ಬದ್ಧತೆ ಇಲ್ಲದ ಸರ್ಕಾರ: ಟಾಟಾ ವಿಷಾದ

7

ಬದ್ಧತೆ ಇಲ್ಲದ ಸರ್ಕಾರ: ಟಾಟಾ ವಿಷಾದ

Published:
Updated:
ಬದ್ಧತೆ ಇಲ್ಲದ ಸರ್ಕಾರ: ಟಾಟಾ ವಿಷಾದ

ಮುಂಬೈ (ಪಿಟಿಐ): `ಈ ನೆಲದ ಕಾನೂನಿನ ಪಾವಿತ್ರ್ಯ ರಕ್ಷಿಸಲು ಸರ್ಕಾರಕ್ಕೆ ಅಚಲವಾದ ಬದ್ಧತೆ ಇರಬೇಕು' ಎಂದು `ಟಾಟಾ ಸಮೂಹ'ದ ನಿರ್ಗಮಿತ ಅಧ್ಯಕ್ಷ ರತನ್ ಟಾಟಾ ಹೇಳಿದ್ದಾರೆ.ಡಿಸೆಂಬರ್ 28ರಂದು ರತನ್ ಟಾಟಾ ಅಧ್ಯಕ್ಷ ಹುದ್ದೆಯಿಂದ ನಿವೃತ್ತಿಯಾಗಲಿದ್ದಾರೆ. 21 ವರ್ಷಗಳ ಕಾಲ ಅಧ್ಯಕ್ಷರಾಗಿರುವುದೂ ಸೇರಿದಂತೆ ಅವರು ಒಟ್ಟು 50 ವರ್ಷಗಳ ಕಾಲ ಟಾಟಾ ಸಮೂಹದಲ್ಲಿ ಸೇವೆ ಸಲ್ಲಿಸಿದ್ದಾರೆ.

ನಿವೃತ್ತಿಗೆ ಇನ್ನೂ ಮೂರು ವಾರ ಇರುವ ಸಂದರ್ಭದಲ್ಲಿ  ಸುದ್ದಿಸಂಸ್ಥೆಗೆ ಭಾನುವಾರ ನೀಡಿದ ಸಂದರ್ಶನದಲ್ಲಿ ಅವರು ದೇಶದ ಸದ್ಯದ ಪರಿಸ್ಥಿತಿ ಬಗ್ಗೆ ತೀವ್ರ ಆಕ್ರೋಶ -ವಿಷಾದ ವ್ಯಕ್ತಪಡಿಸಿದ್ದಾರೆ.`ಈಗಿರುವಂತಹ ಪರಿಸ್ಥಿತಿ ದೇಶಕ್ಕೆ ಹಿಂದೆಂದೂ ಬಂದಿರಲಿಲ್ಲ. ಹಗರಣಗಳು ಮತ್ತು ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿರುವ ವ್ಯವಸ್ಥೆಯಲ್ಲಿ ಈ ನೆಲದ ಕಾನೂನು ರಕ್ಷಿಸಬೇಕಾದ ಸರ್ಕಾರವೇ ಬದ್ಧತೆ ಮರೆತಿದೆ' ಎಂದು ವಿಷಾದಿಸಿರುವ ಅವರು, ಗತಕಾಲದ ತೆರಿಗೆ ವ್ಯವಸ್ಥೆಯಿಂದ ಉದ್ಯಮದ ಪ್ರಗತಿ ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.ಡಿಸೆಂಬರ್ ಅಂತ್ಯಕ್ಕೆ ರತನ್ ಟಾಟಾ ಅವರಿಗೆ 75 ವರ್ಷ ತುಂಬಲಿದೆ. ತಾವು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ತೆಗೆದುಕೊಂಡ ಕೆಲವು ನಿರ್ಧಾರಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಅವರು, ತಾವು ವ್ಯವಸ್ಥೆ ಜತೆಗೆ ಎಂದಿಗೂ ರಾಜಿ ಮಾಡಿಕೊಂಡಿಲ್ಲ ಎಂದು ಅಭಿಮಾನದಿಂದಲೇ ನುಡಿದಿದ್ದಾರೆ. ಸರ್ಕಾರವೇ ವಿಶ್ವಾಸಾರ್ಹತೆ ಕಳೆದುಕೊಂಡಿರುವುದರಿಂದ ಹೂಡಿಕೆದಾರರು ಮತ್ತು ಉದ್ಯಮ ವಲಯ ಅಸ್ಥಿರತೆ ಎದುರಿಸುತ್ತಿದೆ ಎಂದಿದ್ದಾರೆ.`ಭಾರತದಲ್ಲಿ ಹೂಡಿಕೆ ಮಾಡಬೇಕಾದರೆ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯಿಂದ  (ಎಫ್‌ಐಪಿಬಿ) ಅನುಮತಿ ಪಡೆಯಬೇಕು. ಅನುಮತಿ ನೀಡಿದ ಸರ್ಕಾರವೇ ಮೂರು ವರ್ಷಗಳ ನಂತರ ನೀವು ಪಡೆದಿರುವ ಪರವಾನಗಿ ಅಕ್ರಮ ಎನ್ನುತ್ತದೆ. ಭಾರತದಂತಹ ದೇಶದಲ್ಲಿ ಹೀಗೆ ಏನು ಬೇಕಾದರೂ ನಡೆಯುತ್ತದೆ. ಇದನ್ನು ಯೋಚಿಸುವಾಗ ಇಡೀ ವ್ಯವಸ್ಥೆ ಬಗ್ಗೆ ಆಕ್ರೋಶ ಮೂಡುತ್ತದೆ ಎಂದಿದ್ದಾರೆ.ಬಹುಬ್ರಾಂಡ್ ಚಿಲ್ಲರೆ ವಹಿವಾಟಿನಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಸೇರಿದಂತೆ ಸರ್ಕಾರ ಇತ್ತೀಚೆಗೆ ಕೈಗೊಂಡಿರುವ ಕೆಲವು ಸುಧಾರಣಾ ಕ್ರಮಗಳು ಹೂಡಿಕೆದಾರರ ವಿಶ್ವಾಸವನ್ನು ಸ್ವಲ್ಪ ಮಟ್ಟಿಗೆ ಉತ್ತೇಜಿಸಿವೆ. ಆದರೆ, ಸರ್ಕಾರದ ಬದ್ಧತೆ ಬದಲಾಗದೇ ಮಹತ್ತರ ಬದಲಾವಣೆಗಳನ್ನೇನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಅವರು ಮೂಲ ಸಮಸ್ಯೆಯತ್ತ ಬೊಟ್ಟು ಮಾಡಿದ್ದಾರೆ.`ಎಫ್‌ಡಿಐ'ನಿಂದ ಗ್ರಾಹಕರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಸರಕುಗಳು ಲಭಿಸಬೇಕು, ಆಯ್ಕೆಗೂ ಹೆಚ್ಚಿನ ಅವಕಾಶಗಳಿರಬೇಕು. ಇದು ಸಾಧ್ಯವಾಗದಿದ್ದರೆ `ಎಫ್‌ಡಿಐ' ಪ್ರಕ್ರಿಯೆಯೇ ವಿಫಲವಾದಂತೆ ಎಂದು ಗಮನ ಸೆಳೆದಿದ್ದಾರೆ.`ಪ್ರಧಾನಿ ಮನಮೋಹನ್ ಸಿಂಗ್ 1990ರ ಆರ್ಥಿಕ ಸುಧಾರಣೆಯ ಪ್ರಾಮಾಣಿಕ ವಾಸ್ತುಶಿಲ್ಪಿ' ಎಂದು ಪ್ರಶಂಸಿಸಿದ ಟಾಟಾ, `ಪ್ರಧಾನಿಗೆ ಎಲ್ಲ ದಿಕ್ಕುಗಳಿಂದ ಒತ್ತಡ ಇದೆ. ಆದ್ದರಿಂದ ಅವರೇನೂ ಮಾಡಲು ಆಗುತ್ತಿಲ್ಲ. ಏನಾದರೂ ಮಾಡಬೇಕಾದರೂ ಅವರ ಮೇಲೆ ಒತ್ತಡ ಹಾಕುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.ಅಕ್ರಮ ಬಂಡವಾಳ ಹೂಡಿಕೆ ಮೂಲಕ ಶ್ರೀಮಂತ ಇನ್ನಷ್ಟು ಶ್ರೀಮಂತನಾಗುತ್ತಾನೆ. ಬಡವ ಇನ್ನಷ್ಟು ಬಡವನಾಗುತ್ತಾನೆ. ಈ ರೀತಿಯ ಅಭಿವೃದ್ಧಿ ಸಮಾಜದ ಸ್ವಾಸ್ಥ್ಯಕ್ಕೆ ಒಳ್ಳೆಯದಲ್ಲ. ಅಧಿಕಾರ ಮತ್ತು ಹಣ ಕೆಲವೇ ವ್ಯಕ್ತಿಗಳಲ್ಲಿ ಕೇಂದ್ರೀಕೃತವಾದರೆ ಅದು ಅನಾರೋಗ್ಯಕರ ಸ್ಪರ್ಧೆ ಸೃಷ್ಟಿಸುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಭಾರತದ ಭವಿಷ್ಯದ ಬಗ್ಗೆ ಟಾಟಾ ವಿಶ್ವಾಸ ವ್ಯಕ್ತಪಡಿಸಿದ್ದು, ನಾವಾಗಿಯೇ ಸೃಷ್ಟಿಸಿಕೊಂಡಿರುವ ಸಮಸ್ಯೆಗಳನ್ನು ನಾವೇ ಬಗೆಹರಿಸಬೇಕು ಎಂದಿದ್ದಾರೆ.ವಿಮಾನಯಾನ ಸಂಸ್ಥೆ ಇಲ್ಲ

ಸಿಂಗಪುರ ಮೂಲದ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ ಜತೆ (ಎಸ್‌ಐಎ) ವಿಮಾನಯಾನ ಸೇವೆ ಆರಂಭಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂಬುದೆಲ್ಲ ವದಂತಿ ಎಂದು ಸ್ಪಷ್ಟಪಡಿಸಿರುವ ಟಾಟಾ, ಇದು ಪ್ರತ್ಯೇಕ ಕ್ಷೇತ್ರ. ಅಲ್ಲಿ ಅನಾರೋಗ್ಯಕರ ಸ್ಪರ್ಧೆ ಹೆಚ್ಚಿದೆ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry