಿರಿತನ ಬಂದರೂ ತಮಗೆ ಆಸರೆ ನೀಡಿರುವ ಜೋಪಡಿಯಲ್ಲಿಯೇ ಬಾಳು ಹಸನಾಗಿಸಿಕೊಂಡಿರುವ ಸಹೋದರರ ಕಥೆ ಇದು.ರಾಯಚೂರ ಜಿಲ್ಲೆ ಸಿಂಧನೂರಿನ ತಳುವಗೇರಾ ಗ್ರಾಮದಲ್ಲಿರುವ ಈ  ಜಮೀನಿನ ಯಜಮಾನರು ಪಿ.ಪ್ರದೀಪಕುಮಾರ ಹಾಗೂ ಭಾಸ್ಕರ ಸಹೋದರರು. ಮೂಲ ಆಂಧ್ರಪ್ರದೇಶ. ಕೆಲ ವರ್ಷಗಳ ಹಿಂದೆ ಸಿಂಧನೂರಿಗೆ ಬಂದಿದ್ದರು. ಆದರೆ ಅಲ್ಲಿ ಇವರಿಗೆ ದುಡಿಯಲು ಕೈತುಂಬ ಕೆಲಸ ಸಿಕ್ಕಲಿಲ್ಲ. ಕಷ್ಟಪಟ್ಟು ಕೃಷಿ ಮಾಡುವ ಹಂಬಲ ಅವರಿಗಿದ್ದರೂ ಅಂಗೈಯಷ್ಟು ಭೂಮಿಯೂ ಅಲ್ಲಿ ಇದ್ದಿರಲಿಲ್ಲ. ಇಂತಹ ಸಂದರ್ಭದಲ್ಲಿ ತಮ್ಮ ಕುಟುಂಬ ನಿರ್ವಹಿಸಲು ಹೆಣಗುತ್ತಿದ್ದ ಇವರನ್ನು ಅವರ ಸೋದರ ಮಾವ ಬೆಂಚಮಟ್ಟಿ ಗ್ರಾಮದಲ್ಲಿನ ತಮ್ಮ ದಾಳಿಂಬೆ ತೋಟ ನಿರ್ವಹಣೆ ಮಾಡಲೆಂದು ಕೂಲಿ ರೂಪದಲ್ಲಿ ಕರೆ ತಂದಿದ್ದರು. ಆದರೆ ಅದೃಷ್ಟ ಕೈಕೊಟ್ಟಿತ್ತು. ದಾಳಿಂಬೆ ಗಿಡಗಳು ದುಂಡಾಣು ರೋಗಕ್ಕೆ ಬಲಿಯಾಗಿ ಸಾಕಷ್ಟು ನಷ್ಟ ಅನುಭವಿಸಿದರು. ಮಾವ ದಾಳಿಂಬೆ ತೊಟವನ್ನೇ ಬೇರೆಯವರಿಗೆ ಮಾರಿ ಹೋದ. ಆಗ ಮತ್ತೇ ಈ ಸಹೋದರರು ನೆಲೆ ಇಲ್ಲದಂತಾದರು.ಬದುಕು ಸವಾಲಾಗಿ ಸ್ವೀಕಾರ

ಒಂದರ ಮೇಲೊಂದು ಸಮಸ್ಯೆ ಇವರ ಬೆನ್ನುಹತ್ತಿತು. ಆದರೂ ಸಹೋದರರು ಧೃತಿಗೆಡಲಿಲ್ಲ. ಸಮಸ್ಯೆಗಳಿಗೆ ಎದೆಗೊಟ್ಟು ನಿಂತರು. ಸಮೀಪದ ತಳುವಗೇರಾ ಗ್ರಾಮದಲ್ಲಿ ವಾಸ್ತವ್ಯ ಹೂಡಿದರು, ಮಾವ ನೀಡಿದ್ದ ಕೂಲಿ ಹಣದಲ್ಲಿ ಎರಡು ಆಕಳುಗಳನ್ನು ಖರೀದಿಸಿದರು. ಪತ್ನಿಯರು ಅದರ ನಿರ್ವಹಣೆ ಮಾಡಿದರೆ ಈ ಸಹೋದರರು ಪಕ್ಕದ ಬ್ಯಾಲಿಹಾಳು, ತಳುವಗೇರಾ, ಬೆಂಚಮಟ್ಟಿ, ಚಳಗೇರಿಯಂತಹ ಹಳ್ಳಿಗಳಿಗೆ ಬೈಸಿಕಲ್ ಮೂಲಕ ಹಾಲು ಸಂಗ್ರಹಿಸಿ ಪಟ್ಟಣಕ್ಕೆ ಮಾರಾಟ ಮಾಡಲು ಆರಂಭಿಸಿದರು. ಇದು ಎರಡು ವರ್ಷ ಪೂರೈಸುವುದರೊಳಗೆ ಅವರ ಕೊಟ್ಟಿಗೆಗೆ ಮತ್ತೆರಡು ಮಿಶ್ರತಳಿಯ ಆಕಳುಗಳು ಬಂದಿದ್ದವು. ಇದೇ ರೀತಿ ನಾಲ್ಕಾರು ವರ್ಷ ಕಷ್ಟಪಟ್ಟದ್ದರಿಂದ ಆರು ತಿಂಗಳಿಗೊಂದರಂತೆ ಆಕಳು ಖರೀದಿಸಿ ಹತ್ತಾರು ಸಾವಿರ ರೂಪಾಯಿ ಬೆಲೆ ಬಾಳುವ ಹತ್ತಾರು ಆಕಳುಗಳ ಒಡೆಯರಾದರು. ಈ ಎಲ್ಲ ಆಕಳುಗಳನ್ನು ಆರೋಗ್ಯಕರವಾಗಿ ಸಂರಕ್ಷಣೆ ಮಾಡುವ ಉದ್ದೇಶದಿಂದ ಗ್ರಾಮದಲ್ಲಿ ರೂ. 28 ಸಾವಿರ ಕೊಟ್ಟು ಕೊಳವೆ ಬಾವಿ ಸಹಿತವಾಗಿದ್ದ ಮೂರು ಎಕರೆ ಜಮೀನು ಗುತ್ತಿಗೆಗೆ ಪಡೆದು ಅಲ್ಲಿಯೇ ಜೋಪಡಿ ನಿರ್ಮಿಸಿ ಹಾಲಿನ ಉತ್ಪಾದನೆ ಹೆಚ್ಚಿಸಿಕೊಂಡಿದ್ದಾರೆ.ಮನೆಯೆಲ್ಲ ಗೋಮಾಳ

ಆಳಾಗಿ ದುಡಿದ ಈ ಕುಟುಂಬ ಈಗ ಯಾವುದೇ ಕೆಲಸ ಮಾಡಲು ಹಿಂದೆಮುಂದೆ ನೋಡುತ್ತಿಲ್ಲ. ಕುಟುಂಬದ ಪ್ರತಿಯೊಬ್ಬ ಸದಸ್ಯರು ಸಹಕಾರ ಮನೋಭಾವನೆಯಿಂದ ಕೆಲಸ ಹಂಚಿಕೊಂಡು ನಿರ್ವಹಣೆ ಮಾಡುತ್ತಾರೆ. ಅವರ ಕೊಟ್ಟಿಗೆಯಲ್ಲೆಗ 9 ಗೋವುಗಳು, 6 ಕರುಗಳು ಇವೆ. ದಿನಕ್ಕೆ 60 ಲೀಟರ್‌ವರೆಗೆ ಹಾಲು ಕರೆಯುತ್ತಾರೆ. ಈಗಿನ ಹಾಲಿನ ದರಕ್ಕೆ ಲೆಕ್ಕ ಹಾಕಿದರೆ ಹೆಚ್ಚು ಕಡಿಮೆ ದಿನಕ್ಕೆ 1,500 ರೂಪಾಯಿ ಅವರಿಗೆ ದೊರೆಯುತ್ತದೆ. ತಿಂಗಳ ಮೊತ್ತ ಸುಮಾರು 42 ಸಾವಿರ ರೂಪಾಯಿ! ಕೆಲವೊಮ್ಮೆ ಹಾಲು ಹೆಚ್ಚು ದೊರಕಬಹುದು, ಕಡಿಮೆಯೂ ಆಗುವ ಸಾಧ್ಯತೆ ಇರುತ್ತದೆ. ಇದರ ಜೊತೆಗೆ ಹಳ್ಳಿಗಳಲ್ಲಿ ಸೈಕಲ್ ಮೂಲಕ ಹಾಲು ಸಂಗ್ರಹಿಸುವ ಕಾಯಕವನ್ನು ಬಿಟ್ಟಿಲ್ಲ.ಹಾಲು ಕೊಡುವ ಹಸುಗಳು ನೀಡುವ ಲಾಭದ ಕಾಲು ಭಾಗ ಹೈನುಗಳ ಆಹಾರಕ್ಕಾಗಿ ಖರ್ಚು ಮಾಡುತ್ತಾರೆ. ಒಂದು ಎಕರೆ ನೇಪಿಯರ್ ಹುಲ್ಲು ಬೆಳೆಸಿದ್ದಾರೆ, ಎರಡು ಎಕರೆ ಜಮೀನಿನಲ್ಲಿ ಜಾನುವಾರುಗಳ ಹೊಟ್ಟಿಗಾಗಿ ಶೇಂಗಾ ಬೆಳೆ ಹಾಕಿದ್ದಾರೆ. ಜೊತೆಗೆ ಪ್ರತಿ ತಿಂಗಳು 75ಕೆ.ಜಿ ಸಜ್ಜೆ, 50 ಕೆ.ಜಿ ದ್ವಿದಳ ಧಾನ್ಯಗಳನ್ನು ಹಿಟ್ಟು ಹಾಕಿಸಿ ಹಾಲು ಕರೆಯುವ ಹಸುಗಳಿಗೆ ನೀರಿನಲ್ಲಿ ಕಲಿಸಿ ಅಂಬಲಿ ಮಾಡಿ ಎರಡು ಹೊತ್ತು ಕೊಡುತ್ತಾರೆ. ಅಲ್ಲದೆ ಜೊತೆಗೆ ಸಿದ್ಧಪಡಿಸಿದ ಹಿಂಡಿಯನ್ನೂ ನೀಡುತ್ತಾರೆ. ಕೊಟ್ಟಿಗೆ ಶುಚಿಯಾಗಿಟ್ಟಿರುತ್ತಾರೆ, ಆಗಾಗ ಚುಚುಮದ್ದು ನೀಡುತ್ತಾರೆ, ರೋಗಿಗೆ ನೀಡುವ ಹಾಗೆ ಜಾನುವಾರುಗಳಿಗೆ ತಪ್ಪದೆ ಔಷಧಿ ಕುಡಿಸುತ್ತಾರೆ. ಮಕ್ಕಳನ್ನು ಜೋಪಾನ ಮಾಡಿದ ಹಾಗೆ ಹಸುಗಳನ್ನು ನೋಡಿಕೊಳ್ಳುವುದರಿಂದಾಗಿಯೇ ಇವರ ಆರೈಕೆಯಲ್ಲಿ ಹಸುಗಳು ಹೆಚ್ಚಿನ ಪ್ರಮಾಣದಲ್ಲಿ ಹಾಲು ಕರೆಯುತ್ತಿವೆ.`ಈ ಗ್ರಾಮದ ಜನ ನಮಗೆ ತುಂಬಾ ಸಹಕಾರ ಕೊಡ್ತಾರೆ, ನಾವು ಇಲ್ಲಿಯೇ ಇರಬೇಕಂತ ತೀರ್ಮಾನ ಮಾಡಿದ್ದೇವೆ, ಇನ್ನು ದೊಡ್ಡ ಡೈರಿ ಮಾಡಬೇಕು, ಕುರಿ ಸಾಕಾಣಿಕೆ, ಮೊಲ ಸಾಕಾಣಿಕೆ ಮಾಡಬೇಕೆಂಬ ಆಸೆ ಇದೆ' ಎನ್ನುತ್ತಾರೆ ಪಿ.ಪ್ರದೀಪ. ಈಗ ಬೆಂಚಮಟ್ಟಿ ಗ್ರಾಮದಲ್ಲಿ ನಾಲ್ಕು ಎಕರೆ ಹೊಲ ಹಿಡಿದು ಸ್ವಂತ ನೆಲೆ ಕಂಡುಕೊಂಡಿದ್ದಾರೆ. ಹತ್ತಾರು ಎಕರೆ ಜಮೀನು ಹೊಂದಿದ್ದರೂ ಕೆಲಸವಿಲ್ಲ ಎಂದು ಪಟ್ಟಣಗಳಿಗೆ ಗುಳೆ ಹೋಗುವ ರೈತರಿಗೆ ಈ ಸಹೋದರರು ಮಾದರಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry