ಮಂಗಳವಾರ, ಮೇ 18, 2021
24 °C

`ಬದುಕು ಹಸನಾದರೆ ಭಾಷೆಗೆ ಬಲ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉತ್ತನೂರು ರಾಜಮ್ಮ ವೇದಿಕೆ (ಮುಳಬಾಗಲು): ಬದುಕು ಹಸನಾದರೆ ಭಾಷೆಯೂ ಬಲವಾಗುತ್ತದೆ. ಈ ಕುರಿತು ಗಂಭೀರವಾಗಿ ಆಲೋಚಿಸಿ ದೃಢ ಹೆಜ್ಜೆಗಳನ್ನಿರಿಸಬೇಕಿದೆ ಎಂಬುದು ಮುಳಬಾಗಲು ತಾಲ್ಲೂಕು ಎರಡನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ, ವಿಜ್ಞಾನ ಲೇಖಕ ಎಚ್.ಎ.ಪುರುಷೋತ್ತಮರಾವ್ ಅವರ ಕಳಕಳಿಯ ಮನವಿ.ಪಟ್ಟಣದ ನೇತಾಜಿ ಕ್ರೀಡಾಂಗಣದಲ್ಲಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು ತಾಲ್ಲೂಕಿನ ಕನ್ನಡ-ತೆಲುಗು ಭಾಷಿಕ ವಾತಾವರಣ ಮತ್ತು ರೈತರ ಬದುಕು, ಪರಿಸರವನ್ನು ಬೆಸೆದು ಅಧ್ಯಕ್ಷೀಯ ಭಾಷಣ ಮಾಡಿದರು.ನೆಲದಾಳದ ನೀರನ್ನು ಕಸಿಯುವ ನೀಲಗಿರಿ, ಅಕೇಸಿಯಾಗಳನ್ನು ರೈತಾಪಿ ವರ್ಗ ಕೈಬಿಡಬೇಕು. ಬದಲಿಗೆ ಅಗಾಧ ಹಣ ನೀಡುವ ಹಾಗೂ ನೀರನ್ನು ನೆಲಕ್ಕೆ ಬಸಿಯುವ ಶ್ರೀಗಂಧ, ರಕ್ತಚಂದನ ಮುಂತಾದ ಸ್ಥಳೀಯವಾಗಿ ಒಗ್ಗುವ ಮರಗಿಡ ಬೆಳೆಯಬೇಕು. ಜೀವ ವೈವಿಧ್ಯತೆ ಹೆಚ್ಚಿಸುವ ಜತೆಗೆ ತಮ್ಮ ಶ್ರೀಮಂತಿಕೆ ಮೆರೆಯುವಂತಾಗಬೇಕು ಎಂದು ಸಲಹೆ ನೀಡಿದರು.ಗಡಿಪ್ರದೇಶ ಮುಳಬಾಗಲಲ್ಲಿ ತೆಲುಗರೂ ಅಚ್ಚ ತೆಲುಗರಾಗಿಲ್ಲ: ಕನ್ನಡದವರೂ ಸಂಪೂರ್ಣ ಕನ್ನಡಿಗರಾಗಿ ಉಳಿದಿಲ್ಲ. ತೆಲುಗರು ತೆಲುಗನ್ನು, ಕನ್ನಡಿಗರು ಕನ್ನಡವನ್ನು ತೀವ್ರವಾಗಿ ಪ್ರೀತಿಸುವ ಹಂತ ತಲುಪಿಲ್ಲ. ಇಲ್ಲಿ ಭಾಷೆಗಳು ಕೇವಲ ವ್ಯಾವಹಾರಿಕ, ಸಂಪರ್ಕ ಮಾಧ್ಯಮಗಳಾಗಷ್ಟೇ ಉಳಿದಿವೆ ಎಂದರು.ಇಂದಿಗೂ ಇಲ್ಲಿ ಕನ್ನಡ ಚಲನಚಿತ್ರಗಳು ವರ್ಷಕ್ಕೆ ಮೂರೋ ನಾಲ್ಕೋ ಬಾರಿ ಮಾತ್ರ ಪ್ರದರ್ಶನ ಕಾಣುತ್ತಿವೆ. ಅದೂ ಮೂರು ದಿನಗಳೊಳಗೆ ಕಾಣೆಯಾಗುತ್ತಿವೆ. ಜನಸಾಮಾನ್ಯರ ಆಡುಭಾಷೆಯನ್ನು ಬೆಳೆಸುವ ಬಲಿಷ್ಠ ಮಾಧ್ಯಮ ಕನ್ನಡ ಸಿನಿಮಾ. ಇದು ಕೂಡಾ ಇಲ್ಲಿ ಉಸಿರುಳಿಸಿಕೊಳ್ಳಲು ಸತತವಾಗಿ ಹೆಣಗುತ್ತಲೇ ಇದೆ. ಹೀಗೆ ಮುಂದುವರೆದು ಕಡೆಯುಸಿರು ಬಿಟ್ಟರೂ ಆಶ್ಚರ್ಯವೇನಿಲ್ಲ ಎಂದು ಆತಂಕಪಟ್ಟರು.ಇಲ್ಲಿಯ ದ್ವಿಭಾಷಿಕ ಪರಿಸರ ಎಂದೂ ಜನ ಜೀವನದ ನೆಮ್ಮದಿ ಕಲಕಿಲ್ಲ ಎಂಬುದೇ ವಿಶೇಷ. ಇವುಗಳ ಪರಸ್ಪರ ಸಾವಯವ ಬೆಸುಗೆಯಿಂದ ಯಾವ ಭಾಷೆಯೂ ಸ್ವತಂತ್ರ ಬೆಳವಣಿಗೆ ಕಂಡಿಲ್ಲ. ಆದ್ದರಿಂದಲೇ ಇತ್ತ ಕನ್ನಡವೂ ನಿರೀಕ್ಷಿತ ಮಟ್ಟಕ್ಕೆ ಬೆಳೆದಿಲ್ಲ; ಅತ್ತ ತೆಲುಗೂ ಉದ್ಧಾರವಾಗಿಲ್ಲ. ಇಂಥ ಪರಿಸ್ಥಿತಿಯಲ್ಲಿ ಕನ್ನಡ, ಕನ್ನಡತನ ಉಳಿಸಿಕೊಳ್ಳುವ, ಬೆಳೆಸುವ ಸಣ್ಣ ಪ್ರಯತ್ನಗಳೂ ಸಹ ಮಹತ್ವವಾದವು ಎಂಬುದು ಕನ್ನಡ ಮತ್ತು ಸಂಸ್ಕೃತಿಯನ್ನು ಗುತ್ತಿಗೆ ಪಡೆದಂತಿರುವ ಸಿಲಿಕಾನ್ ನಗರ, ಸಾಂಸ್ಕೃತಿಕ ನಗರಗಳಿಗೆ ಅರ್ಥವಾಗಬೇಕಿದೆ ಎಂದರು.ಈ ಪ್ರದೇಶಕ್ಕೆ ಸಂಬಂಧಿಸಿದಂತೆ ವಿಜ್ಞಾನ, ಪರಿಸರ ಕುರಿತ ಯಾವುದೇ ಚಿಂತನೆಗಳು ಜನಸಾಮಾನ್ಯರನ್ನು ಸಾಮಾಜಿಕವಾಗಿ ಎಚ್ಚರಿಸುವ ನೈಜ ಪ್ರಯತ್ನಗಳಾಗಿಲ್ಲ. ಅನೇಕ ಪುರಾಣ ಪ್ರಸಿದ್ಧ, ಐತಿಹಾಸಿಕ, ಧಾರ್ಮಿಕ ಹಿನ್ನೆಲೆಯುಳ್ಳ ದೇವಾಲಯಗಳು ಹಾಗೂ ಅಮೂಲ್ಯ ನೈಸರ್ಗಿಕ ಸಂಪತ್ತನ್ನೂ ಒಟ್ಟೊಟ್ಟಿಗೆ ಹೊಂದಿರುವ ತಾಲ್ಲೂಕಿನಲ್ಲಿ ಐತಿಹಾಸಿಕ ದೇವಾಲಯಗಳನ್ನೂ ಸಂಪೂರ್ಣವಾಗಿ ಸಂರಕ್ಷಿಸಲು ಸಾಧ್ಯವಾಗಿಲ್ಲ, ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಿಕೊಳ್ಳುತ್ತಿಲ್ಲ. ನಿರಂತರ ಮರಳ ಲೂಟಿ ನಡೆಯುತ್ತಿದೆ ಎಂದು ವಿಷಾದಿಸಿದರು.ಮುಳಬಾಗಲು ತಾಲ್ಲೂಕು ಹಲ ಲೇಖಕರು, ಶಿಕ್ಷಕರು, ಕಲಾವಿದರನ್ನು ಸ್ಮರಿಸಿದ ಅವರು, ಕನ್ನಡ ಸಾಹಿತ್ಯ-ಸಂಸ್ಕೃತಿ ಕ್ಷೇತ್ರಕ್ಕೆ ತಾಲ್ಲೂಕಿನ ಕೊಡುಗೆ ಅಪಾರವಾಗಿದೆ ಎಂದು ಅಭಿಪ್ರಾಯಪಟ್ಟರು. ತಾವು ಲೇಖಕರಾಗಿ ಹೊರಹೊಮ್ಮಲು ಕಾರಣರಾದ ಎಲ್ಲ ಶಿಕ್ಷಕರು ಮತ್ತು ಲೇಖಕರಿಗೆ ಅವರು ಕೃತಜ್ಞತೆ ಸಲ್ಲಿಸಿದರು.ಮುಳಬಾಗಲು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇಂದು

ಮುಳಬಾಗಲು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ಉತ್ತನೂರು ರಾಜಮ್ಮ ವೇದಿಕೆ, ಡಾ.ಡಿ.ವಿ.ಜಿ ಮಹಾದ್ವಾರ: ವಿಚಾರಗೋಷ್ಠಿ: ಸ್ಥಳೀಯ ಸಮಸ್ಯೆಗಳು ಮತ್ತು ಮಾರ್ಗೋಪಾಯಗಳು, ಅಧ್ಯಕ್ಷತೆ- ಸಾಹಿತಿ ಕೆ.ರಾಜ್‌ಕುಮಾರ್, ವಿಚಾರ ಮಂಡನೆ: ಮರಳು ಗಣಿಗಾರಿಕೆ - ಎಂ.ನಾಗರಾಜ್, ಜಲಕ್ಷಾಮ - ತ್ಯಾಗರಾಜ್ ಕನ್ನಡ ಶಾಲೆಗಳ ಸ್ಥಿತಿ ಗತಿ -ಕೆ.ಪ್ರಕಾಶ್, ಬೆಳಿಗ್ಗೆ 9.30

ಕವಿಗೋಷ್ಠಿ: ಅಧ್ಯಕ್ಷತೆ- ತಮ್ಮೋಜಿರಾವ್, ಕವಿಗಳು- ಯು.ವಿ.ನಾರಾಯಣಾಚಾರ್, ಕವಿತಾ, ಕೆ.ನಾಗರಾಜ್ ನಂಗಲಿ, ಬಲ್ಲ ಸೋಮಶೇಖರ್, ಎನ್.ಆನಂದಪ್ಪ, ಎನ್.ಸಿ.ರಾಜೇಶ್ವರಿ, ನಾ.ವೆಂಕಟರವಣ, ರಾಧಿಕಾ ಶ್ರೀನಿವಾಸ್, ಸುಬ್ರಮಣಿ ಅಸಲಿ ಅತ್ತಿಕುಂಟಿ, ನಲ್ಲೂರು ಚಲಪತಿ, ಕೊತ್ತಾಂಡಲಹಳ್ಳಿ ನಾಗರಾಜ್, ಎಸ್.ಟಿ.ಆಚಾರ್, ಮಂಜುನಾಥ ಬಾಳಸಂದ್ರ, ವೆಂಕಟರವಣ, ಎನ್.ಎಲ್.ಶ್ರೀನಿವಾಸ್ ನಂಗಲಿ, ಬೆಳಿಗ್ಗೆ11.30.ವಿಚಾರ ಗೋಷ್ಠಿ: ಭೂಮಿ ತಾಯಿಯ ತತ್ವ-ಒಂದು ಮರುಚಿಂತನೆ. ಅಧ್ಯಕ್ಷತೆ-ಲೇಖಕ ನಟರಾಜ್ ಬೂದಾಳ್, ವಿಚಾರ ಮಂಡನೆ-ಹಸಿರು ಓದು-ವಿಚಾರ ಸಾಹಿತ್ಯ ಹಿನ್ನೆಲೆಯಲ್ಲಿ ಪ್ರಮೋದ್ ತುರುವಿಹಾಳ್, ಹಸಿರು ವಿಮರ್ಶೆ- ಸಾಹಿತ್ಯ ವಿಮರ್ಶೆಯ ಹಿನ್ನೆಲೆಯಲ್ಲಿ ಬಿ.ಸಿ.ನಾಗೇಂದ್ರಕುಮಾರ್, ಹಸಿರು ತತ್ವಜ್ಞಾನ - ಕೆ.ಸಿ.ರಘು. ಮಧ್ಯಾಹ್ನ 2.30.ಬಿಡುವಿನ ವೇಳೆಯ ಹಾಡುಗಾರರು - ಮಾಸ್ಟರ್ ಸುಪ್ರೀತ್, ಶರಧಿ, ಸಿ.ವಿ.ವೀರಭದ್ರಾಚಾರಿ,

ಸನ್ಮಾನ, ಸಮಾರೋಪ ಸಮಾರಂಭ: ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಪರೀಕ್ಷೆಗಳ ಕನ್ನಡ ಭಾಷೆಯಲ್ಲಿ ಅಧಿಕ ಅಂಕಪಡೆದವರಿಗೆ ಪ್ರತಿಭಾ ಪುರಸ್ಕಾರ, ಸನ್ಮಾನಿತರು: ಕನ್ನಡ ಭಟ ವೆಂಕಟಪ್ಪ, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಚಾಂದ್‌ಪಾಷ, ಡಾ.ಆರ್.ಶಂಕರಪ್ಪ, ಹರಿದಾಸ ಕಲಾವಿದ ಬಾಲಪ್ಪ, ಜನಪದ ಕಲಾವಿದೆ ಮೋತಕಪಲ್ಲಿ ರತ್ನಮ್ಮ, ನಾ.ಜಗದೀಶ್, ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಎನ್.ವೆಂಕಟರವಣಪ್ಪ, ಎನ್‌ಸಿಸಿ ವಿದ್ಯಾರ್ಥಿ ಎಸ್.ಹರಿಕೃಷ್ಣ, ಪುರಸಭೆ ನೌಕರ ಪ್ರಕಾಶ್, ಕ್ರೀಡಾಪಟು ಕೆ.ಓ.ಮಂಜುಳಾ, ಅಧ್ಯಕ್ಷತೆ- ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ.ಸಮಾರೋಪ ಭಾಷಣ-ಡಾ.ಜೆ.ಬಾಲಕೃಷ್ಣ, ಶಾಸಕರ ನುಡಿ -ಜಿ.ಮಂಜುನಾಥ್, ಮುಖ್ಯ ಅತಿಥಿಗಳು- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಸ್.ವೆಂಕಟಾಚಲಪತಿ, ಶಾರದ ವಿದ್ಯಾಪೀಠದ ಕಾರ್ಯದರ್ಶಿ ಟಿ.ಎಸ್.ರಮೇಶ್, ಯು.ವಿ.ನಾರಾಯಣಾಚಾರ್ ಸಿ.ಎನ್.ರಾಜಕುಮಾರ್, ಸಂಜೆ 4.30.ನೃತ್ಯ-ಸಂಗೀತ ಕಾರ್ಯಕ್ರಮ. ಜನಪದ ಹಾಗೂ ಸುಗಮ ಸಂಗೀತ -ಪಿಚ್ಚಹಳ್ಳಿ ಶ್ರೀನಿವಾಸ್ ಮತ್ತು ತಂಡದಿಂದ. ನೃತ್ಯರೂಪಕ - ಮೂಡಲನಾಟ್ಯ ಅಕಾಡೆಮಿ ಕಲಾವಿದರಿಂದ. ಭರತನಾಟ್ಯ- ಕಾವ್ಯಶ್ರೀ ನಾಟ್ಯ ಕಲಾ ಅಕಾಡೆಮಿ ಕಲಾವಿದರಿಂದ. ವರುದಿನಿ ನಾಟ್ಯಕಲಾ ಅಕಾಡೆಮಿ ಕಲಾವಿದರಿಂದ ಡಾ.ಡಿವಿಜಿ ಕೃತಿಗಳ ನೃತ್ಯರೂಪಕ ಪ್ರದರ್ಶನ. ಸಂಜೆ 6.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.