ಭಾನುವಾರ, ಆಗಸ್ಟ್ 18, 2019
23 °C

ಬದ್ಧತೆ ಬೇಕು

Published:
Updated:

ಹೈದರಾಬಾದ್ ಕರ್ನಾಟಕದ ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮಾತ್ರವಲ್ಲದೆ ಬಡ್ತಿಯಲ್ಲೂ ಮೀಸಲಾತಿ ನೀಡುವಂತೆ ಸಚಿವ ಸಂಪುಟದ ಉಪಸಮಿತಿ ಶಿಫಾರಸು ಮಾಡಿದೆ. ಅಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಶೇ 70 ರಷ್ಟು ಸೀಟುಗಳನ್ನು ಸ್ಥಳೀಯರಿಗೇ ಕೊಡಬೇಕು, ಎ ಮತ್ತು ಬಿ ದರ್ಜೆ ಹುದ್ದೆಗಳಲ್ಲಿ ಶೇ 75, ಸಿ ದರ್ಜೆಯಲ್ಲಿ ಶೇ 80 ಮತ್ತು ಡಿ ದರ್ಜೆಯಲ್ಲಿ ಶೇ 85 ಮೀಸಲಾತಿ ನೀಡಬೇಕು, ಹೈ ಕ ಮೂಲದ ವಿದ್ಯಾರ್ಥಿಗಳಿಗೆ ರಾಜ್ಯದ ಇತರೆಡೆಯ ಶಿಕ್ಷಣ ಸಂಸ್ಥೆಗಳಲ್ಲಿ ಶೇ 8ರಷ್ಟು ಸೀಟುಗಳನ್ನು ಮೀಸಲಿಡಬೇಕು ಎಂಬುದು ಸಮಿತಿಯ ಸಲಹೆಗಳಲ್ಲಿ ಸೇರಿವೆ.ಶಾಸನಬದ್ಧವಾಗಿ ಅಸ್ತಿತ್ವಕ್ಕೆ ಬರಲಿರುವ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯ ಕಾರ್ಯವ್ಯಾಪ್ತಿ, ಅಧಿಕಾರಗಳ ಬಗ್ಗೆಯೂ ಅದು ನಿಯಮಾವಳಿಗಳನ್ನು ಸಿದ್ಧಪಡಿಸಿದೆ. ಇದಕ್ಕೆ ರಾಜ್ಯ ಸರ್ಕಾರ ಅಂಗೀಕಾರ ಮುದ್ರೆ ಒತ್ತಿರುವುದರಿಂದ ಹೈ ಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 371 (ಜೆ) ಕಲಂ ಅನುಷ್ಠಾನಕ್ಕೆ ಚಾಲನೆ ಸಿಕ್ಕಂತಾಗಿದೆ. ಈ ಪ್ರದೇಶದ ಶೈಕ್ಷಣಿಕ ಮತ್ತು ಆರ್ಥಿಕ ಅಸಮಾನತೆ ನಿವಾರಣೆಯ ಹಾದಿಯಲ್ಲಿ ಇದೊಂದು ಮಹತ್ವದ ಹೆಜ್ಜೆ. ಸಂಪುಟ ಉಪ ಸಮಿತಿ ಸಿದ್ಧಪಡಿಸಿದ ನಿಯಮಾವಳಿಗಳನ್ನು ಕೇಂದ್ರಕ್ಕೆ ತ್ವರಿತವಾಗಿ ಕಳುಹಿಸಿ ರಾಷ್ಟ್ರಪತಿಗಳ ಅನುಮೋದನೆ ಪಡೆಯಲು ರಾಜ್ಯ ಸರ್ಕಾರ ಈಗ ಮುತುವರ್ಜಿ ವಹಿಸಬೇಕು. ಏಕೆಂದರೆ ಈ ನಿಯಮಾವಳಿಗಳು ಅಧಿಕೃತವಾಗಿ ಜಾರಿಗೆ ಬಂದ ನಂತರವೇ ರಾಜ್ಯದಲ್ಲಿ ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ.ಆದರೆ, 371 (ಜೆ) ಕಲಂ ಮತ್ತು ನಿಯಮಾವಳಿಗಳು `ಎಲ್ಲವನ್ನೂ ಸರಿಪಡಿಸುವ ಮಂತ್ರದಂಡ ಅಲ್ಲ'. ಇದಕ್ಕೆ, ನೆರೆಯ ಆಂಧ್ರದ ಬೆಳವಣಿಗೆಗಳೇ ಸಾಕ್ಷಿ. ಅಲ್ಲಿ ತೆಲಂಗಾಣ ಪ್ರದೇಶಕ್ಕೂ ಸಂವಿಧಾನದ ಅಡಿ ಇಂಥದೇ ವಿಶೇಷ ಸ್ಥಾನಮಾನ ಕಲ್ಪಿಸಲಾಗಿತ್ತು. ಆದರೂ ಅಭಿವೃದ್ಧಿ ಮರೀಚಿಕೆಯಾಗಿಯೇ ಉಳಿಯಿತು, ಜನರ ಆಶೋತ್ತರಗಳು ಈಡೇರಲಿಲ್ಲ. ಹೀಗಾಗಿ ಪ್ರತ್ಯೇಕ ತೆಲಂಗಾಣ ರಾಜ್ಯದ ಕೂಗು ಚಳವಳಿಯ ಸ್ವರೂಪ ತಳೆಯಿತು. ಇನ್ನು, ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ಸಿಗುವುದರಿಂದ ಭಾರೀ ಬದಲಾವಣೆ ಆಗುತ್ತದೆ ಎನ್ನುವುದು ಈಗಿನ ಸನ್ನಿವೇಶದಲ್ಲಿ ಅತಿಯಾದ ನಿರೀಕ್ಷೆಯಾದೀತು.ಏಕೆಂದರೆ ಸರ್ಕಾರಿ ಕ್ಷೇತ್ರದಲ್ಲಿ ನೌಕರಿ ಪ್ರಮಾಣ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ. ಆದರೆ, ಶಿಕ್ಷಣ ಮತ್ತು ವಿಶೇಷ ಅನುದಾನಗಳು ಹಿಂದುಳಿದಿರುವಿಕೆಯನ್ನು ಹೋಗಲಾಡಿಸುವ ಪರಿಣಾಮಕಾರಿ ಅಸ್ತ್ರಗಳು. ಆದ್ದರಿಂದ ಹೈ ಕ ಅಭಿವೃದ್ಧಿ ಮಂಡಳಿಗೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಸಾಕಷ್ಟು ಮೊತ್ತವನ್ನು ತೆಗೆದಿಡಬೇಕು. ವಿಶೇಷ ಅನುದಾನ ಕೊಡುವಂತೆ ಕೇಂದ್ರದ ಮೇಲೂ ಒತ್ತಡ ತರಬೇಕು. ಆಗ ಮಾತ್ರವೇ ಮೂಲಸೌಕರ್ಯ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಹಿಂದೆ ಬಿದ್ದಿರುವ ಈ ಆರು ಜಿಲ್ಲೆಗಳು ಪ್ರಗತಿ ಕಾಣಲು ಸಾಧ್ಯ. ಜತೆಗೆ ಪ್ರಾಮಾಣಿಕತೆ, ರಾಜಕೀಯ ಇಚ್ಛಾಶಕ್ತಿ, ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳುವ ಬದ್ಧತೆ ಇದ್ದರಷ್ಟೇ ವಿಶೇಷ ಸ್ಥಾನಮಾನ ಫಲ ಕೊಟ್ಟೀತು ಎನ್ನುವುದನ್ನು ಮರೆಯಬಾರದು.

Post Comments (+)