ಬದುಕೆಂದರೆ ಕವಿತೆ...

7

ಬದುಕೆಂದರೆ ಕವಿತೆ...

Published:
Updated:

ಸರ್, ನಿಮಗೆ ಸಾಹಿತ್ಯದತ್ತ ಒಲವು ಮೂಡಲು ಕಾರಣವಾದ ಸಂದರ್ಭ ಮತ್ತು ಪರಿಸರಗಳ ಬಗ್ಗೆ ಹೇಳಿ.ನಾನು ಬೆಳೆದ ಸ್ಥಳ ಮತ್ತು ವಾತಾವರಣ ತುಂಬಾ ಭಿನ್ನವಾದದ್ದು. ಸುತ್ತಲೂ ತುಂಬಾ ದೂರದವರೆಗೂ ಅರಬ್ಬಿ ಭಾಷಿಕರು, ಮರಾಠಿಗರು, ಹಿಂದಿ ಮಾತಾಡುವವರು, ಉರ್ದು ಮಾತಾಡುವ ಮುಸ್ಲಿಮರು ಇರುವಂಥ ವಾತಾವರಣದಲ್ಲಿ ನಾನು ಬೆಳೆದೆ. ತೆಲುಗು ಮಾತೃಭಾಷೆಯ ಜನ ಕೂಡ ಹಿಂದಿ-ಉರ್ದು ಮಿಶ್ರಿತ ತೆಲುಗು ಮಾತಾಡುತ್ತಿದ್ದಂಥ ವಿಭಿನ್ನ ಭಾಷಿಕ ಪರಿಸರದಲ್ಲಿ ನಾನು ಬೆಳೆದೆ.ನಮ್ಮ ಮನೆಯಲ್ಲಿ ಯಾರೂ ಲೇಖಕರು, ಕವಿಗಳಲ್ಲ. ನನ್ನ ಹಿರಿಯಣ್ಣ ತುಂಬಾ ಹೆಸರುವಾಸಿಯಾದ ಒಬ್ಬ ಪೈಲ್ವಾನ್. ಮನೆಯಲ್ಲೆಲ್ಲ ಆತನಿಗೆ ಸಂಬಂಧಿಸಿದ, ಅಂದರೆ ಆತನ ಕಸರತ್ತಿಗೆ ಬೇಕಾಗುವ ಸಾಧನಗಳು, ಕುಸ್ತಿಗೆ ಬೇಕಾಗುವ ಪರಿಕರಗಳು ಇರುತ್ತಿದ್ದವು. ಆತನಿಗೆ ಸಾಹಿತ್ಯದ ಕುರಿತು ಏನೆಂದರೆ ಏನೂ ಗೊತ್ತಿಲ್ಲ; ಆದರೆ ಮುಶಾಯರಾ (ಉರ್ದು ಕವಿಗೋಷ್ಟಿ) ಮತ್ತು ಮುಜ್ರಾ (ಗಾನಾ ಪಾರ್ಟಿ)ಗಳಿಗೆ ಹೋಗುತ್ತಿದ್ದ.ನಮ್ಮಕ್ಕ ಮಾತ್ರ ತುಂಬಾ ಓದೋಳು. ಪ್ರತಿ ತಿಂಗಳು ಹಿಂದಿ ಮಾಸಿಕ `ಸರಿತ~  ತರಿಸುತ್ತಿದ್ದಳು. ಗುಲ್ಷನ್ ನಂದಾ, ಮೋಹನ್ ರಾಕೇಶ್‌ರ ಕಾದಂಬರಿಗಳನ್ನು ಓದೋಳು. ಪ್ರೇಮ್‌ಚಂದ್‌ರ ಪುಸ್ತಕಗಳೂ ಇರುತ್ತಿದ್ದವು. ತೆಲುಗು ಅನುವಾದದಲ್ಲಿ ಲಭ್ಯವಿದ್ದ ಶರತ್‌ಚಂದ್ರ ಚಟರ್ಜಿಯವರ ಕಾದಂಬರಿಗಳನ್ನು ಲೈಬ್ರರಿಯಿಂದ ತಂದು ಓದುತ್ತಿದ್ದಳು.ಇವನ್ನೆಲ್ಲ ನಾನು ಕುತೂಹಲದಿಂದ ನೋಡುತ್ತಿದ್ದೆ. ಕೆಲವನ್ನು ಓದುತ್ತಲೂ ಇದ್ದೆ. ನಮ್ಮ ಮನೆಯಲ್ಲಿ ಹೆಚ್ಚಾಗಿ ಹಿಂದಿಯಲ್ಲೇ ಮಾತಾಡಿಕೊಳ್ಳುತ್ತಿದ್ದೆವು. ಹಿಂದಿ ಸಿನೆಮಾ ಹಾಡುಗಳು ಮತ್ತು ಗಜಲ್‌ಗಳನ್ನು ಕೇಳುತ್ತಿದ್ದೆವು.

ಆರಾಮಾಗಿ ಓಡಾಡಿಕೊಂಡಿರೋದು ಆಗಿನ ನನ್ನ ಪ್ರಿಯ ಹವ್ಯಾಸವಾಗಿತ್ತು. ಹಿಂದಿ ಸಿನೆಮಾ ಹಾಡು ಬರೆಯುತ್ತಿದ್ದವರ ಪೈಕಿ ನನ್ನನ್ನು ಒಂದು ಅನೂಹ್ಯ ಕಲ್ಪನಾ ಲೋಕಕ್ಕೆ ಕರೆದೊಯ್ದ ಕವಿಯೆಂದರೆ ಸಾಹಿರ್ ಲೂಧಿಯಾನ್ವಿ.

ಆತನ ಕಾವ್ಯ ನನ್ನ ನೋಟವನ್ನು ಇಂಧ್ರಧನುಸ್ಸಾಗಿಸಿತು. ನನ್ನ ಮನಸಿನ ಹಿಂದೆ ಬಣ್ಣದ ಚಿಟ್ಟೆಯೊಂದನ್ನು ಬಿಟ್ಟಿತು. ಆಮೇಲೆ ಕಾಲೇಜಿನಲ್ಲಿ ಯಾವುದೋ ಸಂದರ್ಭದಲ್ಲಿ ಶ್ರೀಶ್ರೀ  ಅವರ `ಮಹಾಪ್ರಸ್ಥಾನಂ~  ಕೃತಿ ಬಹುಮಾನವಾಗಿ ಬಂದು ನನ್ನ ಕೈಸೇರಿತು. ಅದನ್ನು ಓದಿದ ಮೇಲೆ ನನ್ನನ್ನು ನಾನು ರಿಪೇರಿ ಮಾಡಿಕೊಂಡೆ.

ಹೊಸ ಆಲೋಚನೆಗಳು, ಹೊಸ ಪ್ರಶ್ನೆಗಳು, ಹೊಸ ದಾರಿಗಳು, ಹೊಸ ಜವಾಬುದಾರಿಗಳು ಎದುರಾದವು. ಮನಸು ಯೋಚನೆಗೆ ಬಿದ್ದಿತು. ಆದರೂ ಗಂಭೀರವಾಗಿ ಕವಿತೆ ಬರೆಯಬೇಕೆಂದು ಅನಿಸಲೇ ಇಲ್ಲ.

ಆದರೆ ನಾನು ಕಂಡೇ ಇರದ `ಕವಿ~  ಎನ್ನುವ ಅಮೂರ್ತನೊಬ್ಬ ನನ್ನ ನಡವಳಿಕೆಯಲ್ಲಿ, ಜೀವನ ವಿಧಾನದಲ್ಲಿ ನನ್ನನ್ನು ಇಡಿಯಾಗಿ ಆವರಿಸಿಕೊಂಡುಬಿಟ್ಟ. ಹೀಗೆ ಕೆಲ ಕಾಲದ ನಂತರ ಒಂದು ವಿಚಿತ್ರವಾದ ಸಂದರ್ಭದಲ್ಲಿ ತೆಲುಗಿನ ಪ್ರಮುಖ ಕವಿ ಕೆ. ಶಿವಾರೆಡ್ಡಿಯವರನ್ನು ಭೇಟಿಯಾಗುವ ಅವಕಾಶ ದೊರೆಯಿತು. ಅದರ ಫಲವಾಗಿ ಅವರ `ಭಾರಮಿತಿ~  ಕವನ ಸಂಕಲನ ಓದಿದೆ.

ಅದನ್ನು ಓದಿದ ಮೇಲೆ ನನ್ನ ನಿಜವಾದ ಜೀವನ ಶುರುವಾಯ್ತು. ಅದು ಮಲಗಿದ್ದ ನನ್ನನ್ನು ನಿದ್ದೆಯಿಂದ ಬಡಿದೆಬ್ಬಿಸಿತು. ಎಬ್ಬಿಸಿ ಓಡಿಸಿತು. ಕತ್ತಿ ವರಸೆಯನ್ನು ಕಲಿಸಿಕೊಟ್ಟಿತು. ಸಾಮು ಮಾಡುವುದನ್ನು ಕಲಿಸಿತು. ಮನುಷ್ಯನನ್ನು ತೋರಿಸಿತು. ಪ್ರೀತಿಯನ್ನು ಹಂಚಿತು. ಅವರು ಬದುಕುವ ಬದುಕು ನನಗಿಷ್ಟವಾಯಿತು. ಅವರನ್ನು ನನ್ನ ಗುರುವಾಗಿ ಸ್ವೀಕರಿಸಿದೆ. ಕಾವ್ಯಾಧ್ಯಯನವನ್ನು ಪ್ರಾರಂಭಿಸಿದೆ.ಆ ದಿನಗಳಲ್ಲೇ ಜಾಗತಿಕ ರಾಜಕೀಯ ಪರಿಸ್ಥಿತಿಗಳು ಸ್ವಲ್ಪ ಸ್ವಲ್ಪವಾಗಿ, ಮಸುಕು ಮಸುಕಾಗಿ ನನ್ನ ಬುದ್ಧಿಗೆ ತಿಳಿಯತೊಡಗಿ, ಹೊಸ ಬೆಳಕನ್ನು ನೀಡಿದವು. ಅದೇ ಸಮಯಕ್ಕೆ ಸುತ್ತಲೂ ನಡೆಯುತ್ತಿದ್ದ ಪ್ರಜಾಹೋರಾಟಗಳು, ಚಳುವಳಿಗಳು, ಎಡಪಂಥೀಯ ಸಿದ್ಧಾಂತಗಳು ನನಗೆ ಹಲವು ಪಾಠಗಳ ಕಲಿಸಿದವು.

ಕವಿತೆ ಬರೆಯಲು ಪ್ರೇರಣೆ ಒದಗಿಸಿದವು. `ವಿರಸಂ~ (ವಿಪ್ಲವ ರಚಯಿತುಲ ಸಂಘಂ) ಸಭೆಗಳು, ಮರಸಂ (ಮಂಜೀರಾ ರಚಯಿತುಲ ಸಂಘಂ) ಮಿತ್ರರ `ದ್ವಾರಕಾ~ ಸಮಾವೇಶಗಳು ನನ್ನನ್ನು ಸಾಹಿತ್ಯಕವಾಗಿ ನೀರೆರೆದು ಪೋಷಿಸಿದವು. ಕಾವ್ಯವನ್ನು ಹಿಡಿದುಕೊಳ್ಳುವ ಶಕ್ತಿಯನ್ನು ನೀಡಿದವು.

ತಲೆ ಎತ್ತಿಕೊಂಡು ತಿರುಗುವ ಒಬ್ಬ ಜನರ ಕವಿಯಾಗಿ ನನ್ನನ್ನು ರೂಪಿಸಿದವು. ಆಗಿನಿಂದ ಕಾವ್ಯವನ್ನು ನನ್ನ ಎದೆಗವಚ ಮಾಡಿಕೊಂಡಿರುವೆ. ಈಗ ನನಗೆ ಬದುಕೆಂದರೆ ಕವಿತೆ ಮತ್ತು ಕವಿತೆಯೆಂದರೆ ಸರ್ವಸ್ವವೂ.ತೆಲುಗಿನಲ್ಲಿ ಕೆ.ಶಿವಾರೆಡ್ಡಿಯವರು ವಸ್ತುವನ್ನು ವ್ಯಕ್ತಿಯಾಗಿಯೂ; ವ್ಯಕ್ತಿಯನ್ನು ವಸ್ತುವಾಗಿಯೂ ಗ್ರಹಿಸಿ ಕವಿತೆ ಬರೆದಿದ್ದಾರೆ. ಅದೇ ಭಾಷೆ ಮತ್ತು ನಗರದಿಂದ ಬಂದ ನೀವು ಹೈದ್ರಾಬಾದ್ ನಗರವನ್ನು ಒಂದು ವ್ಯಕ್ತಿತ್ವವಾಗಿ ಪರಿಭಾವಿಸಿ `ಪಾಗಲ್ ಶಾಯರ್~  ಎಂಬ ಇಡೀ ಒಂದು ಕವನಸಂಕಲನ ಪ್ರಕಟಿಸಿದ್ದೀರಿ. ಹೈದ್ರಾಬಾದ್ ನಗರದೊಂದಿಗಿನ ನಿಮ್ಮ ಸಂಬಂಧದ ಬಗ್ಗೆ ಮತ್ತು ಈ ಸಂಕಲನಕ್ಕೆ ದ್ರವ್ಯವಾಗಿ ಒದಗಿಬಂದ ಸಂಗತಿಗಳ ಬಗ್ಗೆ ಹೇಳಿ.ನೀವು ಕೇವಲ ಒಂದು `ಪಾಗಲ್ ಶಾಯರ್~  ಕೃತಿಯ ಬಗ್ಗೆಯೇ  ಇಷ್ಟು ವಿಶದವಾದ ಉತ್ತರ ಬಯಸುವ ಪ್ರಶ್ನೆ ಕೇಳಿದ್ದೀರಿ. ನಾನು ಇದುವರೆಗೂ ಹದಿನೈದು ಕಾವ್ಯಕೃತಿಗಳನ್ನು ಪ್ರಕಟಿಸಿರುವೆ. ಅವುಗಳಲ್ಲಿರುವ ಹೈದರಾಬಾದು ನಗರದ ಕುರಿತಾದ ಕವಿತೆಗಳನ್ನೆಲ್ಲ ಹೆಕ್ಕಿ ತೆಗೆದು ಒಂದೆಡೆ ಸೇರಿಸಿ `ಪಾಗಲ್ ಶಾಯರ್~  ಪ್ರಕಟಿಸಿರುವೆ.

ಅದು ನನ್ನ ಇತರ ಕವನ ಸಂಕಲನಗಳಿಗಿಂತ ಹೆಚ್ಚು ಪ್ರಚಾರ ಪಡೆಯಿತು. ಎಲ್ಲರೂ ಹೈದರಾಬಾದ್ ಬಗ್ಗೆ ತಮಗಿಷ್ಟ ಬಂದಂತೆ, ತಮಗೆ ತೋಚಿದಂತೆ ಮಾತಾಡುತ್ತಿರುವಾಗ, ಈ ನಗರವನ್ನು ತಪ್ಪು ತಪ್ಪಾಗಿ ಗ್ರಹಿಸಿ ಪ್ರತಿಬಿಂಬಿಸುತ್ತಿರುವಾಗ; ನನಗೆ ತಿಳಿದಿರುವ ನಿಜವಾದ ಹೈದರಾಬಾದಿಗೆ ಕನ್ನಡಿ ಹಿಡಿಯುವ ಪದ್ಯಗಳನ್ನು ಬರೆದು ತೋರಿಸಬೇಕೆಂದು ತೀವ್ರವಾಗಿ ಅನಿಸಿತು. ಹಾಗಾಗಿ ಹೈದರಾಬಾದಿನ ಸಂಸ್ಕೃತಿಯನ್ನು, ಹೈದರಾಬಾದಿನ ಹೃದಯವನ್ನು ಕವಿತೆಗಳಲ್ಲಿ ಕಂಡರಿಸಿದೆ.ನನಗೂ ಈ ನಗರಕ್ಕೂ ಇರುವ ಸಂಬಂಧ ತಾಯಿ-ಮಗುವಿನ ಸಂಬಂಧದ ಸ್ವರೂಪದ್ದು. ನನ್ನ ತಾಯಿ ನೆನಪಾದರೆ ನನ್ನ ಕಣ್ಣೆದುರು ಹೈದರಾಬಾದ್ ಪ್ರತ್ಯಕ್ಷವಾಗುತ್ತದೆ. ಹೈದರಾಬಾದ್ ಬಗ್ಗೆ ಮಾತಾಡುವ ಸಂದರ್ಭ ಬಂದರೆ ನನ್ನ ಕಂಗಳಲಿ ಅಮ್ಮನ ಚಿತ್ರ ಕದಲುತ್ತದೆ.

ಏಕೆಂದರೆ ನಾನು ಬಿದ್ದಿದ್ದು, ಎದ್ದಿದ್ದು, ಬೆಳೆದಿದ್ದು, ಕಲಿತದ್ದು, ಸೋತಿದ್ದು, ಗೆದ್ದಿದ್ದು, ಕಳೆದುಕೊಂಡದ್ದು, ಪಡೆದುಕೊಂಡದ್ದು ಎಲ್ಲಾ ಈ ಹೈದರಾಬಾದ್‌ನಲ್ಲೇ! ಹೈದರಾಬಾದ್ ಎಂದರೆ ನನ್ನ ಬಾಲ್ಯ, ನನ್ನ ಕನ್ನಡಿ, ನನ್ನ ಕನಸು, ನನ್ನ ಗಜಲ್, ನನ್ನ ಡೈರಿ!ಇಲ್ಲಿ ಮತ್ತೊಂದು ಮುಖ್ಯವಾದ ಸಂಗತಿ ಹೇಳಬೇಕು. ನೀವು ಒಂದು `ಪಾಗಲ್ ಶಾಯರ್~ ಕೃತಿಯನ್ನು ಗಮನದಲ್ಲಿಟ್ಟುಕೊಂಡೇ ಈ `ವ್ಯಕ್ತಿತ್ವ ಕ್ಕೆ ಸಂಬಂಧಿಸಿದ ಪ್ರಶ್ನೆಯನ್ನು ಕೇಳಿದಂತಿದ್ದೀರಿ.

ಅದು ಅಷ್ಟು ಸಮಂಜಸವಲ್ಲವೇನೋ! `ಪಾಗಲ್ ಶಾಯರ್~  ಕೃತಿ ಒಂದು ನಗರದೆಡೆಗಿನ, ಒಂದು ಸಂಸ್ಕೃತಿಯೆಡೆಗಿನ, ಬೆಲೆಯುಳ್ಳ ಬದುಕಿನೆಡೆಗಿನ, ಸುಸಂಸ್ಕೃತ ಮನಸುಗಳೆಡೆಗಿನ, ಕಲಬೆರಕೆಯಿಲ್ಲದ ಮೌಲ್ಯಗಳೆಡೆಗಿನ, ನನ್ನ ಅನುಬಂಧಗಳೆಡೆಗಿನ ಮಮಕಾರದೊಂದಿಗೆ-ಕಳವಳದೊಂದಿಗೆ ಬರೆದ ಕವಿತೆ.

ಅತ್ತರಿನಂಥ ಜೀವನ ವಿಧಾನದ ಕುರಿತು ಬರೆದ ಒಂದು ಪ್ರೇಮ ಕಾವ್ಯ. ಹೈದರಾಬಾದಿನೊಂದಿಗೆ ಅನುಬಂಧವನ್ನೇ ಹೊಂದಿರದವರೆಲ್ಲರೂ ಬಗೆಬಗೆಯಲ್ಲಿ ವಕ್ರೀಕರಿಸಿ ಬರೆಯುತ್ತಿರುವಾಗ, ನಾನು ನೇವರಿಸುತ್ತ ವಿವರಿಸಿದ ಪ್ರೇಮಗೀತೆ ಅದು. ಹಾಗಾಗಿ `ಪಾಗಲ್ ಶಾಯರ್~ದಲ್ಲಿ ನಾನು ಬರೆದ ಹೈದರಾಬಾದಿನ ಪೇಂಟಿಂಗ್ ಇದೆ.ಹೈದರಾಬಾದಿನ ಜೀವನವಿಧಾನವಿದೆ. ಪ್ರೀತಿ, ಪರ್ವ, ಉತ್ಸವ, ಉರುಸು, ಮೆರವಣಿಗೆ, ಆಲಿಂಗನ, ಆತ್ಮೀಯತೆ, ತ್ಯಾಗ, ಅತ್ತರು, ಗುಲಾಲು, ಪತಂಗ್‌ಗಳು (ಗಾಳಿಪಟಗಳು), ಕರಚಾಲನೆಗಳು, ನನ್ನ ರಕ್ತ ಪರಿಚಲನೆಗಳೂ ಇವೆ.ಇಷ್ಟಾದರೂ ದಣಿವಿರದೆ, ಹೈದರಾಬಾದ್ ಬಗ್ಗೆ ಮತ್ತೊಂದು ಕವನ ಸಂಕಲನ-ಇಂಗ್ಲಿಷ್ ಶೀರ್ಷಿಕೆಯ ತೆಲುಗು ಕವನ ಸಂಕಲನ- ಹೊರಬರಲು ಸಿದ್ಧವಾಗಿದೆ. ಅದರ ಹೆಸರು- `ಎ ಪೊಯೆಟ್ ಇನ್ ಹೈದರಾಬಾದ್~.ನಿಮ್ಮ ಕವಿತೆಗಳಲ್ಲಿ ತಾಯಿ, ಗೆಳೆಯ.. ಹೀಗೆ ಒಂದು ಸಂಬಂಧಕ್ಕಾಗಿನ ತಹತಹ ಮೇಲಿಂದ ಮೇಲೆ ಪ್ರಸ್ತಾಪವಾಗುತ್ತದೆ. ಏನೋ ಒಂದು ಕೊರಗು, ಯಾವುದೋ ಒಂದು ಆಸರೆಗಾಗಿನ ಹುಡುಕಾಟ ಎದ್ದು ಕಾಣುತ್ತದೆ. ಇದು ವೈಯುಕ್ತಿಕ ನೆಲೆಯ ಸಂಕಟವನ್ನು ಮೆಟ್ಟಿ ನಿಲ್ಲಲು ನೀವು ಮಾಡುತ್ತಿರುವ ಪ್ರಯತ್ನವೋ ಅಥವಾ ಇದು ಈ ಕಾಲದ ಸಾಮಾಜಿಕ ವಿಘಟನೆಯನ್ನು ಜನರಿಗೆ ನೆನಪು ಮಾಡಿಕೊಡುತ್ತಿರುವ ವಿಧಾನವೋ?ದಾಕ್ಷಿಣ್ಯಪರತೆ ಹೆಚ್ಚಾಗೇ ಇದ್ದರೂ ಮುಖಕ್ಕೆ ಹೊಡೆದಂತೆ ನೇರವಾಗಿ ಹೇಳುವ ಸ್ವಭಾವ ನನ್ನದು. ನೀವು ಕೇಳಿರುವಂತೆ ಇದೆಲ್ಲ ನನ್ನ ವ್ಯಕ್ತಿಗತ ನೆಲೆಯದ್ದಲ್ಲ. ಸುತ್ತಲೂ ಇರುವ ಮನುಷ್ಯರ ಮಾನಸಿಕ ಸ್ಥಿತಿ.

ಸಂಬಂಧಗಳ ವಿಕೃತ ರೂಪ. ಆದರೆ ಈ ಸಮಾಜದಲ್ಲಿ ನಾನೂ ಕೂಡ ಅಂಥ ಒಬ್ಬ ವ್ಯಕ್ತಿಯೇ. ನನ್ನ ಕಾವ್ಯದಲ್ಲಿ ಎಲ್ಲೂ ದುಃಖವಿರಲಾರದು. ದುಃಖವನ್ನು ದೂರ ಮಾಡಿ ಕೊಳ್ಳುವುದಕ್ಕಾಗಿಯೇ ಈ ಕಾವ್ಯಕೃಷಿಯೆಲ್ಲ.ನನ್ನ ಸುತ್ತಲೂ ಇರುವ ಸಮಾಜದಲ್ಲಿ, ಮನುಷ್ಯರಲ್ಲಿ ಪ್ರೇಮ ವಿಚ್ಛಿನ್ನವಾಗುತ್ತಿರುವುದನ್ನು ನೋಡಿದೆ. ಸಂಬಂಧಗಳು ವಿಧ್ವಂಸವಾಗುತ್ತಿರುವುದನ್ನು ನೋಡಿದೆ.  ದೂರ ಹೆಚ್ಚುತ್ತಿರುವ ಅನುಬಂಧಗಳ ನೋಡಿದೆ. ಗುಂಪಾಗಿರುವ ಜಾತ್ರೆಯಲ್ಲಿ ಒಬ್ಬಂಟಿಯಾಗುಳಿದ ಮನುಷ್ಯನ ನೋಡಿದೆ. ಕಾರಣಗಳು ಸಾವಿರ ಇವೆ.

ನಾವು ಗ್ಲೋಬಲೈಜೇಶನ್ ಅಂತ ಗ್ರಹಿಸಿಕೊಂಡೆವು. ಸ್ವಾರ್ಥ ಹೆಚ್ಚಿತು. ಕೂಡುಕುಟುಂಬಗಳು ಕಳೆದೇಹೋದವು. ಪ್ರೀತಿ-ವಿಶ್ವಾಸಗಳು ಕಡಿಮೆ ಆದವು. ಮನುಷ್ಯನನ್ನು ಮನುಷ್ಯನೇ ಗುರುತಿಸದ ಸ್ಥಿತಿಗೆ ತಲುಪಿದೆವು.  ಮನುಷ್ಯರೆಲ್ಲ ಕೂಡಿಯೇ ಇದ್ದರೂ, ಮನುಷ್ಯನಿಗೆ ಮನುಷ್ಯ ಅಪರಿಚಿತನಾಗಿರುವಾಗ, ಮನುಷ್ಯನಿಗೆ ಮನುಷ್ಯನನ್ನು ಹೊಸದಾಗಿ ಪರಿಚಯ ಮಾಡಿಕೊಡಲು ಪ್ರಯತ್ನಿಸುತ್ತಿರುವೆ.

ಇದು ದುಃಖವಲ್ಲ. ನೋವು. ಮನುಷ್ಯರು ಮಾಯವಾಗುತ್ತಿದ್ದಾರೆಂಬ ಭಯ. ಅದನ್ನೇ ಸುತ್ತಲಿನ ಸಮಾಜಕ್ಕೆ ನೆನಪಿಸುತ್ತಿರುವೆ. ಅವರು ಅನುಭವಿಸುತ್ತಿರುವ ವೇದನೆಯನ್ನು ಅವರಿಗೆ ಕೇಳಿಸುತ್ತಿರುವೆ. ಬದುಕಬೇಕೆಂದೇ ಈ ಕಾವ್ಯ ಕಟ್ಟುತ್ತಿದ್ದೇನೆ.ಈವರೆಗೆ ನೀವು ಕಾವ್ಯವನ್ನಲ್ಲದೆ ಬೇರೇನನ್ನೂ ಬರೆದಿಲ್ಲ. ಇದು ನಿಮ್ಮ ಕಂಫರ್ಟ್ ಜೋನ್ ಎಂತಲೊ ಅಥವಾ ನಿಮ್ಮ ನಾನ್-ಅಕಾಡೆಮಿಕ್ ಹಿನ್ನೆಲೆಯ ಬಗೆಗಿನ ಕೀಳರಿಮೆ ಕಾರಣವೋ? ಈ ನಿಮ್ಮ ಸಾಹಿತ್ಯಿಕ ಮನೋಧೋರಣೆಯ ಹಿಂದಿನ ತಾತ್ವಿಕತೆಯನ್ನು ತುಸು ವಿಶದೀಕರಿಸಿ ಹೇಳ್ತೀರಾ?ನಾನು ತೆಲುಗು ಮೀಡಿಯಂನಲ್ಲೇ ಪದವಿ ಪಡೆದೆ. ನೌಕರಿಯಲ್ಲಿ ಕೂಡಾ ಸಾಹಿತ್ಯಕ್ಕೆ ಸಂಬಂಧವಿಲ್ಲದ ಅಂಕಿ-ಸಂಖ್ಯೆಗಳೊಂದಿಗೆ, ಆಡಿಟ್‌ಗಳೊಂದಿಗೆ ಕೆಲಸ ಮಾಡಿದೆ. ನಾನು ತೆಲುಗು ಅಧ್ಯಯನ ಮಾಡಿದವನಲ್ಲ. ತಿಳಿದುಕೊಳ್ಳುವ, ಕಲಿತುಕೊಳ್ಳುವ ಅಗತ್ಯವಿರುವುದರಿಂದ ನೋಡುತ್ತಿದ್ದೇನೆ ಎಂಬುದನ್ನು ಬಿಟ್ಟರೆ ಇದಕ್ಕೂ ಮುಂಚೆ ನಾನು ಯಾವ ಪ್ರಾಚೀನ ಮಹಾಕಾವ್ಯಗಳನ್ನೂ ಓದಿಕೊಂಡಿಲ್ಲ.

ತೆಲುಗೇ ಸರಿಯಾಗಿ ಬಾರದ, ಉರ್ದು-ಹಿಂದಿ ಮಾತಾಡಿಕೊಳ್ಳುವ ಓಣಿಯಿಂದ ಬಂದವನು. ಅದಕ್ಕಿಂತ ಮುಖ್ಯವಾಗಿ ನಾನು ದಾಕ್ಷಿಣ್ಯಪರ, ತುಂಬಾ ನಾಚಿಕೆ ಸ್ವಭಾವದವ. ಹಾಗಾಗಿಯೇ ಮಾತಾಡುವ ಕಲೆಯನ್ನು ಕಲಿತುಕೊಳ್ಳಲಿಲ್ಲ. ಅದು ಅಗತ್ಯವೆಂದೂ ನನಗನ್ನಿಸಲಿಲ್ಲ. ಹಾಗೆಯೇ ಗದ್ಯ ಬರೆಯುವುದನ್ನು ರೂಢಿಸಿಕೊಳ್ಳಲಿಲ್ಲ.

ಒಳ್ಳೆ ಲೇಖನ ಬರೆಯೋಕೂ ಬರೋಲ್ಲ ನಂಗೆ. ಅದಕ್ಕೇ ಅವೆರಡರಿಂದ ದೂರವೇ ಉಳಿದೆ.

ನೀವು ಹೇಳಿದಂತೆ ಕವಿತೆ ನನ್ನ ಪಾಲಿಗೆ ತುಂಬಾ ತುಂಬಾ ಕಂಫರ್ಟ್ ಜೋನ್! ಅದಕ್ಕಾಗಿಯೇ ಆ ಜೋನ್‌ನಲ್ಲೇ ಉಳಿಯಲು ನಾನು ಇಷ್ಟಪಡುತೇನೆ. ಕವಿತೆಯಲ್ಲಿ ಸಾಕಷ್ಟು ಸ್ವಾತಂತ್ರ್ಯ ಅವಕಾಶವಿದೆ.

ಹಾಗಾಗಿ ಅದು ನನಗೆ ಅನುಕೂಲಕರವೂ ಆಗಿದೆ. ಇನ್ನು ನನ್ನ ನಾನ್-ಅಕಾಡೆಮಿಕ್ ಹಿನ್ನೆಲೆ ಕುರಿತಂತೆ ನನ್ನಲ್ಲಿ ಯಾವ ಬಗೆಯ ಕೀಳರಿಮೆಯೂ ಇಲ್ಲ. ನಾನು ಗರ್ವದಿಂದ ಕಾವ್ಯವನ್ನು ಬಲವಾಗಿ ನಂಬಿಕೊಂಡಿರುವವನು.ದಿನೇ ದಿನೇ ಕಾವ್ಯದ ಭಾಷೆ ಸಂಕೀರ್ಣಮಯವಾಗುತ್ತಿರುವುದಕ್ಕೂ, ಕಾವ್ಯಾಸಕ್ತರ ಸಂಖ್ಯೆ ಇಳಿಮುಖವಾಗುತ್ತಿರುವುದಕ್ಕೂ ಸಂಬಂಧವಿದೆ ಅಂತ ನಿಮಗನಿಸಿದ್ದಿದೆಯೆ? ಇದ್ದರೆ ನಿಮ್ಮ ಪ್ರಕಾರ ಈ ಸಂಬಂಧದ ಸ್ವರೂಪವೇನು?ಇದು ನಾವೆಲ್ಲರೂ ಚರ್ಚಿಸಿ ಸತ್ಯವೇನೆಂದು ಕಂಡುಕೊಳ್ಳಬೇಕಾದ ವಿಚಾರ ಅಂತ ನನಗನ್ನಿಸುತ್ತೆ. ಸಾಮಾಜಿಕ ಸಂರಚನೆ ಸಂಕೀರ್ಣವಾಗುತ್ತಿದೆ ಅಂತೇವೆ ನಾವು. ಅದಕ್ಕನುಗುಣವಾಗಿ ಕವಿತೆ ಕೂಡ ಸಂಕೀರ್ಣವಾಗಿ ಪ್ರಕಟಗೊಳ್ಳುತ್ತಿದೆ ಎಂಬುದನ್ನು ಒಪ್ಪಿಕೊಳ್ತೇವೆ.

ಆದರೆ ಬದುಕಿನ ಸಂಕೀರ್ಣತೆ, ಸಮಾಜದೊಳಗಿನ ಸಂಕೀರ್ಣತೆ, ಕಾವ್ಯ ನಿರೂಪಣೆಯಲ್ಲಿ ಸೇರಿಕೊಂಡಿರುವ ಸಂಕೀರ್ಣತೆ.. ಓದುಗನಿಗೆ ಈ ಎಲ್ಲ ಸಂಕೀರ್ಣತೆಗಳ ಸಂಕೀರ್ಣತೆಯನ್ನು- ಸರಳವಾಗಿಯೋ, ಸಂಕೀರ್ಣವಾಗಿಯೋ- ಹಿಡಿದುಕೊಳ್ಳುವ ಪದ್ಧತಿಯನ್ನು, ಅರ್ಥವಾಗುವ ಮಾರ್ಗವನ್ನು ಕೂಡ ಸ್ವತಃ ಕವಿಯೇ ಹುಡುಕಿ ತೆಗೆಯಬೇಕು.

ಈ ಸಂಕೀರ್ಣತೆಗಳು ಸಂವಹನವಾಗುವಂತೆ, ಓದುಗ ಅರ್ಥ ಮಾಡಿಕೊಳ್ಳುವಂತೆ ಕವಿತೆಯನ್ನು ಬರೆಯುವ ಅಗತ್ಯವಿದೆ ಎಂದು ನಾನು ಭಾವಿಸಿದ್ದೇನೆ.

ಇದರಿಂದಾಗಿ ಓದುವವರ ಸಂಖ್ಯೆ ಕಡಿಮೆಯಾಯಿತಾ? ಹೆಚ್ಚಾಯಿತಾ? ಅನ್ನುವುದು ಒಂದು ವಿಚಾರಾರ್ಹ ಸಂಗತಿಯೇ ಅಲ್ಲ.

ಎಲ್ಲರೂ ಬೆಳಗ್ಗೆಯೇ ಎದ್ದು ಸೂರ್ಯೋದಯ ಸೌಂದರ್ಯ ನೋಡರು. ಹಾಗೆಯೇ ರಾತ್ರಿಗಳಲ್ಲಿ ಎಚ್ಚರಿದ್ದು ಪೌರ್ಣಿಮೆಯ ಚೆಲುವನ್ನು ಆಸ್ವಾದಿಸರು. ಆದರೆ ಈ ಎರಡನ್ನೂ ನೋಡಿ ಅನುಭವಿಸಿ ಆನಂದಿಸುವವರು ಎಲ್ಲ ಕಾಲಕ್ಕೂ ಕೆಲವರು ಇದ್ದೇ ಇರುವರು.ಕಾವ್ಯವೂ ಅಷ್ಟೇ. ಸಂಖ್ಯೆ ಮುಖ್ಯವಲ್ಲ. ಬೆಳಕಿಗಾಗಿ ಹುಡುಕುವವರು ಕೆಲವರಿದ್ದರೂ ಸಾಕು. ಹೂಗಳನು ನೋಡಿ ಪರವಶಕ್ಕೊಳಗಾಗುವವರು ಕೆಲವರಿರ‌್ತಾರೆ. ಆಯುಧವ ಹಿಡಿದು ಧೈರ್ಯದಿಂದ ಮುನ್ನಗ್ಗುವವರು ಕೆಲವರಿರ‌್ತಾರೆ. ಲೆಕ್ಕ ಬೇಡ. ಓದುವವರು ಯಾವತ್ತೂ ಇರ‌್ತಾರೆ. ಕಾವ್ಯವೂ ಯಾವತ್ತೂ ಇರುತ್ತೆ.

ಹಾಗಾಗಿ ಕಾವ್ಯವೆಂದರೆ ಒಂದರ್ಥದಲ್ಲಿ ಜೀವಿಸುವ ವಿಧಾನ. ಇದು ನನ್ನ ಆಶೆಯಾಗಿರಬಹುದು. ನಂಬಿಕೆಯೂ ಆಗಿರಬಹುದು!ಮೂಲದಲ್ಲಿ ಎಲ್ಲವೂ ಶೋಷಿತ ವರ್ಗಗಳೇ ಆದ ದಲಿತ-ಮುಸ್ಲಿಂ ಮತ್ತು ಸ್ತ್ರೀಯರ ಲೋಕಗಳು ಇಂದು ಪ್ರತ್ಯೇಕ ಸಾಹಿತ್ಯ ಪಂಥಗಳಾಗಿ ಕವಲೊಡೆದಿದ್ದು; ಈಗ ದಲಿತ ಸಾಹಿತ್ಯದಲ್ಲಿ `ಮಾದಿಗ ಕಾವ್ಯ~  ಎಂಬಂಥ ಕಿರುಧಾರೆಗಳು ಪ್ರಕಟಗೊಳ್ಳುತ್ತಿವೆ. ಸಮಾಜವನ್ನು ಒಗ್ಗೂಡಿಸಬೇಕಾದ ಸಾಹಿತಿಗಳೇ ಪ್ರದೇಶ-ಲಿಂಗ-ಮತ-ಜಾತಿಗಳ ಆಧಾರದಲ್ಲಿ ವಿಭಜನೆ ಹೊಂದುತ್ತಿರುವ ಇಂದಿನ ಸಾಹಿತ್ಯಿಕ ಸಂದರ್ಭವು ನಮ್ಮನ್ನು ಎಲ್ಲಿಗೆ ಕೊಂಡೊಯ್ಯಬಹುದು ಅಂತ ನಿಮಗನಿಸುತ್ತೆ?`ಮನುಷ್ಯ ಮನುಷ್ಯನಾಗಿ ಜೀವಿಸಬೇಕು; ಸರ್ಕಾರಕ್ಕೆ ಪ್ರತಿಪಕ್ಷವಾಗಿ ಕೆಲಸ ಮಾಡಬೇಕು~ ಎಂಬ ಜನಪರವಾದ ಸಾಹಿತ್ಯದ ಮುಖ್ಯ ವಾಹಿನಿ ಒಂದಿದೆ. ಅದೇ ನಮಗೆ ಪ್ರಶ್ನಿಸುವುದನ್ನು ಕಲಿಸಿದೆ. ಆಲೋಚಿಸುವುದನ್ನು ಕಲಿಸಿದೆ. ಹೋರಾಡುವುದನ್ನು ಕಲಿಸಿದೆ.ಸಮನ್ವಯಗೊಳಿಸುವ ಕಲೆಯನ್ನೂ ಕಲಿಸಿತೆಂದುಕೊಳ್ಳೋಣ. ಈ ಪ್ರಶ್ನೆಗೆ ಹೇಗೆ ಉತ್ತರಿಸುವುದು, ಯಾವ ವಿಧಾನದ ಮೂಲಕ ವಿವರಿಸುವುದು ಅಂತ ನನಗೆ ಗೊತ್ತಾಗ್ತಾ ಇಲ್ಲ. ವಿಷಯವೇನೋ ಗೊತ್ತಾಗಲಿ, ಇದರ ಕಾರಣಗಳ ಕುರಿತು ಚರ್ಚಿಸುವುದು ನನ್ನ ಶಕ್ತಿಯನ್ನು ಮೀರಿದ ಸಂಗತಿ ಅನಿಸುತ್ತೆ. ಎಲ್ಲ ಅರ್ಥವಾಗ್ತಿದೆ. ಹೇಳುವ ವಿಧಾನ ತೋಚುತ್ತಿಲ್ಲ.ಬೇರೊಬ್ಬರ ನೋವುಗಳನ್ನು ಅವರು ಹೇಳಿಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ. ಯಾರಿಗೋ ಜರುಗಿದ ಅನ್ಯಾಯಗಳ ಕುರಿತು ಅವರೇ ಪ್ರಶ್ನಿಸುವುದರಲ್ಲಿ ನ್ಯಾಯವಿದೆ. ಬೇರೆಯವರ ಹಕ್ಕುಗಳನ್ನು ಅವರು ಕೇಳುವುದರಲ್ಲಿ ಅರ್ಥವಿದೆ.ಒಂದೊಂದು ಚಳುವಳಿಯೂ ಕಾವ್ಯಕ್ಕೆ, ಸಾಹಿತ್ಯಕ್ಕೆ ಹೊಸ ಹೊಸ ದೃಷ್ಟಿಕೋನಗಳನ್ನು ನೀಡಿದೆ. ಸಂಸ್ಕಾರ ನೀಡಿದೆ. ಸರಿಪಡಿಸಿಕೊಳ್ಳುವ ಸೌಂದರ್ಯವನ್ನು ನೀಡಿದೆ. ಚರ್ಚಾರ್ಹ ಪಠ್ಯಗಳನ್ನು ನೀಡಿದೆ. ಪಾಠಗಳನ್ನು ಹೇಳಿದೆ. ಇನ್ನು ಉಳಿದ ವಿಷಯಗಳಿಗೆ ಬಂದರೆ.. ನಿಮ್ಮ ಪ್ರಶ್ನೆಯಲ್ಲೇ ಉತ್ತರವೂ ಅಡಕಗೊಂಡಿದೆ.ತೆಲುಗು ಮನಸ್ಸನ್ನು ರೂಪಿಸಿದ ಪಥನಿರ್ಮಾತೃ ಲೇಖಕರ ಬಗ್ಗೆ ತಿಳಿಸಿ ಹಾಗೆಯೇ ತೆಲುಗಿನಲ್ಲಿ ಸಿನಿಮಾ ಮತ್ತು ಸಾಹಿತ್ಯಗಳ ನಡುವಿನ ಕೊಡು-ಕೊಳುವಿಕೆ ಬಗ್ಗೆ ತಿಳಿಸಿ.ಆಧುನಿಕ ತೆಲುಗು ಕಾವ್ಯದ ಪಥನಿರ್ಮಾತೃ ಲೇಖಕರೆಂದು ಗುರಜಾಡ ಅಪ್ಪಾರಾವು, ರಾಯಪ್ರೋಲು ಸುಬ್ಬಾರಾವು, ವಿಶ್ವನಾಥ ಸತ್ಯನಾರಾಯಣ, ಶ್ರೀರಂಗಂ ಶ್ರೀನಿವಾಸರಾವು (ಶ್ರೀಶ್ರೀ), ಗುಂಟೂರು ಶೇಷೇಂದ್ರ ಶರ್ಮ, ಶಿವಸಾಗರ್, ಗದ್ದರ್, ಕೆ.ಶಿವಾರೆಡ್ಡಿ ಮುಂತಾದವರನ್ನು ಹೆಸರಿಸಬಹುದು.

ಈ ಮಧ್ಯೆ ಪೈಗಂಬರ ಪಂಥ, ದಿಗಂಬರ ಪಂಥ, ವಿರಸಂ ಪಂಥಗಳ ಲೇಖಕರು ಕೂಡ ತಮ್ಮ ಪ್ರತ್ಯೇಕ ಛಾಪನ್ನು ಮೂಡಿಸಿದರು.ಹಿಂದೆ ಆಧುನಿಕ ತೆಲುಗು ಸಾಹಿತ್ಯದ ಮೊದಲ ಘಟ್ಟದ ಪ್ರಮುಖರಾದ `ಶ್ರೀಶ್ರೀ~, ಸಿ.ನಾರಾಯಣರೆಡ್ಡಿ, ದಾಶರಥಿ, ಆರುದ್ರ ಸಿನಿಮಾ ರಂಗದ ನಿಕಟ ಸಂಪರ್ಕ ಹೊಂದಿದ್ದರು. ಕಮ್ಯುನಿಸ್ಟ್ ವಿಚಾರಧಾರೆಯ ಲೇಖಕರು ಮೊದಮೊದಲು ಸಿನಿಮಾ ಸಂಪರ್ಕಕ್ಕೆ ಬಂದವರು. ಅಲ್ಲಿಂದ ಆ ಪರಂಪರೆ ಮುಂದುವರಿಯಿತೆನ್ನಬಹುದು.

ಆದರೆ ಇವರೆಲ್ಲ ಸಿನಿಮಾ ಸಂಪರ್ಕಕ್ಕೆ ಬರುವ ಹೊತ್ತಿಗಾಗಲೇ ಸಾಹಿತ್ಯದಲ್ಲಿ ದೊಡ್ಡ ಹೆಸರು ಮಾಡಿದವರಾಗಿದ್ದರು. ಹಾಗಾಗಿ ಕಮರ್ಷಿಯಲ್ ಸಿನಿಮಾಗಳಿಗಾಗಿ `ಶ್ರೀಶ್ರೀ~, ಸಿನಾರೆ ಕೆಲಸ ಮಾಡಿದರೂ; ಅವರ ಸಾಹಿತ್ಯದ ಗುಣಮಟ್ಟದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮವಾಗಿರಲಿಕ್ಕಿಲ್ಲ. ಪತ್ರಕರ್ತರು ಈ ಬಗ್ಗೆ `ಶ್ರೀಶ್ರೀ~ಯವರನ್ನು ಕೇಳಿದಾಗ ಇಂಥದ್ದೇ ಅರ್ಥ ಬರುವ ಉತ್ತರ ನೀಡಿದ್ದರು.ತುಂಬಾ ಗಂಭೀರವಾಗಿ ಬರೆಯುವ ಕವಿಗಳು, ಲೇಖಕರು ಕೆಲವರು ಯಾವುದೇ ಭಾಷೆಯಲ್ಲಾಗಲಿ ಸಿನಿಮಾಗಳನ್ನು ತೆಗೆದಿರಬಹುದು. ಗಂಭೀರ ಸಿನಿಮಾಗಳನ್ನು ತೆಗೆಯುವವರು ಕೂಡ ತಾವು ಗಂಭೀರವಾಗಿ ಬರೆಯಬೇಕೆಂದುಕೊಂಡದ್ದನ್ನೇ, ಆಲೋಚಿಸಿದ್ದನ್ನೇ ಸಿನಿಮಾ ಆಗಿ ರೂಪಿಸಿರಲೂ ಬಹುದು.

ಆದರೆ ಸಂಖ್ಯೆಯ ದೃಷ್ಟಿಯಿಂದ ಇಂಥವು ಕಡಿಮೆಯೆಂದೇ ಹೇಳಬೇಕು. ಕನ್ನಡ ಸಾಹಿತ್ಯದಲ್ಲಿ ಹೇಗಿದೆಯೋ ತಿಳಿಯದು. ತೆಲುಗಿನಲ್ಲಿ ಕೂಡ ಈಗ ಯಾವುದೇ ಗಂಭೀರ ಕವಿಗಳು ಸಿನಿಮಾ ರಂಗಕ್ಕೆ ಅಷ್ಟೊಂದು ಹತ್ತಿರದಲ್ಲಿರುವಂತೆ ನನಗಂತೂ ಕಾಣಿಸ್ತಿಲ್ಲ.

ತೆಲುಗಿನ ಓದುಗರಿಗೆ ಚಿರಪರಿಚಿತರಾಗಿರುವ ಕನ್ನಡ ಲೇಖಕರು ಯಾರು ಯಾರು? ಒಟ್ಟಾರೆ ಕನ್ನಡ ಸಾಹಿತ್ಯವನ್ನು ತೆಲುಗಿನ ಬೆಳಕಿಂಡಿ ಮೂಲಕ ನೀವು ಗ್ರಹಿಸಿದ ಬಗೆ ಯಾವುದು?ತೆಲುಗಿನ ಓದುಗರಿಗೆ ಕನ್ನಡ ಸಾಹಿತ್ಯದ ಬಗ್ಗೆ ಸರಿಯಾಗಿ ಗೊತ್ತಿದೆ. ಹೆಸರುಗಳನ್ನು ಉಲ್ಲೇಖಿಸುವ ಅಗತ್ಯವಿಲ್ಲವೆಂದು ಭಾವಿಸುವೆ. ಹಿರಿಯರ ರಚನೆಗಳನ್ನಷ್ಟೇ ಅಲ್ಲದೆ ಇತ್ತೀಚಿನವರ ರಚನೆಗಳನ್ನೂ ಲಭ್ಯ ಅನುವಾದಗಳ ಮೂಲಕ ಓದಿ ತಿಳಿದುಕೊಂಡಿದ್ದಾರೆ.ನನಗೆ ಇತ್ತೀಚೆಗಷ್ಟೇ ಕನ್ನಡದೊಂದಿಗೆ ಗಾಢ ಸಂಬಂಧ ಏರ್ಪಡುತ್ತಿದೆ. ಬೆಂಗಳೂರು, ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ ಮುಂತಾದ ಕಡೆಗಳಲ್ಲಿ ಸಾಹಿತಿ ಮಿತ್ರರಿದ್ದಾರೆ. ಇವರೆಲ್ಲರ ಮುಖಾಂತರ ಕನ್ನಡದಲ್ಲಿ ಈಗ ಬರುತ್ತಿರುವ ಕಾವ್ಯದ ಸ್ವರೂಪ ಮತ್ತು ಸತ್ವಗಳ ಬಗ್ಗೆ ತಿಳಿಯುತ್ತಿದೆ.

ಯಾವುದೇ ಭಾಷೆಯಲ್ಲಾದರೂ ಸುತ್ತಲಿನ ಸಾಮಾಜಿಕ ಸಂದರ್ಭಕ್ಕೆ ಸ್ಪಂದಿಸುತ್ತ ಕಾವ್ಯ ಹುಟ್ಟುತ್ತದೆ. ಅದನ್ನು ಕನ್ನಡ ಕಾವ್ಯದಲ್ಲೂ ಗುರುತಿಸಿದ್ದೇನೆ. ಆನಂದ್ ಲಕ್ಕೂರು, ವಿ.ಎಂ.ಮಂಜುನಾಥ್, ವಿ.ಆರ್ ಕಾರ್ಪೆಂಟರ್ ಮತ್ತು ನಾಗತಿಹಳ್ಳಿ ರಮೇಶ್‌ರವರು ಕನ್ನಡ ಸಾಹಿತ್ಯದ ಕುರಿತು ಆಗಾಗ ನನ್ನೊಂದಿಗೆ ಚರ್ಚಿಸುತ್ತಿರುತ್ತಾರೆ.

ಮೊದಲಿನಿಂದಲೂ ಕನ್ನಡ ಭಾಷೆಗೆ, ಕನ್ನಡ ಸಾಹಿತ್ಯಕ್ಕೆ ಒಂದು ಪ್ರಬಲವಾದ ಸಾಂಸ್ಕೃತಿಕ ಪರಿಸರದ ಹಿನ್ನೆಲೆಯಿದೆ. ಆದರೆ ತೆಲುಗಿನಲ್ಲಿ ಮೊದಲಿನಿಂದಲೂ ಹೋರಾಟಗಳಿವೆ. ಘರ್ಷಣೆಗಳಿವೆ. ಪ್ರಜಾಚಳುವಳಿಗಳಿವೆ. ನಿಷೇಧಗಳಿವೆ, ನಿರ್ಬಂಧಗಳಿವೆ. ಆಯಾ ಕಾಲಕ್ಕೆ ಹಿಡಿದ ಕನ್ನಡಿಯಾಗಿ ಇಲ್ಲಿಯ ಕಾವ್ಯ ರೂಪ ಪಡೆದಿದೆ.

ಇಲ್ಲಿಯ ಜೀವನವಿಧಾನವೇ ಬೇರೆ. ಇಲ್ಲಿಯ ಕವಿಗೆ ನಿದ್ರೆಯಿಲ್ಲ. ಅವನು ಮನುಷ್ಯನ ಕೂಗಿಗೆ ಕಿವಿಯಾಗಬೇಕು. ಸಮಾಜದ ಕಾವಲು ಕಾಯಬೇಕು. ಸರ್ಕಾರವನ್ನು ಪ್ರಶ್ನಿಸಬೇಕು. ಬಹುಶಃ ಯಾವ ದೇಶದಲ್ಲಾದರೂ, ಯಾವ ಭಾಷೆಯಲ್ಲಾದರೂ ಒಬ್ಬ ಕವಿಯ ಕೆಲಸ ಇದೇ ಆಗಿದೆ ಅಂತ ನಾನು ಅಮದುಕೊಂಡಿದ್ದೇನೆ.ಈಗ ತೆಲುಗಿನಲ್ಲಿ ಯಾವ ಪ್ರಕಾರ ಮತ್ತು ಚಿಂತನಾಧಾರೆ ಪ್ರಭಾವಶಾಲಿಯಾಗಿದೆ? ಈಗಿನ ಯುವ ಬರೆಹಗಾರರ ಬಗ್ಗೆ ನಿಮ್ಮ ಅಭಿಪ್ರಾಯವೇನು?ನಾನು ತಿಳಿದುಕೊಂಡಿದ್ದು ಕಡಿಮೆಯೇ. ಆದರೂ ನನ್ನ ತಿಳಿವಳಿಕೆಯ ಮಿತಿಯಲ್ಲಿ ಹೇಳುವುದಾದರೆ ಈಗ ಬರೆಯುತ್ತಿರುವವರು ಚೆನ್ನಾಗಿ ಬರೆಯುತ್ತಿದ್ದಾರೆ. ಸದ್ಯದ ಕಾವ್ಯ ಹೊಸ ದೃಶ್ಯ ಮತ್ತು ದೃಷ್ಟಿಗಾಗಿ ಹಂಬಲಿಸುತ್ತಿರುವಂತಿದೆ.

ಆದರೆ ಯಾರು ಕಾವ್ಯವನ್ನು ನೆಚ್ಚಿಕೊಂಡು, ಬದ್ಧತೆಯನ್ನಿಟ್ಟುಕೊಂಡು ಬರೆಯುತ್ತಾರೋ ಅವರು ಬಹುಕಾಲ ಉಳಿಯುತ್ತಾರೆ. ವೈಯುಕ್ತಿಕವಾಗಿ ನಾನಂತೂ ಎಲ್ಲರ ಕಾವ್ಯವನ್ನೂ ಸಮಾನಪ್ರೀತಿಯಿಂದ ಓದುತ್ತೇನೆ. ಬರೆಯುವವರೆಲ್ಲರನ್ನೂ ಬಂಧುಗಳಂತೆ ಪ್ರೀತಿಸುತ್ತೇನೆ.

ಕವಿತೆ

1. ಕೋಟೆ

ಇಷ್ಟು ಭಯಂಕರವಾದ ರಾತ್ರಿಯನು

ಯಾವ ಆಯುಧದಿಂದ ಗೆಲ್ಲಬೇಕು

ಈ ಕಾಳಕತ್ತಲೆಯನು

ಯಾವ ದೀಪದಿಂದ ಕರಗಿಸಬೇಕು

ನಡೆದಷ್ಟೂ ದೂರ ಹೆಚ್ಚುತ್ತಿದೆ

ನನ್ನ ಹೆಜ್ಜೆಗಳ ಎಲ್ಲಿ ಊರಬೇಕು

ಕೈಗೆ ಯಾವ ಆಸರೆಯೂ ಸಿಗುತ್ತಿಲ್ಲ

ಕಣ್ಣಲ್ಲಿ ಯಾವ ದೃಶ್ಯವೂ ಬೆಳಗುತ್ತಿಲ್ಲ

ಹುದಲಿನೊಳಗೆ ಕುಸಿಯುತ್ತಿದ್ದೇನೆ

ಯಾವ ದಡವೂ ನಿಲುಕುತ್ತಿಲ್ಲ

ಇಲ್ಲೇ ಒಮ್ಮೆ ಬಿದ್ದಿದ್ದೇನೆ

ಯಾವಾಗಲೋ ಕನಸೊಂದ ಕೈಜಾರಿಸಿಕೊಂಡಿದ್ದೇನೆ

ಈಗಷ್ಟೇ ಹೃದಯಕ್ಕೆ ಹೊಲಿಗೆ ಹಾಕಿರುವೆ

ಇನ್ನು ಯಾವ ನೆನಪೂ ಕೆಳಬೀಳಲಾರದು

ಬದುಕುವುದಕ್ಕೆ ಅಭ್ಯಾಸವಾಗಿದ್ದೇನೆ

ಸಾವು ನನ್ನ ನೋಡಿ ಹೆದರುತ್ತಿದೆ

ಮನುಷ್ಯ ಜೊತೆಯಾಗುವವರೆಗೂ ಗಾಯಪಡುತ್ತೇನೆ

ಬಾಧೆಪಡದೆ ಬದುಕಲಾರೆ

ಕೋಟೆ ಕುಸಿದುಹೋಗಿರುತ್ತದೆ

ನೀನು ಹೊರಬಿದ್ದಿರುತ್ತೀಯ

ಯಾವ ದಿಕ್ಕಿಗೆ ಓಡಿಹೋದರೂ

ನನಗೇ ಎದುರಾಗ್ತೀಯ

ಕೈಗಳಿಲ್ಲದೆ

ಯಾವ ಆಯುಧವೂ ಕೆಲಸ ಮಾಡದು

ಎಷ್ಟು ಕಿರೀಟಗಳೂ ನಿನ್ನ

ಸದಾ ಕಾಲ ಕಾಪಾಡಲಾರವು.

(ಅನುವಾದ: ಚಿದಾನಂದ ಸಾಲಿ)

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry