ಶುಕ್ರವಾರ, ಏಪ್ರಿಲ್ 16, 2021
31 °C

ಬದ್ಧತೆ ರಹಿತ ಅಧಿಕಾರಿಗಳಿಗೆ ಶಿಕ್ಷೆ: ಕಾನೂನು ತಿದ್ದುಪಡಿಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಐಎಎಸ್, ಐಪಿಎಸ್ ಅಧಿಕಾರಿಗಳನ್ನು ವಿಶ್ವವಿದ್ಯಾನಿಲಯಗಳಿಗೆ ನೇಮಕ ಮಾಡುವುದರಿಂದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಕಾನೂನು ವಿ.ವಿ. ಕುಲಪತಿ ಡಾ.ಜೆ.ಎಸ್.ಪಾಟೀಲ ಇಲ್ಲಿ ಗುರುವಾರ ಆಪಾದಿಸಿದರು.ನಗರದ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ರಾಜ್ಯ ಕಾನೂನು ಮತ್ತು ಸಂಸದೀಯ ಸುಧಾರಣೆ ಸಂಸ್ಥೆ ಆಶ್ರಯದಲ್ಲಿ ಗುರುವಾರ ಏರ್ಪಡಿಸಿದ್ದ ‘ಮಾಹಿತಿ ಹಕ್ಕು ಮತ್ತು ಭ್ರಷ್ಟಾಚಾರ ನಿಯಂತ್ರಣ’ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಆಡಳಿತ ವ್ಯವಸ್ಥೆ ಅಧಿಕಾರಿಗಳ ಕೈಗೆ ಸಿಕ್ಕಿ ನರಳುತ್ತಿದೆ. ಅಧಿಕಾರಿಗಳನ್ನು ಜನಪ್ರತಿನಿಧಿಗಳು ಸಹ ಏನೂ ಮಾಡಲಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.ಪ್ರತಿಯೊಂದು ಇಲಾಖೆಯ ಅಧಿಕಾರಿಗೆ ವೈಯಕ್ತಿಕ ಹೊಣೆಗಾರಿಕೆ ವಹಿಸಿ ಕಾನೂನು ತಿದ್ದುಪಡಿ ಮಾಡಬೇಕಾಗಿದೆ. ನಿಗದಿತ ಸಮಯಕ್ಕೆ ನಿಗದಿತ ಕೆಲಸವನ್ನು ಪೂರೈಸದಿದ್ದರೆ ಅಂತಹ ಬದ್ಧತೆ ಇಲ್ಲದ ಅಧಿಕಾರಿ ವಿರುದ್ಧ ಕ್ರಿಮಿನಲ್ ಮೊಕದ್ದಮ್ಮೆ ದಾಖಲಿಸಿ, ಶಿಕ್ಷಿಸುವಂತಹ ಕಾನೂನು ಅಗತ್ಯವಿದೆ. ಇಲ್ಲದಿದ್ದರೆ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಅವರು ಹೇಳಿದರು.ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಮೌಲ್ಯಾಧಾರಿತವಾಗಿರಬೇಕು. ಆದರೆ ಇಂದು ಈ ಬಗ್ಗೆ ಪ್ರಶ್ನಿಸುವುದು ಸಹ ಸಾಧ್ಯವಿಲ್ಲ. ಶಾಸಕಾಂಗದ ವ್ಯಕ್ತಿಯ ಮೇಲೆ ಭ್ರಷ್ಟಾಚಾರದ ಆರೋಪ ಬಂದರೆ ದೂರು ದಾಖಲಿಸಲು ರಾಜ್ಯಪಾಲರು ಅಥವಾ ರಾಷ್ಟ್ರಪತಿ ಒಪ್ಪಿಗೆ ಪಡೆಯಬೇಕು. ನ್ಯಾಯಾಧೀಶರು ಆಸ್ತಿ ಘೋಷಣೆ ಮಾಡುವ ಬಗ್ಗೆ ವಿವಾದವಾಗಿತ್ತು. ವಿವಾದವನ್ನು ಸುಪ್ರೀಂಕೋರ್ಟ್ ಕಾರ್ಯದರ್ಶಿಯೇ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು. ನ್ಯಾಯಾಂಗ ಸಹ ಸರ್ಕಾರದ ಒಂದು ಸಂಸ್ಥೆ ಅಲ್ಲವೇ? ಆಸ್ತಿ ಘೋಷಣೆಯಿಂದ ಅವರು ಹೇಗೆ ಹೊರತು ಎಂದು ಅವರು ಪ್ರಶ್ನಿಸಿದರು.ವಿದ್ಯೋದಯ ಸಂಸ್ಥೆ ಟ್ರಸ್ಟಿ ಪ್ರೊ.ಎಚ್.ಎಸ್.ಶೇಷಾದ್ರಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾನೂನು ಮತ್ತು ಸಂಸದೀಯ ಸುಧಾರಣೆ ಸಂಸ್ಥೆ ನಿರ್ದೇಶಕ ಜಿ.ದಕ್ಷಿಣಾಮೂರ್ತಿ, ಪ್ರಾಚಾರ್ಯ ಕೆ.ವೆಂಕಟಾಚಲಪತಿಸ್ವಾಮಿ, ಪ್ರಾಧ್ಯಾಪಕರಾದ ಡಾ.ಬಿ.ಎಸ್.ರೆಡ್ಡಿ, ವೈ.ಜಿ.ಮುರಳೀಧರ, ಡಾ.ಸೋಮು, ಪ್ರೊ.ಕೆ.ಚಂದ್ರಣ್ಣ, ಪ್ರೊ.ವೆಂಕಟಸ್ವಾಮಿ ಮುಂತಾದವರು ಭಾಗವಹಿಸಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.