`ಬದ್ದತೆಯಿಂದ ಅಭಿವೃದ್ಧಿ ಕೈಗೊಳ್ಳಲಾಗಿದೆ'

7
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವರಿಂದ ಚಾಲನೆ

`ಬದ್ದತೆಯಿಂದ ಅಭಿವೃದ್ಧಿ ಕೈಗೊಳ್ಳಲಾಗಿದೆ'

Published:
Updated:

ಸವಣೂರ: ಗ್ರಾಮೀಣ ಪ್ರದೇಶದ ಜನರನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ಪರಿಗಣಿಸುವ ಮನಃ ಸ್ಥಿತಿಯನ್ನು ರಾಜ್ಯ ಸರ್ಕಾರ ದೂರಮಾಡಿದೆ. ಗ್ರಾಮೀಣಾಭಿವೃದ್ಧಿಯಲ್ಲಿ ಕರ್ನಾಟಕ ಅನ್ಯ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಂ. ಉದಾಸಿ ತಿಳಿಸಿದರು.ಸವಣೂರಿನಲ್ಲಿ ಸೋಮವಾರ ನಡೆದ ಪಟ್ಟಣದ ಜನತೆಗೆ ಕುಡಿಯುವ ನೀರಿನ ಯೋಜನೆ ಉದ್ಘಾಟಿಸಿ ಅವರು  ಮಾತನಾಡಿದರು. ರಾಜ್ಯದ ಅಭಿವೃದ್ದಿಯಲ್ಲಿ ಬದ್ಧತೆಯೊಂದಿಗೆ ಬದಲಾವಣೆ ತರಲಾಗಿದೆ. ಜನರ ಆಶೋತ್ತರಗಳನ್ನು ಅರ್ಥೈಸಿಕೊಳ್ಳಲಾಗಿದೆ. ಪಂಚಾಯತ್‌ರಾಜ್ ವ್ಯವಸ್ಥೆಯನ್ನು ಅಮೂಲಾಗ್ರವಾಗಿ ಬಲಪಡಿಸಲಾಗಿದೆ. ರಾಜ್ಯಾದ್ಯಂತ ಕೆರೆಗಳನ್ನು ತುಂಬಿಸುವ ಕಾರ್ಯ ಆಗಿದೆ ಎಂದರು.ತಾಲ್ಲೂಕು ಆಸ್ಪತ್ರೆಯನ್ನು ನೂರು ಹಾಸಿಗೆಗೆ ಮೇಲ್ದರ್ಜೆಗೆ ಏರಿಸಿ ಮಾತನಾಡಿದ ಆರೋಗ್ಯ ಸಚಿವ ಅರವಿಂದ ಲಿಂಬಾವಳಿ, ತಜ್ಞ ವೈದ್ಯರ ಕೊರತೆ ನೀಗಿಸಲು ಹೊಸ ಕಾನೂನು ತರಲಾಗುತ್ತಿದೆ. ಸರಕಾರದ ಸೌಲಭ್ಯ ಪಡೆದು ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ವೈಧ್ಯರು, ಸರಕಾರಿ ಆಸ್ಪತ್ರೆಗಳಿಗೂ ಭೆಟ್ಟಿ ನೀಡಬೇಕು. ಇದನ್ನು ಸಾಮಾಜಿಕ ಸೇವೆ ಎಂದು ಪರಿಗಣಿಸಬೇಕು ಎಂದರು.

ಸವಣೂರಿನ ಆಸ್ಪತ್ರೆಗೆ ವೈದ್ಯಕೀಯ ಉಪಕರಣ, ಸಿಬ್ಬಂದಿ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವ ಭರವಸೆ ನೀಡಿದರಲ್ಲದೆ ಸಚಿವ ಬಸವರಾಜ ಬೊಮ್ಮಾಯಿ ಉತ್ತರ ಕರ್ನಾಟಕದ ಆಧುನಿಕ ಭಗೀರಥ ಎಂದು ಬಣ್ಣಿಸಿದರು.ಅಧ್ಯಕ್ಷತೆ ವಹಿಸಿದ್ದ ಸಚಿವ ಬಸವರಾಜ ಬೊಮ್ಮಾಯಿ, ಮೋತಿ ತಲಾಬ್ ಕೆರೆಗೆ ನೀರು ಹರಿಸುವ ಮೂಲಕ ಕಳೆದ ಮೂವತ್ತು ವರ್ಷಗಳ ಬೇಡಿಕೆ ಈಡೇರಿಸಿದ ಸಮಾಧಾನ ಇದೆ ಎಂದರು. ಈ ಹಿಂದಿನ ಏತ ನೀರಾವರಿ ಯೋಜನೆ ತನ್ನ ಅಸಾಮರ್ಥ್ಯದಿಂದ ಕುಂಠಿತಗೊಂಡಿತ್ತು.

ನೀರು ಬಳಕೆದಾರಿಗೆ ವಂತಿಕೆ ಪಾವತಿಸುವುದು ಹೊರೆಯಾಗಿತ್ತು. ಈ ಬಾರಿ ಸವಣೂರ, ಶಿಗ್ಗಾಂವ ಹಾಗೂ ಬಂಕಾಪುರ ಪಟ್ಟಣಗಳಿಗೆ ರೂ 46 ಕೋಟಿ ವೆಚ್ಚದಲ್ಲಿ ಪ್ರತ್ಯೇಕ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಸವಣೂರಿನ ಜನತೆಗೆ ಪರಿಶುದ್ಧವಾದ ಕುಡಿಯುವ ನೀರು ಪೂರೈಕೆಗೊಳ್ಳಲಿದೆ ಎಂದರು.ಹನಿ ನೀರಾವರಿ ಯೋಜನೆಯ ಎರಡನೇ ಹಂತದ ವಿಸ್ತರಣೆ ಪಡೆಯಲಿದೆ. ಸವಣೂರ ತಾಲ್ಲೂಕಿನ ಹತ್ತಿಮತ್ತೂರ ಹೋಬಳಿ ವ್ಯಾಪ್ತಿಯ ಕೆರೆಗಳನ್ನು ಈ ಯೋಜನೆಯ ಅಡಿ ತುಂಬಿಸಲಾಗುತ್ತದೆ ಎಂದು ತಿಳಿಸಿದ ಸಚಿವರು, ತಮ್ಮ ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ಬೆಂಬಲ ನೀಡಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಂಕ್ರಣ್ಣ ಮಾತನವರ, ಸದಸ್ಯರಾದ ಕೃಷ್ಣಪ್ಪ ಸುಣಗಾರ, ಡಾ. ಶೋಭಾ ನಿಸ್ಸೀಮಗೌಡ್ರ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರುದ್ರಗೌಡ ಪಾಟೀಲ, ಪುರಸಭೆ ಅಧ್ಯಕ್ಷ ಶಂಕರ ದೊಡ್ಮನಿ, ಎಪಿಎಂಸಿ ಅಧ್ಯಕ್ಷ ವಿ.ಆರ್. ಪಾಟೀಲ, ಕೆಸಿಸಿ ಬ್ಯಾಂಕ್ ಅಧ್ಯಕ್ಷ ಬಸವರಾಜ ಸಿಂಧೂರ, ಮುಖಂಡರಾದ ಮೋಹನ ಮೆಣಸಿನಕಾಯಿ, ಎಸ್.ಎಂ. ಗಡೆಪ್ಪನವರ್, ತಾ.ಪಂ, ಪುರಸಭೆ ಸರ್ವ ಸದಸ್ಯರು, ತಹಶೀಲ್ದಾರ ಡಾ. ನಾಗೇಂದ್ರ ಹೊನ್ನಳ್ಳಿ ಸೇರಿದಂತೆ ಎಲ್ಲ ಇಲಾಖಾ ಮುಖ್ಯಸ್ಥರು ಸಮಾರಂಭದಲ್ಲಿ ಭಾಗವಹಿಸಿದ್ದರು. ಮಲ್ಲಿಕಾರ್ಜುನ ಶಾಂತಗೇರಿ ನಿರೂಪಿಸಿದರು. ಶಿವಾನಂದ ಬಡಶೆಟ್ಟಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry